ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆ ‘ಮೇಕ್ ಇನ್ ಇಂಡಿಯಾ’ವನ್ನು ಘೋಷಿಸಿ ಎಂಟು ವರ್ಷಗಳಾಯಿತು. ಈ ಯೋಜನೆಯಡಿ ಬಹುರಾಷ್ಟ್ರೀಯ ಕಂಪನಿಗಳನ್ನು ಭಾರತದೆಡೆ ಆಕರ್ಷಿಸಲಾಗುವುದು ಎಂದು ಸರ್ಕಾರ ಹೇಳಿಕೊಂಡಿತ್ತು. ಆದರೆ ಎಂಟು ವರ್ಷಗಳ ನಂತರ, ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶದಿಂದ ಅನೇಕ ವಿದೇಶಿ ಕಂಪೆನಿಗಳು ಹೊರಹೋಗುವುದು ಕಂಡುಬರುತ್ತಿದೆ.
ಜರ್ಮನ್ ಚಿಲ್ಲರೆ ವ್ಯಾಪಾರಿ ಮೆಟ್ರೋ ಎಜಿ, ಸ್ವಿಸ್ ಕಟ್ಟಡ ಸಾಮಗ್ರಿಗಳ ಸಂಸ್ಥೆ ಹೋಲ್ಸಿಮ್, ಯುಎಸ್ ವಾಹನ ತಯಾರಕ ಫೋರ್ಡ್, ಯುಕೆ ಬ್ಯಾಂಕಿಂಗ್ ಪ್ರಮುಖ ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್, ಯುಎಸ್ ಬೈಕ್ ತಯಾರಕ ಹಾರ್ಲೆ-ಡೇವಿಡ್ಸನ್ ಮತ್ತು ಯುಎಸ್ ಬ್ಯಾಂಕಿಂಗ್ ಸಿಟಿಬ್ಯಾಂಕ್ ಸೇರಿದಂತೆ ಹಲವಾರು ದೊಡ್ಡ ಹೆಸರುಗಳು ತಮ್ಮ ಕಾರ್ಯಾಚರಣೆಯನ್ನು ಭಾರತದಲ್ಲಿ ನಿಲ್ಲಿಸಲು ನಿರ್ಧರಿಸಿವೆ.
ಕೋವಿಡ್ ನಂತರದ ಜಗತ್ತಿನಲ್ಲಿ, ಅನೇಕ MNC ಗಳು ತಮ್ಮ ಪೂರೈಕೆ ಸರಪಳಿಯನ್ನು ವೈವಿಧ್ಯಮಯಗೊಳಿಸಲು ನೋಡುತ್ತಿರುವಾಗ, ಚೀನಾಕ್ಕೆ ಪರ್ಯಾಯವಾಗಿ ಭಾರತವು ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ಇದು ಅತ್ಯಂತ ಆತಂಕಕಾರಿ ಪ್ರವೃತ್ತಿಯಾಗಿದೆ.
ಭಾರತದಲ್ಲಿ ನೋಂದಾಯಿತ ಕಚೇರಿಗಳು ಅಥವಾ ಅಂಗಸಂಸ್ಥೆಗಳನ್ನು ಹೊಂದಿರುವ ಒಟ್ಟು 2,783 ವಿದೇಶಿ ಕಂಪನಿಗಳು 2014 ಮತ್ತು ನವೆಂಬರ್ 2021 ರ ನಡುವೆ ದೇಶದಲ್ಲಿ ತಮ್ಮ ಕಾರ್ಯಾಚರಣೆಯನ್ನು ಮುಚ್ಚಿದವು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಕಳೆದ ವರ್ಷದ ಕೊನೆಯಲ್ಲಿ ಸಂಸತ್ತಿಗೆ ತಿಳಿಸಿದ್ದರು. ಪ್ರಸ್ತುತ ಭಾರತದಲ್ಲಿ ಕೇವಲ 12,458 ಸಕ್ರಿಯ ವಿದೇಶಿ ಅಂಗಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಿದರೆ ಅದು ಸಣ್ಣ ಅಂಕಿ ಅಂಶವೇನಲ್ಲ.
