• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಚರಿತ್ರೆಯನ್ನು ವರ್ತಮಾನದಲ್ಲಿ ನೋಡುವ ರಂಗಪ್ರಯೋಗ

ನಾ ದಿವಾಕರ by ನಾ ದಿವಾಕರ
October 16, 2023
in Top Story, ಅಂಕಣ, ಅಭಿಮತ
0
ಚರಿತ್ರೆಯನ್ನು ವರ್ತಮಾನದಲ್ಲಿ ನೋಡುವ ರಂಗಪ್ರಯೋಗ
Share on WhatsAppShare on FacebookShare on Telegram

ಚಾರಿತ್ರಿಕ ಘಟನೆಗಳ ಅಕ್ಷರ ಹೂರಣವನ್ನು ವರ್ತಮಾನದ ರಂಗರೂಪದಲ್ಲಿ ಉಣಬಡಿಸುವ
“ ಲೋಕದ ಒಳಹೊರಗೆ “
–ನಾ ದಿವಾಕರ

ADVERTISEMENT

ವ್ಯಕ್ತಿಗಳ ಆಂತರ್ಯ-ಬಾಹ್ಯ ಸ್ವರೂಪವನ್ನು ಆಯಾ ಸನ್ನಿವೇಶಗಳಿಗನುಸಾರ ಅಭಿವ್ಯಕ್ತಗೊಳ್ಳುವ ಅಭಿಪ್ರಾಯ ಅಥವಾ ಪ್ರತಿಪಾದನೆಗಳ ಮೂಲಕ ಗ್ರಹಿಸುವುದು ಒಂದು ವಿಧಾನ. ಜನುಮ ಜಾತಕದಿಂದಲೇ ವ್ಯಕ್ತಿ ಗುಣಲಕ್ಷಣಗಳನ್ನು ಅಳೆಯುವ ಪರಂಪರೆಯನ್ನು ಹೊತ್ತ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಇದು ಮೇಲ್ನೋಟಕ್ಕೆ ಸುಲಭವಾಗಿ ಕಾಣುವುದಾದರೂ ಆಂತರ್ಯದೊಳು ಹೊಕ್ಕು ನೋಡಿದಾಗ, ವ್ಯಕ್ತಿಗತ ಗುಣಲಕ್ಷಣಗಳನ್ನು ರೂಪಿಸುವ ಒಂದು ಸಾಮಾಜಿಕ ಅಂತರಾಳವೂ ಗೋಚರಿಸುತ್ತದೆ. ಏಕೆ ಹೀಗೆ ? ಎಂಬ ಪ್ರಶ್ನೆ ಕಾಡಿದಾಗ ಸಹಜವಾಗಿಯೇ ಸಮಾಜದ ಒಡಲನ್ನು ಭೇದಿಸಲು ಮುಂದಾಗುವುದು ಮಾನವ ಸಹಜ ಗುಣ. ಆಗ ನಮಗೆ ಗೋಚರಿಸುವ ಸಾಮಾಜಿಕ ಗುಣಲಕ್ಷಣಗಳು ವಿಭಿನ್ನ ರೂಪಗಳಲ್ಲಿ ವ್ಯಕ್ತಿಗಳಲ್ಲೂ ಕಾಣಲು ಸಾಧ್ಯವಾಗುತ್ತದೆ. ಹೀಗೆ ವ್ಯಷ್ಟಿ ಮತ್ತು ಸಮಷ್ಟಿಯ ನಡುವಿನ ಜಟಿಲ ಸಿಕ್ಕುಗಳ ನಡುವೆ ಒಂದು ಸಮಾಜ ಕಾಲಕಾಲಕ್ಕೆ ರೂಢಿಸಿಕೊಳ್ಳುವ ಆಧ್ಯಾತ್ಮಿಕ, ರಾಜಕೀಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಗುಣಲಕ್ಷಣಗಳನ್ನು ಭವಿಷ್ಯದ ತಲೆಮಾರಿಗಾಗಿ ಕಾಪಿಡುವ ಪ್ರಯತ್ನವನ್ನು ಸಾಹಿತ್ಯ ಮಾಡುತ್ತದೆ.

ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಈ ವಿಶಿಷ್ಟ ಪ್ರಯತ್ನವನ್ನು ವಿಶ್ವಮಾನವ ತತ್ವದಡಿಯಲ್ಲಿ ಮಾಡಿದ ಮೊದಲಿಗರ ಪೈಕಿ ಬಹುಶಃ ರವೀಂದ್ರನಾಥ ಟಾಗೂರ್‌ ಪ್ರಮುಖರು ಎನಿಸುತ್ತದೆ. ಪಾಶ್ಚಿಮಾತ್ಯ ಹಾಗೂ ಭಾರತೀಯ ಸಂಸ್ಕೃತಿಯನ್ನು ಮುಖಾಮುಖಿಯಾಗಿಸುವುದಕ್ಕಿಂತಲೂ ಹೆಚ್ಚಾಗಿ ಅನುಸಂಧಾನ ಮಾಡುವ ಮೂಲಕ ಸ್ವಾತಂತ್ರ್ಯ ಸಂಗ್ರಾಮವು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗಲೂ ದೇಶ-ಭಾಷೆಗಳನ್ನು ಮೀರಿದ ವಿಶ್ವಮಾನವ ಸಂದೇಶವನ್ನು ಸಾರಿದ ಟಾಗೂರರ ಕೃತಿಗಳಲ್ಲಿ ಅಂದಿಗೂ ಇಂದಿಗೂ ರಂಜನೀಯವಾಗಿ ಕಾಣುವ ದೇಶಭಕ್ತಿ ಕಾಣುವುದು ವಿಶ್ವಮಾನವತೆಯ ಚೌಕಟ್ಟಿನೊಳಗೇ. ಟಾಗೋರರ ಮೇರು ಕೃತಿಗಳಲ್ಲೊಂದಾದ “ ಘರೇಬೈರೇ ” ಕಾದಂಬರಿಯಲ್ಲಿ ಸ್ವದೇಶಿ ಚಳುವಳಿಯ ಉತ್ಕಟ ದೇಶಪ್ರೇಮ ಹಾಗೂ ಪೂರ್ವ-ಪಶ್ಚಿಮದ ಸಾಂಸ್ಕೃತಿಕ ತಿಕ್ಕಾಟಗಳ ನಡುವೆಯೇ ಗೋಚರಿಸುವ ಕೋಮು ದ್ವೇಷದ ಛಾಯೆಯನ್ನು ಒಂದು ಕುಟುಂಬದ ಒಳಗೆ ನಡೆಯುವ ವ್ಯಕ್ತಿ-ವ್ಯಕ್ತಿತ್ವ ಸಂಘರ್ಷದ ನೆಲೆಯಲ್ಲಿ ನೋಡಲಾಗುತ್ತದೆ. ಬಾಹ್ಯ ಸಮಾಜದ ಸಾಮಾಜಿಕ-ಸಾಂಸ್ಕೃತಿಕ ತಲ್ಲಣಗಳನ್ನು ಕೌಟುಂಬಿಕ ಸಂಬಂಧಗಳ ಮೂಲಕ ತೆರೆದಿಡುವ ಘರೇಭೈರೇ ದೇಶ ಎಂದರೆ ಮಣ್ಣಲ್ಲವೋ ಮನುಷ್ಯರು ಎಂಬ ಭಾವವನ್ನೇ ಮತ್ತೊಂದು ರೀತಿಯಲ್ಲಿ ಬಿಂಬಿಸುತ್ತದೆ.

