ವಿದ್ಯುನ್ಮಾನ ದೃಶ್ಯ ಮಾಧ್ಯಮದ ಅವಿಷ್ಕಾರದಿಂದ ಜಗತ್ತಿನ ಮಾನವ ಸಮಾಜದಲ್ಲಿ ಉತ್ತರದಿಂದ ದಕ್ಷಿಣದವರೆಗೆ , ಕಾಣಬಹುದಾದ ಸಮಾನ ಎಳೆಯ ಒಂದು ವಿದ್ಯಮಾನ ಎಂದರೆ ಪರದೆಯ ಮೇಲಿನ ಹಿಂಸೆಯನ್ನು ಆಸ್ವಾದಿಸುವುದು ಅಥವಾ ಕನಿಷ್ಠ ಆನಂದಿಸುವುದು. ಅದು ಟಾಮ್ ಅಂಡ್ ಜೆರ್ರಿ ಮಕ್ಕಳ ಚಿತ್ರಸರಣಿಯಾಗಲೀ, ಭಾರತದ ವಿಭಿನ್ನ ಭಾಷಾ-Woodಗಳ ಸಿನೆಮಾಗಳಾಗಲೀ, ಕೌಟುಂಬಿಕ (!) ಧಾರಾವಾಹಿಗಳಾಗಲೀ ಅಥವಾ ಕೊನೆಗೆ ಈ ಸಿನೆಮಾಗಳಲ್ಲಿ ಹೊಡೆತದಿಂದಲೇ ನಗುವಿನ ಹೊನಲುಕ್ಕಿಸುವ ಹಾಸ್ಯ (!)ಸನ್ನಿವೇಶಗಳಾಗಲೀ, ಎಲ್ಲ ಮಾಧ್ಯಮಗಳಲ್ಲೂ ಪರದೆಯ ಮೇಲೆ ನಡೆಯುವ ಹಿಂಸೆ ನೋಡುಗರ ಮನತಣಿಸುತ್ತದೆ. ಕಿಂಚಿತ್ತೂ ಮುಜುಗರ ಇಲ್ಲದೆ ಪರದೆಯ ಮೇಲಿನ ಹಿಂಸೆಯನ್ನು ಭಾವುಕವಾಗಿ ಆಸ್ವಾದಿಸುವ ಒಂದು ಪ್ರವೃತ್ತಿಯನ್ನು ದೃಶ್ಯ ಮಾಧ್ಯಮ ವಿದ್ಯುನ್ಮಾನ ಕ್ರಾಂತಿಯ ಮೂಲಕ ಸಾರ್ವತ್ರೀಕರಿಸಿದೆ.
ಎಲ್ಲೋ ನಡೆಯುವ ಅಥವಾ ನಡೆಯುವಂತೆ ಕಾಣುವ ಹಿಂಸೆ ಮತ್ತು ಹಿಂಸಾತ್ಮಕ ಕೃತ್ಯಗಳನ್ನು ಜನರು ತಾವು ಪರಿಭಾವಿಸುವ ಸಾಮಾಜಿಕ-ಸಾಂಸ್ಕೃತಿಕ ಅಸ್ಮಿತೆಗಳಿಗನುಗುಣವಾಗಿ ಆಸ್ವಾದಿಸುವುದು ಮಾನವ ಸಹಜ ಗುಣವೂ ಹೌದು. ಸಾಮಾನ್ಯ ಮನುಷ್ಯನ ಈ ಗುಣವನ್ನೇ ತಮ್ಮ ಬಂಡವಾಳವನ್ನಾಗಿಸಿಕೊಂಡಿರುವ ದೃಶ್ಯ ಮಾಧ್ಯಮಗಳು ಗಡಿ-ಭಾಷೆ-ಪ್ರಾದೇಶಿಕ ಭಿನ್ನತೆಗಳನ್ನು ದಾಟಿ ಜನತೆಯನ್ನು ಭಾವೋನ್ಮಾದದ ಅಲೆಯಲ್ಲಿ ತೇಲಿಸುವ ತಂತ್ರಗಳನ್ನೂ ರೂಢಿಸಿಕೊಂಡಿರುವುದು ಭಾರತದ ಡಿಜಿಟಲ್ ಯುಗದ ವೈಶಿಷ್ಟ್ಯ. ಹಾಗಾಗಿಯೇ ಸುದ್ದಿ ನಿರೂಪಕರಿಗೆ ಕೋಮು ಗಲಭೆಗಳಲ್ಲಿ, ಮತದ್ವೇಷದ ನರಮೇಧಗಳಲ್ಲಿ ಹಾಗೂ ಭೌಗೋಳಿಕ ಯುದ್ಧಗಳಲ್ಲಿ ರಾಕೆಟ್, ಕ್ಷಿಪಣಿ, ಡ್ರೋನ್, ಯುದ್ಧ ವಿಮಾನಗಳು ಹಾಗೂ ಅವುಗಳಿಂದ ಸಿಡಿಯುವ ಜೀವನಾಶಕ ಅಸ್ತ್ರಗಳೇ ಪ್ರಧಾನವಾಗಿ ಕಾಣುತ್ತವೆ. ಇವುಗಳಿಂದ ನೆಲಸಮವಾಗುವ ಗಗನಚುಂಬಿ ಕಟ್ಟಡಗಳು, ಬೃಹತ್ ಸ್ಥಾವರಗಳು, ಅತ್ಯಾಧುನಿಕ ನಗರಗಳು , ಕಾರ್ಮೋಡದಂತೆ ಆವರಿಸುವ ದ್ವೇಷಾಸೂಯೆಯ ದಟ್ಟ ಹೊಗೆ ಇಡೀ ಪರದೆಯನ್ನು ಆಕ್ರಮಿಸುತ್ತವೆ.
