• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಭವಿಷ್ಯದ ಕನಸುಗಳೊಂದಿಗೆ ವಿದ್ಯಾರ್ಥಿಗಳ ನಡಿಗೆ : ನಾ ದಿವಾಕರ ಅವರ ಬರಹ

Any Mind by Any Mind
January 3, 2024
in ಅಂಕಣ, ಅಭಿಮತ
0
ಭವಿಷ್ಯದ ಕನಸುಗಳೊಂದಿಗೆ ವಿದ್ಯಾರ್ಥಿಗಳ ನಡಿಗೆ : ನಾ ದಿವಾಕರ ಅವರ ಬರಹ
Share on WhatsAppShare on FacebookShare on Telegram


ಡಿಸೆಂಬರ್‌ 2, 2023ರಂದು ಮೈಸೂರಿನಲ್ಲಿ ನಡೆದ ಎಐಡಿಎಸ್‌ಒ- 7ನೆಯ ಮೈಸೂರು ಜಿಲ್ಲಾ ಸಮ್ಮೇಳನದಲ್ಲಿ ಮಂಡಿಸಿದ ಭಾಷಣದ ವಿಸೃತ ಲೇಖನ ರೂಪ

ADVERTISEMENT

ಯಾವುದೇ ಒಂದು ಸಮಾಜದಲ್ಲಿ ವಿಶಾಲ ಸಮಾಜದ ಒಳಸುಳಿಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ನಾವು ಎರಡು ನಿರ್ದಿಷ್ಟ ಜನಸಮೂಹಗಳ ಕಡೆಗೆ ನೋಡುತ್ತೇವೆ. ಮೊದಲನೆಯದು ಹಿರಿಯ ತಲೆಮಾರಿನ ಬದುಕು-ಜೀವನೋಪಾಯ ಹಾಗೂ ಸ್ವಾಸ್ಥ್ಯ. ಎರಡನೆಯದು ಸಮಾಜದ ಅಂತಃಸತ್ವವನ್ನು ವರ್ತಮಾನದ ನೆಲೆಯಲ್ಲಿ ಬಿಂಬಿಸುವ ಯುವ ಸಮೂಹ. ಹಿಂದಿನ ತಲೆಮಾರಿನ ಜೀವನಾದರ್ಶ ಮೌಲ್ಯಗಳನ್ನು ಅನುಸರಿಸುತ್ತಲೇ ಪ್ರಬುದ್ಧತೆಯೆಡೆಗೆ ಸಾಗುವ ಯುವ ಸಮೂಹಕ್ಕೆ ಒಂದು ಆರೋಗ್ಯಕರ ತಾತ್ವಿಕ ತಳಪಾಯವನ್ನು ನಿರ್ಮಿಸುವ ಬೃಹತ್‌ ಸಂಕುಲ ಎಂದರೆ ವಿದ್ಯಾರ್ಥಿಗಳು. ಬಾಲ್ಯಾವಸ್ಥೆಯನ್ನು ದಾಟಿ ಯೌವ್ವನಾವಸ್ಥೆಗೆ ಕಾಲಿಡುವ ಮನ್ವಂತರದ ಹಾದಿಯಲ್ಲಿ ಮುನ್ನಡೆದಿರುವ ಈ ಸಮೂಹದ ಬೇಕು-ಬೇಡಗಳು, ಆಯ್ಕೆ-ಆದ್ಯತೆಗಳು, ತಪ್ಪು-ಒಪ್ಪುಗಳು, ಸಿಕ್ಕು-ಸವಾಲುಗಳು ಸಮಾಜದ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಆಳುವ ವರ್ಗಗಳಿಗೆ ಪ್ರಧಾನವಾಗಿ ಕಾಣುವಂತಾದರೆ ಮಾತ್ರ ಸರ್ಕಾರಗಳು ಜಾರಿಗೊಳಿಸುವ ಆಡಳಿತ ನೀತಿಗಳು ಜನಮುಖಿ ಅಥವಾ ಸಮಾಜಮುಖಿ ಆಗಿರಲು ಸಾಧ್ಯ. ಈ ಸಂದರ್ಭದಲ್ಲಿ ನಮ್ಮ ಬಹುಪಾಲು ಆಳ್ವಿಕೆಯ ನೀತಿಗಳು ಸಮಾಜಮುಖಿ ಎನಿಸಿದರೂ ಯುವಮುಖಿ ಆಗಿರುವುದಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ.