ಶತಮಾನದ ಹಿಂದೆ ಬಾಂಗ್ಲಾ ಭಾಷೆಯಲ್ಲಿ ರಚನೆಯಾದ ́ಘರೇಭೈರೇ ́ಯಂತಹ (ಈ ಕಾದಂಬರಿಯು 1914 ರಿಂದ 1916ರವರೆಗೆ ಪತ್ರಿಕೆಯೊಂದರಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು ) ಗಂಭೀರ ಕೃತಿಯನ್ನು ಯಾವುದೇ ರೂಪದಲ್ಲಾದರೂ ಕನ್ನಡಕ್ಕೆ ಇಳಿಸುವುದು, ಕನ್ನಡ ಸಂಸ್ಕೃತಿಗನುಗುಣವಾಗಿ ನಿರೂಪಿಸುವುದು ಮತ್ತು ಮೂಲ ವಸ್ತುವಿಗೆ ಧಕ್ಕೆ ಉಂಟಾಗದಂತೆ ಸೃಜನಶೀಲತೆಯಿಂದ ಅಭಿವ್ಯಕ್ತಗೊಳಿಸುವುದು ಸಾಹಸದ ಕ್ರಮವೇ ಸರಿ. ಇಂತಹ ಒಂದು ಸಾಹಸವನ್ನು ರಂಗಭೂಮಿಯಲ್ಲಿ ಮಾಡಿರುವುದು ರಂಗಸಂಪದ ತಂಡದ ಹೆಗ್ಗಳಿಕೆ. ಘರೇಭೈರೇ ಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸಿ ನಿರ್ದೇಶಿಸುವ ಮೂಲಕ ರಂಗನಿರ್ದೇಶಕ ಬಿ. ಸುರೇಶ್‌ ತಮ್ಮ “ಲೋಕದ ಒಳಹೊರಗೆ ” ನಾಟಕದ ಮೂಲಕ ಕನ್ನಡ ರಂಗಭೂಮಿಯನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಒಂದು ವೇಳೆ ಉತ್ಪ್ರೇಕ್ಷೆ ಎನಿಸದಿರೂ ಅದು ಸಕಾಲಿಕ ಹಾಗೂ ಸಮರ್ಥನೀಯ. ಏಕೆಂದರೆ ಶತಮಾನಕ್ಕೂ ಹಿಂದೆ ಸಾಂಪ್ರದಾಯಿಕ ಸಮಾಜವೊಂದರಲ್ಲಿ ಉಂಟಾಗುವ ಸಾಂಸ್ಕೃತಿಕ ತಲ್ಲಣಗಳನ್ನು, ಸ್ವದೇಶಿ ಆಂದೋಲನದ ಉತ್ಕಟ ದೇಶಪ್ರೇಮದ ನಡುವೆಯೇ ಹುಟ್ಟಿಕೊಳ್ಳುವ ಪಶ್ಚಿಮ ವಿರೋಧಿ ಧೋರಣೆ ಮತ್ತು ಇವುಗಳ ನಡುವೆಯೇ ಉದ್ಭವಿಸುವ ಮತದ್ವೇಷದ ಭಾವನೆಗಳನ್ನು ದಾಖಲಿಸುವ ಕಥಾವಸ್ತುವನ್ನು ರಂಗರೂಪಕ್ಕೆ ಇಳಿಸುವಾಗ ರಂಗರೂಪಕ-ನಿರ್ದೇಶಕ ಬಿ. ಸುರೇಶ್‌ ಕಾದಂಬರಿಯನ್ನು ಕನ್ನಡೀಕರಿಸುವುದಕ್ಕಿಂತಲೂ ಹೆಚ್ಚಾಗಿ ಕೃತಿಯ ಸ್ಥಾಯಿ ಭಾವವನ್ನು ಸಮಕಾಲೀನಗೊಳಿಸುವುದರಲ್ಲಿ ಯಶಸ್ವಿಯಾಗುತ್ತಾರೆ. ರಂಗಭೂಮಿಯ ಸೃಜನಶೀಲತೆ ಒಂದು ಉದಾಹರಣೆಯನ್ನು “ ಲೋಕದ ಒಳಹೊರಗೆ ” ನಮ್ಮ ಮುಂದಿಡುತ್ತದೆ.

