ಬದಲಾಗುತ್ತಿರುವ ವರ್ತಮಾನ ಭಾರತದ ಸಾರ್ವಜನಿಕ ಸಂಕಥನಗಳಲ್ಲಿ ಅತಿ ಹೆಚ್ಚು ನಿರ್ಲಕ್ಷ್ಯಕ್ಕೊಳಗಾಗಿರುವ ಅಥವಾ ಅವಗಣನೆಗೆ ಒಳಗಾಗಿರುವ ವಿದ್ಯಮಾನಗಳೆಂದರೆ ಕ್ಷೀಣಿಸುತ್ತಿರುವ ಸಾಮಾಜಿಕ ಪ್ರಜ್ಞೆ ಹಾಗೂ ಕುಸಿಯುತ್ತಿರುವ ಮಾನವೀಯ ಮೌಲ್ಯಗಳು. ಮೇಲ್ನೋಟಕ್ಕೆ ಈ ಮಾತುಗಳು ಅತಿರೇಕ ಎನಿಸುವ ಸಾಧ್ಯತೆಗಳೂ ಉಂಟು. ಅಥವಾ ʼಮೌಲ್ಯʼ ಎಂಬ ಪದವನ್ನೇ ಪುಡಿಗಟ್ಟಿಸಿ ವಿಭಿನ್ನ ವ್ಯಾಖ್ಯಾನಗಳನ್ನು ಮುಂದಿರಿಸುವ ಮೂಲಕ ಸರ್ವವ್ಯಾಪಿಯಾಗಿ ಕಾಣಲಾಗುತ್ತಿರುವ ಅಮಾನುಷತೆಯನ್ನೇ, ಸಂವೇದನಾಶೂನ್ಯ ಸ್ಥಿತಿಗತಿಗಳನ್ನೇ ವೈಭವೀಕರಿಸುವ ಪ್ರಯತ್ನಗಳನ್ನೂ ಅಲ್ಲಗಳೆಯಲಾಗುವುದಿಲ್ಲ. ಏಕೆಂದರೆ ನವಭಾರತದಲ್ಲಿ ಸಂಸ್ಕೃತಿ ಎಂಬ ಪದವೇ ಸಾಕಷ್ಟು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದು, ಅದರ ಮೂಲ ಹೂರಣವನ್ನೇ ಕಲುಷಿತಗೊಳಿಸಲಾಗಿದೆ. ಆದರೂ ಸುರಂಗದ ತುದಿಯಲ್ಲಿನ ಪ್ರಣತಿಯ ಹಾಗೆ ಸಾಮರಸ್ಯ-ಸಹಬಾಳ್ವೆಯ ಕನಸು ಕಾಣುವವರಿಗೆ ಭರವಸೆಯ ಕಿರಣಗಳು ಅಲ್ಲಲ್ಲಿ ಕಾಣುತ್ತಿರುವುದೂ ವಾಸ್ತವ.
ಬೌದ್ಧಿಕ ನೆಲೆಯಲ್ಲಿ ನೋಡಿದಾಗ ಈ ಕಿರಣಗಳನ್ನು ಸಾಹಿತ್ಯ, ಸಂಗೀತ, ಕಲೆ ಹಾಗೂ ರಂಗಭೂಮಿಯಲ್ಲಿನ ಸೃಜನಶೀಲ ಪ್ರಯತ್ನಗಳಲ್ಲಿ ಇಂದಿಗೂ ಕಾಣಲು ಸಾಧ್ಯ. ಮೊದಲ ಮೂರು ಸಾಧನಗಳು ಸಮಾಜ-ವಿಮುಖಿಯಾಗಿ ಹಲವು ವರ್ಷಗಳೇ ಕಳೆದಿದ್ದರೂ ಅಲ್ಲಿಯೂ ಸಹ ಜೀವಂತಿಕೆ ಉಸಿರಾಡುತ್ತಿರುವುದು ಆಶಾದಾಯಕ ಸಂಗತಿ. ಆದರೆ ವರ್ತಮಾನದ ಸಂಕೀರ್ಣ ಸಿಕ್ಕುಗಳ ನಡುವೆ, ಕೆಲವು ಅಪಸವ್ಯಗಳ ಹೊರತಾಗಿಯೂ ತನ್ನ ಮೂಲ ಸ್ಥಾಯಿಭಾವವನ್ನು ಉಳಿಸಿಕೊಂಡು, ಸಮಾಜದ ಅಂತರ್ಗತ ವೈವಿಧ್ಯತೆಯನ್ನು ಕಾಲಕಾಲಕ್ಕೆ ಅಭಿವ್ಯಕ್ತಗೊಳಿಸುತ್ತಾ, ಆಧುನಿಕ ಯುವ ಸಮೂಹ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ, ಜಟಿಲ ಸವಾಲುಗಳಿಗೆ ತೆರೆದುಕೊಳ್ಳುತ್ತಿರುವುದು ರಂಗಭೂಮಿ ಒಂದೇ. ಈ ನೆಲೆಯಲ್ಲೇ ರಂಗಪ್ರಯೋಗಗಳು ಇತಿಹಾಸ-ಪುರಾಣ-ಮಿಥ್ಯೆ ಹಾಗೂ ಸಮಕಾಲೀನ ವಾಸ್ತವಗಳನ್ನು ಮುಖಾಮುಖಿಯಾಗಿಸುತ್ತಾ ಸಮಾಜದ ಮುಂದಿರಿಸುವ ಮೂಲಕ ಜನತೆಯ ನಡುವೆ ಚಿಂತನೆಯ ತಂತುಗಳನ್ನಾದರೂ ಹರಡುತ್ತಿರುವುದು ಒಪ್ಪಲೆಬೇಕಾದ ಸತ್ಯ.