ವಿದ್ಯಾರ್ಥಿಗಳ ಮುಖ್ಯ ಗುರಿ ಶಿಕ್ಷಣ, ವಿದ್ಯಾರ್ಜನೆ, ಜ್ಞಾನಾರ್ಜನೆ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳುವ ಮಾರ್ಗಗಳು ಎನ್ನುವುದು ದಿಟ. ಇದನ್ನು ಮೀರಿ ಯೋಚನೆ ಮಾಡಬೇಕೇ ಬೇಡವೇ ಎಂಬ ಜಿಜ್ಞಾಸೆ ಪ್ರತಿಯೊಬ್ಬರ ಮನಸ್ಸಿನಲ್ಲೂ ಇರುತ್ತದೆ. ಹಿರಿಯ ಸಮಾಜವೂ ಹೀಗೆಯೇ ಯೋಚಿಸುವುದು ಸಹಜ. . ಬಾಹ್ಯ ಸಮಾಜದ ಸಾರ್ವಜನಿಕ ಸಂಕಥನಗಳನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದರೆ ಈ ಪ್ರಶ್ನೆ ಸಮಾಜವನ್ನೂ ಹೇಗೆ ಕಾಡುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ವಿದ್ಯಾರ್ಥಿಗಳಿಗೆ ರಾಜಕೀಯ ಏಕೆ ಬೇಕು ಎಂಬ ಪ್ರಶ್ನೆಯಿಂದ ಹಿಡಿದು ಸಂಘಟನೆಯಾದರೂ ಏಕೆ ಬೇಕು ಎನ್ನುವ ಪ್ರಶ್ನೆ ಸುಶಿಕ್ಷಿತ ಸಮಾಜದಿಂದಲೇ ಕೇಳಿಬರುತ್ತಿರುತ್ತದೆ. ಈ ಎರಡೂ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೆಚ್ಚಿನ ಪರಿಶೋಧನೆ ಬೇಕಿಲ್ಲ.

ವಿದ್ಯಾರ್ಥಿ ರಾಜಕಾರಣ ಮತ್ತು ಸಮಾಜ

ಕುಟುಂಬದ ಚೌಕಟ್ಟಿನಲ್ಲಿ ಮಕ್ಕಳ ಜೀವನಾವಶ್ಯಕತೆಗಳನ್ನು ಪೂರೈಸಲು ಪೋಷಕರು ಹೇಗೆ ತಮ್ಮ ಬದುಕಿನ ಹೆಜ್ಜೆಗಳನ್ನು ನಿರ್ಧರಿಸುತ್ತಾರೋ ಹಾಗೆಯೇ ವಿಶಾಲ ಸಮಾಜದಲ್ಲಿ ವಿದ್ಯಾರ್ಥಿ ಸಮೂಹದ ಅವಶ್ಯಕತೆಗಳನ್ನು ಪೂರೈಸಲು ಸರ್ಕಾರಗಳು ತಾಯಿಯ ಹೃದಯ, ತಂದೆಯ ಅಂತಃಕರಣ, ಹಿರಿಯರ ಸಹಾನುಭೂತಿಯೊಂದಿಗೆ ಸಾಮಾಜಿಕ ಕಾರ್ಯಯೋಜನೆಗಳನ್ನು, ಶಿಕ್ಷಣ ನೀತಿಯನ್ನು ಹಾಗೂ ಸಮಾಜದ ಸಮಗ್ರ ಬೆಳವಣಿಗೆಗೆ ನೆರವಾಗುವಂತಹ ಆಡಳಿತ ನೀತಿಗಳನ್ನು ಆಗಿಂದ್ದಾಗ್ಗೆ ಪರಿಷ್ಕರಿಸುತ್ತಾ ಜಾರಿಗೊಳಿಸಬೇಕಾಗುತ್ತದೆ. ಈ ನೀತಿಗಳೇ ವಿದ್ಯಾರ್ಥಿ ಸಮೂಹಕ್ಕೆ ಒಂದು ಆದರ್ಶಪ್ರಾಯವಾದ, ಸುಸ್ಥಿರವಾದ, ಆರೋಗ್ಯಕರವಾದ, ಮಾನವೀಯ ಸಮಾಜವನ್ನು ನಿರ್ಮಿಸುವ ಆಡಳಿತಾತ್ಮಕ ಅಡಿಗಲ್ಲುಗಳಾಗುತ್ತವೆ. ಮಾತೃಭೂಮಿಯನ್ನು ಅತಿಯಾಗಿ ಪ್ರೀತಿಸುವ ನಮಗೆ ಈ ತಾಯಿ ಹೃದಯದ ಆಳ್ವಿಕೆಯನ್ನು ನೀಡುವುದು ಸಾಧ್ಯವಾಗದಿದ್ದರೆ, ಇಡೀ ಸಮಾಜ ತಲೆತಗ್ಗಿಸಬೇಕಾಗುತ್ತದೆ. ದುರದೃಷ್ಟವಶಾತ್‌ ನಮ್ಮ ಸರ್ಕಾರಗಳು ತಮ್ಮ ಈ ನೈತಿಕ ಕರ್ತವ್ಯವನ್ನು ಪಾಲಿಸುತ್ತಿಲ್ಲ. ಇದಕ್ಕೆ ಕಾರಣಗಳೂ ಹಲವಾರು. ಜಾತಿ-ಮತ-ಧರ್ಮ-ಮಾರುಕಟ್ಟೆ-ಸಿದ್ಧಾಂತ ಇತ್ಯಾದಿ.,,,,