ಮೂಲ ಕಥಾಹಂದರ

ರವೀಂದ್ರರ ಮೂಲ ಕಥೆಯಲ್ಲಿ ಬಾಹ್ಯ ಸಮಾಜದ ಪರಿವೆ ಇಲ್ಲದೆ ನಾಲ್ಕು ಗೋಡೆಗಳ ನಡುವೆ ಬಂಧಿತಳಾಗಿರುವ ಗೃಹಿಣಿಯೊಬ್ಬಳು (ಬಿಮಲ ಚೌಧರಿ ) ಕ್ರಮೇಣ ಆಧುನಿಕ ಜಗತ್ತಿಗೆ ತೆರೆದುಕೊಂಡು ತನ್ನ ಸುತ್ತಲಿನ ಸಮಾಜದ ತಲ್ಲಣಗಳಿಗೆ ಮುಖಾಮುಖಿಯಾಗುವ ಒಂದು ಚಿತ್ರಣ ಇದೆ. ಆಕೆಯ ಪತಿ (ನಿಖಿಲೇಶ್‌ ಚೌಧರಿ)‌ ಪಾಶ್ಚಾತ್ಯ ಸಂಸ್ಕೃತಿಯನ್ನೂ ಒಪ್ಪಿಕೊಳ್ಳುವ ಒಬ್ಬ ಶ್ರೀಮಂತ ಜಮೀನ್ದಾರನಾಗಿದ್ದು, ಬಾಂಗ್ಲಾ ವಿಭಜನೆಯ ಸಂದರ್ಭದಲ್ಲಿ ಭುಗಿಲೇಳುವ ಸ್ವದೇಶಿ ಆಂದೋಲನದ ಸಂದರ್ಭದಲ್ಲೇ ತನ್ನ ಪತ್ನಿಗೆ ಹೊರ ಜಗತ್ತನ್ನು ಪರಿಚಯಿಸಲು ನಿರ್ಧರಿಸುತ್ತಾನೆ. ಆಕೆಗೆ ವಿದ್ಯಾಭ್ಯಾಸ ಒದಗಿಸುವುದೇ ಅಲ್ಲದೆ ಬಾಹ್ಯ ಸಮಾಜದಲ್ಲಿ ಮುಕ್ತವಾಗಿ ವಿಹರಿಸುವ ಸ್ವಾತಂತ್ರ್ಯವನ್ನೂ ನೀಡುತ್ತಾನೆ. ಇದೇ ವೇಳೆ ವಿದೇಶದಿಂದ ಬರುವ ಆಪ್ತ ಗೆಳೆಯನೊಬ್ಬನ (ಸಂದೀಪ ಮುಖರ್ಜಿ) ಪ್ರವೇಶವಾಗುತ್ತದೆ. ಸ್ವದೇಶಿ ಆಂದೋಲನಕ್ಕಾಗಿ ತನ್ನನ್ನೇ ಅರ್ಪಿಸಿಕೊಳ್ಳುವ ಸಂದೀಪನೊಡನೆ ಏರ್ಪಡುವ ಸೈದ್ದಾಂತಿಕ ಸಂಘರ್ಷಗಳ ಜೊತೆಗೇ ತನ್ನ ಪತ್ನಿಯೂ ಸಹ ಆ ಸಂದರ್ಭದಲ್ಲಿ ಇಡೀ ಸಮಾಜವನ್ನು ಆವರಿಸುವ ಹಿಂಸಾತ್ಮಕ ದ್ವೇಷಾಸೂಯೆಯ ಭಾವನಾತ್ಮಕ ಜಗತ್ತಿಗೆ ಮರುಳಾಗುವುದನ್ನು ಎದುರಿಸಬೇಕಾಗುತ್ತದೆ.

ಹೊರಜಗತ್ತಿಗೆ ಕಾಲಿರಿಸುವ ಬಿಮಲ ತಾನು ಪಡೆದ ಸ್ವಾತಂತ್ರ್ಯ ಹಾಗೂ ಬಾಹ್ಯ ಜಗತ್ತಿನ ಉತ್ಕಟ ದೇಶಪ್ರೇಮದ ಹಿಂಸಾತ್ಮಕ ಸ್ವರೂಪದ ನಡುವೆ ತನ್ನ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಹೆಣಗಾಡುತ್ತಾಳೆ. ಇದರ ನಡುವೆಯೇ ಬಾಹ್ಯ ಸಮಾಜದ ವ್ಯತ್ಯಯಗಳು ಕೌಟುಂಬಿಕ ಬದುಕನ್ನೂ ಪಲ್ಲಟಗೊಳಿಸುವ ಮಟ್ಟಿಗೆ ಮನುಜ ಸಂಬಂಧಗಳು ಸಂಕೀರ್ಣವಾಗತೊಡಗುತ್ತವೆ. ತನ್ನ ಈ ತಾಕಲಾಟಗಳ ನಡುವೆಯೇ ಬಿಮಲ ಉತ್ಕಟ ದೇಶಪ್ರೇಮ ಉಂಟುಮಾಡುವ ಉನ್ಮಾದ ಮತ್ತು ಅದರಿಂದ ಮಾನವ ಸಮಾಜಕ್ಕೆ ಎದುರಾಗುವ ಕಂಟಕಗಳಿಗೆ ಮುಖಾಮುಖಿಯಾಗಿ ತನ್ನ ಮೂಲ ಅಸ್ತಿತ್ವಕ್ಕೆ ಮರಳಲು ಯತ್ನಿಸುತ್ತಾಳೆ. ಬಿಮಲ ಎದುರಿಸುವಂತಹ ಮಾನಸಿಕ ತಲ್ಲಣಗಳು ಅವಳನ್ನು ಹೊರಗಿನ ಸಮಾಜದ ವಾಸ್ತವಗಳಿಗೂ ತೆರೆದಿಡುತ್ತದೆ. ಈ ಸಾಮಾಜಿಕ ವ್ಯತ್ಯಯಗಳು ಕುಟುಂಬ ಜೀವನವನ್ನೂ ಎಷ್ಟು ಪರಿಣಾಮಕಾರಿಯಾಗಿ ಪ್ರಭಾವಿಸಬಹುದು, ಸಮಾಜದಲ್ಲಾಗುವಂತೆಯೇ ಕುಟುಂಬದಲ್ಲೂ ವಿಭಜನೆಯ ಗೋಡೆಗಳನ್ನು ಕಟ್ಟಬಹುದು ಎನ್ನುವುದು ಘರೇಭೈರೇ ಕೃತಿಯ ಮೂಲ ಧಾತು.

