ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರದ ಗದ್ದುಗೆಯಲ್ಲಿ ಕುಳಿತುಕೊಳ್ಳಲು ಬಿಜೆಪಿಯವರು ನಾಲಾಯಕ ಆಗಿದ್ದೀರಿ. ಹಿಂದೂಗಳ ರಕ್ಷಣೆಗಾಗಿ ಪರ್ಯಾಯ ರಾಜಕೀಯ ಶಕ್ತಿ ಬೇಕಾಗಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಮುತ್ತಾಲಿಕ್, ಸುಳ್ಯದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆಯಾಗಿದ್ದು ಖಂಡನೀಯ. ಅಧಿಕಾರಕ್ಕೆ ಬರಲು ಹಿಂದೂಗಳು ಬೇಕು. ಆದರೆ ಅವರಿಗೆ ರಕ್ಷಣೆ ಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಎಲ್ಲಿದೆ. ಸುಳ್ಯದ ಪ್ರವೀಣ ಹತ್ಯೆಯಿಂದ ನೊಂದು ಬಿಜೆಪಿಯ ಹಲವಾರು ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಕೇವಲ ಅಧಿಕಾರಕ್ಕೆ ಒಡ್ಡಿಕೊಳ್ಳದೇ ಹಿಂದೂ ಧರ್ಮಕ್ಕೆ ಗೌರವ ಕೊಟ್ಟಿದ್ದು ಅಭಿನಂದನಾರ್ಹ. ಆದರೆ ಸರ್ಕಾರದ ಯಾವೊಬ್ಬ ಜನಪ್ರತಿನಿಧಿಗಳು ಹತ್ಯೆ ಕುರಿತು ಮಾತನಾಡಬೇಕಿತ್ತು. ಅವರು ರಾಜೀನಾಮೆ ನೀಡಬೇಕಿತ್ತು. ಆದರೆ ಅವರು ಭ್ರಷ್ಟಾಚಾರದಲ್ಲಿ ತಲ್ಲೀನರಾಗಿದ್ದಾರೆಂದು ಕೆಂಡಾಮಂಡಲರಾಗಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಈ ಹಿಂದೆ ತಮ್ಮ ಭಾಷಣದಲ್ಲಿ ಒಬ್ಬ ಬಿಜೆಪಿ ಕಾರ್ಯಕರ್ತನನ್ನು ಮುಟ್ಟಿ ನೋಡಲಿ ಎಂದು ಹೇಳಿದ್ದರು ಆದರೆ ಇಂದು ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ಹತ್ಯೆಯಾಗಿದೆ. ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ ಹುಬ್ಬಳ್ಳಿಯ ಈದ್ಗಾ ಮೈದಾನದ ವಿಚಾರದಲ್ಲಿ ಕಾಸರಗೋಡಿನ ಪಿ.ರಮೇಶ ಎಂಬಾತ ಧೈರ್ಯದಿಂದ ಹಿಂದೂವಾಗಿ ಹೋರಾಟ ಮಾಡಿದ್ದರು. ಆದರೆ ಇಂದು ಅವರ ಮೇಲೆಯೇ ಲಾಠಿ ಪ್ರಹಾರ ನಡೆಸಿರುವುದು ಖಂಡನೀಯ. ಬಿಜೆಪಿಗೆ ನಾಚಿಕೆ ಮಾನ ಮರ್ಯಾದೆ ಇದೆಯಾ ಎಂದು ಮುತಾಲಿಕ್ ಅಸಮಾಧಾನಗೊಂಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳು, ಗೃಹ ಸಚಿವರು ಯಾವುದೇ ಕೊಲೆಯಾದರೂ ಕಠಿಣ ಕ್ರಮ, ಉಗ್ರ ಕ್ರಮ, ಹೆಡೆಮುರಿ ಕಟ್ಟಲಾಗುವುದು ಎಂದು ಹೇಳಿಕೆ ಕೊಡುತ್ತಾರೆ. ಆದರೆ, ಈವರೆಗೆ ಯಾವೊಬ್ಬ ವ್ಯಕ್ತಿಗೂ ಶಿಕ್ಷೆ ಆಗಿಲ್ಲ. ಎಲ್ಲರೂ ಬೇಲ್ ಮೂಲಕ ಹೊರಗೆ ಬಂದು ಜೀವನ ನಡೆಸುತ್ತಿದ್ದಾರೆ. ಸರ್ಕಾರ ಟೇಪ್ ರೆಕಾರ್ಡ್ ಹಾಕುವುದನ್ನು ಬಿಟ್ಟು ಕೂಡಲೇ ಕ್ರಮ ತೆಗೆದುಕೊಳ್ಳಲಿ ಎಂದು ಒತ್ತಾಯಿಸಿದ್ದಾರೆ.