ಕೊಡಗು- ಮೈಸೂರು ಜಿಲ್ಲೆಯ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಗೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಬುಧವಾರ (ಸೆಪ್ಟೆಂಬರ್ 6) ನಡೆಯಿತು. ಬಳಿಕ ಪೊಲೀಸರು ಅವರನ್ನು ತಡೆದು ಹಿಂದಕ್ಕೆ ಕಳುಹಿಸಿದ್ದಾರೆ.
ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪ್ರತಾಪ್ ಸಿಂಹ, ಮೈಸೂರಿಗೆ ಸಿದ್ದರಾಮಯ್ಯನವರ ಕೊಡುಗೆಗಳ ಬಗ್ಗೆ ಪ್ರಶ್ನೆ ಮಾಡಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಕೆಪಿಸಿಸಿ ವಕ್ತಾರ ಎಂ ಲಕ್ಶ್ಮಣ್, ಸೆಪ್ಟೆಂಬರ್ 6ರಂದು ಪ್ರತಾಪ್ ಸಿಂಹ ಕಚೇರಿ ಮುಂಭಾಗ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದಿದ್ದರು.
ಅದರಂತೆ ಸಂಸದ ಪ್ರತಾಪ್ ಕಚೇರಿಗೆ ದಾಖಲೆಗಳ ಸಮೇತ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆಗಮಿಸಿದ್ದರು. ಆದರೆ, ಲಕ್ಷ್ಮಣ್ ಅವರನ್ನು ಪೊಲೀಸರು ಒಳಗೆ ಬಿಡಲಿಲ್ಲ.
ಆದ್ದರಿಂದ ಜಲದರ್ಶಿನಿ ಗೇಟ್ ಮುಂಭಾಗವೇ ಲಕ್ಷ್ಮಣ್ ನಿಂತಿದ್ದರು. ಸ್ಥಳೀಯ ಕಾಂಗ್ರೆಸ್ ಮುಖಂಡರು ಲಕ್ಷ್ಮಣ್ಗೆ ಸಾಥ್ ನೀಡಿದರು. ಕಾಂಗ್ರೆಸ್ ನಾಯಕರು ಆಗಮಿಸುವ ಹಿನ್ನೆಲೆ ಸಂಸದ ಪ್ರತಾಪ್ ಸಿಂಹ ಕಚೇರಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಬಳಿಕ ಮಾತನಾಡಿದ ಲಕ್ಷ್ಮಣ್, ʼʼಮೈಸೂರಿಗೆ ಪ್ರತಾಪ್ ಸಿಂಹ ನಯಾಪೈಸೆ ಕೆಲಸ ಮಾಡಿಲ್ಲ. ಅವರದ್ದೇ ಬಿಜೆಪಿ ಸರ್ಕಾರ ಇತ್ತು. ಅವರ ವಿಶ್ವಗುರು ಪ್ರಧಾನಿ ಆಗಿದ್ದರು. ಸಂಸದರಾಗಿ ಪ್ರತಾಪ್ ಸಿಂಹ ನೀವೇನು ಕೊಟ್ಟಿದ್ದೀರಿ? ರಿಂಗ್ ರೋಡ್ ಆಗಿದ್ದು ಎಡಿಬಿ ಸಾಲದಲ್ಲಿ. ಕಾರ್ಪೊರೇಟರ್ ಮಾಡಿದ್ದನ್ನು ನಾನು ಮಾಡಿದ್ದೇನೆ ಅಂತ ಹೇಳಿಕೊಳ್ಳುತ್ತಾರೆʼʼ ಎಂದು ಕಿಡಿಕಾರಿದರು.