ಭಾರತದಲ್ಲಿ ಹಿಂದೂ ರಾಷ್ಟ್ರೀಯತೆ ಎಂಬುದು ರಾಜಕೀಯ ಶಕ್ತಿಯಾಗಿ ಪರಿವರ್ತನೆಯಾಗುತ್ತಿದ್ದು, ಭಾರತದ ಜಾತ್ಯಾತೀತ ಸ್ವರೂಪ ಬದಲಿಸುತ್ತಿದೆ. ಸದಾಕಾಲ ಹಿಂದೂ ಧರ್ಮ ಅಪಾಯದಲ್ಲಿದೆ, ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಬಿಂಬಿಸುವ ಮೂಲಕ ಹಿಂದೂತ್ವದ ಅಜೆಂಡಾವನ್ನು ದೇಶದ ಯುವಜನರ ತಲೆಗೆ ತುಂಬಿ ಬೇಳೆ ಬೇಯಿಸಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳ ಬಂಡವಾಳ ಬಯಲಾಗುವ ಸಮಯ ಬಂದಿದೆಯೇ ಎಂಬುದು ಇತ್ತೀಚಿನ ಬೆಳವಣಿಗೆಗಳು ಸೂಚಿಸುತ್ತಿವೆ.
ಹೌದು, ಅಂತಹ ಒಂದು ಘಟನೆಗಳು ಕರ್ನಾಟದಲ್ಲಿ ನಡೆಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಬಿಜೆಪಿ ಮೋರ್ಚಾದ ಮುಖಂಡ ಪ್ರವೀಣ್ ಹತ್ಯೆ ಘಟನೆಯಿಂದ ಹಿಂದುಗಳು ಮಾತ್ರವಲ್ಲ, ಸ್ವತಃ ಆರ್ ಎಸ್ ಎಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರೇ ತಮ್ಮ ನಾಯಕರ ವಿರುದ್ಧ ಆಕ್ರೋಶಗೊಂಡಿದ್ದಾರೆ. ಹಿಂದೂ ಸಂಘಟನೆಗಳ ಪ್ರತಿಭಟನೆಯ ಬಿಸಿ ನೋಡಿಯೇ ರಾಜ್ಯ ಸರಕಾರ ತಲ್ಲಣಿಸುವಂತಾಗಿದೆ.
ಯಾವುದೇ ವ್ಯಕ್ತಿ ಕೊಲೆಯಾದರೂ ಅದು ಕೊಲೆಯೇ ಆಗಿರುತ್ತದೆ. ಅದಕ್ಕೆ ಸೂಕ್ತ ತನಿಖೆ ಮಾಡಿ ಅಪರಾಧಿಗಳಿಗೆ ಶಿಕ್ಷೆ ನೀಡುತ್ತೇವೆ ಎಂದು ಹೇಳಬೇಕಿದ್ದ ರಾಜಕೀಯ ನಾಯಕರು, ಸಚಿವರು, ಹಿಂದೂ ಧರ್ಮದ ಯುವಕನ ಹತ್ಯೆ, ಮುಸ್ಲೀಂ ಕೋಮಿನವರೇ ಮಾಡಿದ್ದು, ಇಂತಹ ಸಂಘಟನೆಗಳೇ ಈ ಕೃತ್ಯದ ಹಿಂದಿದೆ, ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಹಳೆ ರೆಕಾರ್ಡ್ ಮತ್ತೆ ಪ್ಲೇ ಮಾಡುವ ಮೂಲಕ ಯುವಜನರನ್ನು ದಾರಿತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಈಗ ಜನ ಎಚ್ಚೆತ್ತುಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣಬಹುದು.
ಈ ಮೇಲಿನ ಎಲ್ಲಾ ರಾಜಕೀಯ ಲೆಕ್ಕಚಾರವನ್ನು ಬಿಜೆಪಿ ಕಾರ್ಯಕರ್ತರು ಉಲ್ಟಾ ಮಾಡಿದ್ದಾರೆ. ಹೌದು, ದಕ್ಷಿಣ ಕನ್ನಡ ಮತ್ತು ಕೇರಳ ಗಡಿಬಾಗದ ಊರಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ಅವರ ಹತ್ಯೆಯಾಗುತ್ತಿದ್ದಂತೆ ಬಿಜೆಪಿ ಕಾರ್ಯರ್ತರು ತಮ್ಮ ಪಕ್ಷದ ನಾಯಕರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ನಿಮ್ಮ ರಾಜಕೀಯ ದಾಳಕ್ಕೆ ಇನ್ನೆಷ್ಟು ತಲೆಗಳು ಬೇಕು? ನ್ಯಾಯ ಕೊಡಿಸಲು, ಕಾರ್ಯಕರ್ತರನ್ನು ರಕ್ಷಿಸಲು ಸಾದ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ತೊಲಗಿ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.
ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದಿದ್ದು, ಬಿಜೆಪಿ ಯುವ ಘಟಕದ ಹಲವಾರು ಮುಖಂಡರು ರಾಜೀನಾಮೆ ನೀಡುತ್ತಿದ್ದಾರೆ. ಬುಧವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೆಟ್ಟಾರು ಅವರ ಕುಟುಂಬವನ್ನು ಭೇಟಿ ಮಾಡಲು ತೆರಳುತ್ತಿದ್ದಾಗ ಪ್ರತಿಭಟನಾಕಾರರು ಅವರ ಕಾರಿಗೆ ಕಲ್ಲು ಎಸೆದು ದಾಳಿ ನಡೆಸಲು ತ್ನಿಸಿದ್ದೂ ಅಲ್ಲದೇ ಅವರ ಕಾರನ್ನೇ ಎತ್ತಿ ಅಲ್ಲಾಡಿಸಿ ಮುಂದೆ ಸರಕಾರವನ್ನು ಹೀಗೆ ಅಲ್ಲಾಡಿಸುತ್ತೇವೆ ನೋಡಿ ಎಂಬ ಸಂಕೇತ ಕೊಟ್ಟ ರೀತಿಯ ವಿಡಿಯೋ ವೈರಲ್ ಆಗಿಬಿಟ್ಟಿತು.
ಸಾಲು ಸಾಲು ಚುನಾವಣೆಯಿದ್ದು, ಚುನಾವಣಾ ವರ್ಷಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಬಿಜೆಪಿ ನಾಯಕರು ತಮ್ಮ ಕಾರ್ಯಕರ್ತರ ಈ ಪ್ರತಿಭಟನೆ ಮತ್ತು ವಿರೋಧವನ್ನು ಶಮನ ಮಾಡುವ ಪ್ರಯತ್ನದಲ್ಲಿದೆ. ಇದಕ್ಕೆ ಪುಷ್ಟಿಕೊಡುವಂತೆ, ಬುಧವಾರ ಮಧ್ಯರಾತ್ರಿ ಸುದ್ದಿಗೋಷ್ಠಿ ಕರೆದ ಸಿಎಂ ಬೊಮ್ಮಾಯಿ, ಪ್ರವೀಣ್ ಹತ್ಯೆ ನನ್ನ ನಿದ್ರೆಗೆಡಿಸಿದೆ, ಅವರ ಕೊಲೆ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಇಂತಹ ಸಂದರ್ಭದಲ್ಲಿ ತಮ್ಮ ಒಂದು ವರ್ಷದ ಪೂರ್ಣಗೊಂಡ ಜನೋತ್ಸವ ಸಾಧನ ಸಮಾವೇಶವನ್ನು ನಡೆಸಲು ಮನಸ್ಸಿಲ್ಲ. ಹಾಗಾಗಿ ಈ ಕಾರ್ಯಕ್ರಮವನ್ನು ರದ್ದುಗೊಳಿಸುವುದಾಗಿ ಘೋಷಿಸಿದರು. ಅಲ್ಲದೇ ಭಾರತೀಯ ಜನತಾ ಪಕ್ಷದ ಯುವ ಘಟಕದ ನಾಯಕನನ್ನು ಕೊಂದ ದುಷ್ಕರ್ಮಿಗಳ ಪತ್ತೆಗೆ ರಾಜ್ಯ ಸರ್ಕಾರ ಕಮಾಂಡೋ ತಂಡವನ್ನು ರಚಿಸಲಿದೆ ಎಂದು ಹೇಳಿ ತೇಪೆ ಹಚ್ಚುವ ಕೆಲಸ ಮಾಡಿದರು.
