ಪ್ರಶಸ್ತಿ ಸಮ್ಮಾನಗಳು ಅರ್ಥವನ್ನೇ ಕಳೆದುಕೊಂಡಿರುವ ಹೊತ್ತಿನಲ್ಲಿ ಹೊಸ ಷರತ್ತುಗಳು !!
ಸಾಂಸ್ಕೃತಿಕ ಸ್ವಾಯತ್ತತೆಯ ಪ್ರಶ್ನೆ
ಎಂ.ಎಂ. ಕಲಬುರ್ಗಿ ಹತ್ಯೆಯ ನಂತರ ದೇಶದ ವಿವಿಧ ಭಾಷೆಗಳ 39 ಸಾಹಿತಿಗಳು ಸಾಂಸ್ಕೃತಿಕ ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವ ಮೂಲಕ ತಮ್ಮ ಸಾತ್ವಿಕ ಆಕ್ರೋಶ ಹಾಗೂ ಪ್ರತಿರೋಧವನ್ನು ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಪ್ರಶಸ್ತಿ ಭಾಜನರು ಯಾವುದೋ ಒಂದು ಸನ್ನಿವೇಶದಲ್ಲಿ ಪ್ರಭುತ್ವದ ಅಥವಾ ಸರ್ಕಾರದ ನೀತಿಯನ್ನು, ನಿಷ್ಕ್ರಿಯತೆಯನ್ನು ವಿರೋಧಿಸಿ ತಮಗೆ ನೀಡಲಾದ ಪ್ರಶಸ್ತಿಯನ್ನು ಹಿಂದಿರುಗಿಸುವುದು ಒಂದು ಪ್ರಜಾಸತ್ತಾತ್ಮಕ ಧೋರಣೆ. ಈ ಸಾಂಕೇತಿಕ ಪ್ರತಿರೋಧವನ್ನು ರಾಜಕೀಯ ಚೌಕಟ್ಟಿನೊಳಗಿಟ್ಟು ನೋಡದೆ, ಪ್ರಶಸ್ತಿ ಭಾಜನರು ಪ್ರತಿನಿಧಿಸುವ ಸಾಮಾನ್ಯ ಜನತೆಯ ನೆಲೆಯಲ್ಲಿ ಹಾಗೂ ಈ ಜನತೆಯ ಸಾಂವಿಧಾನಿಕ ಆಶೋತ್ತರಗಳ ಚೌಕಟ್ಟಿನೊಳಗಿಟ್ಟು ನೋಡಬೇಕೇ ಹೊರತು, ಆಡಳಿತಾರೂಢ ಸರ್ಕಾರದ ಅಧಿಕಾರ ವಲಯದಲ್ಲಿಟ್ಟು ನೋಡಕೂಡದು. ಯಾವುದೇ ಒಂದು ಸಾಹಿತ್ಯ ಕೃತಿ ಪ್ರಶಸ್ತಿಗೆ ಅರ್ಹತೆ ಪಡೆಯುವುದು ಆ ಕೃತಿಯೊಳಗಿನ ಸಾಮಾಜಿಕ ಸಂವೇದನೆ, ಸೂಕ್ಷ್ಮತೆ ಮತ್ತು ಅಭಿವ್ಯಕ್ತಿಗಳಿಗಾಗಿಯೇ ಹೊರತು, ಆಳುವವರನ್ನು ಸಂತೃಪ್ತಿಗೊಳಿಸುವ ಕಾರಣಕ್ಕಾಗಿ ಅಲ್ಲ. ದೊರೆಯನ್ನು ಸಂತುಷ್ಟಿಗೊಳಿಸುವ ವಂದಿಮಾಗಧ ಸಾಹಿತ್ಯದ ಚರಿತ್ರೆಯಿಂದ ಬಹುದೂರ ಸಾಗಿ ಬಂದಿರುವ ಸಮಾಜ ಇಂದು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಆಳುವವರನ್ನು ವಿರೋಧಿಸುವ ಸ್ವಾಯತ್ತ ಸಾಹಿತ್ಯದೆಡೆಗೆ ಸಾಗುತ್ತಿದೆ. ಇದು ಚಾರಿತ್ರಿಕ ಅನಿವಾರ್ಯತೆಯೂ ಹೌದು.

