ಬಿಜೆಪಿಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದ್ ಅವರ ಕುರಿತು ನೀಡಿದ ಹೇಳಿಕೆ ದೇಶಾದ್ಯಂತ ಹಲವು ಅನಾಹುತಗಳಿಗೆ ಕಾರಣವಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ, ರಾಜಸ್ಥಾನದಲ್ಲಿ ವ್ಯಕ್ತಿಯೊಬ್ಬನ ಹತ್ಯೆ ಮೊದಲಾದ ವಿಧ್ವಂಸಕಾರಿ ಘಟನೆಗಳು ನೂಪುರ್ ಶರ್ಮಾ ಹೇಳಿಕೆಗೆ ಸಂಬಂಧಿಸಿ ನಡೆದಿದೆ.
ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ದೇಶದ ವಿವಿಧ ಭಾಗದಲ್ಲಿ ದೂರು ದಾಖಲಾಗಿದೆ. ಅದರ ಆಧಾರದಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿ ನ್ಯಾಯಾಲಯದಡಿ ವರ್ಗಾಯಿಸುವಂತೆ ಶರ್ಮಾ ಸುಪ್ರೀಂ ಮೊರೆ ಹೋದಾಗ, ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ರಜಾಕಾಲದ ಪೀಠ ನೂಪುರ್ ಶರ್ಮಾಳಿಗೆ ಛೀಮಾರಿ ಹಾಕಿದೆ ಮಾತ್ರವಲ್ಲಿ. ದೇಶ ಹೊತ್ತಿ ಉರಿಯುವುದಕ್ಕೆ ಶರ್ಮಾ ಕಾರಣ ಎಂದು ಹೇಳಿದೆ.
“ಟಿವಿ ಚರ್ಚಾಗೋಷ್ಠಿಯಲ್ಲಿ ಆಕೆ ಪ್ರಚೋದನಕಾರಿ ಹೇಳಿಕೆ ನೀಡಿರುವುದನ್ನು ನಾವು ನೋಡಿದ್ದೇವೆ. ಆಕೆ ಅದನ್ನು ಹೇಳಿದ ರೀತಿ ಹಾಗೂ ಆನಂತರ ತಾನೊಬ್ಬ ನ್ಯಾಯವಾದಿ ಆಕೆ ಹೇಳಿಕೊಂಡಿರುವುದು ತೀರಾ ನಾಚಿಕೆಗೇಡು. ನೂಪುರ್ ಇಡೀ ದೇಶಕ್ಕೆ ಕ್ಷಮೆ ಕೇಳಬೇಕು” ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದರು.
ಇಷ್ಟೆಲ್ಲಾ ಆಗಿಯೂ ನೂಪುರ್ ಶರ್ಮಾರನ್ನು ಇದುವರೆಗೆ ಬಂಧಿಸಿಲ್ಲ. ವಿಚಿತ್ರವೆಂದರೆ, ಟ್ವಿಟರಿನಲ್ಲಿ ಫೇಕ್ ಅಕೌಂಟ್ ಒಂದು ಪತ್ರಕರ್ತ ಝುಬೈರ್ ವಿರುದ್ಧ ನೀಡಿದ ದೂರನ್ನು ಆಧರಿಸಿ ಈಗಾಗಲೇ ಪತ್ರಕರ್ತನನ್ನು ಬಂಧಿಸಲಾಗಿದೆ. ಅದಕ್ಕೂ ವಿಚಿತ್ರವೆಂದರೆ ದೂರು ನೀಡಿದ ವ್ಯಕ್ತಿ ಯಾರೆಂದೇ ಗೊತ್ತಿಲ್ಲದೆ, ದೆಹಲಿ ಪೊಲೀಸ್ ಈಗ ದೂರು ನೀಡಿದ ವ್ಯಕ್ತಿ ಯಾರೆಂದು ತಲಾಷ್ ಮಾಡುತ್ತಿದೆ.
1983ರಲ್ಲಿ ಬಂದ ಹಿಂದಿ ಚಲನಚಿತ್ರ “ಕಿಸಿ ನೆ ಕೆಹನಾ” ಎಂಬ ಚಿತ್ರದ ಒಂದು ದೃಶ್ಯವನ್ನು ಪೋಸ್ಟ್ ಮಾಡಿರುವುದನ್ನೇ ಹಿಂದೂ ಧರ್ಮದ ಅವಹೇಳನ ಎಂದು ಹೇಳಿ ಝುಬೈರ್ ಅವರನ್ನು ಬಂಧಿಸಲಾಗಿದೆ. (ಇಲ್ಲಿ ನೀಡಿರುವ ಚಿತ್ರಗಳನ್ನು ಗಮನಿಸಿ. ) ಚಿತ್ರದ ಈ ದೃಶ್ಯವು ಹಿಂದೂ ವಿರೋಧಿಯಾಗಿದ್ದರೆ 1983 ರಿಂದ ಇದು ಯಾರ ಕಣ್ಣಿಗೂ ಬಿದ್ದಿಲ್ಲವೇ>? ಎಂಬ ಪ್ರಶ್ನೆಯನ್ನು ನೆಟ್‌ಟಿಗರು ಎತ್ತುತ್ತಿದ್ದಾರೆ. ಇದರಲ್ಲೇ ಝುಬೈರ್ ವಿರುದ್ಧದ ಪ್ರಕರಣದ ಅಸಲಿಯತ್ತು ಪ್ರಶ್ನಾರ್ಹವಾಗಿದೆ.
ಇನ್ನು ದೆಹಲಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ರತನ್ ಲಾಲ್ ಅವರು ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ವಿಚಾರದಲ್ಲಿ ವ್ಯಂಗ್ಯವಾಗಿ ಫೇಸ್‌ಬುಕ್ ನಲ್ಲಿ ಪೋಸ್ಟ್ ಹಾಕಿದ್ದು, ಇದಕ್ಕೆ ಸಂಬಂಧಿಸಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ, ಅವರನ್ನು ಬಂಧಿಸಿಯೂ ಆಗಿದೆ. ದಲಿತ ಸಮುದಾಯಕ್ಕೆ ಸೇರಿದ ರತನ್ ಲಾಲ್ ಹಾಗೂ ಪತ್ರಕರ್ತ ಝುಬೈರ್ ಅವರನ್ನು ಬಂಧಿಸಲು ತೋರಿದ ಉತ್ಸಾಹ, ದೇಶಕ್ಕೆ ಬೆಂಕಿ ಬೀಳಲು ಏಕಮಾತ್ರ ಕಾರಣಕರ್ತೆ ಎಂದು ಸುಪ್ರೀಂ ಕೋರ್ಟ್ ಹೇಳಿರುವ ನೂಪುರ್ ಶರ್ಮಾರನ್ನು ಬಂಧಿಸಲು ಯಾಕೆ ತೋರಿಸಿಲ್ಲ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆಯೇ??