ರಾಜ್ಯ ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಕೆ ಮಾಡಲು ಇಂದೇ ಕೊನೆಯ ದಿನ. ಬಹುತೇಕ ಎಲ್ಲಾ ಪಕ್ಷಗಳಿಂದಲೂ ಭಾರೀ ಪೈಪೋಟಿ ನಡುವೆ ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಎನ್ನುವಂತೆ ಎಲ್ಲಾ ಪಕ್ಷದಿಂದಲೂ ಪಕ್ಷಾಂತರ ಪರ್ವ ನಡೆದಿದ್ದು, ಬಿಜೆಪಿ ಹಾಗು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರುವವರ ಸಂಖ್ಯೆ ಜೋರಾಗಿದೆ. ಮೊದಲಿಗೆ ಕೇವಲ 93 ಸ್ಥಾನಗಳ ಟಿಕೆಟ್ ಘೋಷಣೆ ಮಾಡಿ ಮೌನಕ್ಕೆ ಶರಣಾಗಿದ್ದ ಜೆಡಿಎಸ್ ಕಾಂಗ್ರೆಸ್, ಬಿಜೆಪಿ ಟಿಕೆಟ್ ಘೋಷಣೆ ಆಗ್ತಿದ್ದ ಹಾಗೆ ರಾಜಕೀಯ ಚಾಣಾಕ್ಷ್ಯತನದಿಂದ ಟಿಕೆಟ್ ಸಿಗದೆ ಬಂಡಾಯದ ಬಾವುಟ ಹಾರಿಸಲು ಸಜ್ಜಾಗಿದ್ದವರನ್ನು ಸೆಳೆದು ಟಿಕೆಟ್ ನೀಡುವ ಕೆಲಸ ಮಾಡಿದೆ. ಈ ಬಾರಿ ಜೆಡಿಎಸ್ ಕೂಡ ಉತ್ತಮ ಸ್ಥಾನಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದ್ದು, ಅತಂತ್ರ ವಿಧಾನಸಭೆ ನಿರೀಕ್ಷಿಸಲಾಗ್ತಿದೆ. ಇದೇ ಕಾರಣದಿಂದ ರವಿಕೃಷ್ಣಾರೆಡ್ಡಿ ಚುನಾವಣೆಗೆ ಸ್ಪರ್ಧೆ ಮಾಡ್ತಿಲ್ಲ.

ಅತಂತ್ರ ವಿಧಾನಸಭೆಗೂ ಚುನಾವಣೆಗೂ ಸಂಬಂಧವೇನು..?
ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷನಾಗಿರುವ ರವಿಕೃಷ್ಣಾರೆಡ್ಡಿ, ಈ ಬಾರಿ ರಾಜ್ಯಾದ್ಯಂತ ಸಂಚಾರ ಮಾಡಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿ ಗೆಲ್ಲಿಸುವ ಹೊಣೆಗಾರಿಕೆ ಹೊಂದಿದ್ದಾರೆ. ಒಂದು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದಾಗ ಒಂದೇ ಕ್ಷೇತ್ರದಲ್ಲಿ ಪ್ರಚಾರ ಮಾಡುವ ಇಕ್ಕಟ್ಟಿಗೆ ಸಿಲುಕುತ್ತಾರೆ. ತನ್ನ ಗೆಲುವು ಅಷ್ಟೇ ಮುಖ್ಯವಾಗುತ್ತದೆ. ಆದರೆ ತನ್ನನ್ನೇ ನಂಬಿ ಬಂದಿರುವ ಜನರನ್ನು ಗೆಲ್ಲಿಸಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಶಾಸಕರನ್ನಾಗಿ ಮಾಡುವ ಜವಾಬ್ದಾರಿ ಹೊಂದಿದ್ದಾರೆ. ರಾಜ್ಯಾದ್ಯಂತ ಸರಿಸುಮಾರು 190 ಕ್ಷೇತ್ರದಿಂದ ಕೆಆರ್‌ಎಸ್ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದು, ಈ ಬಾರಿ ಜನರು ಗೆಲ್ಲಿಸುವ ವಿಶ್ವಾಸದಲ್ಲಿದ್ದಾರೆ. ಆದರೆ ಅತಂತ್ರ ವಿಧಾನಸಭೆ ಎದುರಾಗುತ್ತದೆ. ಆಗ ಆಪರೇಷನ್ ಕಮಲ ಸೇರಿದಂತೆ ಕೆಲವು ಪಕ್ಷಗಳು ಬೇರೆ ಬೇರೆ ಶಾಸಕರನ್ನು ಸೆಳೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಉಪಚುನಾವಣೆಯಲ್ಲಿ ನಾನು ಚುನಾವಣೆಗೆ ಸ್ಪರ್ಧೆ ಮಾಡ್ತೇನೆ ಅಂತಾರೆ ರವಿಕೃಷ್ಣಾರೆಡ್ಡಿ.

