ಸ್ವತಂತ್ರ ಭಾರತ 100 ವರ್ಷಗಳನ್ನು ಪೂರೈಸುವ ವೇಳೆಗೆ ಸಮನ್ವಯದ ತಳಪಾಯ ಗಟ್ಟಿಯಾಗಿರಬೇಕು
–ನಾ ದಿವಾಕರ
ಇನ್ನು 25 ವರ್ಷಗಳಿಗೆ ಸ್ವತಂತ್ರ ಭಾರತ ತನ್ನ ನೂರು ವರ್ಷಗಳನ್ನು ಪೂರೈಸಲಿದೆ. 75 ವರ್ಷಗಳ ಕಾಲ ದೇಶದ ಶ್ರಮಿಕ ವರ್ಗದ ಬೆವರಿನ ದುಡಿಮೆ, ಬೌದ್ಧಿಕ ವಲಯದ ಜ್ಞಾನ ಸಂಪತ್ತು ಹಾಗೂ ಸಾಂಸ್ಕೃತಿಕ ವಲಯದ ವೈವಿಧ್ಯತೆಯ ನೆಲೆಗಳು ಭಾರತವನ್ನು ಒಂದು ಪ್ರಜಾಸತ್ತಾತ್ಮಕ ರಾಷ್ಟ್ರವಾಗಿ ಕಾಪಾಡಿಕೊಂಡು ಬಂದಿದೆ. ಸಾಂಸ್ಕೃತಿಕ ವೈವಿಧ್ಯತೆಯನ್ನು ಹಾಗೂ ಮತಧಾರ್ಮಿಕ-ಜನಾಂಗೀಯ ವೈಶಿಷ್ಟ್ಯಗಳನ್ನು ಕಾಪಾಡಿಕೊಳ್ಳುವುದರ ಮೂಲಕವೇ ಭಾರತದ ಅಖಂಡತೆ ಮತ್ತು ಏಕತೆಯನ್ನು ಸಂರಕ್ಷಿಸಲು ಸಾಧ್ಯ ಎಂಬ ವಾಸ್ತವವನ್ನು ಮನಗಂಡೇ ಸ್ವಾತಂತ್ರ್ಯಪೂರ್ವದ ಚಿಂತಕರು, ರಾಜಕೀಯ ನೇತಾರರು, ತತ್ವಜ್ಞಾನಿಗಳು ಹಾಗೂ ದಾರ್ಶನಿಕ ನಾಯಕರು ಭಾರತದ ಸಂವಿಧಾನಕ್ಕೆ ಒಂದು ವಿಶಿಷ್ಟ ಆಯಾಮವನ್ನು ಕಲ್ಪಿಸಿದ್ದಾರೆ. ಸಂವಿಧಾನವು ಪ್ರತಿಪಾದಿಸುವ ಸಮಾನತೆ ಮತ್ತು ಸಮನ್ವಯದ ಹಾದಿಗಳನ್ನು ಮತ್ತಷ್ಟು ವಿಸ್ತರಿಸುತ್ತಾ ಅಡ್ಡಿಯಾಗುವ ಎಲ್ಲ ಅಪಸವ್ಯಗಳನ್ನೂ ನಿವಾರಿಸುತ್ತಾ ಮುನ್ನಡೆಯುವ ಮೂಲಕ ಭಾರತ ಅಮೃತ ಕಾಲದ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ.
ಆದರೆ ವರ್ತಮಾನದ ಭಾರತ ಈ ಹಾದಿಯಲ್ಲಿ ಕ್ರಮಿಸುತ್ತಿದೆಯೇ ? ಈ ಜಟಿಲ ಪ್ರಶ್ನೆಗೆ ಇವತ್ತಿನ ಸಮಾಜ ಉತ್ತರ ಕಂಡುಕೊಳ್ಳಬೇಕಿದೆ. ಹರಿಯಾಣದ ನೂಹ್ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಗಲಭೆಗಳು, ಸನಿಹದಲ್ಲೇ ಇರುವ ಭಾರತದ ಮಿಲಿನಿಯಂ ಸಿಟಿ (ಶತಮಾನದ ನಗರ) ಎಂದೇ ಹೆಸರಾದ ಡಿಜಿಟಲ್ ಔದ್ಯಮಿಕ ಜಗತ್ತಿನ ಕೇಂದ್ರ ಬಿಂದು ಗುರುಗ್ರಾಮ್ಗೆ ವ್ಯಾಪಿಸುತ್ತಿರುವ ಕೋಮು-ಮತದ್ವೇಷದ ಹೊಗೆ ಮತ್ತು ಈಶಾನ್ಯ ಭಾರತದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಕಲಹ ಮತ್ತು ಮಹಿಳಾ ದೌರ್ಜನ್ಯಗಳು ನಾವು ನೀಡಬಹುದಾದ ಉತ್ತರಕ್ಕೆ ಬೌದ್ಧಿಕವಾಗಿ-ಭೌತಿಕವಾಗಿ ಅಡ್ಡಿಯಾಗುತ್ತವೆ. ನಿಜ, ಭಾರತ ತನ್ನ ನೂರು ವರ್ಷಗಳನ್ನು ಪೂರೈಸುವ ವೇಳೆಗೆ ಒಂದು ಪ್ರಬುದ್ಧ ರಾಷ್ಟ್ರವಾಗಿ ವಿಶ್ವ ಭೂಪಟದಲ್ಲಿ ಕಂಗೊಳಿಸಬೇಕು. ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲು ಶಸ್ತ್ರಾಸ್ತ್ರಗಳು ನೆರವಾಗುತ್ತವೆ ಆದರೆ ಪ್ರಬುದ್ಧ ರಾಷ್ಟ್ರವಾಗಲು ನಮ್ಮ ಸಾಮಾಜಿಕ ತಳಹದಿಯನ್ನು, ಸಾಂಸ್ಕೃತಿಕ ಅಡಿಪಾಯವನ್ನು ಮತ್ತಷ್ಟು ಮಾನವೀಯಗೊಳಿಸಬೇಕಾಗುತ್ತದೆ.

ಮತೀಯ ರಾಜಕಾರಣದ ಪ್ರತಿಫಲ
ಈ ಪ್ರಕ್ರಿಯೆಗೆ ಅಡ್ಡಿಯಾಗುವ ಯಾವುದೇ ಬೆಳವಣಿಗೆಗಳನ್ನು ತೆರೆದ ಕಣ್ಣಿನಿಂದ, ಮುಕ್ತ ಮನಸ್ಸಿನಿಂದ ನೋಡುವುದು ಒಂದು ಆರೋಗ್ಯಕರ ಸಮಾಜದ ಆದ್ಯತೆಯಾಗಬೇಕು. ಹರಿಯಾಣದ ನೂಹ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೋಮು ಗಲಭೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮ್ಮ ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನೇ ಭಂಗಗೊಳಿಸುವಂತಹ ಪ್ರವೃತ್ತಿಗಳು ಢಾಳಾಗಿ ಗೋಚರಿಸುತ್ತವೆ. ಮುಸ್ಲಿಮರೇ ಪ್ರಧಾನವಾಗಿರುವ ಈ ಜಿಲ್ಲೆಯು ಭಾರತದಲ್ಲೇ ಅತ್ಯಂತ ಹಿಂದುಳಿದ ಜಿಲ್ಲೆ ಎಂದೇ ಕುಖ್ಯಾತವಾಗಿದೆ. ಈ ಜಿಲ್ಲೆಗೆ ಅತಿ ಸಮೀಪವಾಗಿ ಭಾರತದ ಐಟಿ ಹಬ್ ಅಥವಾ ಮಾಹಿತಿ ತಂತ್ರಜ್ಞಾನ-ಹಣಕಾಸು ಕೇಂದ್ರ ಎಂದೇ ಗುರುತಿಸಲ್ಪಟ್ಟಿರುವ ಗುರುಗ್ರಾಮ (ಗುರ್ಗಾಂವ್) ಜಿಲ್ಲೆಯೂ ಇದೆ. ಬೆಂಗಳೂರು ಮತ್ತು ಮುಂಬೈ ನಂತರ ಮೂರನೆಯ ಸ್ಥಾನದಲ್ಲಿರುವ ಗುರುಗ್ರಾಮದಲ್ಲಿ 250 ಫಾರ್ಚೂನ್-500 ಕಂಪನಿಗಳಿವೆ. ಸಾವಿರಾರು ಜನರಿಗೆ ಉದ್ಯೋಗ, ಲಕ್ಷಾಂತರ ಜನರಿಗೆ ಜೀವನೋಪಾಯ ಒದಗಿಸುವ ಹರಿಯಾಣದ ಈ ಹಣಕಾಸು ರಾಜಧಾನಿಯು ರಾಜ್ಯ ಬೊಕ್ಕಸಕ್ಕೆ ಅತಿ ಹೆಚ್ಚಿನ ಕೊಡುಗೆಯನ್ನೂ ನೀಡುತ್ತದೆ. ಗುರುಗ್ರಾಮ ರಾಜಧಾನಿಗೆ ಅತಿ ಸಮೀಪದಲ್ಲಿದ್ದು, ಎನ್ಆರ್ಸಿ ಎಂದು ಕರೆಯಲಾಗುವ ರಾಷ್ಟ್ರೀಯ ರಾಜಧಾನಿ ಪ್ರದೇಶದ ಒಂದು ಭಾಗವಾಗಿದೆ.
ಆದರೆ ಇಂತಹ ಸಿರಿವಂತಿಕೆಯ ಕೇಂದ್ರದಿಂದ ತುಸು ದೂರ ಇರುವ ನೂಹ್ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಮಿಕರೇ ವಾಸವಾಗಿದ್ದಾರೆ. 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಜಿಲ್ಲೆಯ ಶೇ 80ರಷ್ಟು ಜನರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು ಬಹುಪಾಲು ಜನರು ಕಾರ್ಮಿಕರೇ ಆಗಿದ್ದಾರೆ. 2019-21ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಅನುಸಾರ ನೂಹ್ ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಪಡೆಯುತ್ತಿರುವ ಆರು ವರ್ಷಕ್ಕೆ ಮೇಲ್ಪಟ್ಟ ಹೆಣ್ಣುಮಕ್ಕಳ ಸಂಖ್ಯೆ ಶೇ 51.2ರಷ್ಟಿದೆ. ಪಕ್ಕದ ಗುರುಗ್ರಾಮದಲ್ಲಿ ಇದು ಶೇ 80.9ರಷ್ಟಿದ್ದರೆ ರಾಜ್ಯದಲ್ಲಿ ಶೇ 73.8ರಷ್ಟಿದೆ. ಜಿಲ್ಲಾ ವಿಂಗಡನೆಯ ಮುನ್ನ ಇದು ಮೇವಾತ್ ಜಿಲ್ಲೆಯಾಗಿತ್ತು. 2017ರಲ್ಲಿ ಗುರ್ಗಾಂವ್ ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಂಡು ಐಟಿ ಕ್ಷೇತ್ರದ ಉದ್ಯಮಿಗಳ ಕೇಂದ್ರಸ್ಥಾನವಾಗಿತ್ತು. ಇದೇ ಸಮೀಕ್ಷೆಯ ಅನುಸಾರ ಮಹಿಳಾ ಸಾಕ್ಷರತೆಯ ಪ್ರಮಾಣ ಗುರುಗ್ರಾಮದಲ್ಲಿ ಶೇ 85.4ರಷ್ಟಿದ್ದರೆ, ರಾಜ್ಯದಲ್ಲಿ ಶೇ 79.7ರಷ್ಟಿದೆ. ನೂಹ್ ಜಿಲ್ಲೆಯಲ್ಲಿ ಶೇ 41.9ರಷ್ಟಿದೆ.

ಡಿಜಿಟಲ್ ಆರ್ಥಿಕತೆಯ ಉಚ್ಛ್ರಾಯ ಹಂತದಲ್ಲಿರುವ ಭಾರತ ನವ ಉದಾರವಾದದ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಐದು ಟ್ರಿಲಿಯನ್ ರಾಷ್ಟ್ರವಾಗಿ ಚೀನಾ ದೇಶವನ್ನೂ ಹಿಂದಿಕ್ಕುವ ಮಹತ್ವಾಕಾಂಕ್ಷೆಯೊಂದಿಗೆ ಮುನ್ನಡೆಯುತ್ತಿದೆ. ಈ ಸಾಧನೆಯ ಹಿಂದೆ ಗುರುಗ್ರಾಮವಷ್ಟೇ ಅಲ್ಲದೆ ಮುಂಬೈ, ಹೈದರಾಬಾದ್, ಬೆಂಗಳೂರು, ಚೆನ್ನೈ, ಅಹಮದಾಬಾದ್, ಸೂರತ್, ಭೂಪಾಲ್ ಹಾಗೂ ಇತರ ಮಹಾ ನಗರಗಳಲ್ಲಿನವ ಔದ್ಯಮಿಕ-ವಾಣಿಜ್ಯ ಉದ್ದಿಮೆಗಳ ಕೊಡುಗೆಯೂ ಇದೆ. ಆದರೆ ಈ ಐದು ಟ್ರಿಲಿಯನ್ ಡಾಲರ್ಗಳ ಹಿಂದೆ ಲಕ್ಷಾಂತರ ಟ್ರಿಲಿಯನ್ ಶ್ರಮದ ಬೆವರಹನಿಗಳು ದೇಶದೆಲ್ಲೆಡೆ ಶೋಷಣೆಗೊಳಗಾಗುತ್ತಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಇಂದು ಗುರುಗ್ರಾಮ್ ಒಂದು ಅತ್ಯಾಧುನಿಕ ವಾಣಿಜ್ಯ ನಗರಿಯಾಗಿ ವಿಶ್ವಭೂಪಟದಲ್ಲಿ ತನ್ನ ಐಷಾರಾಮಿ ಚಿತ್ರಗಳೊಂದಿಗೆ ಪ್ರಕಾಶಿಸುತ್ತಿದ್ದರೆ ಈ ನಿರ್ಮಾಣ ಕಾರ್ಯದ ಹಿಂದೆ ಲಕ್ಷಾಂತರ ದುಡಿಮೆಯ ಕೈಗಳಿರುತ್ತವೆ. ದುಡಿಮೆಗಾರರ ಬೆವರಿನ ದುಡಿಮೆ ಇರುತ್ತದೆ. ಹಾಗೆಯೇ ಮಾರುಕಟ್ಟೆಯ ಶೋಷಣೆಯೂ ಇರುತ್ತದೆ.
ಮುಂದುವರೆಯುತ್ತದೆ,,,,,,,