ನಾಟಕೋತ್ಸವಗಳ ಪರ್ವ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿರಂತರವಾಗಿ ನಡೆಯುತ್ತಿರುವ ನಾಟಕೋತ್ಸವಗಳು ರಂಗಸಂಸ್ಕೃತಿಯ ಈ ಪರಂಪರೆಯನ್ನು ಕಾಪಾಡಿಕೊಂಡು ಬಂದಿದ್ದು, ಈ ನಿಟ್ಟಿನಲ್ಲಿ “ ನಿರಂತರ ಫೌಂಡೇಷನ್ ”ತನ್ನ ಚಿಕಿತ್ಸಕ ಮಾರ್ಗದಲ್ಲಿ ನಿರಂತರವಾಗಿ ಮುನ್ನಡೆಯುತ್ತಲೇ ಬಂದಿದೆ. ಜನಮುಖಿ ಪರಂಪರೆ ಹಾಗೂ ಸಮಾಜಮುಖಿ ಸಾಂಸ್ಕೃತಿಕ ನೆಲೆಗಳನ್ನು ರಂಗಭೂಮಿ, ಸಾಹಿತ್ಯ, ಜಾನಪದ ಹಾಗೂ ಪರಿಸರ ಪ್ರಜ್ಞೆಯ ಮೂಲಕ ವಿಸ್ತರಿಸುತ್ತಲೇ ಬಂದಿರುವ ʼನಿರಂತರ ಫೌಂಡೇಷನ್ʼ ಕಳೆದ 25 ವರ್ಷಗಳಿಂದಲೂ ತನ್ನ ವಿಶಿಷ್ಟ, ವಿಭಿನ್ನ ರಂಗಪ್ರಯೋಗಗಳ ಮೂಲಕ ವಿಶಾಲ ಸಮಾಜವನ್ನು ಕ್ರಿಯಾಶೀಲವಾಗಿಸುವುದರಲ್ಲಿ ತೊಡಗಿದೆ. ಭಾರತದ ವಿಶಾಲ ಜನಸಂಸ್ಕೃತಿಯ ಪಾರಂಪರಿಕ ಸೊಗಡನ್ನು ಉಳಿಸಿಕೊಂಡೇ ಆಧುನಿಕತೆಗೆ ತೆರೆದುಕೊಳ್ಳುತ್ತಾ ನಾಗರಿಕತೆಯಲ್ಲಿ ಸಹಜವಾಗಿ ಉಂಟಾಗುವ ವ್ಯತ್ಯಯಗಳನ್ನು ಸರಿಪಡಿಸುವ ಒಂದು ಹಾದಿಯಲ್ಲಿ ರಂಗಪ್ರಯೋಗಗಳನ್ನು ನಿರಂತರ ಫೌಂಡೇಷನ್ ಮಾಡುತ್ತಾ ಬಂದಿದೆ.
ಈ ಸೃಜನಶೀಲ ಹಾದಿಯ ಮುಂದುವರಿಕೆಯಾಗಿ ನಿರಂತರ ಫೌಂಡೇಷನ್ ಗೆಳೆಯರು ತಮ್ಮ ವರ್ಷಾಂತ್ಯದ ನಾಟಕೋತ್ಸವವನ್ನು ಮೈಸೂರಿನಲ್ಲಿ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ವಿಭಿನ್ನ ಶೈಲಿಯ ಜಾನಪದ ಹಾಗೂ ನಾಟಕ ಪ್ರಕಾರಗಳನ್ನು ಅಳವಡಿಸಿಕೊಳ್ಳುತ್ತಾ ರಂಗಭೂಮಿಯ ವಿಶಾಲವ್ಯಾಪ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವ ನಿರಂತರ ತಂಡ ರಾಜ್ಯದ ನಾಲ್ಕೂ ದಿಕ್ಕುಗಳಲ್ಲಿ ಗುರುತಿಸಬಹುದಾದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಾಮಾಜಿಕ ವೈವಿಧ್ಯತೆಗಳನ್ನು ತನ್ನ ರಂಗಪ್ರಯೋಗಗಳ ಮೂಲಕ ಅಭಿವ್ಯಕ್ತಿಸುತ್ತಾ ಬಂದಿದೆ. ಡಿಸೆಂಬರ್ 21 ರಿಂದ 25ರವರೆಗೆ ಮೈಸೂರಿನ ಕಿರುರಂಗಮಂದಿರದಲ್ಲಿ ಆಯೋಜಿಸಲಾಗಿರುವ ಈ ಬಾರಿಯ ನಾಟಕೋತ್ಸವದಲ್ಲೂ ಈ ವೈವಿಧ್ಯತೆಯು ಮೇಳೈಸಿದೆ. ಪುರಾಣ, ಜಾನಪದ ಹಾಗೂ ಸಮಕಾಲೀನ ಸಾಹಿತ್ಯದ ನೆಲೆಗಳಲ್ಲಿ ಪ್ರಾಯೋಜಿಸಲಾಗಿರುವ ಐದು ಪ್ರಯೋಗಗಳೂ ತಮ್ಮದೇ ಆದ ವೈವಿಧ್ಯತೆಯ ಮೂಲಕ ಮೈಸೂರಿನ ರಂಗಪ್ರೇಕ್ಷಕರನ್ನು, ಸೃಜನಶೀಲ ಮನಸುಗಳನ್ನು ತಟ್ಟಲಿವೆ.
ನಾಟಕೋತ್ಸವದ ವಿಭಿನ್ನ ಪ್ರಯೋಗಗಳು
2023ರ ವರ್ಷಾಂತ್ಯದ ನಾಟಕೋತ್ಸವದಲ್ಲಿ ನಿರಂತರ ಫೌಂಡೇಷನ್ ವಿವಿಧ ಸಾಂಸ್ಕೃತಿಕ ಆಯಾಮಗಳ ಐದು ನಾಟಕಗಳನ್ನು ಪ್ರದರ್ಶಿಸುತ್ತಿದೆ. ಹಿರಿಯ ರಂಗಕರ್ಮಿಗಳು, ಸಾಹಿತಿಗಳು, ಕಲಾವಿದರು, ಜನಪದ ವಿದ್ವಾಂಸರು ಐದೂ ದಿನಗಳ ಪ್ರದರ್ಶನಗಳಿಗೆ ಮುಂಚಿತವಾಗಿ ಉಪಸ್ಥಿತರಿದ್ದು ಆಯಾ ದಿನದ ನಾಟಕ ಪ್ರದರ್ಶನದ ಬಗ್ಗೆ ಅಭಿಪ್ರಾಯ, ಅನಿಸಿಕೆ ಹಂಚಿಕೊಳ್ಳಲಿದ್ದಾರೆ.