ನೆಟ್ಟಾರು ಹತ್ಯೆ ಪ್ರಕರಣದಲ್ಲಿ PFI & SDPI ಶಂಕೆ ಎಂದ ಗೃಹ ಸಚಿವ ಆರಗ:
ರಾಜ್ಯದಲ್ಲಿ ಶಾಂತಿ ಕದಡಲು ಮತ್ತು ಕೋಮು ಉದ್ವಿಗ್ನತೆ ಸೃಷ್ಟಿಸಲು ಪಿತೂರಿ ನಡೆಸುತ್ತಿರುವ ದೇಶವಿರೋಧಿ ಮತ್ತು ಭಯೋತ್ಪಾದಕ ಗುಂಪುಗಳನ್ನು ಕಮಾಂಡೋ ತಂಡ ಹಿಂಬಾಲಿಸಲಿದೆ ಎಂದು ಬೊಮ್ಮಾಯಿ ಹೇಳಿದರೆ. ಅತ್ತ ನೆಟ್ಟಾರು ಹತ್ಯೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಬಂಧವಿದೆ ಎಂದು ಶಂಕಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ, ಸಿಎಂ ಬೊಮ್ಮಾಯಿ ಹೇಳುತ್ತಿದ್ದಾರೆ.
PFI & SDPI ಬ್ಯಾನ್ ಸಾಧ್ಯವಿಲ್ಲ!
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವನ್ನು ನಿಷೇಧಿಸಲು ರಾಜ್ಯ ಸರ್ಕಾರ ಚಿಂತಿಸುತ್ತಿದೆ ಎಂದು ಹೇಳಿಕೆ ನೀಡುತ್ತಲೇ ಬರುತ್ತಿದೆ. ಆದರೆ, ಒಂದು ಘಟನೆಯನ್ನು ಆಧಾರವಾಗಿಟ್ಟುಕೊಂಡು ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಇತ್ತ ಸಿಎಂ ಬೊಮ್ಮಾಯಿ ಅವರು, ರಾಜ್ಯ ಸರ್ಕಾರಗಳು ಈ ಸಂಘಟನೆಗಳನ್ನು ಬ್ಯಾನ್ ಮಾಡುವ ಪ್ರಯತ್ನ ಮಾಡಿವೆ. ಆದರೆ ಕೋರ್ಟಿನಲ್ಲಿ ಹಿನ್ನಡೆಯಾಗಿದೆ. ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಬೇಕು. ಆದಷ್ಟು ಬೇಗ ಕೇಂದ್ರದಿಂದ ಆ ನಿರ್ಧಾರ ಪ್ರಕಟವಾಗುವ ನಿರೀಕ್ಷೆ ಇದೆ ಎಂದಿದ್ದಾರೆ. ಆದರೆ ಹಿಂದೆ ಬಿಎಸ್ ಯಡಿಯೂರಪ್ಪ ಸರಕಾರ ಇದ್ದಾಗಿನಿಂದಲೂ ನಿಷೇಧ ಮಾಡುತ್ತೇವೆ ಎಂದು ಹೇಳಿಕೆ ಕೊಡುತ್ತಾರೆ ಹೊರತು ಈ ನಿಟ್ಟಿನಲ್ಲಿ ಒಂದೇ ಒಂದು ಹೆಜ್ಜೆ ಇಡದೇ ಇರುವುದು ರಾಜಕೀಯ ವಾಸನೆ ಬಾರದೇ ಇರುವುದಿಲ್ಲ.
ಕರಾವಳಿ ಜಿಲ್ಲೆಗಳಲ್ಲಿ ಭದ್ರತಾ ವ್ಯವಸ್ಥೆ ಹೆಚ್ಚಳ !
ಕರಾವಳಿ ಜಿಲ್ಲೆಗಳಲ್ಲಿ ಉದ್ವಿಗ್ನತೆ ನೆಲೆಸಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ. ಪುತ್ತೂರು ತಾಲೂಕಿನಲ್ಲಿ ಬುಧವಾರ ಮತ್ತು ಗುರುವಾರದಂದು ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದನ್ನು ನಿಷೇಧಿಸಿ ಸೆಕ್ಷನ್ 144 ವಿಧಿಸಲಾಗಿದೆ. ಜುಲೈ 28 ರ ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಆರೋಪಿಗಳನ್ನು ಬಂಧಿಸಲು ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾಯ್ ತಿಳಿಸಿದ್ದಾರೆ.