ಹೀಗಾಗಿ, ರಾಜಕೀಯ ಎಂದಾಕ್ಷಣ ನಾವು ಸಂಸತ್ತು, ವಿಧಾನಸಭೆಗಳತ್ತ ನೋಡಬೇಕಿಲ್ಲ. ಈ ಅಧಿಕಾರ ರಾಜಕಾರಣದ ಆವರಣದ ಹೊರಗೂ ಒಂದು ರಾಜಕೀಯ ಪ್ರಜ್ಞೆ ನಮ್ಮ ನಡುವೆ ಸದಾ ಜೀವಂತವಾಗಿ ಇರಬೇಕಾಗುತ್ತದೆ. ಅಂದರೆ ವಿದ್ಯಾರ್ಥಿ ಸಮೂಹ ಪ್ರತಿನಿಧಿಸುವ ಸಾಮಾನ್ಯ ಜನತೆಯ ಜೀವನಮಟ್ಟದ ಸುಧಾರಣೆಗೆ, ಜೀವನೋಪಾಯದ ವೃದ್ಧಿಗೆ, ಬದುಕು ಕಟ್ಟಿಕೊಳ್ಳುವ ಪ್ರಯತ್ನಗಳ ಏಳಿಗೆಗೆ ಪೂರಕವಾದ ಒಂದು ಸಾಮಾಜಿಕ ಚೌಕಟ್ಟು, ಸಾಂಸ್ಕೃತಿಕ ವಾತಾವರಣ, ಬೌದ್ಧಿಕ ವಾತಾವರಣ ಇದೆಯೇ ಎಂಬ ಅರಿವು ಪ್ರತಿಯೊಬ್ಬ ವಿದ್ಯಾರ್ಥಿಗೂ ಇರಬೇಕಾಗುತ್ತದೆ. ವಿದ್ಯಾರ್ಥಿ ಸಮೂಹದ ನಡುವೆ ಇರುವ ಕೆಲವೇ ಶ್ರೀಮಂತ ಮಕ್ಕಳು ಐಷಾರಾಮಿ ಬದುಕನ್ನು ಕಂಡಿರುತ್ತಾರೆ. ಆದರೆ ಹೆಚ್ಚಿನ ಮಕ್ಕಳು ಸಿರಿವಂತಿಕೆಯನ್ನು ಸಿನೆಮಾ ಪರದೆಗಳಲ್ಲಿ ನೋಡಿ ಆನಂದಿಸುತ್ತಾರೆ. ಮಧ್ಯಮ ಅಥವಾ ಕೆಳಮಧ್ಯಮ ವರ್ಗದ ಸಮಾಜವನ್ನು ಅಥವಾ ಅವಕಾಶವಂಚಿತ ಬಡ ವರ್ಗವನ್ನು ಪ್ರತಿನಿಧಿಸುವ ವಿದ್ಯಾರ್ಥಿ ಸಮೂಹಕ್ಕೆ, ತಮ್ಮ ಜೀವನದ ಸ್ಥಿತಿಗತಿಗಳಿಗೆ ಕಾರಣ ಏನು ಎಂದಾದರೂ ತಿಳಿದಿರಬೇಕು. ಹಾಗಾಗಿ ರಾಜಕೀಯ ಪ್ರಜ್ಞೆ ಕೊಂಚ ಮಟ್ಟಿಗೆ ಇರಲೇಬೇಕು.

ಈ ಒಂದು ಚುನಾವಣೇತರ ಸಾಮಾಜಿಕ-ರಾಜಕೀಯ ಪ್ರಜ್ಞೆ ಮೂಡಿಸುವ ಸಲುವಾಗಿಯೇ ವಿದ್ಯಾರ್ಥಿಗಳು ಸಂಘಟಿತರಾಗಬೇಕು. ವಿದ್ಯಾರ್ಥಿ ಸಮುದಾಯದ ಮುಂದೆ ಆಯ್ಕೆಗಳು ಸೀಮಿತವಾಗಿರುತ್ತವೆ. ಬಹುಪಾಲು ಸಂದರ್ಭಗಳಲ್ಲಿ ಈ ಆಯ್ಕೆಗಳನ್ನು ಪೋಷಕರು ನಿರ್ಧರಿಸುವುದು ಭಾರತದ ಕೌಟುಂಬಿಕ ವ್ಯವಸ್ಥೆಯಲ್ಲಿ ಆಳವಾಗಿರುವ ಒಂದು ಪದ್ಧತಿ. ಆದರೂ ವ್ಯಕ್ತಿಗತ ನೆಲೆಯಲ್ಲಿ ವಿದ್ಯಾರ್ಥಿಯ ಆಯ್ಕೆ ತನ್ನ ವಿದ್ಯಾರ್ಜನೆಯಲ್ಲಿ ಆಯ್ದುಕೊಳ್ಳಬಹುದಾದ ಐಚ್ಚಿಕ ವಿಷಯ ಮತ್ತು ಭವಿಷ್ಯದಲ್ಲಿ ಏನಾಗಬೇಕು ಎಂಬ ಆಂತರಿಕ ನಿರ್ಣಯ. ಈ ಎರಡೂ ಆಯ್ಕೆಗಳಿಂದಾಚೆಗೆ ಪ್ರತಿ ವಿದ್ಯಾರ್ಥಿಗೂ ಕೆಲವು ಆದ್ಯತೆಗಳು ಇರುತ್ತವೆ. ಇದನ್ನು ನಾವು ಸಾಮಾಜಿಕ ಬದುಕಿನಲ್ಲಿ, ವಿದ್ಯಾಭ್ಯಾಸದ ನಂತರ ಕಾಣುತ್ತೇವೆ. ಆಗ ವಿದ್ಯಾರ್ಥಿಯ ನೆಲೆಯಿಂದ ಯೌವ್ವನದ ನೆಲೆಗೆ ಆಲೋಚನೆಗಳು, ಉದ್ದೇಶ-ಗುರಿಗಳು ಬದಲಾಗಿರುತ್ತವೆ. ಒಂದು ಹಂತದಲ್ಲಿ ವಿದ್ಯಾರ್ಥಿ ಸಂಘಟನೆಯಲ್ಲಿರುವ ಎಲ್ಲರೂ ಮುಂದಿನ ದಿನಗಳಲ್ಲಿ ಹೀಗೆ ಯುವ ಸಂಘಟನೆಯ ಒಂದು ಭಾಗವಾಗುತ್ತಾರೆ. ಅವರ ಗುರಿಯೂ ಅಲ್ಲಿಯೇ ನೆಟ್ಟಿರುವುದು ಸಹಜ.