ಸಮಕಾಲೀನ ರಂಗರೂಪ

ಈ ಶತಮಾನದ ಅಕ್ಷರ ಹೂರಣವನ್ನು ರಂಗರೂಪಕ್ಕಿಳಿಸುವಾಗ ನಿರ್ದೇಶಕ ಬಿ. ಸುರೇಶ್‌ ಮೂಲ ಕಥಾವಸ್ತುವಿಗೆ ಎಲ್ಲಿಯೂ ಚ್ಯುತಿ ಬಾರದಂತೆ, ಇಡೀ ಕಥಾ ಹಂದರವನ್ನು ಸಮಕಾಲೀನಗೊಳಿಸಿರುವುದು ನಾಟಕದ ವೈಶಿಷ್ಟ್ಯ. ಸಮಕಾಲೀನ ಭಾರತದ ವರ್ತಮಾನದ ಸನ್ನಿವೇಶಗಳನ್ನು ಗಮನಿಸಿದರೂ ಸಹ ನಮ್ಮ ನಡುವೆ “ ಘರೇಭೈರೇ “ ಕೃತಿಯ ಪಾತ್ರಗಳು ಕಣ್ಮುಂದೆ ಬರುತ್ತವೆ. ಟಾಗೋರರ ಸೃಜನಶೀಲತೆಗೆ ಸಮಾನಾಂತರವಾಗಿ ರಂಗವೇದಿಕೆಯ ಮೇಲೆ ತಮ್ಮ ಸೃಜನಶೀಲತೆಯನ್ನು ಮೇಳೈಸಿರುವ ಬಿ. ಸುರೇಶ್‌, ಶ್ರೀಮಂತ ಜಮೀನ್ದಾರ ಸಿದ್ಧಾರ್ಥ್‌ ಮತ್ತು ಅವನ ವಿದೇಶಿ ಗೆಳೆಯ-ಸ್ವದೇಶೀ ಹೋರಾಟಗಾರ ಇಂದ್ರಜಿತ್‌ ನಡುವೆ ನಡೆಯುವ ಸೈದ್ದಾಂತಿಕ ಸಂಘರ್ಷವನ್ನು ನಮ್ಮ ನಡುವಿನ ಸಮಾಜದಲ್ಲೇ ಗುರುತಿಸುತ್ತಾರೆ. ಇವರಿಬ್ಬರ ಘರ್ಷಣೆಯ ನಡುವೆ ಸಿಲುಕುವ ಶಾರದೆ ತಾನು ಕಾಣದೆ ಹೋಗಿದ್ದ ಒಂದು ಸಮಾಜವನ್ನು ಪತಿ ಸಿದ್ಧಾರ್ಥನ ಪ್ರೋತ್ಸಾಹದೊಂದಿಗೇ ನೋಡಲು ಸಾಧ್ಯವಾಗುತ್ತದೆ. ಇವರ ನಡುವೆಯೇ ಮುನ್ನಾ ಎಂಬ ಅಮಾಯಕ ಯುವಕ ವರ್ತಮಾನದ ಸಾಂಸ್ಕೃತಿಕ ರಾಜಕಾರಣದ ದುರಂತ ರಾಯಭಾರಿಯಂತೆ ಕಾಣುತ್ತಾನೆ.

ಸಾಹಿತ್ಯ ಕೃತಿಗಳನ್ನು ರಂಗರೂಪಕ್ಕೆ ಅಳವಡಿಸುವುದರೊಂದಿಗೇ ಇಡೀ ಕಥಾವಸ್ತುವನ್ನು ಸಮಕಾಲೀನಗೊಳಿಸಿ 21ನೆಯ ಶತಮಾನದ ಭಾರತೀಯ ಸಮಾಜದ ಸಾಂಸ್ಕೃತಿಕ ತಲ್ಲಣಗಳೊಂದಿಗೆ ಜನರ ಮುಂದಿಡುವ ಬಿ. ಸುರೇಶ್‌ “ಲೋಕದ ಒಳಹೊರಗೆ” ಅನ್ವೇಷಿಸುವ ಮೂಲಕ ಇಂದು ಭಾರತ ಎದುರಿಸುತ್ತಿರುವ ಕೋಮುವಾದ, ಕೋಮು-ಮತದ್ವೇಷ-ಅನಾಗರಿಕ ಹಿಂಸೆ ಹಾಗೂ ಭಾವೋನ್ಮಾದದ ಸಾಂಸ್ಕೃತಿಕ ರಾಜಕಾರಣವನ್ನು ನೇರವಾಗಿಯೇ ತೆರೆದಿಡುತ್ತಾರೆ. ಟಾಗೋರರ ಕಾಲದಲ್ಲಿದ್ದ ಮತದ್ವೇಷಕ್ಕೂ ಸಮಕಾಲೀನ ಭಾರತದ ಕೋಮು-ಮತದ್ವೇಷಕ್ಕೂ ಇರುವ ಅಂತರ ಎಷ್ಟು ತೆಳುವಾದದ್ದು ಎನ್ನುವುದನ್ನು ನಾಟಕದುದ್ದಕ್ಕೂ ಬಿಂಬಿಸಲಾಗಿದೆ. ಸ್ವಾತಂತ್ರ್ಯಪೂರ್ವ ಸ್ವದೇಶಿ ಆಂದೋಲನದಲ್ಲಿ ಸೃಷ್ಟಿಯಾದಂತಹ ಸಾಂಸ್ಕೃತಿಕ ಬೇಲಿಗಳು ಹಾಗೂ ದ್ವೇಷದ ಗೋಡೆಗಳು 75 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರದಲ್ಲೂ ಭಾರತೀಯ ಸಮಾಜವನ್ನು ಆವರಿಸಿರುವ ವಾಸ್ತವ ಚಿತ್ರಣವನ್ನು ಈ ಹೊತ್ತಿನಲ್ಲಿ ನಮ್ಮ ನಡುವೆ ಸದ್ದಿಲ್ಲದೆ ಜ್ವಲಿಸುತ್ತಿರುವ ಕೋಮು ದಳ್ಳುರಿಯ ಜ್ವಾಲೆಗಳ ರೂಪಕಗಳ ಮೂಲಕ ಸುರೇಶ್‌ ನಮ್ಮ ಮುಂದಿಡುತ್ತಾರೆ. ಮೇಲ್ನೋಟಕ್ಕೆ ಸುಂದರವಾಗಿ ಕಾಣುವ ಸಮಾಜವೊಂದು ತನ್ನ ಆಂತರಿಕ ಬೇಗುದಿಯನ್ನು ಸಹಿಸಿಕೊಂಡೇ, ಸುತ್ತಲಾವರಿಸುತ್ತಿರುವ ದ್ವೇಷಾಸೂಯೆಗಳ ಸುಡುವ ಜ್ವಾಲೆಗಳನ್ನು ಹೇಗೆ ಸಹಿಸಿಕೊಳ್ಳುತ್ತಿದೆ ಎಂಬ ಪ್ರಶ್ನೆಗೆ “ ಲೋಕದ ಒಳಹೊರಗೆ ” ನಾಟಕದ ಶಾರದೆ ಉತ್ತರಿಸುತ್ತಾಳೆ.

