ಶಾರುಖ್ ಖಾನ್ ಅಭಿನಯದ ‘ಜವಾನ್’ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳು ಮನೆಮಾಡಿವೆ. ಈ ವರ್ಷದ ಅತೀ ನಿರೀಕ್ಷಿತ ಮತ್ತು ದುಬಾರಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರವನ್ನು ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್ ಟೈನ್ ಮೆಂಟ್ ಸಂಸ್ಥೆ ನಿರ್ಮಿಸುತ್ತಿದ್ದು, ಜನಪ್ರಿಯ ನಿರ್ದೇಶಕರಾದ ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ.
ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ ಶಾರುಖ್ ಅಭಿನಯದ ‘ಪಠಾಣ್’ ಚಿತ್ರವು ಜಗತ್ತಿನಾದ್ಯಂತ 1000 ಕೋಟಿ ರೂ. ಗಳಿಕೆ ಮಾಡುವ ಮೂಲಕ ಬ್ಲಾಕ್ಬಸ್ಟರ್ ಎಂದನಿಸಿಕೊಂಡಿತ್ತು. ಈಗ ‘ಜವಾನ್’ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಾಗಿರುವುದರಿಂದ, ಈ ಚಿತ್ರದ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಮುಂದಾಗಿದ್ದು, ದೊಡ್ಡ ಮೊತ್ತ ಕೊಟ್ಟು ಹಕ್ಕುಗಳನ್ನು ಖರೀದಿಸಿರುವ ಸುದ್ದಿ ಬಂದಿದೆ.
‘ಜವಾನ್’ ಚಿತ್ರದ ಓಟಿಟಿ, ಸ್ಯಾಟಿಲೈಟ್ ಮತ್ತು ಸಂಗೀತ ಹಕ್ಕುಗಳಿಗೆ ಬೇರೆಬೇರೆ ಸಂಸ್ಥೆಗಳು ದೊಡ್ಡ ಆಫರ್ ನೀಡಿದ್ದು, ಭಾರೀ ಮೊತ್ತಕ್ಕೆ ಹಕ್ಕುಗಳನ್ನು ಕೊಂಡಿರುವ ಸುದ್ದಿ ಇದೆ. ಆದರೆ, ಚಿತ್ರತಂಡದವರು ಮಾತ್ರ ಇನ್ನೂ ಹಕ್ಕುಗಳು ಎಷ್ಟಕ್ಕೆ ಮಾರಾಟವಾಗಿವೆ ಎಂಬ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ.
ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಸೇರಿದಂತೆ ಹಲವು ಪ್ರಸಿದ್ಧ ಕಲಾವಿದರು ಅಭಿನಯಿಸಿದ್ದಾರೆ. ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕರಾದ ಅನಿರುದ್ಧ್ ರವಿಚಂದರ್, ಈ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.
‘ಜವಾನ್’ ಚಿತ್ರವು ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.