ಆಗ ವಿದ್ಯಾರ್ಥಿಗಳಿಗೆ ಜೀವನಶೈಲಿ, ಜೀವನಮಟ್ಟ ಹಾಗೂ ಜೀವನೋಪಾಯದ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವ ಆದ್ಯತೆ ಹಾಗೂ ಅವಕಾಶ ಲಭಿಸುತ್ತದೆ. ಇಲ್ಲಿ ಆದ್ಯತೆಗಳು ಸ್ವತಂತ್ರ ನೆಲೆಯಲ್ಲಿ ನಿರ್ಧಾರವಾಗಬೇಕಾಗುತ್ತದೆ. ಈ ಹಂತದಲ್ಲಿ ಯುವ ಸಮೂಹದ ಬದುಕನ್ನು ಕಟ್ಟಿಕೊಡುವ ಜವಾಬ್ದಾರಿ ಆಳ್ವಿಕೆಯ ಹಾಗೂ ಸಮಾಜದ ಮೇಲಿರುತ್ತದೆ. ಸುಸ್ಥಿರವಾದ, ಆರೋಗ್ಯಕರವಾದ ಬದುಕನ್ನು ಕಟ್ಟಿಕೊಳ್ಳಲು ಪೂರಕವಾದ ವಾತಾವರಣವನ್ನು, ಸಾಮಾಜಿಕ-ಆರ್ಥಿಕ ತಳಹದಿಯನ್ನು, ಸಾಂಸ್ಕೃತಿಕ ಭೂಮಿಕೆಯನ್ನು ರೂಪಿಸುವ ಹೊಣೆಗಾರಿಕೆ ಆಳುವ ವರ್ಗಗಳ ಮೇಲೆ, ವಿಶಾಲ ಸಮಾಜದ ಹಿರಿಯ ನಾಗರಿಕರ ಮೇಲೆ ಹಾಗೂ ಇಡೀ ವ್ಯವಸ್ಥೆಯ ಮೇಲೆ ಇರುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸುವ ಶಿಕ್ಷಣ ನೀತಿಗಳು ಹಾಗೂ ಸಾಂಸ್ಕೃತಿಕ ನೀತಿಗಳು ಇಲ್ಲಿ ಮಹತ್ವದ ಪಾತ್ರವಹಿಸುತ್ತವೆ.

ವರ್ತಮಾನದ ವಾಸ್ತವಗಳ ನಡುವೆ

ವಿಶ್ವದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಯುವ ಸಮೂಹ ಈಗಾಗಲೇ ಭಾರತದಲ್ಲಿದೆ. ಒಂದು ವರದಿಯ ಅನುಸಾರ ಶೇ 40ರಷ್ಟು ಜನಸಂಖ್ಯೆ 25 ವರ್ಷದ ಕೆಳಗಿನವರನ್ನು ಹೊಂದಿದೆ. ಈ ಯುವ ಸಮೂಹಕ್ಕೆ ಸೇರ್ಪಡೆಯಾಗಲಿರುವ ವಿದ್ಯಾರ್ಥಿ ಸಮೂಹಕ್ಕೆ ಎಂತಹ ಶಿಕ್ಷಣ ನೀಡಿದರೆ ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಭವಿಷ್ಯದ ತಲೆಮಾರಿಗೆ ಉಳಿಸಲು ಸಾಧ್ಯ ? ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಈ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತವೆ. ಏಕೆಂದರೆ ನವ ಉದಾರವಾದ ಮತ್ತು ಜಾಗತೀಕರಣಗೊಂಡ ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯು ಪೋಷಿಸುವಂತಹ ಸಾಮಾಜಿಕ-ಆರ್ಥಿಕ ಅಸಮಾನತೆಗಳನ್ನು ಮತ್ತಷ್ಟು ಹಿಗ್ಗಿಸುವ ರೀತಿಯಲ್ಲಿ ಯುವ ಸಮೂಹವನ್ನು ಸಜ್ಜುಗೊಳಿಸಲು ಹೊಸ ಶಿಕ್ಷಣ ನೀತಿ ಪೂರಕವಾಗುತ್ತದೆ. ಕೌಶಲ ಮತ್ತು ಡಿಜಿಟಲ್‌ ಜ್ಞಾನಧಾರಣೆಯ ನೆಪದಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ವಾಣಿಜ್ಯೀಕರಣಕ್ಕೊಳಪಡಿಸಲಾಗುತ್ತಿದ್ದು, ಉನ್ನತ ಶಿಕ್ಷಣ ಹಾಗೂ ವಿಶ್ವವಿದ್ಯಾಲಯಗಳು ಸಂಪೂರ್ಣವಾಗಿ ಕಾರ್ಪೋರೇಟಿಕರಣಕ್ಕೊಳಗಾಗುತ್ತಿವೆ.

