ಬೆಂಗಳೂರು : ಡಬಲ್ ಎಂಜಿನ್ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ನಮ್ಮ ರಾಜ್ಯದ ಹಾಲು ಉತ್ಪಾದಕರ ರೈತರ ಬೆನ್ನೆಲುಬು ಮುರಿಯಲು ಯತ್ನಿಸುತ್ತಿದ್ದಾರೆಂದು ನಾನು 2020ರಲ್ಲಿಯೇ ಹೇಳಿದ್ದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪುನರುಚ್ಛರಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಸರ್ಕಾರಕ್ಕೆ ಪತ್ರಗಳನ್ನು ಬರೆದು ಎಚ್ಚರಿಸಿದ್ದೇನೆ. ಸದನದಲ್ಲಿ ಪ್ರಸ್ತಾಪಿಸಿದ್ದೇನೆ. ನನ್ನ ಸಲಹೆ, ಎಚ್ಚರಿಕೆ ಮತ್ತು ವಿರೋಧವನ್ನು ಬಿಜೆಪಿ ಸರ್ಕಾರ ಪರಿಗಣಿಸುವ ಬದಲು ರೈತರನ್ನು ಶತ್ರುಗಳು ಎಂದು ಭಾವಿಸಿ ಅವರ ಆರ್ಥಿಕ ಚೈತನ್ಯವನ್ನು ಮುರಿದು ಹಾಕಲು ಸನ್ನದ್ಧವಾಗಿ ನಿಂತಿದೆ ಎಂದು ಆರೋಪಿಸಿದ್ದಾರೆ .
ಪ್ರಧಾನಿ ಮೋದಿ ಆಪ್ತ ಬಳಗದಲ್ಲಿರುವ ಅಂಬಾನಿಯ ಕಣ್ಣು ದೇಶದ ಹಾಲಿನ ಮೇಲೆ ಬಿದ್ದಿದೆ. ಈಗ ಬೇರೆ ದೇಶದಗಳಿಂದ ಏನೇ ಆಮದು ಮಾಡಿಕೊಂಡರೂ ಸಹ ಅಂಬಾನಿ ಮೂಲಕ ಆಮದು ಮಾಡಿಕೊಳ್ತಾರೆ. ಇದೇ ಕಾರಣಕ್ಕೆ ಅಮುಲ್ ಎಂಡಿಯಾಗಿದ್ದ ಆರ್ಎಸ್ ಸೋಧಿಯನ್ನು ರಿಲಯನ್ಸ್ ಕಂಪನಿಗೆ ಸೇರಿಸಿಕೊಳ್ಳಲಾಗಿದೆ. ಅಮಿತ್ ಶಾ ಕೆಲವು ದಿನಗಳ ಹಿಂದೆ ಹಾಲು ಮಹಾಮಂಡಲಗಳನ್ನು ಒಗ್ಗೂಡಿಸುತ್ತೇನೆಂದು ಹೇಳಿದ್ದರು. ಅದರ ಭಾಗವಾಗಿ ಈಗ ರಾಜ್ಯಕ್ಕೆ ಅಮುಲ್ ವಕ್ಕರಿಸಿಕೊಂಡಿದೆ. ಈಗ ನಂದಿನಿ ಆತಂಕ ಎದುರಿಸುತ್ತಿದೆ. ಮೋದಿ ಮತ್ತು ಅಮಿತ್ ಶಾ ಅವರು ನಮ್ಮ ನಂದಿನಿಯನ್ನಷ್ಟೆ ಅಲ್ಲ ಅಮುಲ್ ಅನ್ನೂ ಸಹ ಮುಳುಗಿಸಲು ಯೋಜನೆ ಹಾಕಿಕೊಂಡಿರುವಂತೆ ಕಾಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ .
ಇತ್ತೀಚೆಗೆ ಗುಜರಾತಿನಲ್ಲಿ ಮಾಲ್ದಾರಿ ಎಂಬ ಪಶುಪಾಲಕ ಸಮುದಾಯದವರು ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದರು. ಯಾವುದಾದರೂ ಹಸು ನಗರಗಳಲ್ಲಿ ಕಾಣಿಸಿಕೊಂಡರೆ ಅದರ ಮಾಲಿಕನಿಗೆ 5000 ದಿಂದ 50000 ರೂಪಾಯಿ ದಂಡ ಹಾಕುವ, ವರ್ಷಗಟ್ಟಲೆ ಜೈಲಿಗೆ ಅಟ್ಟುವ ಕಾನೂನುಗಳನ್ನು ಗುಜರಾತಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಕರ್ನಾಟಕದ ಬಿಜೆಪಿ ಸರ್ಕಾರದ ಹಾಗೆಯೆ ಅಲ್ಲಿಯೂ ಕೂಡ ಗೋಮಾಳಗಳು, ಹುಲ್ಲುಗಾವಲುಗಳನ್ನು ಖಾಸಗಿಯವರಿಗೆ ನೀಡಲಾಗುತ್ತಿದೆ.ದನಗಳು ಮೇಯಲು ಹುಲ್ಲು ಇಲ್ಲ. ಆಹಾರ ಹುಡುಕಿ ಬೀದಿಗಳಿಗೆ ಬಂದರೆ ಅವುಗಳ ಮಾಲಿಕರಿಗೆ ಜೈಲು ಮತ್ತು ದಂಡ ವಿಧಿಸಲಾಗುತ್ತಿದೆ. ಬಿಜೆಪಿಯ ಈ ಮನೆಹಾಳು ಕಾನೂನಿಗೆ ಬೇಸತ್ತು ಅಲ್ಲಿನ ಜನ ಹಸುಗಳನ್ನು ಸಾಕುವುದನ್ನೆ ನಿಲ್ಲಿಸುತ್ತಿದ್ದಾರೆ. ಹಾಗಾಗಿಯೆ ಇತ್ತೀಚೆಗೆ ಗುಜರಾತಿನ ಪಶುಪಾಲಕ ಸಮುದಾಯಗಳು ಮಹಾ ಪಂಚಾಯತ್ ಮಾಡಿ “ಬಿಜೆಪಿ ಎಂದರೆ ಹಸುಗಳ ವಿರೋಧಿ, ಬಿಜೆಪಿ ಎಂದರೆ ಪಶುಪಾಲಕ ವಿರೋಧಿ, ಬಿಜೆಪಿಯು ಹಸುಗಳ ಹೆಸರಲ್ಲಿ ರಾಜಕಾರಣ ಮಾಡುತ್ತಿದೆ, ಬಿಜೆಪಿಯು ನಂಬಿಕಾರ್ಹವಲ್ಲ” ಎಂದು ಘೋಷಣೆ ಕೂಗಿದ್ದರು. ತಾವು ಪಶು ಸಾಕಣೆಯ ಪರವಾಗಿದ್ದೇವೆಂದು ಹೇಳಿಕೊಳ್ಳುವ ಬಿಜೆಪಿ ಎಂದಿಗೂ ಪಶುಪಾಲಕರ ಪರವಾಗಿಲ್ಲ ಎಂದು ಗುಡುಗಿದ್ದಾರೆ.