ಚೆನ್ನೈ: ತಮಿಳುನಾಡು ವಿಧಾನಸಭಾ ಅಧಿವೇಶನದ ಮೊದಲ ದಿನವಾದ ಇಂದು ರಾಜ್ಯಪಾಲ ಆರ್ ಎನ್ ರವಿ ಭಾಷಣದ ನಂತರ ಗದ್ದಲ, ಕೋಲಾಹಲ ಉಂಟಾಯಿತು. ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಮಾತ್ರ ಕಡತಕ್ಕೆ ತೆಗೆದುಕೊಳ್ಳಬೇಕು, ರಾಜ್ಯಪಾಲರು ಸೇರಿಸಿರುವ ಉಳಿದ ಭಾಷಣವನ್ನು ತೆಗೆದುಹಾಕಬೇಕೆಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸ್ಪೀಕರ್ ಗೆ ಹೇಳಿದ ನಂತರ ಗವರ್ನರ್ ಆರ್ ಎನ್ ರವಿ ಸದನದಿಂದ ಹೊರ ನಡೆದರು.
ರಾಜ್ಯ ಸರ್ಕಾರ ಸಿದ್ದಪಡಿಸಿದ ರಾಜ್ಯಪಾಲರ ಮೂಲ ಭಾಷಣವನ್ನು ಮಾತ್ರ ಕಡತಕ್ಕೆ ಸೇರಿಸುವಂತೆ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ರಾಜ್ಯಪಾಲರ ಭಾಷಣಕ್ಕೆ ಎಂಕೆ ಸ್ಟಾಲಿನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಗವರ್ನರ್ ಸದನದಿಂದ ನಿರ್ಗಮಿಸಿದರು.
ಈ ಮಧ್ಯೆ, ತಮಿಳುನಾಡು ಹೆಸರು ಸರಿಯಾಗಿಲ್ಲ ಎಂಬ ರಾಜ್ಯಪಾಲರ ಹೇಳಿಕೆ ಬಗ್ಗೆಯೂ ಕಿಡಿಕಾರಿದ ಡಿಎಂಕೆ ಶಾಸಕರು, ಬಿಜೆಪಿ, ಆರ್ ಎಸ್ ಎಸ್ ಸಿದ್ದಾಂತಗಳನ್ನು ಹೇರಬೇಡಿ. ಇದು ನಾಗಲ್ಯಾಂಡ್ ಇಲ್ಲ, ಹೆಮ್ಮೆಯ ತಮಿಳುನಾಡು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.