ಈ ನಾಟಕದ ನಡುವೆಯೇ ಬರುವ ʼಮುನ್ನಾʼ ಎಂಬ ಯುವಕನ ಪಾತ್ರ ವರ್ತಮಾನ ಭಾರತದ ಹಾದಿ ತಪ್ಪಿದ ಯುವ ಸಮೂಹ ಎದುರಿಸುತ್ತಿರುವ ತಲ್ಲಣಗಳನ್ನೂ ಸಹ ಪರಿಚಯಿಸುತ್ತದೆ. ಅನ್ಯರನ್ನು ಸೃಷ್ಟಿಸುವ ದ್ವೇಷಾಸೂಯೆಗಳ ಸಾಂಸ್ಕೃತಿಕ ರಾಜಕಾರಣವು ತನ್ನ ಬೆಳವಣಿಗೆಯ ಮೆಟ್ಟಿಲುಗಳಾಗಿ ಬಳಸಿಕೊಳ್ಳುವುದು ಭವಿಷ್ಯದ ತಳಪಾಯವಾಗಬೇಕಾದ ವರ್ತಮಾನದ ಪರಿಕರಗಳನ್ನು, ಉಪಕರಣಗಳನ್ನು. ಯುವ ಸಮಾಜ ಅಂತಹ ಉಪಕರಣಗಳಾಗಿ ಬಳಕೆಯಾಗುತ್ತಿರುವುದನ್ನು ಕಾಣುತ್ತಲೇ ಇದ್ದೇವೆ. ಟಾಗೂರರ ಕತೆಯನ್ನು ಸಮಕಾಲೀನಗೊಳಿಸುವ ಸಂದರ್ಭದಲ್ಲಿ ಅಲ್ಲಿನ ಸನ್ನಿವೇಶಗಳ ನೆಲೆಯಲ್ಲೇ ಇವತ್ತಿನ ಸಮಾಜದ ತುಡುಗು ಪಡೆಗಳನ್ನು ಪ್ರತಿನಿಧಿಸುವ ʼ ಮುನ್ನಾ ʼ ಎಂಬ ಪಾತ್ರವನ್ನು ಸುರೇಶ್‌ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಯಾವುದೋ ಉನ್ಮಾದಕ್ಕೆ ಬಲಿಯಾಗಿ, ಅಸ್ಮಿತೆಗಳ ವ್ಯಾಮೋಹಕ್ಕೆ ಕಟ್ಟುಬಿದ್ದು, ಗೊತ್ತಿಲ್ಲದ ಗುರಿಸಾಧನೆಗಾಗಿ ಕಣ್ಣಿಗೆ ಪಟ್ಟಿಕಟ್ಟಿಕೊಂಡು ನಾಯಕರನ್ನು ಅನುಸರಿಸುವ ಕೋಟ್ಯಂತರ ಯುವ ಸಮೂಹ 20ನೆಯ ಶತಮಾನದ ಆರಂಭದಲ್ಲಿದ್ದಂತೆಯೇ 21ನೆಯ ಶತಮಾನದ ಮೂರನೆಯ ದಶಕದಲ್ಲೂ ಇರುವುದನ್ನು “ ಮುನ್ನಾ ” ಸಾಕ್ಷೀಕರಿಸುತ್ತಾನೆ. ರಂಗಭೂಮಿಯ ಹಾಗೂ ರಂಗನಿರ್ದೇಶಕರ ಸೃಜನಶೀಲತೆಯ ಸೌಂದರ್ಯ ಇರುವುದು ಇಂತಹ ಸನ್ನಿವೇಶಗಳಲ್ಲೇ. ತಾನು ಹೊರಲೋಕವನ್ನು ನೋಡಲು ಹೋಗಿ ಕಂಡ ಭೀಕರ ಸತ್ಯಗಳನ್ನು ನೆನೆಯುತ್ತಾ, ತಾನು ಬಿಡುಗಡೆ ಹೊಂದಬೇಕಿರುವುದು ಆಂತರಿಕ ಈರ್ಷೆ-ದ್ವೇಷಗಳಿಂದ ಎಂಬ ಅರಿವಿನೊಂದಿಗೆ ಮರಳಿ ಗೂಡಿಗೆ ಬರುವ ಶಾರದೆ ಹಾಗೂ ಭಾವೋನ್ಮಾದಕ್ಕೊಳಗಾಗಿ ತನ್ನ ಆತ್ಮಸಾಕ್ಷಿಗೆ ಒಪ್ಪದ ಅಕ್ರಮ ಮಾರ್ಗವನ್ನು ಅನುಸರಿಸಿ ಪಶ್ಚಾತ್ತಾಪದಿಂದ ಬೇಯುವ ಮುನ್ನಾ , ಈ ಕಾಲದ ಸಾಂಸ್ಕೃತಿಕ ರಾಜಕಾರಣದಲ್ಲಿ ಢಾಳಾಗಿ ಕಾಣಬಹುದಾದ ಪಾತ್ರಗಳೇ ಆಗಿವೆ.