ಮುಂದಿನ ಆರೇಳು ತಿಂಗಳಲ್ಲಿ ಉಪ ಚುನಾವಣೆ ಫಿಕ್ಸ್..!
ಸದಸ್ಯ ರಾಜಕೀಯ ಸ್ಥಿತಿಗತಿಗಳನ್ನು ನೋಡಿದಾಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದು ಅನ್ನೋ ಮಾತುಗಳಿವೆ. ಆದರೆ ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾಕಷ್ಟು ಜನರು ಅಬ್ಬರದ ಪ್ರಚಾರ ಮಾಡಲಿದ್ದು, ಮೇ 10 ರಂದು ನಡೆಯುವ ಮತದಾನದ ತನಕ, ಸಾಕಷ್ಟು ಏರುಪೇರುಗಳು ಆಗುವುದು ಬಹುತೇಕ ಖಚಿತ. ಯಾವ ಪಕ್ಷದ ಅಭ್ಯರ್ಥಿಗಳು ತಟಸ್ಥರಾಗುತ್ತಾರೆ..? ಯಾವ ಪಕ್ಷ ಬೇರೊಂದು ಪಕ್ಷಕ್ಕೆ ಬಂಬಲ ನೀಡಿ ಮತ್ತೊಬ್ಬರ ಸೋಲಿಗೆ ಕಾರಣವಾಗುತ್ತೆ ಅನ್ನೋದ್ರ ಮೇಲೂ ಚುನಾವಣಾ ಭವಿಷ್ಯ ನಿಂತಿರುತ್ತದೆ. ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಅಷ್ಟೇ ನಿಜವಾದ ರಾಜಕೀಯ ತೆರೆದುಕೊಳ್ಳುತ್ತದೆ. ಅಂತಿಮವಾಗಿ 10 ರಿಂದ 15 ಸ್ಥಾನಗಳು ಕಡಿಮೆ ಆದರೆ ಕುದುರೆ ವ್ಯಾಪಾರ ಶುರುವಾಗುತ್ತದೆ. ಮಾರುಕಟ್ಟೆಯಲ್ಲಿ ದನಗಳನ್ನು ವ್ಯಾಪಾರ ಮಾಡುವ ರೀತಿ ಶಾಸಕರು ಮಾರಾಟವಾಗುತ್ತಾರೆ ಎನ್ನುವುದು ಕರ್ನಾಟಕ ರಾಷ್ಟ್ರ ಸಮಿತಿ ನಿರೀಕ್ಷೆ.

ಉಪಚುನಾವಣೆಯಲ್ಲಿ ಸೋಲಿಸುವುದು ಕಷ್ಟ.. ಆದರೆ ಜನಸೆಳೆತ ಸುಲಭ..!
ಯಾವುದೇ ಒಂದು ಪಕ್ಷ ಆಪರೇಷನ್ ಎಂಎಲ್ಎ ಮಾಡಿದ ಬಳಿಕ ಸರ್ಕಾರ ರಚನೆ ಮಾಡುತ್ತೆ. ತದನಂತರ ಉಪಚುನಾವಣೆಯಲ್ಲಿ ರಾಜೀನಾಮೆ ಕೊಟ್ಟ ಶಾಸಕನನ್ನೇ ಅಭ್ಯರ್ಥಿ ಮಾಡಿ, ಇಡೀ ಸರ್ಕಾರವನ್ನೇ ಕ್ಷೇತ್ರದಲ್ಲಿ ಬೀಡು ಬಿಡುವಂತೆ ಮಾಡಿ ಚುನಾವಣೆ ಮಾಡುತ್ತಾರೆ. ಅದರಿಂದ ಆಪರೇಷನ್ ಎಂಎಲ್ಎ ಮಾಡಿದ ತನ್ನ ಅಭ್ಯರ್ಥಿಯನ್ನು ಸರ್ಕಾರ ಗೆಲ್ಲಿಸಿಕೊಳ್ಳುತ್ತದೆ. ಕೋಟಿ ಕೋಟಿ ಹಣವೂ ಕ್ಷೇತ್ರದಲ್ಲಿ ಸಂಚಲ ಸೃಷ್ಟಿಸುತ್ತದೆ. ಉಪಚುನಾವಣೆಯಲ್ಲಿ ಸರ್ಕಾರದ ಪರವಾಗಿ ಸ್ಪರ್ಧಿಸಿದ ಅಭ್ಯರ್ಥಿಗಳನ್ನು ಸೋಲಿಸುವುದು ಕಷ್ಟ. ಆದರೆ ರವಿಕೃಷ್ಣಾರೆಡ್ಡಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿಕೊಂಡು ಬರುತ್ತಿರುವ ಕಾರಣಕ್ಕೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದಾಗ ವಿರೋಧ ಪಕ್ಷಗಳು ರವಿಕೃಷ್ಣಾರೆಡ್ಡಿ ಅವರಿಗೆ ಬೆಂಬಲ ನೀಡಿದರೆ ಗೆಲುವುದು ಸುಲಭ ಅನ್ನೋದ್ರ ಜೊತೆಗೆ ಹಣಕ್ಕೆ ಮಾರಾಟವಾದ ಶಾಸಕರ ವಿರುದ್ಧ ಜನಾಭಿಪ್ರಾಯ ಮೂಡಿಸುವ ಮೂಲಕ ಜನರನ್ನ ಸೆಳೆಯುವುದು ಸರಳ ಅನ್ನೋದು ರವಿಕೃಷ್ಣಾರೆಡ್ಡಿ ಲೆಕ್ಕಾಚಾರ. ಅದೇನೇ ಇರಲಿ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿಶ್ಚಿತ, ಈ ಅವಧಿಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಶಾಸಕರು ಇರುತ್ತಾರೆ ಎನ್ನುವುದು ರವಿಕೃಷ್ಣಾರೆಡ್ಡಿ ಅಚಲ ವಿಶ್ವಾಸ. ಎಲ್ಲದಕ್ಕೂ ಉತ್ತರ ಮುಂದಿನ 20 ದಿನಗಳ ರಾಜಕಾರಣದ ಮೇಲೆ ನಿಶ್ಚಯ ಆಗಲಿದೆ.
ಕೃಷ್ಣಮಣಿ
ತಾಜಾ ಸುದ್ದಿ