ಯುದ್ಧ-ಭೂಮಿ ಮತ್ತು ಬಂಡವಾಳ
ಎರಡು ಭೂ ಪ್ರದೇಶಗಳ ನಡುವೆ ನಡೆಯುವ ಯುದ್ಧ ಅಥವಾ ಭೀಕರ ಸಮರಗಳ ಹಿಂದಿನ ಭೌಗೋಳಿಕ ರಾಜಕೀಯ ಕಾರಣಗಳೇನೇ ಇರಲಿ, ಆರ್ಥಿಕ ಆಯಾಮಗಳೇನೇ ಇರಲಿ, ಮಾರುಕಟ್ಟೆ ಶಕ್ತಿಗಳ ಹುನ್ನಾರಗಳೇನೇ ಇರಲಿ ಈ ಬಾಂಬ್ ದಾಳಿಗಳು, ಲೋಕ ಹಂತಕ ಆಕ್ರಮಣಗಳು ಮತ್ತು ಜೀವ ಹಂತಕ ಶಸ್ತ್ರಾಸ್ತ್ರಗಳು ಬೂದಿಯಾಗಿಸುವ ಸ್ಥಾವರಗಳೇ ಸುದ್ದಿಮನೆಯ ನಿರೂಪಕರಿಗೆ, ದೃಶ್ಯಮಾಧ್ಯಮ ಸಮೂಹದ ಮಾರುಕಟ್ಟೆಗೆ ಟಿಆರ್ಪಿ ಹೆಚ್ಚಿಸುವ ಕಚ್ಚಾ ವಸ್ತುಗಳಾಗುತ್ತವೆ. ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವೆ ನಡೆಯುತ್ತಿರುವ ಭೀಕರ ಕಾಳಗದಲ್ಲಿ ಸಾಯುವವರೆಲ್ಲರೂ ಒಂದೇ ಸಮನಾಗಿ ಕಾಣುವುದೇ ಇಲ್ಲ. ಗಾಝಾ ಪಟ್ಟಿಯಲ್ಲಿ ಇಸ್ರೇಲ್ ದಾಳಿಗೆ ತುತ್ತಾದವರು ʼ ಸಾಯುತ್ತಾರೆ ʼ. ಹಮಾಸ್ ದಾಳಿಯಲ್ಲಿ ಮಡಿದವರು ʼ ಕೊಲ್ಲಲ್ಪಡುತ್ತಾರೆ ʼ . ಅಂದರೆ ಸಾಯುವವರೆಲ್ಲರೂ ಅಮಾಯಕರೇ ಆದರೂ ಶವಗಳಿಗೂ ಒಂದು ಗುರುತಿನ ಚೀಟಿ ನೀಡುವ ಕ್ರೂರ ವ್ಯವಸ್ಥೆಯನ್ನು ನಮ್ಮ ಆಳುವ ವ್ಯವಸ್ಥೆ, ಪತ್ರಿಕೋದ್ಯಮ ಮತ್ತು ವಿದ್ಯುನ್ಮಾನ ದೃಶ್ಯ ಮಾಧ್ಯಮ ಸೃಷ್ಟಿಸಿದೆ.
