ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀರ ಹದಗೆಟ್ಟಿದೆ ಅಂತಾನೇ ಹೇಳಬಹುದು. ಬೆಂಗಳೂರಿನಲ್ಲಿ ದಿನಕ್ಕೆ ನಾಲ್ಕಾರು ಕೊಲೆಗಳು, ಹಾಡಹಗಲೇ ದರೋಡೆಗಳು ನಡೆಯುತ್ತವೆ. ಆದರೆ ಈ ಎಲ್ಲಾ ಘಟನೆಗಳ ಬಗ್ಗೆ ಪೊಲೀಸರು ದೂರು ದಾಖಲು ಮಾಡಿಕೊಂಡು ತನಿಖೆ ಮಾಡುತ್ತಾರೆ. ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸುವ ಕೆಲಸವನ್ನೂ ಮಾಡ್ತಾರೆ. ಆರೋಪಿಗಳು ಸಿಗದಿದ್ದಾಗ ಬೇರೊಬ್ಬರನ್ನು ತಂದು ಕೇಸ್ನಲ್ಲಿ ಫಿಟ್ ಮಾಡಿ ಕೈ ತೊಳೆದುಕೊಳ್ಳುವುದೂ ಪೊಲೀಸ್ ಇಲಾಖೆಯಲ್ಲಿ ನಡೆಯುತ್ತದೆ ಎನ್ನುವ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತವೆ. ಆದರೆ ಇದೀಗ ಶಕ್ತಿ ಕೇಂದ್ರದಲ್ಲೇ ಕಾನೂನು ಅವ್ಯವಸ್ಥೆ ಅನಾವರಣ ಆಗಿದೆ. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸುವ ಕೆಲವೇ ನಿಮಿಷಗಳಿಗೂ ಮುನ್ನ ಸದನಕ್ಕೆ ಹಾಜರಾಗುವ ತಿಪ್ಪೆರುದ್ರ ಎಂಬುವರು 15 ನಿಮಿಷಗಳ ಕಾಲ ಸದನದಲ್ಲಿ ಕುಳಿತು ತಾತ್ಕಾಲಿಕ ಶಾಸಕರಾಗಿದ್ದಾರೆ.
15 ನಿಮಿಷ ಕಾಲ ಅನಧಿಕೃತವಾಗಿ ಶಾಸಕರಾದ ತಿಪ್ಪೆರುದ್ರ..!
ರಾಜ್ಯ ಬಜೆಟ್ ಮಂಡನೆ ದಿನವೇ ವಿಧಾನಸೌಧದಲ್ಲಿ ಭದ್ರತಾಲೋಪ ಆಗಿದೆ. ಶಾಸಕನೆಂದು ತಿಳಿಸಿ ವಿಧಾನಸಭೆಗೆ ಎಂಟ್ರಿ ಕೊಟ್ಟ ಚಿತ್ರದುರ್ಗದ ಮೊಳಕಾಲ್ಮೂರು ಮೂಲಕ ವಕೀಲ ತಿಪ್ಪೆರುದ್ರ, ಕೆಲವು ನಿಮಿಷಗಳ ಕಾಲ ಜೆಡಿಎಸ್ ಶಾಸಕಿ ಕರೆಮ್ಮ ಸೀಟ್ನಲ್ಲಿ ಕುಳಿತಿದ್ದಾರೆ. ಜೆಡಿಎಸ್ನ ಯುವ ಶಾಸಕ ಶರಣಗೌಡ ಕಂದಕೂರ, ಅನುಮಾನ ಬಂದು ಮಾರ್ಷಲ್ಗಳು, ಕಾರ್ಯದರ್ಶಿ ಅವರ ಗಮನಕ್ಕೆ ತರುವ ವೇಳೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಶುಭಾಷಯ ತಿಳಿಸಿ ಬಂದಿದ್ದಾರೆ ತಿಪ್ಪೆರುದ್ರ. ಯಾವುದೇ ಅನಾಹುತ ನಡೆದಿಲ್ಲ ಎನ್ನುವುದು ಸಂತಸದ ವಿಚಾರ. ಒಂದು ವೇಳೆ ಅನಾಹುತ ನಡೆದಿದ್ದರೆ ಯಾರು ಹೊಣೆಗಾರರು..? DGP ಅಲೋಕ್ ಮೋಹನ್ ಇದರ ಹೊಣೆ ಹೊತ್ತುಕೊಳ್ತಿದ್ರಾ..?
ಒಂದು ವೇಳೆ ವಿಧಾನಸಭೆಯಲ್ಲಿ ಬ್ಲಾಸ್ಟ್ ಆಗಿದ್ದಿದ್ದರೆ..!?