ಭವಿಷ್ಯ ಭಾರತದ ಮಾರುಕಟ್ಟೆ ಆರ್ಥಿಕತೆಗೆ, ಡಿಜಿಟಲ್‌ ಔದ್ಯಮಿಕ ಪ್ಲಾಟ್‌ಫಾರ್ಮ್‌ಗಳಿಗೆ ಬೇಕಾದ ಬೌದ್ಧಿಕ ಸರಕುಗಳನ್ನು ಈ ಶೈಕ್ಷಣಿಕ ವಲಯದಿಂದ ಉತ್ಪಾದಿಸುವ ಒಂದು ಪ್ರಕ್ರಿಯೆಗೆ ಕೇಂದ್ರ ಸರ್ಕಾರದ 2020ರ ಹೊಸ ಶಿಕ್ಷಣ ನೀತಿ ಇಂಬು ಕೊಡುತ್ತದೆ. ಹೊಸ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ಆಯ್ಕೆ ಸ್ವಾತಂತ್ರ್ಯ ಇರುವುದಾಗಿ ಮೇಲ್ನೋಟಕ್ಕೆ ಕಂಡರೂ ಈ ವ್ಯಕ್ತಿಗತ ಸ್ವಾತಂತ್ರ್ಯವನ್ನು ಕಟ್ಟಿಹಾಕುವಂತಹ ಸಾಮಾಜಿಕ-ಸಾಂಸ್ಕೃತಿ ಪರಿಸರ ಮತ್ತು ಆರ್ಥಿಕ ಚೌಕಟ್ಟುಗಳನ್ನು ಸರ್ಕಾರಗಳೇ ನಿರ್ಮಿಸುತ್ತವೆ. ಇಲ್ಲಿ ವಿದ್ಯಾರ್ಥಿಗಳ ಸ್ವತಂತ್ರ ಆಯ್ಕೆ-ಆದ್ಯತೆಗಳು ಮುನ್ನೆಲೆಗೆ ಬರಬೇಕಾಗುತ್ತದೆ. ಶಿಕ್ಷಣ ಅಥವಾ ವಿದ್ಯಾಭ್ಯಾಸ ವಿದ್ಯಾರ್ಥಿಗಳ ಬದುಕುಕಟ್ಟಿಕೊಳ್ಳುವ ಉದ್ಯೋಗಾವಕಾಶಗಳಿಗೆ ಬಾಗಿಲುಗಳನ್ನು ತೆರೆಯುವುದು ಸಹಜ. ಆದರೆ ಇದರಿಂದಾಚೆಗೆ ಒಂದು ಬೌದ್ಧಿಕ ಜವಾಬ್ದಾರಿ ಭಾವಿ ಯುವ ಸಮುದಾಯದ ಮೇಲೆ ಅಂದರೆ ಹಾಲಿ ವಿದ್ಯಾರ್ಥಿ ಸಮೂಹದ ಮೇಲೆ ಇರುತ್ತದೆ. ಈ ಜವಾಬ್ದಾರಿಯನ್ನು ಪೂರೈಸಲು ಅಡ್ಡಿಯಾಗುವಂತಹ ಶೈಕ್ಷಣಿಕ ನೀತಿಗಳನ್ನು ವಿದ್ಯಾರ್ಥಿ ಸಮೂಹ ವಿರೋಧಿಸಲೇ ಬೇಕಾಗುತ್ತದೆ.

ಸೈದ್ಧಾಂತಿಕ ತಳಹದಿ

ಇಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗುವಂತಹ ಸೈದ್ಧಾಂತಿಕ ಬುನಾದಿಯನ್ನು, ತಾತ್ವಿಕ ಚಿಂತನೆಗಳನ್ನು ಕಟ್ಟಿಕೊಡುವ ಕೆಲಸವನ್ನು ಎಐಡಿಎಸ್‌ಒ ಮುಂತಾದ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಮಾಡುತ್ತವೆ. ಮಾರುಕಟ್ಟೆಗೆ ಅವಶ್ಯವಾದ ಕೌಶಲ, ಬುದ್ಧಿಮತ್ತೆ ಮತ್ತು ಜ್ಞಾನದ ಚೌಕಟ್ಟುಗಳನ್ನಷ್ಟೇ ನೀಡುವ ಯಾವುದೇ ಶಿಕ್ಷಣ ನೀತಿ, ಮನುಷ್ಯನ ವ್ಯಕ್ತಿ ವಿಕಸನಕ್ಕೆ ಅಥವಾ ಸಮಾಜದ ಬೌದ್ಧಿಕ ವಿಕಾಸಕ್ಕೆ ಪೂರಕವಾಗಿರುವುದಿಲ್ಲ. ತಾವು ಬದುಕುವ ಸಮಾಜದೊಳಗಿನ ಅಪಸವ್ಯಗಳನ್ನು, ದುರಾಗ್ರಹಗಳನ್ನು, ಸಾಮಾಜಿಕ ಅನಿಷ್ಠಗಳನ್ನು, ಸಾಂಸ್ಕೃತಿಕ ವ್ಯತ್ಯಯಗಳನ್ನು ಅರ್ಥಮಾಡಿಕೊಳ್ಳುವುದು ವಿದ್ಯಾರ್ಥಿ ದೆಸೆಯಲ್ಲೇ ಅವಶ್ಯ ಎನ್ನುವುದನ್ನು ನಾವು ಗಂಭೀರವಾಗಿ ಗಮನಿಸಬೇಕಿದೆ. ಜಾತಿ-ಧರ್ಮ-ಮತ-ಪಂಥ ಹೀಗೆ ಹಲವು ವಿಭಜನೆಗಳಿಂದ ಆವೃತವಾದ ಭಾರತೀಯ ಸಮಾಜದಲ್ಲಿ ಇನ್ನೂ ಅತ್ಯಾಚಾರ, ಭ್ರಷ್ಟಾಚಾರ, ಮಹಿಳಾ ದೌರ್ಜನ್ಯ, ತಾರತಮ್ಯ, ಅಸ್ಪೃಶ್ಯತೆ, ಹೆಣ್ಣು ಭ್ರೂಣ-ಶಿಶು ಹತ್ಯೆ, ಅಸಮಾನತೆ ಎಲ್ಲವೂ ತಾಂಡವಾಡುತ್ತಿದೆ. ಈ ಜ್ವಲಂತ ಸಮಸ್ಯೆಗಳನ್ನು ನಿವಾರಿಸಿ ಒಂದು ಸಮ ಸಮಾಜವನ್ನು ಕಟ್ಟುವುದು ವಿದ್ಯಾರ್ಥಿ ಸಮುದಾಯದ ತಕ್ಷಣದ ಆಯ್ಕೆ ಅಲ್ಲದಿದ್ದರೂ ಭವಿಷ್ಯದ ಆದ್ಯತೆಯಂತೂ ಆಗಿರುತ್ತದೆ. ಈ ಆದ್ಯತೆಗೆ ಪೂರಕವಾದ ಶೈಕ್ಷಣಿಕ ನೀತಿ ನಮಗೆ ಅವಶ್ಯವಾಗಿದೆ.

ಹಾಗಾಗಿಯೇ ವಿದ್ಯಾರ್ಥಿ ಸಂಘಟನೆ ಎಂದರೆ ಕೇವಲ ವಿದ್ಯಾರ್ಜನೆಯ ಚೌಕಟ್ಟಿನೊಳಗಿನ ಸೌಲಭ್ಯ ಸವಲತ್ತುಗಳಿಗಾಗಿ, ಶುಲ್ಕ-ಸ್ಕಾಲರ್‌ಷಿಪ್‌ ಇತ್ಯಾದಿಗಳಿಗಾಗಿ ಹೋರಾಡುವ ಒಂದು ಸಮೂಹವಾಗಿರದೆ, ದೇಶದ, ಸಮಾಜದ ಹಾಗೂ ಸಾಮಾನ್ಯ ಜನತೆಯ ಜ್ವಲಂತ ಸಮಸ್ಯೆಗಳಿಗೆ-ಸುಡು ವಾಸ್ತವಗಳಿಗೆ ಕಿವಿಯಾಗುವ ಒಂದು ಶಕ್ತಿಯಾಗಿ ರೂಪುಗೊಳ್ಳಬೇಕಾಗುತ್ತದೆ. ಇಂದಿನ ಸರ್ಕಾರಗಳು ಅನುಸರಿಸುತ್ತಿರುವ ಶೈಕ್ಷಣಿಕ ನೀತಿಗಳು ಈ ಹಾದಿಗೆ ಹಲವಾರು ಬೇಲಿಗಳನ್ನು ಕಟ್ಟುವುದರಲ್ಲಿ ತೊಡಗಿವೆ. ತಾನು ರೂಪಿಸುವ ಕಾರ್ಪೋರೇಟ್‌ ಮಾರುಕಟ್ಟೆ ಪ್ರೇರಿತ ಅಥವಾ ಜಾತಿ ಮತಗಳ ಹೆಸರಿನಲ್ಲಿ ಸ್ಥಾಪಿಸಲಾಗುವ ಹೊಸ ಸಾಮಾಜಿಕ-ಸಾಂಸ್ಕೃತಿಕ ವ್ಯವಸ್ಥೆಗೆ ಪೂರಕವಾದ ಶೈಕ್ಷಣಿಕ ನೀತಿಗಳನ್ನು ಆಳ್ವಿಕೆಯು ಅನುಸರಿಸುತ್ತದೆ. ಇದರ ವಿರುದ್ಧ ವಿದ್ಯಾರ್ಥಿ ಸಮೂಹ ನಿರಂತರವಾಗಿ ಹೋರಾಡಬೇಕಾಗುತ್ತದೆ. ಹಾಗೆಯೇ ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ಮನೋಭಾವ ಮತ್ತು ಸಮಾನತೆಯ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇದನ್ನು ವಿದ್ಯಾರ್ಥಿ ರಾಜಕಾರಣ ಎನ್ನುವುದಾದರೆ ಅಡ್ಡಿಯಿಲ್ಲ. ಇದು ಇಂದಿನ ಪರಿಸ್ಥಿತಿಯಲ್ಲಿ ಅನಿವಾರ್ಯವೂ ಹೌದು.