ಇಸ್ರೇಲ್ ಮೇಲಿನ ಹಮಾಸ್ ಬಂಡುಕೋರರ ದಾಳಿ ಮತ್ತು ಗಾಝಾ ಪಟ್ಟಿಯ ಪ್ಯಾಲೆಸ್ಟೈನಿಯರ ಮೇಲೆ ಇಸ್ರೇಲಿನ ದಾಳಿ ಈಗಾಗಲೇ ಸಾವಿರಾರು ಜೀವಗಳನ್ನು ಬಲಿತೆಗೆದುಕೊಂಡಿದೆ. ಅಂತಾರಾಷ್ಟ್ರೀಯ ಬಂಡವಾಳಶಾಹಿ ಮತ್ತು ಮಾರುಕಟ್ಟೆ ಶಕ್ತಿಗಳು ಇಂತಹ ಜೀವವಿರೋಧಿ ಯುದ್ಧಗಳಲ್ಲಿ ಎರಡೂ ಬದಿಯಲ್ಲಿ ನಿಂತು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ. ಇಸ್ರೇಲ್ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಮೂಲಕ ಅಮೆರಿಕ ಈಗಾಗಲೇ ಇದನ್ನು ನಿರೂಪಿಸಿದೆ. ಶಸ್ತ್ರಾಸ್ತ್ರ ತಯಾರಿಕೆ ಮತ್ತು ಮಾರುಕಟ್ಟೆ ವಿಶ್ವ ಬಂಡವಾಳದ ಷಾಪಿಂಗ್ ಮಾಲ್ನಲ್ಲಿ ಅತಿ ಹೆಚ್ಚು ಲಾಭ ತರುವ ಒಂದು ಉದ್ಯಮವಾಗಿರುವುದರಿಂದ, ಕಾಲಕಾಲಕ್ಕೆ ನಡೆಯುವ ಇಂತಹ ಯುದ್ಧಗಳಿಗೆ ಮಾರುಕಟ್ಟೆ 24 X 7 ತೆರೆದೇ ಇರುತ್ತದೆ. ಹಾಗೆಯೇ ಯುದ್ಧ ನಿರತ ದೇಶಗಳೊಡನೆ ವಾಣಿಜ್ಯ ಒಪ್ಪಂದಗಳಿಗೆ ಸಜ್ಜಾಗಿರುವ ಸಾಮ್ರಾಜ್ಯಶಾಹಿ ರಾಷ್ಟ್ರಗಳು ತಮ್ಮ ಔದ್ಯಮಿಕ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ ಶಾಂತಿ ಸಂಧಾನಗಳತ್ತ ಧಾವಿಸುತ್ತಿರುತ್ತವೆ. ಏಕೆಂದರೆ ದೀರ್ಘಕಾಲದ ಯುದ್ಧ ಬಂಡವಾಳದ ಚಲನೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆಗಳಿರುತ್ತವೆ.
ಇಸ್ರೇಲ್-ಹಮಾಸ್ ಯುದ್ಧವೂ ಒಂದು ಹಂತಕ್ಕೆ ಬಂದು ನಿಲ್ಲುತ್ತದೆ ಅಥವಾ ನಿತ್ಯ ಸುದ್ದಿಯ ಪುಟಗಳಿಂದ ಮರೆಯಾಗುತ್ತದೆ, ರಷ್ಯಾ-ಉಕ್ರೇನ್ ಯುದ್ಧದಂತೆ. ಆರಂಭದ ದಿನಗಳ ಭಾವೋನ್ಮಾದಗಳೆಲ್ಲವೂ ತಣ್ಣಗಾದಂತೆ ಕಾಣುತ್ತದೆ. ಟಿವಿ ಪರದೆಗಳ ಮೇಲೆ ರಾಶಿ ರಾಶಿ ಹೆಣಗಳು, ಕುಸಿದ ಕಟ್ಟಡಗಳು, ನಿರಾಶ್ರಿತರ ಆಕ್ರಂದನ, ದಿಕ್ಕಿಲ್ಲದ ಜನತೆಯ ಹತಾಶೆ ಇವೆಲ್ಲವೂ ನೇಪಥ್ಯಕ್ಕೆ ಸರಿದುಬಿಡುತ್ತದೆ. ವಿಶ್ವದಾದ್ಯಂತ ಸಾರ್ವಜನಿಕ ಚರ್ಚೆಗಳಲ್ಲಿ ಪರ-ವಿರೋಧಗಳ ನೆಲೆಯಲ್ಲಿ ಸರಿ ತಪ್ಪುಗಳ ನಿಷ್ಕರ್ಷೆ ದೀರ್ಘಕಾಲ ನಡೆಯುತ್ತದೆ. ನವ ಉದಾರವಾದಿ ಕಾರ್ಪೋರೇಟ್ ಆರ್ಥಿಕತೆ ವಿಶ್ವದ ಆಳುವ ವರ್ಗಗಳಲ್ಲಿ ಎಂತಹ ಅಸೂಕ್ಷ್ಮತೆಯನ್ನು ಸೃಷ್ಟಿಸಿದೆ ಎಂದರೆ, ಮೂಲತಃ ಜೀವ ವಿರೋಧಿಯಾದ, ಸಾವಿರಾರು ಅಮಾಯಕ ಜೀವಹರಣಕ್ಕೆ ಕಾರಣವಾಗುವ, ಲಕ್ಷಾಂತರ ಜನರನ್ನು ನಿರ್ಗತಿಕರನ್ನಾಗಿ ಮಾಡುವ, ದಶಕಗಳ ಕಾಲ ಇಡೀ ಸಮಾಜವನ್ನು ಅಸ್ಥಿರತೆಗೆ ದೂಡುವ ಯುದ್ಧವನ್ನು ಖಂಡಿಸಬೇಕೋ ಬೇಡವೋ ಎಂಬ ಪ್ರಶ್ನೆಗೆ ಸರ್ಕಾರಗಳು ರಾಜತಾಂತ್ರಿಕ ಚೌಕಟ್ಟಿನಲ್ಲಿ ನಿಂತು ಯೋಚಿಸುತ್ತವೆಯೇ ಹೊರತು, ಮಾನವೀಯ ನೆಲೆಯಲ್ಲಿ ನಿಂತು ಯುದ್ಧವನ್ನು ವಿರೋಧಿಸುವುದಿಲ್ಲ.