21ರ ಗುರುವಾರ ಸಂಜೆ 5. 30ಕ್ಕೆ ಯಲ್ಲಾಪುರದ ಅಂಚೆ ಮದ್ಲೇ ತಂಡದಿಂದ ʼಸಿದ್ದಿ ಡಮಾಮಿ ಜನಪದ ನೃತ್ಯದʼ ಮೂಲಕ ಆರಂಭವಾಗುವ ನಾಟಕೋತ್ಸವದ ಆದಿಯಾಗಿ ಸಂಜೆ 7ಕ್ಕೆ ಬೆಂಗಳೂರಿನ ರಂಗರಥ ತಂಡದಿಂದ ಆಸಿಫ್ ಕ್ಷತ್ರಿಯ ವಿರಚಿತ “ ಕ್ರೌಂಚ ಗೀತಾ ” ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕಕಾರ ಆಸಿಫ್ ಹಾಗೂ ಶ್ವೇತಾ ಶ್ರೀನಿವಾಸ್ ನಿರ್ದೇಶನದಲ್ಲಿ ರೂಪುಗೊಂಡಿರುವ, ರಾಮಾಯಣದ ಉಪಕಥೆಯೊಂದನ್ನು ಆಧರಿಸಿದ ಈ ನಾಟಕ, ವಾಲ್ಮೀಕಿಯ ಮಹಾಕಾವ್ಯದಲ್ಲಿ ಬರುವ ಅಗಸನ ಒಂದು ಪ್ರಸಂಗವನ್ನು ಹೊಸ ವೈಚಾರಿಕ ನೆಲೆಯಲ್ಲಿ, ನವೀನ ದೃಷ್ಟಿಕೋನದೊಂದಿಗೆ ರಂಗರೂಪ ಪಡೆದುಕೊಂಡಿದೆ. ಸೀತೆಯನ್ನು ಕಾಡಿಗೆ ಕಳುಹಿಸುವ ಸನ್ನಿವೇಶದಲ್ಲಿ ಎದುರಾಗುವ ಅಗಸನ ಪಾತ್ರ ಇಡೀ ಕಾವ್ಯದಲ್ಲಿ ಒಂದು ಕೇಂದ್ರ ಸ್ಥಾನವನ್ನೂ ಪಡೆದುಕೊಂಡಿದೆ.
ಈ ಪಾತ್ರದ ಪರಿಧಿಯಲ್ಲೇ ಮಹಾಕವಿಯು ಸೃಜಿಸಿರಬಹುದಾದ ಅಗಸನ ಪಶ್ಚಾತ್ತಾಪದ ಬದುಕು, ಸೀತೆ ಲಂಕೆಯಿಂದ ಮರಳಿ ಬಂದರೂ ಮತ್ತೊಮ್ಮೆ ವನವಾಸಕ್ಕೆ ದೂಡಲ್ಪಡುವ ಸಂದರ್ಭ ಹಾಗೂ ತದನಂತರದ ಘಟನೆಗಳು ಹೇಗೆ ಕವಿ ವಾಲ್ಮೀಕಿಯ ಅಂತರಾಳದ ತುಮುಲಗಳನ್ನೂ ಬಾಧಿಸುತ್ತವೆ ಎನ್ನುವುದನ್ನು ʼಕ್ರೌಂಚ ಗೀತಾʼ ಬಿಂಬಿಸಲು ಯತ್ನಿಸುತ್ತದೆ. ಅನಿರೀಕ್ಷಿತವಾಗಿ ತಾನು ಎದುರಿಸುವ 14 ವರ್ಷಗಳ ವನವಾಸದ ಆಘಾತದ ನಡುವೆಯೂ ಸೀತೆ ತನ್ನ ಸ್ವಾಭಿಮಾನವನ್ನು ಕಾಪಾಡಿಕೊಂಡು, ಅಸ್ತಿತ್ವವನ್ನು ಸ್ಥಾಪಿಸುವ ಸನ್ನಿವೇಶಗಳು ಹಲವು ರಾಮಾಯಣಗಳಲ್ಲಿ ಭಿನ್ನ ಶೈಲಿಗಳಲ್ಲಿ ವ್ಯಕ್ತವಾಗುತ್ತಲೇ ಬಂದಿವೆ. ಈ ಘಟನಾವಳಿಗಳ ನಡುವೆ ವಾಲ್ಮೀಕಿ ಕವಿಯು ಸೃಷ್ಟಿಸಿರುವ ಪಾತ್ರಗಳಲ್ಲಿನ ಆಂತರಿಕ ಹೊಯ್ದಾಟವನ್ನೂ ಸಹ ʼ ಕ್ರೌಂಚ ಗೀತಾʼ ಪ್ರೇಕ್ಷಕರ ಮುಂದಿರಿಸುತ್ತದೆ.