ನಾಳಿನ ವಿದ್ಯಾರ್ಥಿಗಳ ಬದುಕಿನ ಹಾದಿಗಳಲ್ಲಿ ಅಡ್ಡಿಯಾಗಬಹುದಾದ ಸರ್ಕಾರಗಳ ಆಡಳಿತ ನೀತಿಗಳನ್ನು ಇಂದೇ ಅರಿತು ವರ್ತಮಾನದ ಆಯ್ಕೆಗಳಿಗೆ ವ್ಯತಿರಿಕ್ತವಾದ ಶೈಕ್ಷಣಿಕ ನೀತಿಗಳನ್ನು ವಿರೋಧಿಸಿ ಹೋರಾಡುವುದರ ಮೂಲಕ ವಿದ್ಯಾರ್ಥಿಗಳು ಭವಿಷ್ಯದ ಜೀವನದಲ್ಲಿ ಎದುರಾಗಬಹುದಾದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯ. ಹಾಗೆಯೇ ಸಮಾಜವನ್ನು ಅರಿತುಕೊಳ್ಳುವುದೂ ಸಾಧ್ಯ. ಈ ದೃಷ್ಟಿಯಿಂದಲೇ ಎಐಡಿಎಸ್‌ಒ ಮತ್ತಿತರ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ನಿರಂತರ ಹೋರಾಟದಲ್ಲಿರುತ್ತವೆ. ಶಾಲೆ-ಕಾಲೇಜುಗಳ ಆವರಣದಿಂದ ಹೊರಗಿನ ಜಗತ್ತಿನಲ್ಲಿ ಚರಿತ್ರೆ-ಪುರಾಣ-ವರ್ತಮಾನದ ಸಾಮಾಜಿಕ ಸ್ಥಿತ್ಯಂತರಗಳನ್ನು ವೈಚಾರಿಕ ನೆಲೆಯಲ್ಲಿ ಅರ್ಥಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿ ಹೋರಾಟಗಳಿಗೆ ತಾತ್ವಿಕ ಸ್ಪರ್ಶ ನೀಡುವುದು ಈ ಹೊತ್ತಿನ ತುರ್ತು. ವೈಚಾರಿಕತೆಯಿಲ್ಲದ ಸಮಾಜವು ಸಂವೇದನಾಶೀಲವಾಗಲು ಸಾಧ್ಯವಾಗುವುದಿಲ್ಲ.

ಭವಿಷ್ಯದ ಮುಂಗಾಣ್ಕೆ

ಚರಿತ್ರೆ-ಪುರಾಣ-ಐತಿಹ್ಯಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ತಿರುಚುವ ಮೂಲಕ, ಪುನಾರಚಿಸುವ ಮೂಲಕ ಯುವ ಮನಸುಗಳನ್ನು ಗೊಂದಲದ ಕೂಪಗಳನ್ನಾಗಿ ಮಾಡುತ್ತಿರುವ ಸಾಂಸ್ಕೃತಿಕ ರಾಜಕಾರಣದ ನಡುವೆ ವಿದ್ಯಾರ್ಥಿ ಸಮುದಾಯ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಬೇಕಿದೆ. ಶೈಕ್ಷಣಿಕ ಅರಿವು ಮತ್ತು ಜ್ಞಾನಾರ್ಜನೆಯೊಂದಿಗೇ, ಚರಿತ್ರೆಯ ಅಧ್ಯಯನ ಹಾಗೂ ಸಂಶೋಧನೆಗಳ ಮೂಲಕ ಇತಿಹಾಸವನ್ನು ಚಾರಿತ್ರಿಕ ಭೌತವಾದದ ನೆಲೆಯಲ್ಲಿ ಅರ್ಥಮಾಡಿಕೊಳ್ಳುವುದು ವರ್ತಮಾನದ ಆದ್ಯತೆಯಾಗಬೇಕಿದೆ. ತಳಮಟ್ಟದ ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಲ್ಲಿ ಉಗಮಿಸಿ ವಿಕಸಿಸುವ ಸಮಾಜವನ್ನು ವೈಚಾರಿಕತೆಯ ಚೌಕಟ್ಟಿನಲ್ಲೇ ಅರ್ಥಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿ-ಯುವ ಸಮೂಹ ಸಮಾಜದಲ್ಲಿ ಬೇರುಬಿಟ್ಟಿರುವ ಪಿತೃಪ್ರಧಾನತೆ, ಅವೈಜ್ಞಾನಿಕ ಮೌಢ್ಯ, ಮೂಢ ನಂಬಿಕೆಗಳು ಹಾಗೂ ಪ್ರಾಚೀನ ನಡವಳಿಕೆಗಳ ವಿರುದ್ಧ ಸೆಟೆದು ನಿಲ್ಲಬೇಕಿದೆ.
ಸಮಾನತೆ-ಭ್ರಾತೃತ್ವವನ್ನು ಉಸಿರಾಡುವ, ಶೋಷಣೆ, ದೌರ್ಜನ್ಯ, ತಾರತಮ್ಯ, ಅಸಮಾನತೆಯಿಂದ ಮುಕ್ತವಾದ ಒಂದು ಸರ್ವಜನಾಂಗದ ಶಾಂತಿಯ ತೋಟವನ್ನು ನಿರ್ಮಿಸಿ ಆ ತೋಟದ ಮಾಲಿಗಳಂತೆ ಅದನ್ನು ಸದಾ ಕಾಪಾಡುವ ಜವಾಬ್ದಾರಿಯನ್ನು ಇಂದಿನ ವಿದ್ಯಾರ್ಥಿ ಸಮುದಾಯ ಭವಿಷ್ಯದಲ್ಲಿ ಹೊರಬೇಕಾಗುತ್ತದೆ. ಇದನ್ನು ಅರಿತು ವಿದ್ಯಾರ್ಥಿಗಳು ತಮ್ಮ ಜೀವನದ ಆಯ್ಕೆಗಳನ್ನು ಹಾಗೂ ಆದ್ಯತೆಗಳನ್ನು ಸರಿಯಾದ ಹಾದಿಯಲ್ಲಿ ನಿರೂಪಿಸಬೇಕಾಗುತ್ತದೆ. ಇದು ಸಾಕಾರಗೊಳಿಸಲು ವಿದ್ಯಾರ್ಥಿ ಸಂಘಟನೆ ಒಂದು ಭೂಮಿಕೆಯಾಗುತ್ತದೆ/ಅಗಬೇಕಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಮುನ್ನಡೆಯುವ ಜವಾಬ್ದಾರಿ ವಿದ್ಯಾರ್ಥಿಗಳದ್ದೇ ಆಗಿರುತ್ತದೆ. ಬೌದ್ಧಿಕವಾಗಿ, ಭೌತಿಕವಾಗಿ ಭವಿಷ್ಯ ಭಾರತದ ಮುಂಚೂಣಿ ಶಕ್ತಿಯಾಗಿ ರೂಪುಗೊಳ್ಳಬೇಕಾದ ವಿದ್ಯಾರ್ಥಿಗಳು ತಮ್ಮ ಈ ಸಂಘರ್ಷದ ಹಾದಿ ಯಶಸ್ವಿಯಾಗಬೇಕೆಂದರೆ ಬೌದ್ಧಿಕ ವಿಕಸನಕ್ಕೆ ಅಗತ್ಯವಾದ ಅಧ್ಯಯನ ಶಿಸ್ತು ಹಾಗೂ ಸಂಶೋಧನೆಯ ವ್ಯವಧಾನವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಸಮ್ಮೇಳನಗಳು ಈ ನಿಟ್ಟಿನಲ್ಲಿ ದಿಕ್ಸೂಚಿಗಳಾಗಿರುತ್ತವೆ.
-೦-೦-೦-

