ಕಾಡಾನೆ ದಾಳಿಗೆ ಮಹಿಳೆ ಮತಪಟ್ಟು ಇಬ್ಬರು ವ್ಯಕ್ತಿಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಯ ಚಿಕ್ಕಬೀಚನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಸ್ಥಳೀಯ ನಿವಾಸಿ ಸಿದ್ದೇಗೌಡರ ಪತ್ನಿ ಚಿಕ್ಕಮ್ಮ(60) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಬಿಳಿಕೆರೆ ಮೂಲದ ರವಿ ಹಾಗೂ ದೊಡ್ಡಬೀಚನಹಳ್ಳಿ ರಂಜು ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳುಗಳನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಇದರಲ್ಲಿ ಓರ್ವನ ಸ್ಥಿತಿ ಗಂಭಿರವಾಗಿದೆ ಎಂದು ವರದಿಯಾಗಿದೆ.
ಸಿದ್ದೇಗೌಡ ಹಾಗೂ ಚಿಕ್ಕಮ್ಮ ಅವರು ಹುರುಳಿ ಕಣದಲ್ಲಿದ್ದ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ಈ ವೇಳೆ ಸಿದ್ದೇಗೌಡ ಆನೆಯಿಂದ ತಪ್ಪಿಸಿಕೊಂಡರೆ, ಚಿಕ್ಕಮ್ಮ ಸ್ಥಳದಿಂದ ಓಡಲು ಸಾಧ್ಯವಾಗದೆ ಆನೆ ತುಳಿತಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ರವಿ ಹಾಗೂ ರಂಜು ಎಂಬುವವರ ಮೇಲೂ ಸಹ ಕಾಡಾನೆ ದಾಳಿ ನಡೆಸಿದೆ.
ವಿಷಯ ತಿಳಿಯುತ್ತಿದ್ದಂತೆ ಮೃತ ಕುಟುಂಬಸ್ಥರನ್ನು ಶಾಸಕ ಜಿ.ಟಿ.ದೇವೆಗೌಡ ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ ಮತ್ತು ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ. ಶೀಘ್ರವೇ ಕಾಡಾನೆಯನ್ನು ಸೆರೆಹಿಡಿಯುವಂತೆ ಅಧಿಕಾರಿಗಳಿಗೆ ಸೂಚಸಿದ್ದಾರೆ.