22ರ ಶುಕ್ರವಾರ ಸಂಜೆ 7ಕ್ಕೆ ಬೆಂಗಳೂರಿನ ಅಭಿನಯ ತರಂಗ ತಂಡವು ಅಭಿನಯಿಸುವ “ ಆತಂಕವಾದಿಯ ಆಕಸ್ಮಿಕ ಸಾವು ” ನಾವು ಬದುಕುತ್ತಿರುವ ಸಮಕಾಲೀನ ವ್ಯವಸ್ಥೆಯನ್ನು ಅಣಕವಾಡುವ ವಸ್ತುವನ್ನು ಹೊಂದಿರುವ ಒಂದು ನಾಟಕ. ಇಟಾಲಿಯನ್ ಹಾಗೂ ಫ್ರೆಂಚ್ ರಂಗಭೂಮಿಯಲ್ಲಿ ಖ್ಯಾತನಾಮರಾಗಿರುವ ದಾರಿಯೋ ಫೋ ವಿರಚಿತ 1969ರ ಮೂಲ ನಾಟಕದ ರಂಗರೂಪವನ್ನು ಎಚ್.ಕೆ. ಶ್ವೇತಾರಾಣಿ ಅವರ ನಿರ್ದೇಶನದಲ್ಲಿ ಕನ್ನಡಕ್ಕೆ ಅಳವಡಿಸಲಾಗಿದೆ. ಇಂದಿಗೂ ನಮ್ಮೆದುರು ಢಾಳಾಗಿ ಕಾಣಿಸುವಂತಹ ವ್ಯವಸ್ಥೆಯ ಹಲವು ಕಟು ವಾಸ್ತವಗಳನ್ನು ವಿಡಂಬನಾತ್ಮಕವಾಗಿ ನೋಡುತ್ತಲೇ, ಸಮಾಜಕ್ಕೆ ಮುಖಾಮುಖಿಯಾಗಿಸುವ ಒಂದು ಪ್ರಯತ್ನವಾಗಿ “ ಆತಂಕವಾದಿಯ ಆಕಸ್ಮಿಕ ಸಾವು ” ಪ್ರದರ್ಶನಗೊಳ್ಳಲಿದೆ. ಬ್ಯಾಂಕ್ ಸ್ಫೋಟವೊಂದನ್ನು ಭೇದಿಸುವಾಗ ಸಿಕ್ಕಿಬೀಳುವ ಶಂಕಿತ ವ್ಯಕ್ತಿಯನ್ನು ಪೊಲೀಸರೇ ಎತ್ತರದ ಮಹಡಿಯಿಂದ ಕೆಳಗೆಸೆದು ಅದನ್ನು ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನಗಳ ಸುತ್ತ ಕತೆ ಬಿಚ್ಚಿಕೊಳ್ಳುತ್ತದೆ. ಅಧಿಕಾರಸ್ಥರು ತಮ್ಮ ಅಸ್ತಿತ್ವ ಹಾಗೂ ಅಧಿಕಾರವನ್ನು ಕಾಪಾಡಿಕೊಳ್ಳಲು ಬಳಸುವ ಕ್ರೂರ ವಿಧಾನಗಳನ್ನು ಈ ನಾಟಕವು ವಿಡಂಬನಾತ್ಮಕವಾಗಿ ತೆರೆದಿಡುತ್ತದೆ.
23ರ ಶನಿವಾರ 7ಕ್ಕೆ ಶ್ರೀರಂಗಪಟ್ಟಣದ ಕೆ ಶೆಟ್ಟಿಹಳ್ಳಿಯ ನಿರ್ದಿಗಂತ ತಂಡದಿಂದ ರೂಪುಗೊಂಡಿರುವ ಶರಣ್ಯಾ ರಾಮಪ್ರಕಾಶ್ ವಿರಚಿತ ಹಾಗೂ ನಿರ್ದೇಶಿತ ನಾಟಕ “ಪ್ರಾಜೆಕ್ಟ್ ಡಾರ್ಲಿಂಗ್”ಪ್ರದರ್ಶನಗೊಳ್ಳಲಿದೆ. ಯುವ ತಲೆಮಾರಿನ ರಂಗಭೂಮಿಯ ಕಲಾವಿದರಲ್ಲಿ ಸಹಜವಾಗಿ ಏಳಬಹುದಾದ ಪ್ರಶ್ನೆ ಎಂದರೆ ಪೂರ್ವಸೂರಿಗಳನ್ನು ಕುರಿತಾದದ್ದು. ವರ್ತಮಾನದ ಆಧುನಿಕ ರಂಗಭೂಮಿಯ ಮೂಲ ಬೇರುಗಳನ್ನು ಹುಡುಕುತ್ತಾ, ಈ ಕಲಾಭಿವ್ಯಕ್ತಿಯನ್ನು ಕಟ್ಟಿ, ಬೆಳೆಸಿ, ಪೋಷಿಸಿ, ಸಂಸ್ಥಾಪಿಸಿರುವ ಕಲಾರಾಧಕರನ್ನು ಶೋಧಿಸುತ್ತಾ ಹೋಗುವ ಯುವ ಕಲಾವಿದರ ಪಾಡನ್ನು ಈ ನಾಟಕ ಹಾಸ್ಯಮಿಶ್ರಿತ ಪ್ರಸಂಗಗಳೊಂದಿಗೆ ಬಿಚ್ಚಿಡುತ್ತದೆ. ಈ ಶೋಧದ ಮಾರ್ಗದಲ್ಲೇ ಯುವ ತಲೆಮಾರಿಗೆ ರಂಗಭೂಮಿಗೆ ನೀರೆರೆದು ಪೋಷಿಸಿದ ಹಲವು ಕಲಾವಿದರ ಮುಖಾಮುಖಿಯಾಗುತ್ತದೆ. ಆದರೆ ತಾವು ಉದ್ದೇಶಿಸಿದ ಮೂಲಕ ಕಲಾವಿದೆಯನ್ನು ತಲುಪಲು ಸಾಧ್ಯವೇ ಎಂಬ ಜಿಜ್ಞಾಸೆಯೊಂದಿಗೇ ನಾಟಕ ಮುಂದುವರೆಯುತ್ತದೆ. ರಂಗಕರ್ಮಿಗೆ ಸಹಜವಾಗಿಯೇ ಒದಗಿರುವ ಕಲಾ ಸ್ವಾಯತ್ತತೆಯೊಂದಿಗೆ ಕಲ್ಪನೆ ಹಾಗೂ ಸಂಶೋಧನೆಯನ್ನು ಮೇಳೈಸಿ ಒಂದು ಕಥಾಹಂದರವನ್ನು ಹೆಣೆದಿರುವ ಶರಣ್ಯಾ ರಾಮಪ್ರಕಾಶ್ ಸಮಕಾಲೀನ ಸಮಾಜದ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ರಂಗರೂಪಕ್ಕೆ ಅಳವಡಿಸಿದ್ದಾರೆ. ಇದೊಂದು ವಿಶಿಷ್ಟ ಪ್ರಯೋಗ ಎನ್ನುವುದು ನಿಸ್ಸಂದೇಹ.
24ರ ಭಾನುವಾರ ಸಂಜೆ ಏಳಕ್ಕೆ ಈಗಾಗಲೇ ಸಾಕಷ್ಟು ಜನಪ್ರಿಯವಾಗಿರುವ ವಿಶಿಷ್ಟ ರಂಗಪ್ರಯೋಗ , ಗೊರೂರು ರಾಮಸ್ವಾಮಿ ಐಯ್ಯಂಗಾರ್ ಅವರ ಪ್ರಬಂಧಗಳನ್ನಾಧರಿಸಿದ “ಗೊರೂರು“ ಮೈಸೂರಿನ ನಿರಂತರ ತಂಡದಿಂದ ಪ್ರದರ್ಶನಗೊಳ್ಳುತ್ತಿದೆ. ಮಂಜುನಾಥ್ ಎ. ಬಡಿಗೇರ ಅವರ ರಂಗಪಠ್ಯ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ನಾಟಕದ ವೈಶಿಷ್ಟ್ಯ ಇರುವುದು, ಮೊಟ್ಟಮೊದಲ ಬಾರಿಗೆ ಕನ್ನಡ ಸಾಹಿತ್ಯದ ಪರಿಚಾರಕರನ್ನು ಹಾಗೂ ಅವರ ಸಾಹಿತ್ಯಕ ಸೃಜನಶೀಲತೆಯನ್ನು ರಂಗರೂಪಕ್ಕೆ ಅಳವಡಿಸಿರುವುದರಲ್ಲಿ. ಸ್ವಾತಂತ್ರ್ಯಪೂರ್ವದ ಕನ್ನಡ ನವೋದಯ ಸಾಹಿತ್ಯದಲ್ಲಿ ತಮ್ಮ ಕಥೆ, ಪ್ರಬಂಧ ಹಾಗೂ ಕಾದಂಬರಿಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ವಿಭಿನ್ನ ಆಯಾಮವನ್ನು ಕೊಟ್ಟ ಗೊರೂರು ಅವರ ಹಲವು ಪ್ರಬಂಧಗಳನ್ನಾಧರಿಸಿ ಈ ನಾಟಕವನ್ನು ರಚಿಸಲಾಗಿದೆ. ವರ್ತಮಾನದ ಸಮಾಜದಲ್ಲಿ ಕಾಣೆಯಾಗಿರುವ ಸಮನ್ವಯ-ಸಾಮರಸ್ಯದ ಭಾವಗಳನ್ನು ಮತ್ತೊಮ್ಮೆ ನೆನಪಿಸುವ ನಿಟ್ಟಿನಲ್ಲಿ ನಾಟಕವು ಗೊರೂರಿನ ಜಗತ್ತನ್ನು ಪರಿಚಯಿಸುತ್ತಾ ಹೋಗುತ್ತದೆ. ಕವಲುಹಾದಿಯಲ್ಲಿರುವ ಪ್ರಸ್ತುತ ಸಮಾಜವನ್ನು ನವೋದಯದ ಸಾಹಿತಿ ಗೊರೂರರ ಮೂಲಕ ಪುನರೆಚ್ಚರಿಸುವ ನಿಟ್ಟಿನಲ್ಲಿ ಈ ರಂಗರೂಪದ ಕಥನವು ಮಂಜುನಾಥ್ ಎಲ್. ಬಡಿಗೇರ್ ಅವರ ನಿರ್ದೇಶನದಲ್ಲಿ ಪ್ರೇಕ್ಷಕರನ್ನು ಗಾಢ ಚಿಂತನೆಗೆ ದೂಡುತ್ತದೆ.
