2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದೆ. ಈಗಾಗಲೇ ಪಕ್ಷದ ಮುಖಂಡರು, ನಾಯಕರು ಅಬ್ಬರದ ಮತ ಪ್ರಚಾರ ಮಾಡುತ್ತಿದ್ದಾರೆ. ಇನ್ನೂ ಕೆಲ ನಾಯಕರು ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಶ್ರೀಮಂಜುನಾಥನ ದರ್ಶನ ಪಡೆಯಲು ಕುಟುಂಬ ಸಮೇತ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಡಿಕೆಶಿ ಕುಟುಂಬ ಖಾಸಗಿ ಹೆಲಿಕಾಪ್ಟರ್‌ನಲ್ಲಿ ಧರ್ಮಸ್ಥಳಕ್ಕೆ ಬಂದಿಳಿದ ವೇಳೆ ಚುನಾವಣಾ ಅಧಿಕಾರಿಗಳು ಹೆಲಿಕಾಪ್ಟರ್ ತಪಾಸಣೆಗೆ ಮುಂದಾಗಿದ್ದಾರೆ.
ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆಂದು ಡಿಕೆ ಶಿವಕುಮಾರ್ ಪತ್ನಿ, ಮಗಳು ಮತ್ತು ಅಳಿಯ, ಹಾಗೂ ಮಗ ಹೆಲಿಕಾಪ್ಟರ್‌ನಲ್ಲಿ ಬಂದಿಳಿದರು. ಹೆಲಿಪ್ಯಾಡಿನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಗ್ ಆಗುತ್ತಿದ್ದಂತೆ ಚುನಾವಣೆ ಅಧಿಕಾರಿಗಳು ತಪಾಸಣೆಗೆ ಮುಂದಾಗಿದ್ದಾರೆ. ಇದು ಖಾಸಗಿ ಹೆಲಿಕಾಪ್ಟರ್ ಆಗಿದ್ದು, ಇದನ್ನು ತಪಾಸಣೆ ಮಾಡಲು ಅವಕಾಶವಿಲ್ಲ ಅಂತ ಪೈಲೆಟ್ ರಾಮ್‌ದಾಸ್ ಹೇಳಿದ್ದಾರೆ. ಈ ವೇಳೆ ಚುನಾವಣಾ ಅಧಿಕಾರಿ ಹಾಗೂ ಪೈಲೆಟ್ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಚುನಾವಣಾ ಅಧಿಕಾರಿಗಳು ಹೆಲಿಕಾಪ್ಟರ್ ಮತ್ತು ಅವರ ಕಾರನ್ನೂ ಕೂಡ ತಪಾಸಣೆ ನಡೆಸಿದ್ದಾರೆ.