ಈ ಕಂಪೆನಿಗಳು ಭಾರತ ತೊರೆಯುವುದಕ್ಕೆ ತನ್ನದೇ ಆದ ನಿರ್ದಿಷ್ಟ ಕಾರಣಗಳಿದ್ದರೂ ಹೆಚ್ಚಿನ ಸಂಸ್ಥೆಗಳು ವಿಪರೀತ ಸುಂಕದ ಕಾರಣಕ್ಕಾಗಿ ದೇಶವನ್ನು ತೊರೆಯುತ್ತಿವೆ. ರೆಡ್ ಟೇಪ್, ಗೊಂದಲಮಯ ಭೂ ನೀತಿಗಳು, ಮೂಲಸೌಕರ್ಯ ಸಮಸ್ಯೆಗಳು ಸಹ ಈ ಇಂಪೆನಿಗಳು ಭಾರತ ಬಿಟ್ಟು ಹೋಗಲು ಇತರ ಕಾರಣಗಳಾಗಿವೆ.
“ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ವ್ಯಾಪಾರದ ಈ ಸುಧಾರಣೆಯನ್ನು ತರಲು, ಸರ್ಕಾರವು ನಿರಂತರವಾಗಿ ನಿಯಂತ್ರಕ ಬದಲಾವಣೆಗಳನ್ನು ಮಾಡುತ್ತಿದೆ. ಸಂಯೋಜನೆಯಿಂದ ಮೌಲ್ಯಮಾಪನದವರೆಗೆ, ಪ್ರಕ್ರಿಯೆಗಳನ್ನು ಸ್ವಯಂಚಾಲಿತಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಭಾರತದಲ್ಲಿ ನಿಯಂತ್ರಕ ಪ್ರಕ್ರಿಯೆಗಳನ್ನು ಸರಳಗೊಳಿಸುವ ಯೋಜನೆಗಳನ್ನು ಸರ್ಕಾರ ಮಾಡುತ್ತಿರುವಾಗ ಆಗುತ್ತಿರುವ ನಿರಂತರ ಬದಲಾವಣೆಗಳು ಅನಿಶ್ಚಿತತೆಗೆ ಕಾರಣವಾಗುತ್ತವೆ ” ಎನ್ನುತ್ತಾರೆ ನಂಗಿಯಾ ಆಂಡರ್ಸನ್ LLP ನ ಪಾಲುದಾರರಾಗಿರುವ ನೀರಜ್ ಅಗರ್ವಾಲಾ.

ಇಷ್ಟು ಮಾತ್ರವಲ್ಲದೆ ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ವರದಿಯ ಪ್ರಕಾರ ಭಾರತದ ವ್ಯಾಪಾರ ಕಾನೂನುಗಳಲ್ಲಿ 26,134 ಜೈಲು ಶಿಕ್ಷೆಯ ಷರತ್ತುಗಳಿವೆ. ಇದು ಭಾರತದಲ್ಲಿ ವ್ಯಾಪಾರ ಮಾಡುವಾಗ ಉದ್ಯಮಿಗಳು ಮತ್ತು ಸಂಸ್ಥೆಗಳು ಎದುರಿಸಲಿರುವ ಅಪಾಯಗಳನ್ನು ಎತ್ತಿ ತೋರಿಸುತ್ತದೆ.
“ಭಾರತವು ‘ನಿಯಂತ್ರಕ ಕೊಲೆಸ್ಟ್ರಾಲ್’ ನಿಂದ ಬಳಲುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಶಾಸನಗಳು, ನಿಯಮಗಳು ಮತ್ತು ನಿಬಂಧನೆಗಳು ಕಾಲಾನಂತರದಲ್ಲಿ ಆಲೋಚನೆಗಳು, ಸಂಘಟನೆ, ಹಣ, ಉದ್ಯಮಶೀಲತೆ ಮತ್ತು ಅವುಗಳ ಮೂಲಕ ಉದ್ಯೋಗಗಳು, ಸಂಪತ್ತು ಮತ್ತು ಜಿಡಿಪಿಯ ಸರಾಗ ಹರಿವಿಗೆ ಅಡೆತಡೆಗಳನ್ನು ಸೃಷ್ಟಿಸಿವೆ ” ಎನ್ನುತ್ತಾರೆ ORF ನ ಉಪಾಧ್ಯಕ್ಷರಾದ ಗೌತಮ್ ಚಿಕರ್ಮನೆ.
ಈ ಸಮಸ್ಯೆಗಳನ್ನು ಸರಿಪಡಿಸಲು ದೇಶವು ಕೆಲಸ ಮಾಡದಿದ್ದರೆ ಭಾರತವನ್ನು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಪ್ರಧಾನಿ ಮೋದಿಯವರ ಕನಸು ಗಂಭೀರ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ದೇಶದಲ್ಲಿ ಚಿಪ್ ಮತ್ತು ಪ್ರದರ್ಶನ ಕೈಗಾರಿಕೆಗಳನ್ನು ಸ್ಥಾಪಿಸಲು ಕಳೆದ ವರ್ಷ $10 ಶತಕೋಟಿ ಪ್ರೋತ್ಸಾಹಕ ಯೋಜನೆಯನ್ನು ಅನುಮೋದಿಸುವ ಮೂಲಕ ಸರ್ಕಾರವು ಅವರಿಗೆ ಕೆಂಪು ಕಾರ್ಪೆಟ್ ಅನ್ನು ಹಾಸಿದರೂ ವಿಶ್ವದ ಕೆಲವು ದೊಡ್ಡ ಚಿಪ್‌ಮೇಕರ್‌ಗಳು ಭಾರತಕ್ಕೆ ಬರಲಿಲ್ಲ.
“ಏಕೆಂದರೆ ಸೆಮಿಕಂಡಕ್ಟರ್ ಮೇಜರ್‌ಗಳಲ್ಲಿನ ಎಲ್ಲಾ ಉನ್ನತ ಸಂಸ್ಥೆಗಳೂ ಭಾರತೀಯರದೇ, ಅವರು 30 ವರ್ಷಗಳ ಹಿಂದೆ ದೇಶವನ್ನು ತೊರೆಯುವ ಅಗತ್ಯವೇನಿತ್ತು, ಅದು ಮೂಲಸೌಕರ್ಯಗಳ ಕೊರತೆಯಿಂದಾಗಿ ಅಲ್ಲವೇ? ಹಾಗಾಗಿ ಅವರು ಮುಂದಿನ 20 ವರ್ಷಗಳಲ್ಲಿ ಲಾಭದ ಸಂಭಾವ್ಯತೆಯನ್ನು ಕಂಡರೆ ಮಾತ್ರ ಹೂಡಿಕೆ ಮಾಡುತ್ತಾರೆ” ಎನ್ನುವ 3M ನ ಸಂಶೋಧನೆ ಮತ್ತು ಅಭಿವೃದ್ಧಿಯ ಹಿರಿಯ ಜನರಲ್ ಮ್ಯಾನೇಜರ್ ಅರೋಕಿಯರಾಜ್ ಜೇಸುದಾಸ್ “ಖಾಸಗಿ ಕಂಪನಿಯು ಹೂಡಿಕೆಗಳನ್ನು ಮಾಡಿದಾಗ, ಅದು ಲಾಭವನ್ನು ಬಯಸುತ್ತದೆ” ಎಂದೂ ಹೇಳುತ್ತಾರೆ.