25ರ ಸಂಜೆ 6.15ಕ್ಕೆ ನಾಟಕೋತ್ಸವದ ಸಮಾರೋಪ ನಡೆಯಲಿದ್ದು ಖ್ಯಾತ ರಂಗಭೂಮಿ ಕಲಾವಿದೆ, ವಿದಾನಪರಿಷತ್ ಸದಸ್ಯೆ ಶ್ರೀಮತಿ ಉಮಾಶ್ರೀ ಅವರ ಉಪಸ್ಥಿತಿಯಲ್ಲಿ, ಸಂಜೆ 7ಕ್ಕೆ ಧಾರವಾಡದ ಆಟಮಾಟ ರಂಗತಂಡದಿಂದ “ ನಾ ರಾಜಗುರು ” ನಾಟಕ ಪ್ರದರ್ಶನಗೊಳ್ಳಲಿದೆ. ಮಹದೇವ ಹಡಪದ ಅವರಿಂದ ರಂಗರೂಪ ಪಡೆದು ಅವರಿಂದಲೇ ನಿರ್ದೇಶಿಸಲ್ಪಟ್ಟಿರುವ “ ನಾ ರಾಜಗುರು “ ಸ್ವರಸಾಮ್ರಾಟ್ ಪಂಡಿತ್ ಬಸವರಾಜ ರಾಜಗುರು ಅವರ ಸುತ್ತ ಹೆಣೆದ ಕಥಾ ಹಂದರವನ್ನು ಹೊಂದಿದೆ. ಅಪ್ಪಟ ಕನ್ನಡ ನೆಲದ ಸ್ವರತ್ರಾಣವನ್ನು ರೂಢಿಸಿಕೊಂಡೇ , ಹಲವಾರು ಸಂಗೀತ ದಿಗ್ಗಜರಿಂದ ಸಂಗೀತ ಪಾಠವನ್ನು ಕಲಿತು, ಗದಗಿನ ಪಂಚಾಕ್ಷರಿ ಗವಾಯಿ ಅವರ ಶಿಷ್ಯರಾಗಿ ಗುರುತಿಸಿಕೊಂಡಿದ್ದ ಬಸವರಾಜ ರಾಜಗುರು ತಮ್ಮ ಸಂಗೀತದ ಅಲೆಗಳನ್ನು ವಿಸ್ತರಿಸಲೆಂದೇ ದೇಶ ಸಂಚಾರ ಮಾಡಿದ ದಿಗ್ಗಜರು. ನಾಟ್ಯ ಸಂಗೀತದ ಪ್ರಕಾರವನ್ನು ಜನಪ್ರಿಯಗೊಳಿಸಿದ ಈ ಮಹಾನ್ ಕಲಾವಿದರನ್ನು, ಅವರ ಸಾಧನೆಗಳನ್ನು ಹಾಗೂ ಬದುಕು ಸವೆಸಿದ ಹಾದಿಗಳನ್ನು ಪರಿಚಯಿಸುವ ರಂಗರೂಪವಾಗಿ “ ನಾ ರಾಜಗುರು ” ಪ್ರೇಕ್ಷಕರ ಮುಂದೆ ತೆರೆದುಕೊಳ್ಳುತ್ತದೆ.