ಸೃಜನಶೀಲತೆಗೆ ನಿದರ್ಶನ

“ ಘರೇಭೈರೇ “ ಕೃತಿಯ ವಸಾಹತು ಕಾಲದ ಕಥಾವಸ್ತುವನ್ನು ಡಿಜಿಟಲ್‌ ಯುಗದ ಭಾರತದ ಸಾಮಾಜಿಕ-ಸಾಂಸ್ಕೃತಿಕ ಸನ್ನಿವೇಶಗಳ ನಡುವೆ ಅನಾವರಣಗೊಳಿಸುತ್ತಾ, ಮೂಲ ಕೃತಿಯ ಪಶ್ಚಿಮ ವಿರೋಧಿ ಚೌಕಟ್ಟಿನಲ್ಲೇ ವರ್ತಮಾನದ “ಅನ್ಯ” ವಿರೋಧಿ ನೆಲೆಗಳಲ್ಲಿ ಬಿಂಬಿಸುವ ಸುರೇಶ್‌ ಅವರ ಪ್ರಯತ್ನ ನಿಜಕ್ಕೂ ಮೆಚ್ಚುವಂತಹುದು. ಮೂಲ ಕಥಾಹಂದರಕ್ಕೆ ಎಲ್ಲಿಯೂ ಚ್ಯುತಿ ಬಾರದಂತೆ ಸ್ವಗತಗಳ ಮೂಲಕ, ಸುತ್ತಲೂ ಆವರಿಸುವ ಅಗ್ನಿ ಜ್ವಾಲೆಗಳ ರೂಪಕಗಳ ಮೂಲಕ ಬಿಂಬಿಸುವಾಗ ಸಹಜವಾಗಿಯೇ ಪ್ರೇಕ್ಷಕರ ಮನಸ್ಸು ಭಾರತದಾದ್ಯಂತ ಸಂಚರಿಸುತ್ತದೆ. ಗುಜರಾತ್‌ನಿಂದ ಇತ್ತೀಚಿನ ಹರಿಯಾಣದ ನೂಹ್‌ವರೆಗೆ , ನಮ್ಮ ನಡುವಿನ ಕರಾವಳಿಯವರೆಗೆ ವ್ಯಾಪಿಸಿದ ಇಂತಹುದೇ ಜ್ವಾಲೆಗಳು ಮನುಜ ಸಂಬಂಧಗಳನ್ನು ಕಲುಷಿತಗೊಳಿಸುತ್ತಿರುವ ಒಂದು ಸಾಂಸ್ಕೃತಿಕ ವಿದ್ಯಮಾನವನ್ನು ಕಣ್ಣೆದುರು ನಿಲ್ಲಿಸುತ್ತದೆ. ನಾಟಕದುದ್ದಕ್ಕೂ ಕಾಣಿಸಿಕೊಳ್ಳುವ ಇಂದ್ರಜಿತ್‌, ಅವನ ಹಾಗೂ ಶಾರದೆಯ ನಡುವೆ ರಾಯಭಾರಿಯಾಗುವ ಮುನ್ನಾ, ಹತಾಶೆಯಿಂದ ಬಳಲುವ ಪಂಡಿತ, ತನ್ನ ಸಮಾಜವನ್ನು ದುಷ್ಟಕೂಟದಿಂದ ಪಾರುಮಾಡಲು ಹೆಣಗಾಡಿ ಶವವಾಗುವ ಸಿದ್ಧಾರ್ಥ ಮತ್ತು ಇವೆಲ್ಲಕ್ಕೂ ಮೂಕ ಸಾಕ್ಷಿಯಾಗಿ ನಿಲ್ಲುವ ಶಾರದೆ ಈ ಎಲ್ಲ ಪಾತ್ರಗಳೂ ವರ್ತಮಾನ ಭಾರತದ ಸಮಗ್ರ ಚಿತ್ರಣದ ರೂಪಕಗಳಾಗಿಯೇ ಕಾಣುತ್ತವೆ.