ಆದರೆ ಈ ಹೆಜ್ಜೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವ ಕ್ರಿಯೆಯಲ್ಲಿ ಪ್ರಧಾನ ಪಾತ್ರ ವಹಿಸುವ ಸಾಹಿತ್ಯ-ಕಲೆ-ರಂಗಭೂಮಿ ಹಾಗೂ ಇತರ ಸೃಜನಶೀಲ ಸಾಂಸ್ಕೃತಿಕ ವಲಯಗಳ ಮೇಲೆ ಆಡಳಿತಾರೂಢ ಸರ್ಕಾರಗಳು ನಿಯಂತ್ರಣ ಸಾಧಿಸಿದಷ್ಟೂ ಸೃಜನಶೀಲತೆ ಸಾಯುತ್ತಲೇ ಹೋಗುತ್ತದೆ. ಇತ್ತೀಚಿನ ಬಾಲಿವುಡ್ ಚಿತ್ರಗಳಲ್ಲಿ ಈ ಪಲ್ಲಟವನ್ನು ಕಾಣುತ್ತಿದ್ದೇವೆ. ಆಳುವ ವರ್ಗಗಳೊಡನೆ ಗುರುತಿಸಿಕೊಳ್ಳುವ ಸಾಂಸ್ಕೃತಿಕ ಚಿಂತನಾ ವಲಯಗಳೂ ಸಹ ಈ ಪಲ್ಲಟಕ್ಕೆ ನೇರವಾಗಿ ಹೊಣೆಯಾಗುತ್ತವೆ. ಸೃಜನೇತರ ಹಾಗೂ ಸೃಜನಶೀಲ ಸಾಹಿತ್ಯಗಳೆರಡೂ ಸಹ ತಮ್ಮ ಸೈದ್ಧಾಂತಿಕ ನೆಲೆಗಳನ್ನು ಸುರಕ್ಷಿತವಾಗಿರಿಸಿಕೊಂಡು ಸಮಷ್ಟಿ ದೃಷ್ಟಿಕೋನವನ್ನು ಬೆಳೆಸಿಕೊಂಡಾಗಲೇ ಸಮಾಜಮುಖಿಯಾಗಿ ಅಭಿವ್ಯಕ್ತವಾಗಲು ಸಾಧ್ಯವಾದೀತು. ತನ್ನ ಸಾಂಪ್ರದಾಯಿಕ ಪ್ರಾಚೀನ ನಡವಳಿಕೆಗಳಿಂದ ಇಂದಿಗೂ ಮುಕ್ತವಾಗದೆ ಹಿಂದಕ್ಕೆ ಸಾಗುತ್ತಿರುವ ಸಮಾಜವೊಂದಕ್ಕೆ ಪ್ರಗತಿಶೀಲತೆಯ ಬೆಳಕಿನ ಕಿಂಡಿಯನ್ನು ತೆರೆಯುವ ಜವಾಬ್ದಾರಿ ಸಾಂಸ್ಕೃತಿಕ ವಲಯಗಳ ಮೇಲೆ ಇದೆ.

ಈ ಬೌದ್ಧಿಕ ಪ್ರಕ್ರಿಯೆಗೆ ಪೂರಕವಾಗಿ ಭಾರತದ ಸಂವಿಧಾನ ವಿಧಿ 19ರ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಸಾಂಸ್ಕೃತಿಕ ವಲಯದ ಚಿಂತನಾವಾಹಿನಿಗಳು ನಿರ್ಭೀತಿಯಿಂದ ತಳಮಟ್ಟದ-ತುಳಿತಕ್ಕೊಳಗಾದ-ಅವಕಾಶವಂಚಿತ-ಶೋಷಿತ ಜನಸಮುದಾಯಗಳ ಆಶೋತ್ತರಗಳನ್ನು, ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಹಾದಿಯಲ್ಲಿ ಸಾಗುವುದು 21ನೆಯ ಶತಮಾನದ ಅನಿವಾರ್ಯತೆ ಅಲ್ಲವೇ ? ಸಾಂಸ್ಕೃತಿಕ ಸಂಸ್ಥೆಗಳ ಮತ್ತು ಅಕಾಡೆಮಿಗಳ ಸ್ವಾಯತ್ತತೆಯೂ ಸಹ ಈ ಕಾರಣಕ್ಕಾಗಿಯೇ ಮುಖ್ಯವಾಗುತ್ತದೆ. ಈ ಅಕಾಡೆಮಿಗಳು ನೀಡುವ ಪ್ರಶಸ್ತಿಗಳು ರಾಜಕೀಯ ಪ್ರೇರಿತವಾದಷ್ಟೂ ಪ್ರಶಸ್ತಿಗೆ ಭಾಜನವಾಗುವ ಸಾಹಿತ್ಯಕ ಕೃತಿಗಳ ಆಂತರಿಕ ಮೌಲ್ಯ ಕ್ಷೀಣಿಸುತ್ತಲೇ ಹೋಗುತ್ತದೆ. ಹಾಗೆಯೇ ಸಮಕಾಲೀನ ರಾಜಕೀಯ ಬೆಳವಣಿಗೆಗಳನ್ನು ವಿರೋಧಿಸುವ ಸಾಂವಿಧಾನಿಕ ಹಕ್ಕನ್ನು ಸಾಹಿತ್ಯಕ ವಲಯದಿಂದ ಕಸಿದುಕೊಳ್ಳುವ ಪ್ರಯತ್ನಗಳೂ ಸಹ ಈ ಮೌಲ್ಯ ನಾಶಕ್ಕೆ ಕಾರಣವಾಗುತ್ತವೆ. ಭಾರತದ ಸಂದರ್ಭದಲ್ಲಿ ಸಾಹಿತ್ಯಕ-ಅಕಾಡೆಮಿ ಪ್ರಶಸ್ತಿಗಳು ರಾಜಕೀಯ ಛಾಯೆಯಿಂದ ಆವೃತವಾಗಿರುವುದರಿಂದಲೇ ಪ್ರಶಸ್ತಿಗೆ ದುಂಬಾಲು ಬೀಳುವ ಸಾಹಿತಿಗಳೂ, ಕಲಾವಿದರೂ ಹೆಚ್ಚಾಗುತ್ತಿರುವುದು ಸಹ ಒಪ್ಪಿಕೊಳ್ಳಲೇಬೇಕಾದ ವಾಸ್ತವ.
ಸೃಜನಶೀಲತೆ ಮತ್ತು ಪ್ರತಿರೋಧದ ಹಕ್ಕು
ಈ ಎರಡೂ ಪ್ರಕ್ರಿಯೆಗಳಿಂದಾಚೆಗೂ ಭಾರತದ ಎಲ್ಲ ಭಾಷೆಗಳಲ್ಲಿ ಸೃಜನಶೀಲ ಸಾಹಿತ್ಯ ಕೃಷಿ ಫಲವತ್ತಾಗಿದೆ. ಈ ಫಲವತ್ತತೆಯನ್ನು ಪೋಷಿಸಬೇಕಾದ್ದು ಸಮಾಜದ ನೈತಿಕ ಜವಾಬ್ದಾರಿ, ಸಾಂಸ್ಕೃತಿಕ ಚಿಂತಕರ ಹೊಣೆಗಾರಿಕೆಯೂ ಆಗಿದೆ. ಈ ವಲಯದಲ್ಲಿ ಕಂಡುಬರುವ ಸಾಂಸ್ಕೃತಿಕ ಚಿಂತಕರು, ಸಾಹಿತಿಗಳು, ಕಲಾವಿದರು ಪ್ರಶಸ್ತಿಗಾಗಿ ಹಂಬಲಿಸುವವರು ಆಗಿರುವುದಿಲ್ಲ/ಆಗಿರಕೂಡದು. ಯಾವುದೇ ಲಾಬಿ ಮಾಡದೆಯೇ ಪ್ರಶಸ್ತಿಗೆ ಭಾಜನರಾದ ಅನೇಕ ಸಾಹಿತಿಗಳು ನಮ್ಮ ನಡುವೆ ಇಂದಿಗೂ ಇದ್ದಾರೆ. “ ಹಾಡು ಹಕ್ಕಿಗೆ ಬೇಕೇ ಬಿರುದು ಸಮ್ಮಾನ ,,,” ಎಂಬ ಕವಿವಾಣಿಯನ್ನು ಸಾಕಾರಗೊಳಿಸುವ ರೀತಿ ತಮ್ಮ ಸಾಹಿತ್ಯ ಕೃಷಿಯಲ್ಲಿ ತೊಡಗಿದವರೂ ಸಾಕಷ್ಟಿದ್ದಾರೆ. ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ, ಇದನ್ನು ಪೋಷಿಸುವ ಸಾಂಸ್ಕೃತಿಕ ರಾಜಕಾರಣದ ವಲಯದ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಈ ಸಾಹಿತ್ಯಕ ವಲಯ ಸ್ವಾಭಾವಿಕವಾಗಿಯೇ ಪಡೆದಿರುತ್ತದೆ.
ಸಂಸದೀಯ ಸಮಿತಿಯ ಶಿಫಾರಸುಗಳು ಈ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಒಂದು ಪ್ರಯತ್ನವಾಗಿದೆ. ಯಾವುದೋ ಒಂದು ಅಸಾಂವಿಧಾನಿಕ ಘಟನೆಯನ್ನು ವಿರೋಧಿಸಿ, ಸಂವಿಧಾನ ವಿರೋಧಿ ಆಡಳಿತ ನೀತಿಗಳನ್ನು ವಿರೋಧಿಸಿ ತಮಗೆ ನೀಡಲಾದ ಸಾಂಸ್ಕೃತಿಕ ಪ್ರಶಸ್ತಿಯನ್ನು ಹಿಂದಿರುಗಿಸುವುದೂ ಸಹ ಪ್ರಶಸ್ತಿ ಭಾಜನ ಸಾಹಿತಿಯ ಅಥವಾ ಸಾಂಸ್ಕೃತಿಕ ಚಿಂತಕರ ಸಾಂವಿಧಾನಿಕ ಹಕ್ಕು, ಅಲ್ಲವೇ ? ಪ್ರಶಸ್ತಿಗಳಿಗೆ ರಾಜಕೀಯ ಸಂಬಂಧ ಇರಕೂಡದು ಎಂದಾದರೆ ಪ್ರಶಸ್ತಿಯನ್ನು ವಿರೋಧಿಸುವ ಸಾತ್ವಿಕ ಪ್ರತಿರೋಧಕ್ಕೂ ರಾಜಕೀಯ ನಂಟನ್ನು ಬೆರೆಸಕೂಡದು ಅಲ್ಲವೇ ? ಪ್ರಶಸ್ತಿಗೆ ಅರ್ಹರಾದ ಅಥವಾ ಆಯ್ಕೆಯಾದ ಲೇಖಕರಿಂದ, ಸಾಹಿತಿಗಳಿಂದ “ಹಿಂದಿರುಗಿಸುವುದಿಲ್ಲ“ ಎಂದು ಪೂರ್ವಹೇಳಿಕೆಯ ಮುಚ್ಚಳಿಕೆ ಬರೆಸಿಕೊಂಡು ಪ್ರಶಸ್ತಿ ನೀಡುವುದು ರಾಜನಿಷ್ಠೆಯನ್ನು ಪ್ರತಿಪಾದಿಸಿದಂತೆ ಅಲ್ಲವೇ ? ಇದು ರಾಜಪ್ರಭುತ್ವದ ಕಾಲದಲ್ಲಿದ್ದ ಆಸ್ಥಾನ ಕವಿಗಳಿಗೆ ಅನ್ವಯಿಸಲಾಗುತ್ತಿದ್ದ ನಿಯಮ ಎನ್ನುವುದನ್ನು ನಾವು ಮರೆಯಕೂಡದು. ಚರಿತ್ರೆಯ ಆ ಕಾಲಘಟ್ಟಗಳಲ್ಲೂ ಸಹ ತಮ್ಮ ಸಾಹಿತ್ಯದಲ್ಲಿ ಸ್ವಂತಿಕೆಯನ್ನು ಮೆರೆದ ಅನೇಕಾನೇಕ ಸಾಹಿತ್ಯ ದಿಗ್ಗಜರನ್ನು ಭಾರತ ಪೋಷಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಂಸ್ಕೃತಿಕ-ಸಾಹಿತ್ಯಕ ಭಿನ್ನಮತವನ್ನು ವಿಮರ್ಶಾತ್ಮಕವಾಗಿ ನೋಡುವ, ಸಾಮಾಜಿಕವಾಗಿ ಚಿಕಿತ್ಸಕ ಸಾಧನದಂತೆ ನೋಡುವ ವ್ಯವಧಾನ ಇಲ್ಲವಾದರೆ ನಾವು ಮತ್ತೊಮ್ಮೆ ರಾಜಪ್ರಭುತ್ವದ ಮೌಲ್ಯಗಳಿಗೆ ಹಿಂದಿರುಗುತ್ತೇವೆ ಎಂಬ ಎಚ್ಚರಿಕೆ ನಮ್ಮಲ್ಲಿರಬೇಕು. ಇಲ್ಲವಾದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ನಶಿಸಿಹೋಗುತ್ತವೆ.