ಪ್ರಯೋಗಶೀಲತೆಯ ʼ ನಿರಂತರತೆ ʼ
ಸೃಜನಶೀಲತೆ ಹಾಗೂ ಹೊಸತನಕ್ಕೆ ಸದಾ ತೆರೆದಮನಸ್ಸಿನಿಂದ ಸ್ಪಂದಿಸುತ್ತಲೇ ರಂಗಭೂಮಿಯಲ್ಲಿ ಎರಡೂವರೆ ದಶಕಗಳ ಕಾಲ ಸವೆಸಿರುವ ನಿರಂತರ ಫೌಂಡೇಷನ್ ಈ ವರ್ಷಾಂತ್ಯದ ರಂಗ ಉತ್ಸವವನ್ನೂ ವಿಶಿಷ್ಟ ರೂಪದಲ್ಲಿ ಅನಾವರಣಗೊಳಿಸುತ್ತಿದ್ದು ಪುರಾಣ, ಜಾನಪದ, ಸಮಕಾಲೀನ ನೆಲೆಯಲ್ಲಿ ಸಾಹಿತ್ಯ, ಸಂಗೀತ ಹಾಗೂ ರಂಗಭೂಮಿಯ ಪ್ರಯೋಗಗಳನ್ನು ಮೈಸೂರಿನ ರಂಗಾಸಕ್ತರ ಮುಂದಿರಿಸುತ್ತಿದೆ. ಸೃಜನಾತ್ಮಕ ವೈವಿಧ್ಯತೆಗೆ ಸದಾ ತೆರೆದುಕೊಂಡಿರುವ ರಂಗಭೂಮಿಯನ್ನು ಸಮರ್ಪಕವಾಗಿ ನಾಗರಿಕರ ಮುಂದೆ ಪ್ರಸ್ತುತಪಡಿಸುವ ನಿಟ್ಟಿನಲ್ಲಿ ನಿರಂತರ ಫೌಂಡೇಷನ್ ನಡೆಸುತ್ತಿರುವ ರಂಗಪ್ರಯೋಗಗಳು ಹಾಗೂ ರಂಗ ಉತ್ಸವ ವರ್ತಮಾನದ ಸಾಂಸ್ಕೃತಿಕ ಅವಶ್ಯಕತೆಗಳನ್ನು ಪೂರೈಸುವುದರಲ್ಲಿ ಒಂದು ಸಂವೇದನಾಶೀಲ ಹೆಜ್ಜೆಯಾಗಿದೆ. ಇಂತಹ ಕ್ರಿಯಾಶೀಲ ನಾಟಕೋತ್ಸವವನ್ನು ಹೆಚ್ಚು ಜನರು ನೋಡುವಂತಾಗಬೇಕು. ರಂಗಭೂಮಿ ಬೆಳೆಯುವುದು ಕೇವಲ ರಂಗಾಸಕ್ತರಿಂದ ಮಾತ್ರವೇ ಅಲ್ಲ, ಸಾಮಾನ್ಯ ನಾಗರಿಕರೂ ಈ ಸೃಜನಶೀಲ ಪ್ರಯತ್ನಗಳಿಗೆ ಒತ್ತಾಸೆಯಾಗಿ ನಿಲ್ಲುವ ಮೂಲಕ, ನಾಟಕಗಳನ್ನು ವೀಕ್ಷಿಸಿ ತಮ್ಮ ಅಭಿಪ್ರಾಯಗಳನ್ನು ದಾಖಲಿಸಿ, ಕಲಾವಿದರ ಬೆನ್ನುತಟ್ಟುವುದೇ ಅಲ್ಲದೆ ನಾಟಕೋತ್ಸವಗಳ ಸದುದ್ದೇಶಗಳನ್ನೂ ಸಾಕಾರಗೊಳಿಸಬೇಕಿದೆ.
ಎಂ.ಎಸ್.ಐ.ಎಲ್ ಬೆಂಗಳೂರು ಇವರ ಸಹಪ್ರಾಯೋಜಕತ್ವದಲ್ಲಿ , ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಲಯ ಬೆಂಗಳೂರು ಮತ್ತು ಸಂಸ್ಕೃತಿ ಸಚಿವಾಲಯ ನವದೆಹಲಿ ಇವರ ಸಹಯೋಗದಲ್ಲಿ, ನಿರಂತರ ಫೌಂಡೇಶನ್ ಮೈಸೂರು ಆಯೋಜಿಸಿರುವ ನಿರಂತರ ರಂಗ ಉತ್ಸವ – ೨೦೨೩, ಡಿಸೆಂಬರ್ ೨೧ ರಿಂದ ೨೫ ರವರೆಗೆ ಮೈಸೂರಿನ ಕಲಾಮಂದಿರದ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ನಡೆಯಲಿದೆ.
-೦-೦-೦-೦-