ರಾಯಚೂರಿನಲ್ಲಿ 7 ಮತ್ತು 9 ನೇ ತರಗತಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಶಾಲೆಗೆ ಪೆನ್ ಬದಲು ಗನ್ ತೆಗೆದುಕೊಂಡು ಬಂದಿದ್ದಾನೆ ಶಾಲಾ ವಿದ್ಯಾರ್ಥಿ. ರಾಯಚೂರು ನಗರದ ಶ್ರೀಮಲ್ ರಿಖನ್ ಚಂದ್ ಸುಖಾಣಿ ಪ್ರೌಢ ಶಾಲೆಯಲ್ಲಿ ಘಟನೆ ನಡೆದಿದೆ. ಗನ್, ಚಾಕು ಹಾಗೂ ಮಾರಾಕಾಸ್ತ್ರಗಳನ್ನು ತಂದಿದ್ದಾನೆ ವಿದ್ಯಾರ್ಥಿ. 7ನೇ ತರಗತಿ ವಿದ್ಯಾರ್ಥಿ ಶಾಲೆಗೆ ಗನ್ ತೆಗೆದುಕೊಂಡು ಬಂದಿದ್ದು, ಶಾಲೆಯಲ್ಲಿ ಭಯದ ವಾತಾವರಣ ನಿರ್ಮಾಣ ಆಗಿದೆ. ರಾಯಚೂರು ನಗರ ಪಶ್ಚಿಮ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಬಾಲಕನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಹೊಸ ವರ್ಷಾಚರಣೆ ವೇಳೆ ಪ್ರೌಢ ಶಾಲಾ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ. ಶಾಲಾ ವಿದ್ಯಾರ್ಥಿಗಳ ಕೈಯಲ್ಲಿ ಏರ್ ಗನ್, ಬಟನ್ ಚಾಕು, ಪಂಚ್, ಬೆತ್ತ ತಂದಿರುವುದು ಆತಂಕಕ್ಕೆ ಕಾರಣವಾಗಿದೆ. ಓರ್ವ ವಿದ್ಯಾರ್ಥಿ ಕೈ ಬೆರಳಿಗೆ ಗಾಯವಾಗಿದೆ. ರಾಯಚೂರಿನ ಜ್ಯೋತಿ ಕಾಲೋನಿಯ ಶ್ರೀಮಲ್ ರಿಖಬ್ ಚಂದ್ ಸುಖಾಣಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ.
ಘಟನೆ ಮುಚ್ಚಿಡುವ ಪ್ರಯತ್ನ ಮಾಡಿದ್ರಾ ಡಿಡಿಪಿಐ..?
ರಾಯಚೂರಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳ ಗ್ಯಾಂಗ್ ವಾರ್ ಮಾಡಿರುವ ಪ್ರಕರಣ ಬಳಿಕ ಪಶ್ಚಿಮ ಪೊಲೀಸ್ ಠಾಣೆಗೆ ಡಿಡಿಪಿಐ ಕೆ.ಡಿ ಬಡಿಗೇರ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ವಿದ್ಯಾರ್ಥಿಗಳು ಹಾಗು ಪೊಲೀಸರ ಜೊತೆ ಸಮಾಲೋಚನೆ ನಡೆಸಿದ DDPI. ಸಮಾಲೋಚನೆ ಬಳಿಕ ಮಾಧ್ಯಮಗಳಿಗೆ ಕೆ.ಡಿ ಬಡಿಗೇರ ಮಾಹಿತಿ ನೀಡಿದ್ದು, ಇದೊಂದು ಶಾಲೆಯ ಕಾಂಪೌಂಡ್ ಹೊರಗಡೆ ನಡೆದಿರೋ ಘಟನೆ. ಶಿಕ್ಷಕರು ಮತ್ತು ಪೋಷಕರ ಜತೆ ಹೀಗಾಗಲೇ ಸಭೆ ಮಾಡಿದ್ದೇನೆ. ಘಟನೆಯಲ್ಲಿ ಯಾವ ಮಕ್ಕಳಿಗೂ ಗಾಯಗಳು ಆಗಿಲ್ಲ. ಪೋಷಕರು ಈವರೆಗೂ ಪೊಲೀಸ್ ಠಾಣೆಗೆ ಲಿಖಿತವಾಗಿ ದೂರು ನೀಡಿಲ್ಲ ಎಂದಿದ್ದಾರೆ. ಜೊತೆಗೆ ಮಕ್ಕಳ ಕೈಯಲ್ಲಿ ಇದ್ದದ್ದು ಗನ್ ಅಲ್ಲ, ಜಾತ್ರೆಯ ಆಟಿಕೆ ಗನ್ ಅದು. ಪೊಲೀಸರು ನಿಯಮಾನುಸಾರ ಕಾನೂನು ಕ್ರಮಕೈಗೊಳ್ತಾರೆ. ಶಾಲೆ ಆಡಳಿತ ಮಂಡಳಿಯವರಿಗೆ ನೋಟಿಸ್ ನೀಡಿ ಘಟನೆಯ ಸಂಪೂರ್ಣ ವಿವರ ಕೊಡುವಂತೆ ಹೇಳ್ತೇವೆ ಎಂದಿದ್ದಾರೆ.