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಇಂದು ಭಾರತ v ಸೌತ್‌ ಆಫ್ರಿಕಾ 2ನೇ ಟೆಸ್ಟ್‌: ಕಮ್‌ಬ್ಯಾಕ್‌ ನಿರೀಕ್ಷೆಯಲ್ಲಿ ರೋಹಿತ್‌ ಸಾರಥ್ಯದ ಟೀಂ ಇಂಡಿಯಾ

Next Post

ಬಿಜೆಪಿಯನ್ನು ಶಾಶ್ವತವಾಗಿ ವಿಪಕ್ಷ ಸ್ಥಾನದಲ್ಲಿ ಕೂರಿಸಬೇಕೆಂಬುದು ನನ್ನ ಗುರಿ: ಸಿದ್ದರಾಮಯ್ಯ

Related Posts

ಮತದಾನದ ಹಕ್ಕು- ಬದುಕುವ ಹಕ್ಕು – ಪ್ರಜಾತಂತ್ರ
ಅಂಕಣ

ಮತದಾನದ ಹಕ್ಕು- ಬದುಕುವ ಹಕ್ಕು – ಪ್ರಜಾತಂತ್ರ

by ಪ್ರತಿಧ್ವನಿ
May 27, 2026
0

ನಾ ದಿವಾಕರ ಭಾರತದ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಎಂದು ಪರಿಗಣಿಸಲು ಕಾರಣ ಎಂದರೆ ಈ ಶಾಸನಾತ್ಮಕ ಗ್ರಂಥದಲ್ಲಿ ಅಳವಡಿಸಲಾಗಿರುವ ಮಾನವೀಯ ಮೌಲ್ಯಗಳು. ನಮ್ಮ ಸಂವಿಧಾನ ಮೂಲತಃ ವ್ಯಕ್ತಿ...

Read moreDetails
ಪ್ರಜಾಪ್ರಭುತ್ವದ ಸಾಂಸ್ಥಿಕ ಅಗ್ನಿಪರೀಕ್ಷೆ-ಎಸ್‌ಐಆರ್‌

ಪ್ರಜಾಪ್ರಭುತ್ವದ ಸಾಂಸ್ಥಿಕ ಅಗ್ನಿಪರೀಕ್ಷೆ-ಎಸ್‌ಐಆರ್‌

May 26, 2026
ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ

ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ

May 23, 2026
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 22, 2026
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 21, 2026
Next Post
ರಾಜ್ಯದಲ್ಲಿ ಹಿಜಾಬ್ ನಿಷೇಧ ವಾಪಸ್ : ಸಿಎಂ ಸಿದ್ದರಾಮಯ್ಯ ಮಹತ್ವದ ನಿರ್ಧಾರ

ಬಿಜೆಪಿಯನ್ನು ಶಾಶ್ವತವಾಗಿ ವಿಪಕ್ಷ ಸ್ಥಾನದಲ್ಲಿ ಕೂರಿಸಬೇಕೆಂಬುದು ನನ್ನ ಗುರಿ: ಸಿದ್ದರಾಮಯ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada