2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನ ಬಾಕಿ ಇದೆ. ಈಗಾಗಲೇ ಪಕ್ಷದ ನಾಯಕರು, ಮುಖಂಡರು ಆಯಾ ಪಕ್ಷಗಳ ಪರ ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಈ ಸಲ ಭಾರತೀಯ ಜನತಾ ಪಾರ್ಟಿ ಹಳೇ ಮೈಸೂರು ಭಾಗವನ್ನ ಟಾರ್ಗೆಟ್ ಮಾಡಿಕೊಂಡಿದೆ. ಈ ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕು ಅಂತ ಬಿಜೆಪಿ ನಿರ್ಧರಿಸಿದೆ. ಈ ಮೂಲಕ ಜೆಡಿಎಸ್ನ ಭದ್ರಕೋಟೆಯಾಗಿರೋ ಹಳೇ ಮೈಸೂರಿನ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಈಗಾಗಲೇ ಮೈಸೂರು ಭಾಗದಲ್ಲಿ ಬಿಜೆಪಿ ನಾಯಕರು ಭರ್ಜರಿ ಮತ ಪ್ರಚಾರ ಮಾಡ್ತಿದ್ದಾರೆ.
ಬಿಜೆಪಿಯವರ ಅಬ್ಬರದ ಪ್ರಚಾರದಿಂದ ಜೆಡಿಎಸ್ ಪಕ್ಷ ವಿಚಲಿತಗೊಂಡಿದ್ದು, ಸತಃ ಹೆಚ್ಡಿ ದೇವೇಗೌಡರೇ ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಹೌದು.. ಹಳೇ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ತಂದೆ ಹೆಚ್.ಡಿ.ದೇವೇಗೌಡರು ಸಾಥ್ ಕೊಟ್ಟಿದ್ದು, ಇಬ್ಬರೂ ಪ್ರತ್ಯೇಕ ಪ್ರಚಾರ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಸಂಬಂಧ ತಳಮಟ್ಟದ ಕಾರ್ಯಕರ್ತರು ಮತ್ತು ಮುಖಂಡರ ಜೊತೆ ನಿರಂತರ ಸಭೆ ಮಾಡಲು ನಿರ್ಧರಿಸಿದ್ದಾರೆ. ಈ ಮೂಲಕ ಮತ್ತೆ ಜೆಡಿಎಸ್ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಯೋಜನೆ ರೂಪಿಸುತ್ತಿದ್ದಾರೆ. ಹೀಗಾಗಿ ಇಂದಿನಿಂದ ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ನಾಯಕ ಹೆಚ್ ಡಿ ದೇವೇಗೌಡ, ಹೆಚ್.ಡಿ ಕುಮಾರಸ್ವಾಮಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.