ವಿನಾಶ ಮತ್ತು ನಿರ್ಮಾಣದ ನಡುವೆ
ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಎರಡೂ ಬದಿಯಲ್ಲಿ ಕಾಣುವುದು ಒಬ್ಬರನ್ನೊಬ್ಬರು ಸಂಪೂರ್ಣ ನಾಶಪಡಿಸುವ ಉನ್ಮಾದ. ಇಷ್ಟು ವರ್ಷಗಳೂ ಪ್ಯಾಲೆಸ್ಟೈನ್ ಮತ್ತು ಹಮಾಸ್ ಬಂಡುಕೋರರನ್ನು ನಿಯಂತ್ರಿಸುವತ್ತ ಯೋಚಿಸುತ್ತಿದ್ದ ಇಸ್ರೇಲ್ ಈ ಬಾರಿ ಹಮಾಸನ್ನು ನಿರ್ಮೂಲ ಮಾಡಲು ಪಣತೊಟ್ಟಿದೆ. ಇಲ್ಲಿ ತಪ್ಪು-ಸರಿ ಚರ್ಚೆಯಲ್ಲಿ ಸಹಜವಾಗಿಯೇ ವಿಶ್ಲೇಷಕರ ಸೈದ್ಧಾಂತಿಕ ನಿಲುವು, ಚಾರಿತ್ರಿಕ ಅರಿವು ಹಾಗೂ ಭೌಗೋಳಿಕ ಒಲವುಗಳು ಹೆಚ್ಚು ನಿರ್ಣಾಯಕವಾಗುತ್ತವೆ. ಇಸ್ರೇಲ್ನಲ್ಲಿ ಸಾವಿರಾರು ಸಾವುನೋವುಗಳು ಸಂಭವಿಸುತ್ತಿರುವಾಗಲೇ ಗಾಝಾ ಪಟ್ಟಿಯಲ್ಲಿ ಈಗಾಗಲೇ ಎರಡು ಸಾವಿರಕ್ಕೂ ಹೆಚ್ಚು ಅಮಾಯಕರ ಜೀವಹರಣವಾಗಿದೆ, ಈಗ 24 ಗಂಟೆಗಳೊಳಗಾಗಿ ಆ ಪ್ರದೇಶವನ್ನೇ ತೊರೆಯುವಂತೆ ಅಲ್ಲಿ ಬದುಕು ಕಟ್ಟಿಕೊಂಡಿರುವ 11 ಲಕ್ಷ ಜನರಿಗೆ ಇಸ್ರೇಲ್ ಆದೇಶಿಸಿದೆ. ಹಾಗೊಮ್ಮೆ ಖಾಲಿ ಮಾಡದಿದ್ದರೂ ಇಸ್ರೇಲ್ ತನ್ನ ದಾಳಿಯನ್ನು ಮುಂದುವರೆಸುತ್ತದೆ. ಸಹಜವಾಗಿ ಜೀವಭಯದಿಂದ ಗಾಝಾಪಟ್ಟಿಯನ್ನು ತೊರೆಯುವ ಲಕ್ಷಾಂತರ ಜನರು ಮತ್ತೊಂದು ಭೂಪ್ರದೇಶದಲ್ಲಿ ನಿರಾಶ್ರಿತರಾಗಿ ನಾಳೆಗಳನ್ನು ಎಣಿಸುವಂತಾಗುತ್ತದೆ.
