ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ನಂತರದ ಹೊಸ ಜಾಗತಿಕ ಮಿತ್ರತ್ವವನ್ನು ಗಮನಿಸುತ್ತಿರುವ ವಿದೇಶಾಂಗ ನೀತಿ ವೀಕ್ಷಕರು ಒಂದು ಕಡೆ US ಮತ್ತು ಯುರೋಪ್‌ಗೆ ಪ್ರಾಮುಖ್ಯತೆ ಕೊಡುವ ಇನ್ನೊಂದೆಡೆ ರಷ್ಯಾಗೂ ಪ್ರಾಮುಖ್ಯತೆ ಕೊಡುತ್ತಿರುವ ಭಾರತೀಯ ವಿದೇಶಾಂಗ ಮತ್ತು ಆರ್ಥಿಕ ನೀತಿಯನ್ನು ಅಚ್ಚರಿಯಿಂದ ನೋಡುತ್ತಿದ್ದಾರೆ. ವಿಶೇಷವಾಗಿ ಮೇ ತಿಂಗಳಲ್ಲಿ ಯುಎಸ್ ನೇತೃತ್ವದ ಇಂಡೋ-ಪೆಸಿಫಿಕ್ ಎಕನಾಮಿಕ್ ಫೋರಮ್(ಐಪಿಇಎಫ್)ನಲ್ಲಿ ಭಾರತ ಪಡೆದುಕೊಂಡ ಸದಸ್ಯತ್ವ ಮತ್ತು ಕಳೆದ ತಿಂಗಳು ಜರ್ಮನಿಯಲ್ಲಿ ನಡೆದ ಜಿ-7 ನಲ್ಲಿ ಪಾಲುದಾರ ರಾಷ್ಟ್ರವಾಗಿ ಭಾರತದ ಉಪಸ್ಥಿತಿಯು ರಷ್ಯಾದೊಂದಿಗೆ ದೇಶದ ಸಂಬಧಕ್ಕೆ ಹೋಲಿಸಿದರೆ ತೀರಾ ವ್ಯತಿರಿಕ್ತ ನಡೆ.
ಉಕ್ರೇನ್ ಆಕ್ರಮಣದ ಕುರಿತು ಭಾರತದ ನಿಲುವಿನ ಬಗ್ಗೆ ಯುರೋಪ್ ನಿರಾಶೆ ವ್ಯಕ್ತಪಡಿಸಿದ ಹೊತ್ತಲ್ಲೇ ನಡೆದ ಈ ಬೆಳವಣಿಗೆಯು ಭಾರತಕ್ಕೆ ಮಾತ್ರವಲ್ಲದೆ ಯುರೋಪಿಗೂ ಮಹತ್ವದ್ದಾಗಿದ್ದು ಚೀನಾದ ಆರ್ಥಿಕ ವಿಘಟನೆಯ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ.
ಈ ನಡುವೆ ಚೀನಾದ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತವು ಗಮನಹರಿಸುತ್ತಿದೆ ಎಂದು ಹೇಳಿಕೊಳ್ಳುತ್ತಾ ಬಂದಿದೆ. ಆದರೆ ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಸಾಂಕ್ರಾಮಿಕ ಪ್ರೇರಿತ ಅಡ್ಡಿಗಳ ಹೊರತಾಗಿ ಮತ್ತು ನಿರಂತರವಾಗಿ ನಡೆಯುತ್ತಿರುವ ಚೀನೀ ಗಡಿ ಆಕ್ರಮಣಗಳ ಹೊರತಾಗಿಯೂ, ಚೀನಾದ ಕಸ್ಟಮ್ಸ್ ಡೇಟಾ ಪ್ರಕಾರ 2022 ರ ಮೊದಲ ತ್ರೈಮಾಸಿಕದಲ್ಲಿ ದ್ವಿಪಕ್ಷೀಯ ವ್ಯಾಪಾರವು 15 ಪ್ರತಿಶತದಷ್ಟು ಹೆಚ್ಚಾಗಿದೆ . ಇದು ಭಾರತ-ಚೀನಾ ಸಮೀಕರಣದಲ್ಲಿ ಉದ್ದೇಶ ಮತ್ತು ಕ್ರಿಯೆಯ ನಡುವಿನ ಸ್ಪಷ್ಟವಾದ ವಿರೋಧಾಭಾಸವಾಗಿದೆ.