ನಿರಂಕುಶಾಧಿಕಾರವನ್ನು ಪೋಷಿಸುವ ನವ ಉದಾರವಾದ ಮತ್ತು ಬಂಡವಾಳಶಾಹಿ ವ್ಯವಸ್ಥೆ ಈ ಮೌಲ್ಯಗಳನ್ನು ನಿರಾಕರಿಸುತ್ತಲೇ ಸಾಂಸ್ಕೃತಿಕ-ಸಾಹಿತ್ಯಕ ವಲಯಗಳನ್ನು ವಾಣಿಜ್ಯೀಕರಣಗೊಳಿಸುತ್ತಿರುತ್ತದೆ. ಈ ಪ್ರಕ್ರಿಯೆಯಲ್ಲೇ ಅಕಾಡೆಮಿಗಳು ಮತ್ತು ಸಾಹಿತ್ಯಕ ಸಂಸ್ಥೆಗಳು ಆಳುವ ಪಕ್ಷಗಳ ಮತ್ತೊಂದು ಅಂಗವಾಗಿ ಕಾರ್ಯನಿರ್ವಹಿಸಲಾರಂಭಿಸುತ್ತವೆ. ಪ್ರಶಸ್ತಿಗಾಗಿ, ಸಾಂಸ್ಥಿಕ ಹುದ್ದೆಗಳಿಗಾಗಿ, ಸವಲತ್ತುಗಳಿಗಾಗಿ, ಅವಕಾಶಗಳಿಗಾಗಿ ದುಂಬಾಲು ಬೀಳುವ ಲಾಬಿಕೋರ ಪಡೆಗಳನ್ನೂ ಸೃಷ್ಟಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲೇ ಪ್ರಶಸ್ತಿಗೆ ಆಯ್ಕೆ ಮಾಡುವ ಕೃತಿಗಳೂ/ಸಾಹಿತಿಗಳೂ ಸಹ ಇದೇ ವಾಣಿಜ್ಯ ಪ್ರಕ್ರಿಯೆಯ ಜಗುಲಿಯಲ್ಲಿ ಸಾಲುಗಟ್ಟಿ ನಿಲ್ಲಬೇಕಾಗುತ್ತದೆ. ಸಂಸದೀಯ ವರದಿಯ ಶಿಫಾರಸ್ಸನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ಪ್ರಶಸ್ತಿ ಭಾಜನರಿಂದ ಸ್ವಾಮಿನಿಷ್ಠೆಯನ್ನು ಅಪೇಕ್ಷಿಸುವ ಊಳಿಗಮಾನ್ಯ ಧೋರಣೆ ಸ್ಪಷ್ಟವಾಗಿ ಗೋಚರಿಸುತ್ತದೆ. ಹಾಗಾಗಿಯೇ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಸಾಹಿತ್ಯಕ-ಸಾಂಸ್ಕೃತಿಕ ಪ್ರಶಸ್ತಿಗಳೂ ಸಹ ಮಾರುಕಟ್ಟೆ ಮೌಲ್ಯೀಕರಣಕ್ಕೊಳಗಾಗುತ್ತವೆ. ಪ್ರಶಸ್ತಿಗಾಗಿ ಲಾಬಿ ನಡೆಸುವವರಲ್ಲೂ ಈ ಪ್ರಜ್ಞೆ ಸದಾ ಜಾಗೃತಾವಸ್ಥೆಯಲ್ಲಿರಬೇಕಾದ್ದು ಅತ್ಯವಶ್ಯ.
ಕಲೆ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಪೋಷಿಸುವ ನೈತಿಕ ಜವಾಬ್ದಾರಿ ಇರುವ ಸರ್ಕಾರಗಳು ಈ ವಲಯಗಳನ್ನು ಸ್ವಾಯತ್ತ ಸಂಸ್ಥೆಗಳಂತೆ ಪರಿಗಣಿಸಿ ರಾಜಕೀಯ ಹಸ್ತಕ್ಷೇಪದಿಂದ ಹೊರತಾಗಿಸುವುದು ವರ್ತಮಾನದ ತುರ್ತು. ಹಾಗೆಯೇ ದೇಶದ ಸೃಜನಶೀಲ ಸಾಹಿತ್ಯ ಅಥವಾ ಕಲೆ ಪೋಷಿಸಲು ಬಯಸುವ ಒಂದು ಸ್ವಸ್ಥ ಸಮಾಜವನ್ನು ಸಾಕಾರಗೊಳಿಸುವ ಜವಾಬ್ದಾರಿಯೂ ಸರ್ಕಾರಗಳ ಮೇಲಿರುತ್ತದೆ. ಸ್ವಾಯತ್ತತೆಗಾಗಿ ಹೋರಾಡಬೇಕಾದ ಜವಾಬ್ದಾರಿ ಸಾಹಿತ್ಯ ವಲಯದ ಮೇಲಿರುವುದನ್ನೂ ಅಲ್ಲಗಳೆಯಲಾಗುವುದಿಲ್ಲ. ಈ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಸರ್ಕಾರಗಳ ವಿರುದ್ಧ ಅಥವಾ ದೇಶದ ಬಹುಸಾಂಸ್ಕೃತಿಕ ನೆಲೆಗಳನ್ನು ನಾಶಪಡಿಸುವ ಆಡಳಿತ ವ್ಯವಸ್ಥೆಯ ವಿರುದ್ಧ ತಮ್ಮ ಪ್ರತಿರೋಧ ವ್ಯಕ್ತಪಡಿಸುವ ಹಕ್ಕು ಪ್ರತಿಯೊಬ್ಬ ಸೃಜನಶೀಲ ಸಾಹಿತಿ-ಕಲಾವಿದರಿಗೂ ಇರುತ್ತದೆ. ಪ್ರಶಸ್ತಿ ಹಿಂದಿರುಗಿಸುವುದೂ ಇದೇ ಪ್ರತಿರೋಧದ ಒಂದು ಸಾತ್ವಿಕ ಆಯಾಮವಾಗಿರುತ್ತದೆ. ಈ ಸಾಹಿತ್ಯಕ ಅಭಿವ್ಯಕ್ತಿಯನ್ನೇ ಕಸಿದುಕೊಳ್ಳುವ ಪ್ರಯತ್ನಗಳನ್ನು ದೇಶದ ಸಮಸ್ತ ಸಾಹಿತ್ಯಕ-ಸಾಂಸ್ಕೃತಿಕ ವಲಯ ವಿರೋಧಿಸಬೇಕಿದೆ. ಈ ನಿಟ್ಟಿನಲ್ಲಿ ಸಂಸದೀಯ ಸಮಿತಿಯ ಶಿಫಾರಸುಗಳನ್ನು ಸಾರಾಸಗಟಾಗಿ ನಿರಾಕರಿಸಬೇಕಿದೆ. ಹಾಗೊಮ್ಮೆ ಇದೇ ನೀತಿ ಜಾರಿಯಾಗುವುದೇ ಆದರೆ ಸೃಜನಶೀಲತೆಗೆ, ಸಂವಿಧಾನಕ್ಕೆ ಬದ್ಧವಾಗಿರುವ ಸಾಹಿತಿ ಕಲಾವಿದರು, ಸಾಂಸ್ಕೃತಿಕ ಚಿಂತಕರು ಪ್ರಶಸ್ತಿಗಳನ್ನೇ ನಿರಾಕರಿಸುವ ದೃಢ ನಿಶ್ಚಯ ಮಾಡಬೇಕಾಗುತ್ತದೆ.
ಅಂತಿಮವಾಗಿ ಒಂದು ಸೃಜನಶೀಲ ಸಾಹಿತ್ಯ ಕೃತಿ-ಸಾಂಸ್ಕೃತಿಕ ಚಿಂತನೆಗೆ ಅತ್ಯುನ್ನತ ಪ್ರಶಸ್ತಿ ದೊರೆಯುವುದು ಅದು ತಳಮಟ್ಟದ ಶ್ರೀಸಾಮಾನ್ಯನ ಬದುಕಿನೊಳಗೆ ಹೊಕ್ಕು ಮನ್ವಂತರದ ದಿಕ್ಕನ್ನು ತೋರಿದಾಗ ಮಾತ್ರ. ಈ ಪ್ರಶಸ್ತಿ ಪಡೆಯಲು ಯಾವ ಪೂರ್ವ ಷರತ್ತುಗಳನ್ನೂ ಅನ್ವಯಿಸಲಾಗುವುದಿಲ್ಲ.