ತನ್ನ ಮಾರಣಾಂತಿಕ ದಾಳಿಗಳ ಮೂಲಕ ಇಸ್ರೇಲ್ನ ಸಾವಿರಾರು ಅಮಾಯಕ ಜನರನ್ನು ಹತ್ಯೆ ಮಾಡಿ, ಅವರ ಬದುಕನ್ನು ಮೂರಾಬಟ್ಟೆ ಮಾಡಿರುವ ಹಮಾಸ್ ಬಂಡುಕೋರರಿಗೆ ಈ ಸಂಘರ್ಷದಲ್ಲಿ ಜೀವ ಕಳೆದುಕೊಳ್ಳುವ ಪ್ಯಾಲೆಸ್ಟೈನಿಯರೆಲ್ಲರೂ ಹುತಾತ್ಮರಾಗಿಬಿಡುತ್ತಾರೆ. ಶಾಂತಿ ಸಹಬಾಳ್ವೆಯಲ್ಲಿ ಬದುಕಲು ಇಚ್ಚಿಸುವ ಜನಸಮೂಹಗಳು ತಮ್ಮ ಮೇಲೆ ರಾಜಕೀಯ-ಭೌಗೋಳಿಕ ನಿಯಂತ್ರಣ ಸಾಧಿಸುವ ಒಂದು ಶಕ್ತಿಯ ಸ್ವ ಹಿತಾಸಕ್ತಿಗಳಿಗಾಗಿ ಜೀವ ಕಳೆದುಕೊಳ್ಳುವುದನ್ನು ʼ ಹುತಾತ್ಮ ʼ ಎಂಬ ಪರಿಭಾಷೆಯಲ್ಲಿ ಹೇಗೆ ಬಣ್ಣಿಸಲು ಸಾಧ್ಯ ? ಪ್ಯಾಲೆಸ್ಟೈನ್ ಜನತೆ ಕಳೆದ ಐದಾರು ದಶಕಗಳಿಂದ ಅನುಭವಿಸಿರುವ ಯಾತನೆ, ಸಾವಿರಾರು ಸಾವುಗಳು, ನಿರ್ಗತಿಕತೆ, ನಿರಾಶ್ರಿತ ಭಾವ ಹಾಗೂ ಹಿಂಸಾತ್ಮಕ ದಾಳಿ-ಪ್ರತಿದಾಳಿಗೆ ಯಾರು ಕಾರಣ ಎಂದು ಯೋಚಿಸಿದಾಗ ಇಡೀ ಸಾಮ್ರಾಜ್ಯಶಾಹಿಯ ಯುದ್ಧಪಿಪಾಸು ಧೋರಣೆ ಮತ್ತು ಭೌಗೋಳಿಕ ವಿಸ್ತರಣೆಯ ಕ್ರೂರ ಚಿತ್ರಣ ಕಣ್ಣೆದುರು ನಿಲ್ಲುತ್ತದೆ. ಆದರೆ ಯುದ್ಧೋನ್ಮಾದದ ವಾತಾವರಣದಲ್ಲಿ ಮನುಜ ಜೀವ ಎನ್ನುವುದು ಅತ್ಯಂತ ನಿಕೃಷ್ಟವಾಗಿ ಕಾಣುವ ದೀರ್ಘ ಇತಿಹಾಸವನ್ನು ಮನುಷ್ಯಲೋಕ ದಾಟಿ ಬಂದಿದೆ. ಇಸ್ರೇಲಿಯರಾಗಲೀ, ಪ್ಯಾಲೆಸ್ಟೈನಿಯರಾಗಲಿ ಕೇವಲ ಪಗಡೆಯ ಕಾಯಿಗಳಾಗಿಬಿಡುತ್ತಾರೆ.
ಹಮಾಸ್ ಬಂಡುಕೋರರ ಹಠಾತ್ ದಾಳಿಯಿಂದ ಮನೆ ಮಠ ಕಳೆದುಕೊಂಡು ಬೀದಿಪಾಲಾಗುವ ಇಸ್ರೇಲಿನ ಸಾಮಾನ್ಯ ಜನತೆಗೂ, ಇಸ್ರೇಲ್ ದಾಳಿಗೆ ಬಲಿಯಾಗಿ ಅಥವಾ ಹೆದರಿ ಗಾಝಾಪಟ್ಟಿಯಿಂದ ಗುಳೆ ಹೊರಟು ನಿರಾಶ್ರಿತರಾಗುವ ಅಮಾಯಕರಿಗೂ ಇರುವ ವ್ಯತ್ಯಾಸವೇನು ? ಭೌಗೋಳಿಕ ರಾಜಕಾರಣದ ಚೌಕಟ್ಟಿನಲ್ಲಿ ಕೇವಲ ಅವರು ಅನುಸರಿಸುವ ಮತಗಳು ಅಥವಾ ಧಾರ್ಮಿಕ ನೆಲೆಗಳು ಮಾತ್ರ ಕಾಣುತ್ತದೆ. ಆದರೆ ಮಾನವೀಯ ನೆಲೆಯಲ್ಲಿ ನಿಂತು ನೋಡಿದಾಗ ಮನುಜ ಜೀವಗಳು ಗೋಚರಿಸುತ್ತವೆ. ಕಾಳಗದಲ್ಲಿ ಎರಡೂ ಸೈನ್ಯಗಳು ಬಳಸುವ ಕ್ಷಿಪಣಿಗಳಿಗೆ, ಡ್ರೋನ್ಗಳಿಗೆ, ಬಾಂಬುಗಳಿಗೆ ಈ ಎರಡೂ ನೆಲೆಗಳು ಗೋಚರಿಸುವುದಿಲ್ಲ. ನೂರಾರು ಕಿಲೋಮೀಟರ್ ದೂರದಿಂದ ನಿಯಂತ್ರಿಸಲ್ಪಡುವ ಮಾರಣಾಂತಿಕ ಅಸ್ತ್ರಗಳು ಹಾದಿಗೆ ಅಡ್ಡ ಬಂದವರೆಲ್ಲರನ್ನೂ ಕೊಲ್ಲುತ್ತವೆ. ಸುದ್ದಿ ಮಾಧ್ಯಮಗಳ ಮಾಹಿತಿ ಚಾಪಲ್ಯವನ್ನು ನೀಗಿಸಲು ಶವಗಳನ್ನು ಬೇರ್ಪಡಿಸಿ ಅವುಗಳಿಗೂ ಅಸ್ಮಿತೆಗಳನ್ನು ನೀಡಬಹುದಾದರೂ ಅಂತಿಮವಾಗಿ ಮಾನವ ಜಗತ್ತು ಕಳೆದುಕೊಳ್ಳುವುದು ತನ್ನ ಒಡನಾಡಿಗಳನ್ನು, ಸಹವರ್ತಿಗಳನ್ನು.
ಯುದ್ಧ ಮತ್ತು ಜೀವಪರತೆ
ದುರಂತ ಎಂದರೆ ಆಧುನಿಕ ಯುಗದ ಯುದ್ಧಗಳು ಸತ್ತವರನ್ನಷ್ಟೇ ವಿಭಜಿಸುವುದಿಲ್ಲ. ಬದುಕುಳಿದವರನ್ನೂ, ಮುಂದೆ ಬಾಳಬೇಕಾದವರನ್ನೂ ಎರಡು ಗುಂಪುಗಳಾಗಿ ವಿಂಗಡಿಸುತ್ತವೆ. ಭಾರತದ ಸಾಮಾಜಿಕ ತಾಣಗಳಲ್ಲಿ ತಾವು ಇಸ್ರೇಲ್ ಪರ-ಹಮಾಸ್ ಪರ ಎಂಬ ಸಂದೇಶಗಳು ಹರಿದಾಡುತ್ತಿರುವುದನ್ನು ನೋಡಿದಾಗ, ಮನುಜ ಪ್ರೀತಿ ಮತ್ತು ಮಾನವೀಯ ಸಂವೇದನೆಗಳಿಗಿಂತಲೂ ಹೆಚ್ಚಾಗಿ ದ್ವೇಷಭಾವ ಮತ್ತು ಹಿಂಸಾತ್ಮಕ ಧೋರಣೆ ಮನುಷ್ಯನನ್ನು ಗಡಿಗಳಿಂದಾಚೆಗೂ ಕರೆದೊಯ್ಯಬಹುದು ಎನ್ನುವುದು ಸ್ಪಷ್ಟವಾಗುತ್ತದೆ. ಈ ಗಡಿಯಾಚೆಯ ಪ್ರೀತಿಗೆ ಕಾರಣವನ್ನು ಆಂತರಿಕವಾಗಿ ಸೃಷ್ಟಿಯಾಗಿರುವ ಮತದ್ವೇಷದಲ್ಲಿ ಗುರುತಿಸಬಹುದು. ಪಾರಂಪರಿಕವಾಗಿ ಭಾರತ ದಾಳಿಗೊಳಗಾದ ರಾಷ್ಟ್ರಗಳೊಡನೆ ತನ್ನ ಸಹಾನುಭೂತಿ ಮತ್ತು ಸೋದರ ಭಾವನೆಯನ್ನು ವ್ಯಕ್ತಪಡಿಸುತ್ತಾ ಬಂದಿರುವುದನ್ನು ಸಹ ಇಲ್ಲಿ ಗಮನಿಸಬೇಕಿದೆ. ಆದರೆ ಯುದ್ಧೋನ್ಮಾದ ಅಥವಾ ದ್ವೇಷಾಸೂಯೆಗಳ ಉತ್ಕಟತೆ ಇಂತಹ ಚರಿತ್ರೆಯನ್ನೂ ಅಳಿಸಿಹಾಕಿಬಿಡುತ್ತದೆ.
ಹಮಾಸ್ ಬಂಡುಕೋರರ ದಾಳಿಯಿಂದ ಪ್ಯಾಲೆಸ್ಟೈನ್ನ ಜನತೆಯನ್ನೂ ಇದೇ ಭಾವೋನ್ಮಾದವೇ ಆವರಿಸುವ ಸಾಧ್ಯತೆಗಳಿವೆ. ಹಮಾಸ್ಗೆ ಸ್ಥಳೀಯರ ನೈತಿಕ ಬೆಂಬಲ ಹೆಚ್ಚಾದರೂ ಅಚ್ಚರಿಯೇನಿಲ್ಲ. ಇದೇ ರೀತಿ ಇಸ್ರೇಲ್ನ ಜನತೆಯಲ್ಲಿ ಪ್ಯಾಲೆಸ್ಟೈನೀಯರ ಬಗ್ಗೆ ಇರುವ ಅಸಹನೆ, ದ್ವೇಷ ಮತ್ತು ಆಕ್ರೋಶಗಳು ಹೆಚ್ಚಾಗುತ್ತವೆ. ಎರಡೂ ಬದಿಯಲ್ಲಿ ಉಂಟಾಗಬಹುದಾದ ಈ ಭಾವೋನ್ಮಾದದ ಅತಿರೇಕಗಳನ್ನು ಸಮನಾಗಿ ನೋಡಿದಾಗ ಅಲ್ಲಿ ನಮಗೆ ಯುದ್ಧ ಪರಂಪರೆಗಳು ಸೃಷ್ಟಿಸುವ ಅಮಾನುಷ ಜಗತ್ತಿನ ಪರಿಚಯವಾಗುತ್ತದೆ. ಯಾವುದೇ ಒಂದು ಬಣ ಮೇಲುಗೈ ಸಾಧಿಸಿದರೂ ಈ ʼಮೇಲುಗೈʼ ಹಿಂದೆ ಸಾವಿರಾರು ಅಮಾಯಕ ಜೀವಗಳು ಬಲಿಯಾಗಿರುತ್ತವೆ. ಲಕ್ಷಾಂತರ ಜನರ ಬದುಕು ಶಾಶ್ವತವಾಗಿ ನಾಶವಾಗಿರುತ್ತದೆ. ಬೆಳಕು ಕಾಣದ ಹಸುಳೆಗಳು, ಸಂಧ್ಯಾಕಾಲದ ವೃದ್ಧರು, ಅಸಹಾಯಕ ಮಹಿಳೆಯರು, ಎರಡೂ ದೇಶಗಳ ಅಭಿವೃದ್ಧಿಗಾಗಿ ಬೆವರು ಹರಿಸುವ ಲಕ್ಷಾಂತರ ಶ್ರಮಜೀವಿಗಳು ಬೀದಿಪಾಲಾಗಿರುತ್ತಾರೆ. ಯುದ್ಧದಲ್ಲಿ ಮೇಲುಗೈ ಸಾಧಿಸುವುದನ್ನು ವೈಭವೀಕರಿಸುವ ಮಾಧ್ಯಮಗಳು ಮತ್ತು ಸುದ್ದಿಮನೆಗಳು ಈ ಅಮಾನುಷ ಜಗತ್ತಿನ ಕಡೆ ಕಣ್ಣೆತ್ತಿಯೂ ನೋಡದಿರುವುದು ವರ್ತಮಾನದ ದುರಂತ ಎನ್ನಬಹುದು.
ಯುದ್ಧ ಪರಂಪರೆ ಸೃಷ್ಟಿಸುವ ಭಾವೋನ್ಮಾದದ ಜಗತ್ತಿನಲ್ಲಿ ಕಳೆದುಹೋಗುವ ಮಾನವ ಸಮಾಜ ತನ್ನ ಸುತ್ತಲಿನ ಭೀಕರ ವಾಸ್ತವಗಳನ್ನು ಮೌನವಾಗಿ ಅರಗಿಸಿಕೊಳ್ಳುತ್ತಲೇ ದೂರದಲ್ಲಿ ನಡೆಯುವ ಮಾರಣ ಹೋಮವನ್ನು ಆಸ್ವಾದಿಸುವ ಒಂದು ವಿಕೃತ ಜಗತ್ತನ್ನು ನಾವು ಸೃಷ್ಟಿಸಿಕೊಂಡಿದ್ದೇವೆ. ದೃಶ್ಯ ಮಾಧ್ಯಮಗಳು ಈ ಮನೋ ಯಜ್ಞಕ್ಕೆ ತುಪ್ಪ ಸುರಿಯುವಂತೆ ವರದಿ ಮಾಡುತ್ತವೆ. ಸಾಮಾನ್ಯವಾಗಿ ಪರಿಭಾವಿಸಲಾಗುವ ಯಹೂದಿ-ಇಸ್ಲಾಂ ನಡುವಿನ ಭೀಕರ ಕಾಳಗದಲ್ಲಿ ಹಮಾಸ್ ಸಂಘಟನೆ ಅಂತ್ಯವಾಗುವುದಿಲ್ಲ ಅಥವಾ ಇಸ್ರೇಲ್ ತನ್ನ ಒಂದಿಂಚು ಭೂಮಿಯನ್ನೂ ಕಳೆದುಕೊಳ್ಳುವುದಿಲ್ಲ. ಇಸ್ರೇಲ್ ಗೆಲುವು ಸಾಧಿಸಿದರೂ ಜಾಗತಿಕ ಭಯೋತ್ಪಾದನೆಯೇನೂ ಕೊನೆಗೊಳ್ಳುವುದಿಲ್ಲ. ಇಡೀ ಸಂಘರ್ಷವನ್ನು ಎರಡು ಧರ್ಮಗಳ ನಡುವಿನ ಘರ್ಷಣೆ ಎಂದು ಭಾವಿಸುವ ದೊಡ್ಡ ಜನಸಂಖ್ಯೆ ನಮ್ಮ ನಡುವೆ ಇದೆ. ಆದರೆ ಈ ಘರ್ಷಣೆಯು ಅಂತಿಮವಾಗಿ ಹೊಸಕಿ ಹಾಕುವುದು ವರ್ತಮಾನದ ಒಂದು ಮಾನವ ಸಮಾಜವನ್ನು, ಒಂದು ಭವಿಷ್ಯದ ಪೀಳಿಗೆಯನ್ನು ಮತ್ತು ಸಂಭಾವ್ಯ ನಾಗರಿಕತೆಯನ್ನು.
ಯುದ್ಧೋನ್ಮಾದ ಜನಮಾನಸದಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂದರೆ ಸಾಮಾನ್ಯ ಜನತೆಗೆ ತಾವು ಪಗಡೆಯಾಟದ ದಾಳಗಳೂ ಆಗದೆ ಕೇವಲ ಹೊಡೆದು ಬಿಸಾಡಬಹುದಾದ ಕಾಯಿಗಳಾಗಿದ್ದೇವೆ ಎಂಬ ಅರಿವೂ ಸಹ ಮೂಡುತ್ತಿಲ್ಲ. ಈ ಅರಿವು ಮೂಡಿಸುವ ನೈತಿಕ ಜವಾಬ್ದಾರಿ ದೃಶ್ಯ ಮಾಧ್ಯಮಗಳ ಮೇಲಿದೆ. ವಿಶಾಲ ಸಮಾಜದ ಮೇಲಿದೆ. ಹಮಾಸ್ ಬಂಡುಕೋರರು ಮಹಿಳೆಯೊಬ್ಬಳ ಬೆತ್ತಲೆ ಶವವನ್ನು ಸಾಗಿಸುವ ದೃಶ್ಯ ನಮ್ಮಲ್ಲಿರುವ ಆಕ್ರೋಶವನ್ನು ಸ್ಫೋಟಿಸುವಂತಾದರೆ, ನಮ್ಮ ಹಿತ್ತಲಲ್ಲೇ ನಡೆಯುತ್ತಿರುವ ಮಹಿಳೆಯರ ಬೆತ್ತಲೆ ಮೆರವಣಿಗೆ ದೃಶ್ಯವೂ ಅಷ್ಟೇ ಆಕ್ರೋಶ ಉಕ್ಕಿಸಬೇಕಲ್ಲವೇ ? ಈ ಸಮಚಿತ್ತವನ್ನು ನಾಗರಿಕರಲ್ಲಿ ಮೂಡಿಸುವ ಜವಾಬ್ದಾರಿ ಇಡೀ ಸಮಾಜದ ಮೇಲಿದೆ. ದೇಶಪ್ರೇಮ, ರಾಷ್ಟ್ರೀಯತೆ ಮತ್ತು ಭವ್ಯ ಚಾರಿತ್ರಿಕ ಪರಂಪರೆಗಳನ್ನೂ ದಾಟಿ ಮಾನವ ಸಮಾಜವನ್ನು ಮುನ್ನಡೆಸಿಕೊಂಡು ಹೋಗುವುದು ಇದೇ ಸಹಜೀವನದ ಸಮನ್ವಯ ಚಿಂತನೆ ಅಲ್ಲವೇ ? ಯುದ್ಧಪರಂಪರೆ ಸೃಷ್ಟಿಸುವ ಭಾವೋನ್ಮಾದದ ಜಗತ್ತನ್ನು ಕೊನೆಗಾಣಿಸುವುದು ನಾಗರಿಕತೆಯ ಲಕ್ಷಣ. ಸಂವೇದನಾಶೀಲ ನಾಗರಿಕ ಪ್ರಜ್ಞೆ ಎಚ್ಚೆತ್ತುಕೊಂಡಾಗ ಮಾತ್ರ ಇದು ಸಾಧ್ಯ .
-೦-೦-೦-