ಏರುತ್ತಿರುವ ಇಂಧನ ಬೆಲೆಗಳ ಭಾರದಿಂದ ತತ್ತರಿಸುತ್ತಿರುವ ಮತ್ತು ರಷ್ಯಾದಿಂದ ಉಂಟಾದ ಅಸ್ತಿತ್ವವಾದದ ಬೆದರಿಕೆಯ ವಿರುದ್ಧ ತನ್ನ ಮಿಲಿಟರಿ ಮತ್ತು ಭೌಗೋಳಿಕ ನೀತಿಗಳನ್ನು ಮರುರೂಪಿಸುತ್ತಿರುವ ಪಾಶ್ಚಿಮಾತ್ಯ ದೇಶಗಳಿಗಿಂತ ಭಿನ್ನವಾಗಿ ಭಾರತವು ಸಮತೋಲನದ ಮಾರ್ಗವನ್ನು ಆರಿಸಿಕೊಂಡಿದೆ. ಮಾಸ್ಕೋ ಮತ್ತು ಬೀಜಿಂಗ್ ಅನ್ನು ಇನ್ನಷ್ಟು ಹತ್ತಿರಕ್ಕೆ ತಳ್ಳುವುದು ಭಾರತಕ್ಕೆ ಖಂಡಿತವಾಗಿಯೂ ಒಳ್ಳೆಯದಲ್ಲ. ಹಾಗಾಗಿಯೇ ಭಾರತ ಇಂತಹ ನಿಲುವು ತೆಗೆದುಕೊಂಡಿದೆ.

ಪಶ್ಚಿಮದ ಸ್ವಾಭಾವಿಕ ಮಿತ್ರರಾಷ್ಟ್ರವಾಗಿದ್ದುಕೊಂಡೇ ತನ್ನ ಪ್ರಜಾಪ್ರಭುತ್ವದ ನೆಲೆಯನ್ನು ಮತ್ತು ಏಷ್ಯಾದಲ್ಲಿ ತಾನು ನಿರ್ವಹಿಸಲೇಬೇಕಿರುವ ಪ್ರಾದೇಶಿಕ ಪಾತ್ರವನ್ನು ನಿರ್ವಹಿಸಲು ಭಾರತವು ರಷ್ಯಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟದೊಂದಿಗಿನ ತನ್ನ ಐತಿಹಾಸಿಕ ಸಂಬಂಧವನ್ನು ಮುರಿಯಲಾಗುವುದಿಲ್ಲ ಎಂದು ವಾದಿಸಿದೆ. ರಷ್ಯಾದ ಮೇಲಿನ ರಕ್ಷಣಾ ಅವಲಂಬನೆಯು ಕುಸಿದಿದ್ದರೂ ಸಹ ಚೀನಾ-ಪಾಕಿಸ್ತಾನದ ನಡುವಿನ ಸಂಬಂಧದ ವಿರುದ್ಧವಾಗಿ ಭಾರತ ರಷ್ಯಾದಿಂದ ದೂರವಿರಲು ಸಾಧ್ಯವಿಲ್ಲ ಮತ್ತು ಹಾಗೆ ದೂರವಿರಲು ಬಯಸುವುದೂ ಇಲ್ಲ. ಪಶ್ಚಿಮದ ರಾಷ್ಟ್ರಗಳು ಭಾರತದೊಂದಿಗೆ ಸಂಬಂಧ ಬೆಳೆಸಲು ಬಯಸುತ್ತದೆಯಾದರೆ ಅದು ರಷ್ಯಾ ಮತ್ತು ಭಾರತದ ಈ ಸಂಬಂಧವನ್ನು ಒಪ್ಪಿಕೊಳ್ಳಲೇಬೇಕು.
ಯು.ಎಸ್ ಮತ್ತು ಜರ್ಮನಿಯಂತಹ ಪ್ರಮುಖ ಪಾಶ್ಚಾತ್ಯ ರಾಷ್ಟ್ರಗಳು ‘ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ನಿಯಮಗಳ ಆಧಾರದ ಮೇಲೆ’ ಮಿತ್ರರಾಷ್ಟ್ರಗಳನ್ನು ಆರಿಸಿಕೊಳ್ಳಬೇಕು ಅಂದಿದ್ದರೂ ಭಾರತದ ಚುನಾವಣಾ ಪ್ರಜಾಪ್ರಭುತ್ವ ಮತ್ತು ಅದರ ಉದಾರವಾದ ಸಂವಿಧಾನವು ಯುಎಸ್ ಮತ್ತು ಯುರೋಪ್‌ನ ನೀತಿಗೆ ಹೊಂದಾಣಿಕೆ ಆಗುವುದಿಲ್ಲ ಎಂಬುವುದು ಉಕ್ರೇನ್ ಆಕ್ರಮಣದ ನಂತರದ ನಂತರದ ಉಕ್ರೇನ್-ಯುರೋಪಿಯನ್ ರಾಜಕೀಯದಲ್ಲೂ ರುಜುವಾತಾಗಿದೆ.
ರಷ್ಯಾಗೆ ಪಶ್ಚಿಮದಿಂದ ಕಡಿದುಕೊಳ್ಳಲಿರುವ ಬಂಧವು ಹೊಸ ರೀತಿಯ ಸವಾಲುಗಳನ್ನು ಒಡ್ಡಲಿದೆ. ಹಾಗಾಗಿ ಬೀಜಿಂಗ್ ಮತ್ತು ಮಾಸ್ಕೋ ನಡುವಿನ ಆಳವಾದ ಸಹಭಾಗಿತ್ವವು ಮಾಸ್ಕೋದೊಂದಿಗಿನ ಭಾರತದ ಸಹಭಾಗಿತ್ವದ ಮೇಲೆ ಪ್ರಭಾವ ಬೀರಲಿದೆ. ಹಾಗಾಗಿಯೇ ರಷ್ಯಾ ಬಗೆಗಿನ ತನ್ನ ನಿಲುವಿನ ಬಗ್ಗೆ ಪರಿಶೀಲಿಸುವ ಮೊದಲು ಅದು ಎಷ್ಟು ದೂರ ಹೋಗಬೇಕು ಮತ್ತು ಯಾವ ಹಂತದಲ್ಲಿ ಪಾಶ್ಚಾತ್ಯ ಒತ್ತಡವು ಭಾರತವನ್ನು ಯಾವುದಾದರೂ ಒಂದು ಕಡೆಯನ್ನು ಆರಿಸಿಕೊಳ್ಳಲು ಒತ್ತಾಯಿಸುತ್ತದೆ ಎಂಬ ಪ್ರಶ್ನೆಯನ್ನು ತನ್ನನ್ನು ತಾನು ಕೇಳಿಕೊಳ್ಳಬೇಕಾಗುತ್ತದೆ.
ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವು ಅಸ್ತಿತ್ವವಾದದ ಬೆದರಿಕೆಯನ್ನು ಒಡ್ಡುತ್ತದೆಯಾದರೂ, ಯುರೋಪಿಯನ್ ಕಾರಿಡಾರ್ ನಲ್ಲಿ ಭಾರತಕ್ಕೆ ಸಂಬಂಧಿಸಿದಂತೆ ಚೀನಾ ಒಡ್ಡುತ್ತಿರುವ ಭೌಗೋಳಿಕ ಆಯಕಟ್ಟಿನ ಬೆದರಿಕೆಯ ಬಗೆಗೂ ತೀವ್ರ ಚರ್ಚೆ ನಡೆಯುತ್ತಿದೆ. ಹೀಗಾಗಿಯೇ IPEF ಸೇರಲು ಭಾರತವನ್ನು ಆಹ್ವಾನಿಸಲಾಗಿದೆ. ಇಂಡೋ ಪೆಸಿಫಿಕ್ ಪಾಲಿಸಿಗೆ ಭೌಗೋಳಿಕವಾಗಿ ಅರ್ಥಿಕ ಸಹಕಾರ ನೀಡಬಲ್ಲ ದಕ್ಷಿಣ ಏಷ್ಯಾದ ರಾಷ್ಟ್ರ ಭಾರತವೊಂದೇ ಎಂಬ ಮೂಲಭೂತ ಅರಿವು ಯುರೋಪಿಯನ್ ರಾಷ್ಟ್ರಗಳಿಗೂ ಇದೆ.

ಭಾರತವು ಸದ್ಯಕ್ಕೆ ಸಮತೋಲನದ ಮಾರ್ಗವನ್ನು ಆರಿಸಿಕೊಂಡಿದೆ. ಇಂದು ಭಾರತವು ತನ್ನ ನಿಲುವನ್ನು ಜಾಗತಿಕ ನಿಯಮಗಳ ಆಧಾರದ ಮೇಲೆ ತೆಗೆದುಕೊಳ್ಳುತ್ತಿದ್ದರೂ ದೇಶೀಯ ಮಾರುಕಟ್ಟೆಗಾಗಿ ಅಗ್ಗದ ರಷ್ಯನ್ ತೈಲವನ್ನು ಖರೀದಿಸಿದೆ. ತನ್ನ ದೇಶೀಯ ಆರ್ಥಿಕ ಸವಾಲು, ಭೌಗೋಳಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದಲ್ಲೂ ರಷ್ಯಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಆಯ್ಕೆಯಲ್ಲಿ ಒಂದು ಸ್ಪಷ್ಟ ನಿರ್ಧಾರ ಭಾರತ ತೆಗೆದುಕೊಳ್ಳಬೇಕಾಗುತ್ತದೆ.
ಮೂಲ: ಮಾಯಾ ಮೀರ್‌ಚಂದಾನಿ, ಎನ್‌ಡಿಟಿವಿ
(ಮಾಯಾ ಮೀರ್‌ಚಂದಾನಿ ಅಶೋಕ ವಿಶ್ವವಿದ್ಯಾನಿಲಯದಲ್ಲಿ ಮಾಧ್ಯಮ ಅಧ್ಯಯನಗಳು ಇಲಾಖೆಯ ಮುಖ್ಯಸ್ಥರು ಮತ್ತು ದೆಹಲಿ ಆಧಾರಿತ ಅಬ್ಸರ್ವರ್ ರಿಸರ್ವರ್ ಫೌಂಡೇಶನ್ನಲ್ಲಿ ಹಿರಿಯ ಸಂಶೋಧನಾ ಅಭ್ಯರ್ಥಿ)