ಸದನದಲ್ಲಿ ಕಾನೂನು ಸುವ್ಯವಸ್ಥೆ ನೋಡಿಕೊಳ್ಳಲು ಮಾರ್ಷಲ್ಗಳು ಇರ್ತಾರೆ. ಇನ್ನು ವಿಧಾನಸೌಧ ಸೆಂಟ್ರಲ್ ಡಿಸಿಪಿ ನೇತೃತ್ವದಲ್ಲಿ ಭದ್ರತೆ ನೀಡಲಾಗುತ್ತದೆ. ಆದರೆ ವಿಧಾನಸಭೆಗೆ ಶಾಸಕರು ಎಂಟ್ರಿಯಾಗುವ ಪ್ರವೇಶ ದ್ವಾರದಲ್ಲೇ 75 ವರ್ಷದ ತಿಪ್ಪೆರುದ್ರ ಅವರು ಎಂಟ್ರಿಯಾಗಿದ್ದು, ನಾನು ಎಂಎಲ್ಎ ಬಿಡಯ್ಯ ಅಂತ ಗದರಿದ ಕೂಡಲೇ ಒಳಗೆ ಬಿಟ್ಟಿದ್ದಾರೆ. ದೇವದುರ್ಗದ ಶಾಸಕಿ ಕರೆಮ್ಮ ಕುಳಿತುಕೊಳ್ಳುವ ಆಸನದಲ್ಲಿ ಕುಳಿತುಕೊಂಡಿದ್ದಾರೆ. ಒಂದು ವೇಳೆ ಶಾಸಕ ಶರಣಗೌಡ ಕಂದಕೂರ ಪ್ರಶ್ನಿಸದೆ ಇದ್ದಿದ್ದರೆ ಬಜೆಟ್ ವೀಕ್ಷಣೆ ಪೂರ್ಣ ಆಗುತ್ತಿತ್ತು. ಒಂದು ವೇಳೆ ಇದೇ ರೀತಿ ಆಗಂತುಕರು, ಪ್ರವೇಶ ಮಾಡಿ ಸಿಎಂ, ಡಿಸಿಎಂ ಸೇರಿದಂತೆ ಯಾರಿಗಾದರೂ ಅನಾಹುತ ಆದ ಬಳಿಕ ಪೊಲೀಸರು ಕ್ರಮ ತೆಗೆದುಕೊಂಡರೆ ಪ್ರಯೋಜನ ಏನು..? ಈ ಬಗ್ಗೆ ಪೊಲೀಸ್ ಇಲಾಖೆ ಗಪ್ಚುಪ್ ಆಗಿರೋದ್ಯಾಕೆ..? ಇದ್ರಲ್ಲಿ ನಿರ್ಲಕ್ಷ್ಯ ಯಾರನ್ನು ಎನ್ನುವ ಪ್ರಶ್ನೆಯನ್ನು ಜನಸಾಮಾನ್ಯರು ಕೇಳುವಂತಾಗಿದೆ.
ಅಲೋಕ್ ಮೋಹನ್ ಭದ್ರತಾ ಲೋಪಕ್ಕೆ ಭಾದ್ಯಸ್ಥರು ಅಲ್ಲವೇ..?
Director General and Inspector General of Police ಆಗಿರುವ ಅಲೋಕ್ ಮೋಹನ್ ಅವರು ಕರ್ನಾಟಕ ಪೊಲೀಸ್ಗೆ ಬಾಸ್ ಎಂದರೆ ಸುಳ್ಳಲ್ಲ. ಶಕ್ತಿಸೌಧದಲ್ಲಿ ಭದ್ರತಾ ಲೋಪ ಆಗಿರುವುದು ಸಣ್ಣಪುಟ್ಟ ಪೊಲೀಸ್ ಕಾನ್ಸ್ಟೇಬಲ್ ಹೊಣೆ ಮಾಡುವುದು ಸಾಧ್ಯವೇ ಇಲ್ಲ. IPS ಅಧಿಕಾರಿಗಳೇ ಇದರ ಹೊಣೆ ಹೊತ್ತುಕೊಳ್ಳಬೇಕು. ಇಡೀ ಗೃಹ ಇಲಾಖೆಯನ್ನು ಮುನ್ನಡೆಸಲು ಬಾರದ ಅಲೋಕ್ ಮೋಹನ್ ವೈಫಲ್ಯ ಎದ್ದು ಕಾಣಿಸುತ್ತಿದೆ. ಗುಪ್ತಚರ ಇಲಾಖೆ ಕೂಡ ರಾಜ್ಯದಲ್ಲಿ ಕೆಲಸ ಮಾಡುತ್ತದೆ. ಓರ್ವ ಸಾಮಾನ್ಯ ವ್ಯಕ್ತಿ ವಿಧಾನಸೌಧಕ್ಕೆ ಎಂಟ್ರಿ ಆಗುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಅನಾಮಿಕ ವ್ಯಕ್ತಿ ಉದ್ದೇಶ ಯಾವುದೇ ಕೆಟ್ಟದ್ದು ಆಗಿರಲಿಲ್ಲ ಎನ್ನುವುದು ಸರಿ. ಒಂದು ವೇಳೆ ದುರುದ್ದೇಶದಿಂದ ವಿಧಾನಸಭೆ ಪ್ರವೇಶ ಮಾಡಿದ್ದರೆ ಪರಿಣಾಮ ಏನಾಗಿರುತ್ತಿತ್ತು..? ಈ ಪ್ರಶ್ನೆಗೆ ಉತ್ತರ ಕೊಡುವುದು ಯಾರು..?
ಕೃಷ್ಣಮಣಿ