‘ನನ್ನ ಮಗನ ಮೇಲೆ ಹಲ್ಲೆ.. ಟಿ.ಸಿ ತೆಗೆದುಕೊಳ್ಳಲು ಒತ್ತಡ’
ರಾಯಚೂರಲ್ಲಿ ಹೈಸ್ಕೂಲ್ ಸ್ಟೂಡೆಂಟ್ಸ್ ಗ್ಯಾಂಗ್ ವಾರ್ ಬಗ್ಗೆ ಗಾಯಾಳು 9ನೇ ತರಗತಿ ವಿದ್ಯಾರ್ಥಿಯ ತಂದೆ ಈರಣ್ಣ ಮಾತನಾಡಿ, ನಾಲ್ಕೈದು ತಿಂಗಳಿಗಳಿಂದ ಮಕ್ಕಳೆಲ್ಲಾ ಸೈಕಲ್ ತಗೊಂಡು ಹೋಗಿದ್ದಾರೆ. ಸ್ನಾಕ್ಸ್ ತಿಂದು ಬರಲು ಕಿರಾಣಿ ಅಂಗಡಿಗೆ ಬಂದಿದ್ದಾಗ ಟಚ್ ಆಗಿದೆ.. ಜಗಳ ನಡೆದು ತಕ್ಷಣ ಚಾಕು ತೆಗೆದುಕೊಂಡು ಹೊಡಿಯೋಕೆ ಬಂದಿದ್ದಾನೆ. ಗಲಾಟೆಯಲ್ಲಿ ಅವರಲ್ಲಿ ಇದ್ದ ಚಾಕು, ವೆಪನ್ ಹೊರಗಡೆ ಬಿದ್ದಿವೆ. ಶಾಲೆಗೆ ವೆಪನ್ ತಂದ ಹುಡುಗನ ಹೆಸರು ನಮಗೆ ಗೊತ್ತಿಲ್ಲ.. ಆ ಹುಡುಗ 7ನೇ ಕ್ಲಾಸ್ ಓದ್ತಾನೆ, ನನ್ ಮಗ 9ನೇ ಕ್ಲಾಸ್ ಓದ್ತಾನೆ. ಹಿಂದೆ ಅವರಿಬ್ಬರ ನಡುವೆ ಯಾವುದೇ ಗಲಾಟೆಗಳು ಆಗಿರಲಿಲ್ಲ. ಮುಂಚೆ ಅವರಿಬ್ಬರೂ ಫ್ರೆಂಡ್ಸ್ ಆಗಿದ್ರು. ಸ್ಕೂಲ್ನಲ್ಲಿ ಮೇಡಂ ನಿಮ್ಮ ಮಗನ ಟಿ.ಸಿ ತಗೊಂಡು ಹೋಗಿ ಅಂತಾರೆ.. ಹೊಟ್ಟೆಗೆ ಗುದ್ದಿದ್ದಾರೆ. ಕೈಗೆ ಚೂರಿ ಏಟು ಬಿದ್ದಿದೆ. ಸ್ಕೂಲ್ ಆದ್ಮೇಲೆ ಸಣ್ಣಪುಟ್ಟ ಘಟನೆಗಳು ನಡೆಯುತ್ತವೆ. ನಮ್ಮ ಹುಡುಗ ಅಂತ ಹುಡುಗ ಅಲ್ಲ ಎಂದು ಗಾಯಾಳು ವಿದ್ಯಾರ್ಥಿ ತಂದೆ ಈರಣ್ಣ ಕಣ್ಣೀರು ಹಾಕಿದ್ದಾರೆ.

ವೆಪನ್ ಸಿಕ್ಕಿದ್ದೆಲ್ಲಿ..? ಶಾಲೆಗೆ ತಂದಿದ್ದ ಉದ್ದೇಶ ಏನು..?
ಸಿನಿಮಾ, ಸೀರಿಯಲ್ಸ್ ನೋಡುವ ವಿದ್ಯಾರ್ಥಿಗಳು ಅತಿ ಶೀಘ್ರವಾಗಿ ದುಷ್ಕೃತ್ಯದ ಬಗ್ಗೆ ಆಕರ್ಷಿತರಾಗುತ್ತಿದ್ದಾರೆ. ಆದರೆ ಈ ಎಲ್ಲಾ ಮಾರಕಾಸ್ತ್ರಗಳನ್ನು ಆನ್ಲೈನ್ ಮೂಲಕ ತರಿಸಿದ್ರಾ..? ಅಥವಾ ಮನೆಯಲ್ಲೇ ಯಾರಾದರೂ ಅಪರಾಧ ಹಿನ್ನೆಲೆಯುಳ್ಳವರು ಇದ್ದಾರಾ..? ಅನ್ನೋ ಬಗ್ಗೆ ಅನುಮಾನಗಳು ಮೂಡುತ್ತಿವೆ. ಆದರೂ ಶಾಲೆಯೊಂದರಲ್ಲಿ ಮಕ್ಕಳು ಈ ರೀತಿಯ ಕೃತ್ಯಕ್ಕೆ ಮುಂದಾಗಿರುವುದು ಅಪಾಯಕಾರಿ ಘಟನೆ. ಇನ್ನು ಮಾರಕಾಸ್ತ್ರಗಳು ಸಿಕ್ಕರೂ ಡಿಡಿಪಿಐ ಮಾತ್ರ ಆಟಿಕೆ ಸಾಮಾನು ಎಂದು ಹೇಳುವ ಮೂಲಕ ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ರಾ..? ಬಟನ್ ಚಾಕ್, ಏರ್ ಗನ್ ಬಳಸುವುದು ಕಾನೂನು ಪ್ರಕಾರ ಅಪರಾಧ ಆಗಿದ್ದರೂ ಇದೊಂದು ಕ್ಷುಲ್ಲಕ ವಿಚಾರ ಎನ್ನುವಂತೆ ಮಾತನಾಡಿದ್ದು ಎಷ್ಟು ಸರಿ..? ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳಬೇಕಿರುವ ಅನಿವಾರ್ಯತೆ ಇದೆ.
ಕೃಷ್ಣಮಣಿ