ತನ್ನ ಒಂದು ತಪ್ಪು ಹೆಜ್ಜೆಗೆ ತನ್ನದೆಲ್ಲವನ್ನೂ ಕಳೆದುಕೊಳ್ಳುವ ಶಾರದೆ ಅನುಭವಿಸುವ ಆಂತರಿಕ ತಳಮಳ, ಮಾನಸಿಕ ವೇದನೆ ಮತ್ತು ತಲ್ಲಣಗಳು ಹಾಗೂ ಪ್ರಾಯಶ್ಚಿತ್ತದ ಬೇಗೆ ಇಂದಿನ ಭಾರತವನ್ನು ಅನುಭಾವದ ನೆಲೆಯಲ್ಲಿ ನೋಡುವಂತೆ ಮಾಡುತ್ತದೆ. ತಾನು ಬೆಳೆದುಬಂದಿದ್ದ ಒಂದು ಲೋಕ, ಮುಕ್ತಿ ಪಡೆದು ನೋಡುವ ಮತ್ತೊಂದು ಲೋಕ, ಎರಡರ ನಡುವೆ ಇರುವ ವ್ಯತ್ಯಾಸಗಳು ಹಾಗೂ ಭೀಕರ ವಾಸ್ತವತೆಗಳ ನಡುವೆ ದಿಗ್ಮೂಢಳಾಗಿ ನಿಲ್ಲುವ ಶಾರದೆ, ಅಧ್ಯಾತ್ಮದ ನೆಲೆಯಲ್ಲಿ ನಿಂತು ಆತ್ಮಾವಲೋಕನದತ್ತ ಯೋಚಿಸುವಂತಾಗುವುದು, ಇವತ್ತಿನ ಸಮಾಜದ ಮುಂದಿರುವ ಜಿಜ್ಞಾಸೆಯ ಪ್ರತಿಬಿಂಬದಂತೆ ಕಾಣುತ್ತದೆ. ಮಾನವ ಸಮಾಜ ತನ್ನ ಒಳಗಿನ ಪ್ರಪಂಚವನ್ನು ಅರಿತು ಹೊರಗಿನ ಜಗತ್ತನ್ನು ಅರಿಯುವ ಪ್ರಯತ್ನ ಮಾಡಿದ್ದೇ ಆದಲ್ಲಿ ಅಂತರಂಗದಲ್ಲಿರಬಹುದಾದ ತುಮುಲಗಳಿಗೆ ಕಾರಣಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂಬ ದಾರ್ಶನಿಕ ವಾಸ್ತವವನ್ನು “ ಲೋಕದ ಒಳಹೊರಗೆ ” ತೆರೆದಿಡುತ್ತದೆ. ಸಂಭಾಷಣೆಗಳಲ್ಲಿ ಎಚ್ಚರವಹಿಸಿ ನಿರೂಪಣೆ ಮಾಡಿರುವ ನಿರ್ದೇಶಕರು ನಾಟಕದುದ್ದಕ್ಕೂ ಕಂಡುಬರುವ ʼ ಸ್ವಗತ ʼಗಳ ಮೂಲಕ ಮನುಷ್ಯನ ಅಂತರಂಗದ ಬೇಗುದಿಯನ್ನು, ತಳಮಳಗಳನ್ನು ಅದ್ಭುತವಾಗಿ ಪ್ರೇಕ್ಷಕರ ಮುಂದಿಡುತ್ತಾರೆ.

ಸಿದ್ಧಾರ್ಥ, ಶಾರದೆ, ಇಂದ್ರಜಿತ್‌, ಮುನ್ನಾ, ಪಂಡಿತ ಎಲ್ಲ ಪಾತ್ರಧಾರಿಗಳೂ ತಮ್ಮ ಸಹಜಾಭಿನಯ, ಭಾವಾಭಿನಯದ ಮೂಲಕ ಪ್ರೇಕ್ಷಕರ ಮನಸೆಳೆಯುತ್ತಾರೆ. ಕೆಲವೆಡೆ ಸ್ವಗತ ಕೊಂಚ ದೀರ್ಘ ಎನಿಸುವಂತಾದರೂ ನಾಟಕದ ಓಘಕ್ಕೆ ಚ್ಯುತಿ ತರುವಂತಿಲ್ಲ. ಈಗಾಗಲೇ ಸಾಕಷ್ಟು ಸಂಕಲಿಸಿ ನೂರು ನಿಮಿಷಕ್ಕೆ ಸೀಮಿತಗೊಳಿಸಲಾಗಿರುವ ನಾಟಕದ ಅವಧಿಯನ್ನು ಇನ್ನೂ ಹತ್ತು ನಿಮಿಷ ಕಡಿಮೆ ಮಾಡುವ ಸಾಧ್ಯತೆಗಳನ್ನು ಸುದೀರ್ಘ ಸ್ವಗತಗಳಲ್ಲಿ ಗುರುತಿಸಬಹುದು. ಹಾಗೆಯೇ ಸಿದ್ಧಾರ್ಥ ಮತ್ತು ಇಂದ್ರಜಿತ್‌ ನಡುವಿನ ಸಂಭಾಷಣೆಗಳ ನಡುವೆ ಎಲ್ಲೋ ಒಂದು ಕಡೆ ಸಿದ್ಧಾರ್ಥ ಸ್ವದೇಶಿ ಪರಿಕಲ್ಪನೆಯನ್ನೇ ಭಿನ್ನವಾಗಿ ನೋಡುವ ಛಾಯೆ ನುಸುಳಿಹೋದಂತೆ ಭಾಸವಾಗುತ್ತದೆ. ಇದನ್ನು ಸರಿದೂಗಿಸುವ ಪ್ರಯತ್ನವನ್ನು ಮುಂದೆ ಮಾಡಬಹುದು. ಇದು ನಿರ್ದೇಶಕರಿಗೆ ಬಿಟ್ಟ ವಿಚಾರ.

ಆದರೆ ಈ ಯಾವುದೇ ಅಂಶಗಳೂ ಘರೇಭೈರೇ ಕೃತಿಗಾಗಲೀ, ರವೀಂದ್ರನಾಥ ಟಾಗೋರರ ಅಭಿವ್ಯಕ್ತಿಗಾಗಲೀ ಅಥವಾ ಮೂಲ ಕೃತಿಯ ಸ್ಥಾಯಿ ಭಾವಕ್ಕಾಗಲೀ ಚ್ಯುತಿ ಉಂಟುಮಾಡುವುದಿಲ್ಲ. ರವೀಂದ್ರ ಸಂಗೀತ್‌ ಛಾಯೆ ಇರುವ ಆಲಾಪಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವುದೇ ಅಲ್ಲದೆ, ಅವರ ʼ ಪ್ರಾರ್ಥನೆ ʼ ಪದ್ಯವನ್ನು ಪ್ರಭಾವಶಾಲಿಯಾಗಿ ಅಳವಡಿಸುವ ಮೂಲಕ ಬಿ. ಸುರೇಶ್‌ “ ಲೋಕದ ಒಳಹೊರಗೆ ” ನಾಟಕಕ್ಕೆ ಮಧುರ ಸುಶ್ರಾವ್ಯ ಸ್ಪರ್ಶವನ್ನೂ ನೀಡಿದ್ದಾರೆ. ಎಲ್ಲ ಪಾತ್ರಧಾರಿಗಳ ಹೃದಯಸ್ಪರ್ಶಿ ಅಭಿನಯ ಸಹಜವಾಗಿಯೇ ನಾಟಕಕ್ಕೆ ಕಳೆ ತರುತ್ತದೆ. ಇಂದ್ರಜಿತ್‌ ಸಂಭಾಷಣೆಗಳಲ್ಲಿ ಕೆಲವೆಡೆ ಭಾವಾತಿರೇಕದ ಛಾಯೆ ನುಸುಳಿದ್ದರೂ, ಒಟ್ಟಾರೆಯಾಗಿ ಆ ಪಾತ್ರ ಬಿಂಬಿಸಬೇಕಾದ ವರ್ತಮಾನದ ದ್ವೇಷ ರಾಜಕಾರಣವನ್ನು ಸಮರ್ಥವಾಗಿ ಬಿಂಬಿಸುವುದರಲ್ಲಿ ನಟರು ಯಶಸ್ವಿಯಾಗಿದ್ದಾರೆ. ಶಾರದೆ ಪಾತ್ರದ ತನ್ಮಯತೆ ಎಲ್ಲರನ್ನೂ ಮೀರಿ ನಿಲ್ಲುವಂತಿದ್ದು ಇಡೀ ನಾಟಕವನ್ನು ಆವರಿಸುತ್ತದೆ.

ಶತಮಾನದ ಹಿಂದಿನ ಕಾದಂಬರಿಯನ್ನು ಕನ್ನಡದಲ್ಲಿ ರಂಗರೂಪಕ್ಕೆ ಅಳವಡಿಸಿ ತಮ್ಮ ಸೃಜನಶೀಲ ಸ್ವಾತಂತ್ರ್ಯ ಹಾಗೂ ಸ್ವಾಯತ್ತತೆಯನ್ನು ಸಮಪರ್ಕವಾಗಿ ಬಳಸಿಕೊಂಡಿರುವ ಬಿ. ಸುರೇಶ್‌ “ಲೋಕದ ಒಳಹೊರಗೆ ” ಮೂಲಕ ಕನ್ನಡ ರಂಗಭೂಮಿಗೆ ಒಂದು ಅತ್ಯುತ್ತಮ ರಂಗಪ್ರಯೋಗವನ್ನು ನೀಡಿದ್ದಾರೆ ಎಂದು ನಿಸ್ಸಂಕೋಚವಾಗಿ ಹೇಳಬಹುದು. ಅಭಿನಯ, ರಂಗವಿನ್ಯಾಸ, ಸಂಗೀತ, ಬೆಳಕಿನ ವಿನ್ಯಾಸ, ರೂಪಕಗಳ ಚಿತ್ರಣ ಮತ್ತು ನಿರ್ದೇಶನ ಎಲ್ಲವೂ ಅಚ್ಚುಕಟ್ಟಾಗಿ ನಿರ್ವಹಿಸಲ್ಪಟ್ಟಿರುವುದು ರಂಗಸಂಪದ ತಂಡದ ಹೆಗ್ಗಳಿಕೆ ಹಾಗೂ ಬಿ. ಸುರೇಶ್‌ ಅವರ ಸಾರಥ್ಯದ ಸಾರ್ಥಕತೆ. ಕನ್ನಡದ ರಂಗಾಸಕ್ತರಷ್ಟೇ ಅಲ್ಲದೆ ಎಲ್ಲರೂ ನೋಡಬೇಕಾದ ಒಂದು ಸೃಜನಶೀಲ ರಂಗಪ್ರಯೋಗ “ ಲೋಕದ ಒಳಹೊರಗೆ ”.

(ಮೈಸೂರಿನಲ್ಲಿರುವ ಮಂಡ್ಯ ರಮೇಶ್‌ ಅವರ ನಟನ ರಂಗಶಾಲೆಯಲ್ಲಿ, ಅವರ ಸಹಯೋಗದಲ್ಲಿ 07-10-2023ರಂದು ಪ್ರದರ್ಶನಗೊಂಡ ಈ ನಾಟಕ ಇದೇ 18ರಂದು ಬೆಂಗಳೂರಿನ ರಂಗಶಂಕರದಲ್ಲಿ ನಡೆಯಲಿದೆ )

Tags: B. SureshdramaLiteraturelokada holahorageNovel
Previous Post

ಯಾರಪ್ಪನ ದುಡ್ಡು ಅಲ್ಲ, ಗುತ್ತಿಗೆದಾರರದು ಅಥವಾ ರಾಜಕಾರಣಿಗಳ ಹಣವಲ್ಲ: ಹೆಚ್.ಡಿ.ಕುಮಾರಸ್ವಾಮಿ

Next Post

ಕೆನಡಾದ ಮಾನವಶಾಸ್ತ್ರಜ್ಞನ ಸಂಶೋಧನಾ ಪ್ರಬಂಧವನ್ನು ತಿರುಚಿದ ಹಿಂದುತ್ವವಾದಿಗಳು

Related Posts

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
0

ಬೀದರ್ ಜಿಲ್ಲಾ ಪಂಚಾಯತ್ ಆವರಣದಲ್ಲಿ ವಿತರಣೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ವಿಶೇಷ ಚೇತನರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು. ಬೀದರ್...

Read moreDetails

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

July 5, 2025
Next Post
ಕೆನಡಾದ ಮಾನವಶಾಸ್ತ್ರಜ್ಞನ ಸಂಶೋಧನಾ ಪ್ರಬಂಧವನ್ನು ತಿರುಚಿದ ಹಿಂದುತ್ವವಾದಿಗಳು

ಕೆನಡಾದ ಮಾನವಶಾಸ್ತ್ರಜ್ಞನ ಸಂಶೋಧನಾ ಪ್ರಬಂಧವನ್ನು ತಿರುಚಿದ ಹಿಂದುತ್ವವಾದಿಗಳು

Please login to join discussion

Recent News

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 5, 2025

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada