
ಯಾವ ವ್ಯಕ್ತಿಯು ತನ್ನ ಮಾತು, ವರ್ತನೆ ಮತ್ತು ಪ್ರತಿಕ್ರಿಯೆಗಳ ಮೇಲೆ ನಿಯಂತ್ರಣ ಸಾಧಿಸಿಕೊಳ್ಳಲಾಗುವುದಿಲ್ಲವೋ ಅವನಿಗೆ ಅಂಕೆಗೇಡಿತನ ಇದೆ ಎನ್ನಬಹುದು. ಪರಿಣಾಮವನ್ನು ಆಲೋಚಿಸದೇ ತಟ್ಟನೆ ಮಾತಾಡುವುದು, ಹಟಾತ್ತನೆ ಕೆರಳುವುದು, ಬಂದ ಕೋಪವನ್ನು ತಡೆದುಕೊಳ್ಳದೇ ಕೂಗಾಡುವುದು, ದಾಳಿ ಮಾಡುವುದು, ನಿರಾಶೆ, ಭಯ, ಅಸೂಯೆಯೇ ಮೊದಲಾದ ಭಾವನೆಗಳನ್ನು ನಿಯಂತ್ರಿಸಿಕೊಳ್ಳದೇ ದೊಡ್ಡ ಪ್ರಮಾಣದಲ್ಲಿಯೇ ತೋರ್ಪಡಿಸಿಕೊಳ್ಳುವುದು. ಅಂಕೆ ಇಲ್ಲದೇ ಊಟ ಮಾಡುವುದು. ಹಾಗೆಯೇ ನಿದ್ರೆಯೂ ಕೂಡಾ. ಇವೆಲ್ಲವೂ ಅಂಕೆಗೇಡಿತನದ ವ್ಯಾಪ್ತಿಗೇ ಬರುವವು.

ತನ್ನನ್ನು ತಾನು ನಿಯಂತ್ರಿಸಿಕೊಳ್ಳಲಾಗದ ಗುಣ, ತೀವ್ರವಾಗಿ ಪ್ರತಿಕ್ರಿಯಿಸುವ ಮತ್ತು ವರ್ತಿಸುವ ಗುಣ ಮತ್ತು ಹಠಾತ್ತನೆ ವರ್ತಿಸುವ ಗುಣವೆಲ್ಲವನ್ನೂ ಅಂಕೆಗೇಡಿತನ ಎಂದು ಕರೆದರೂ ಇದು ಅನೇಕ ಸಮಸ್ಯೆಗಳ ಒಕ್ಕೂಟವಾಗಿರುವ ಸಾಧ್ಯತೆ ಇರುತ್ತದೆ.
ಆ ಒಕ್ಕೂಟದಲ್ಲಿ ಜಿದ್ದುಗೇಡಿತನ (ಆಪೋಸಿಶನಲ್ ಡಿಫಾಯಿಂಟ್ ಡಿಸಾರ್ಡರ್), ತೀವ್ರಗೇಡಿತನ (ಇಂಟರ್ಮಿಟೆಂಟ್ ಎಕ್ಸ್’ಪ್ಲೋಸಿವ್ ಡಿಸಾರ್ಡರ್), ನಡೆಗೇಡಿತನ (ಕಂಡಕ್ಟ್ ಡಿಸಾರ್ಡರ್), ಕಿಚ್ಚುಗೇಡಿತನ (ಪೈರೋಮೇನಿಯಾ), ಚೋರಗೇಡಿತನ (ಕ್ಲೆಪ್ಟೋಮನಿಯಾ), ಹಠಾತ್ ಪ್ರವೃತ್ತಿ (ಇಂಪಲ್ಸಿವ್ ಡಿಸಾರ್ಡರ್), ಅತಿಗೇಡಿತನ (ಹಿಸ್ಟ್ರಿಯಾನಿಕ್ ಪರ್ಸನಾಲಿಟಿ ಡಿಸಾರ್ಡರ್) ಹಲವಾರು ಸಮಸ್ಯೆಗಳು ಇರಬಹುದು. ಈ ಎಲ್ಲದರ ವಿಷಯಗಳೂ ಅಕ್ಷರಗಳ ಅನುಕ್ರಮಣಿಕೆಯನ್ನು ಆಧರಿಸಿ ಮುಂದೆ ಬರುತ್ತವೆ.
ಆಗ ಅಂಕೆ ಇಲ್ಲದ ವರ್ತನೆಗೆ ಕಾರಣ ಯಾವ ಸಮಸ್ಯೆಯಿಂದ ತಿಳಿದು ಅದಕ್ಕೆ ಸೂಕ್ತ ಅರಿವಾಳಿಕೆ ಚಿಕಿತ್ಸೆಯನ್ನು (ಕಾಗ್ನಿಟಿವ್ ಥೆರಪಿ) ಅಥವಾ ಇತರ ಚಿಕಿತ್ಸಾಕ್ರಮಗಳನ್ನು ಅನುಸರಿಸಬಹುದು. ಮಾನಸಿಕ ಸಮಸ್ಯೆಗಳಲ್ಲಿ ಅವುಗಳ ರೋಗ ಲಕ್ಷಣಗಳನ್ನು ಗಮನಿಸುತ್ತಾ ಕಾರಣವನ್ನು ಕಂಡುಕೊಳ್ಳುವುದು ಬಹಳ ಮುಖ್ಯವಾದ ಹಂತವಾಗಿರುತ್ತದೆ. ಅದರ ನಂತರ ಪರಿಹಾರದ ಮಾರ್ಗವನ್ನು ಕಂಡುಕೊಳ್ಳುವುದಕ್ಕೆ ಮುಂದುವರಿಯಲಾಗುವುದು.
ನೆನಪಿಡಿ:ನಮ್ಮ ವರ್ತಮಾನವು ನೆಮ್ಮದಿಯಿಂದ ಇರಬೇಕಾದರೆ ನಮ್ಮ ಮನಸ್ಸಿನ ಸಮಗ್ರ ಆರೋಗ್ಯದ ಕಡೆಗೆ ಗಮನ ಕೊಡಬೇಕು. ನಮ್ಮ ಭವಿಷ್ಯವು ನೆಮ್ಮದಿಯಿಂದ ಇರಬೇಕಾದರೆ ಮಕ್ಕಳ ಸಮಗ್ರ ಪೋಷಣೆಯ ಬಗ್ಗೆ ಗಮನ ಕೊಡಬೇಕು.