ಶಿಡ್ಲಘಟ್ಟದ ವಿಧಾನಸಭೆಯ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡರು ಇಂದು ತಮ್ಮ ಅಪಾರ ಬೆಂಬಲಿಗರು ಮತ್ತು ಕಾರ್ಯಕರ್ತರ ಜೊತೆಗೂಡಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ಬೆಳಗ್ಗೆ ಗೋಪೂಜೆ ಮಾಡಿ, ವೀರಾಪುರದ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದ ಅವರು, ನಂತರ ಸೇವಾಸೌಧಕ್ಕೆ ಆಗಮಿಸಿರು. ಸೇವಾಸೌಧದಿಂದ ತಾಲೂಕು ಕಚೇರಿವರೆಗೂ ಕಣ್ಣು ಹಾಯಿಸಿದಷ್ಟು ದೂರ ಜನವೋ ಜನ, ದಾರಿಯುದ್ದಕ್ಕೂ ಹಾರ ಹಾಕಿ, ಹೂಮಳೆಗರೆದು, ಜಯಘೋಷಗಳನ್ನು ಕೂಗಿ, ತಮಟೆ ಬಾರಿಸಿ, ಪಟಾಕಿ ಸಿಡಿಸಿ, ತಮ್ಮ ನೆಚ್ಚಿನ ನಾಯಕನ ನಾಮಪತ್ರ ಸಲ್ಲಿಕೆಗೆ ಸಾಕ್ಷಿಯಾದರು.

ಕೋಲಾರದ ಸಂಸದರಾದ ಎಸ್. ಮುನಿಸ್ವಾಮಿ ಮತ್ತು ಸೀಕಲ್ ರಾಮಚಂದ್ರ ಗೌಡ, ಎಂ ರಾಜಣ್ಣನವರಿಗೆ 50 ಅಡಿ ಗಾತ್ರದ ಭಾರಿ ಹೂವಿನಹಾರವನ್ನು ಹಾಕಿ ಸಂಭ್ರಮಿಸಿದರು. ಪ್ರತಿಯೊಬ್ಬರ ಕೈಯಲ್ಲೂ ಕೇಸರಿ ಬಾವುಟ, ಶಾಲು, ಕಣ್ಣು ಹಾಯಿಸಿದಲ್ಲೆಲ್ಲ ಪಕ್ಷದ ಬಾವುಟ. ಶಿಡ್ಲಘಟ್ಟದಲ್ಲಿ ಈ ಬಾರಿ ಕಮಲ ಅರಳುವ ಬಲವಾದ ಸೂಚನೆ ನೀಡಿದೆ. ಜನರನ್ನು ಉದ್ದೇಶಿಸಿ ಎಸ್. ಮುನಿಸ್ವಾಮಿ ಅವರು ಮಾತನಾಡಿ, ʻನೀವೆಲ್ಲ ಸೇರಿದ್ದು ಭಾರಿ ಸಂತಸ ತಂದಿದೆ ಎಂದರು.

ಬಳಿಕ ರಾಜಣ್ಣನವರು ಮಾತನಾಡಿ ನನಗೆ ಆಶೀರ್ವಾದ ಮಾಡಿದಂತೆ ರಾಮಚಂದ್ರ ಗೌಡರಿಗೂ ಆಶೀರ್ವಾದ ಮಾಡಿ, ಮತ ನೀಡುವುದರ ಮೂಲಕ ಅವರನ್ನು, ಪಕ್ಷವನ್ನು ಗೆಲ್ಲಿಸಿ ಎಂದರು. ಸೀಕಲ್ ಆನಂದಗೌಡರನ್ನು ಜನ ಭುಜದ ಮೇಲೆ ಹೊತ್ತುಕೊಂಡು, ಕುಣಿದು ಕುಪ್ಪಳಿಸಿರು. ಸುಡುವ ಬಿಸಿಲನ್ನೂ ಲೆಕ್ಕಿಸದೆ ಆನಂದಗೌಡರು ಎಲ್ಲರ ಜೊತೆಗೂಡಿ ಕುಣಿದು, ಆನಂದಿಸಿದರು. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕರಾದ ಶಿಡ್ಲಘಟ್ಟ ರತ್ನ ಎಂದೇ ಖ್ಯಾತರಾದ ಆರ್.ಚಂದ್ರು ಅವರು ಸಹ ಭಾಗವಹಿಸಿದ್ದರು. ಜೊತೆಗೆ ಮುಖಂಡರಾದ ನಂದೀಶ್, ಸುರೇಂದ್ರಗೌಡ, ರಮೇಶ್ ಬಾಯರ್, ಕನಕ ಪ್ರಸಾದ್, ಗೋಪಾಲಣ್ಣ, ಮಹಿಳಾ ಮುಖಂಡರಾದ ನರ್ಮದಾ ರೆಡ್ಡಿ, ತ್ರಿವೇಣಿ, ಮಾಲತಿ ರಾಣಿ, ಮುನಿರತ್ನಮ್ಮ, ರತ್ನಮ್ಮ ಮತ್ತು ಅಶ್ವಿನಿ ಎಲ್ಲರೂ ತಮ್ಮ ತಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರ ಜೊತೆ ಸೇರಿದ್ದರು.