ಹಿಂದೂ ಧರ್ಮ ಅಪಾಯದಲ್ಲಿದೆ ಎನ್ನುವುದು ಸುಳ್ಳು!
ಮಹಾರಾಷ್ಟ್ರದ ನಾಗ್ಪುರ ಮೂಲಕ ಆರ್ ಟಿಐ ಕಾರ್ಯಕರ್ತ ಮೊಹ್ನಿಸ್ ಜಬಲ್ಪುರ್ ಎಂಬವರು ‘ದೇಶದಲ್ಲಿ ಹಿಂದೂ ಧರ್ಮ ಅಪಾಯದಲ್ಲಿದೆ ಎನ್ನುವುದಕ್ಕೆ ಪುರಾವೆ ಕೊಡಿ’ ಎಂದು ಆಗಸ್ಟ್ 31 2022 ರಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಂದ್ರ ಗೃಹ ಇಲಾಖೆಗೆ ಅರ್ಜಿ ಸಲ್ಲಿಸಿ ಸವಾಲು ಎಸೆದಿದ್ದರು. ಇದಕ್ಕೆ ಉತ್ತರಿಸಿರುವ ಗೃಹ ಇಲಾಖೆ, ಹಿಂದೂ ಧರ್ಮ ಅಪಾಯದಲ್ಲಿ ಇದೆ ಎನ್ನುವುದು ಕಾಲ್ಪನಿಕವಾಗಿದ್ದು, ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಯಾ ನಿಖರ ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂದು ಹೇಳಲಾಗಿದೆ.
ಆದರೆ, ‘ಇದಾಗ್ಯೂ ಬಿಜೆಪಿ ಹಾಗೂ ಅದರ ಜತೆ ಗುರುತಿಸಿಕೊಂಡಿರುವವರು, ರಾಜಕೀಯ ಲಾಭಕ್ಕಾಗಿ ಹಿಂದೂಗಳು, ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರವೇ ಹಿಂದೂ ಧರ್ಮಕ್ಕೆ ಅಪಾಯ ಇಲ್ಲ ಎಂದು ಹೇಳಿದ ಬಳಿಕ ಈ ಯುವಕರು ತಮ್ಮ ಪ್ರಾಣವನ್ನು ಯಾರಿಗಾಗಿ ಪಣವಿಡುತ್ತಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆ.
ಹಿಂದೂ ಧರ್ಮ ಅಪಾಯದಲ್ಲಿದೆ, ಈ ದೇಶವೊಂದೇ ಹಿಂದೂ ರಾಷ್ಟ್ರವಾಗಿ ಉಳಿಸಿಕೊಳ್ಳಲು ಸಾಧ್ಯ ಎಂದೆಲ್ಲಾ ಬಿಂಬಿಸಿ ಜನರನ್ನು ಮತಬ್ಯಾಂಕ್ ಮಾಡಿಕೊಳ್ಳುವ ತಂತ್ರ ಎಂಬ ಸತ್ಯ ಜನರಿಗೆ ಮನವರಿಕೆ ಆಗಬೇಕಿದೆ.
ಧಾರ್ಮಿಕತೆಯಿಂದ ಉತ್ತೇಜನಗೊಂಡ ಹಿಂಸಾಚಾರ, ಸರ್ಕಾರದ ಮತಾಂತರ ನಿಷೇಧ ಕಾಯ್ದೆ, ಗೋ ರಕ್ಷಣೆ ಹೆಸರಿನಲ್ಲಿ ಸರ್ಕಾರೇತರ ಸಂಸ್ಥೆಗಳು ನಡೆಸುತ್ತಿರುವ ಹಿಂಸಾಚಾರ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದೌರ್ಜನ್ಯಗಳು ಭಾರತದ ಜಾತ್ಯಾತೀತತೆಯ ಸ್ವರೂಪಕ್ಕೆ ಧಕ್ಕೆ ಮಾಡುತ್ತಿರುವುದಂತು ಸತ್ಯ.