“ಉನ್ನತ ದರ್ಜೆಯ ಕಂಪನಿಗಳು ಮಾತ್ರ ಹೂಡಿಕೆ ಮಾಡುತ್ತವೆ .ಒಂದು ಸುಧಾರಿತ ತಂತ್ರಜ್ಞಾನವನ್ನು ಹೊಂದಿರುವವರು ಹೆಚ್ಚು ಅಭಿವೃದ್ಧಿಪಡಿಸಲು ಬಯಸುವುದಿಲ್ಲ ಆದರೆ ಎರಡನೇ ದರ್ಜೆಯ ತಂತ್ರಜ್ಞಾನವನ್ನು ಭಾರತಕ್ಕೆ ವರ್ಗಾಯಿಸಲು ಬಯಸುತ್ತಾರೆ. ನಾವು ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಮತ್ತು ನಂತರ ಇತ್ತೀಚಿನ ತಂತ್ರಜ್ಞಾನವನ್ನು ಪಡೆದುಕೊಳ್ಳಬೇಕು. ಆದ್ದರಿಂದ, ಒಮ್ಮೆ ನಾವು ಅದನ್ನು ಪಡೆದುಕೊಂಡು ದೇಶೀಯ ಬೇಡಿಕೆಯನ್ನು ಪೂರೈಸಿದರೆ, ಭಾರತದಲ್ಲಿ ಸಂಭಾವ್ಯ ವ್ಯವಹಾರವನ್ನು ನೋಡಿದಾಗ ಹೂಡಿಕೆಗಳು ಹರಿದುಬರುತ್ತವೆ, ”ಎಂದು ಅವರು ಹೇಳಿದರು. “ಇದು ಸರ್ಕಾರವು ಎಷ್ಟು ಪ್ರೋತ್ಸಾಹಗಳನ್ನು ನೀಡುತ್ತದೆ ಎಂಬುದರ ಬಗ್ಗೆ ಮಾತ್ರವಲ್ಲ, ಭವಿಷ್ಯದಲ್ಲಿ ಅವರು ಎಷ್ಟು ಲಾಭವನ್ನು ಗಳಿಸಬಹುದು ಎಂಬುವುದರ ಮೇಲೂ ಅವಲಂಬಿತವಾಗಿದೆ” ಎನ್ನುತ್ತಾರೆ.
ತೆರಿಗೆಯ ಆಘಾತ
ಪ್ರಪಂಚದಾದ್ಯಂತದ ಕಂಪನಿಗಳು ಭಾರತವನ್ನು ಅದರ ವಿಶಾಲವಾದ ಜನಸಂಖ್ಯೆ ಮತ್ತು ಬೃಹತ್ ಮಾರುಕಟ್ಟೆ ಸಾಮರ್ಥ್ಯದ ಕಾರಣದಿಂದ ನಿರ್ಲಕ್ಷಿಸಲು ಕಷ್ಟಕರವೆಂದು ಭಾವಿಸುತ್ತದೆ, ಆದರೆ ಇಲ್ಲಿ ವ್ಯಾಪಾರ ಮಾಡುವುದೂ ಅನೇಕರಿಗೆ ಸುಲಭವಲ್ಲ.
“ಭಾರತವು ಬಹುಶಃ ವಿಶ್ವದ ಅತಿ ಹೆಚ್ಚು ತೆರಿಗೆ ವಿಧಿಸುವ ರಾಷ್ಟ್ರವಾಗಿದೆ” ಎಂದು ಎರಡು ವರ್ಷಗಳ ಹಿಂದೆ ನವದೆಹಲಿಯಲ್ಲಿ ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಈ ಬಗ್ಗೆ ಮಾತಾಡಿದ ಅಗರ್ವಾಲ್ “ಭಾರತದ ದೊಡ್ಡ ನ್ಯೂನತೆಯೆಂದರೆ ನಿಯಮಾವಳಿಗಳನ್ನು ಸರಳೀಕರಿಸುವಲ್ಲಿನ ಅಸಮರ್ಥತೆ. ಸಂಕೀರ್ಣ ನಿಯಮಗಳು ಗೊಂದಲವನ್ನು ಉಂಟುಮಾಡುತ್ತದೆ ಮತ್ತು ಹೂಡಿಕೆದಾರರಿಗೆ ಬೇಸರ ಹುಟ್ಟಿಸುತ್ತದೆ. ಆದರೆ ಅತಿಯಾದ, ಸರಳೀಕರಣವು ಶೋಷಣೆ ಮತ್ತು ತೆರಿಗೆ ಸೋರಿಕೆಗೆ ಕಾರಣವಾಗುತ್ತದೆ. ಭಾರತವು MNC ಗಳಿಗೆ ಆಕರ್ಷಕವಾಗಿರುವ ಆರೋಗ್ಯಕರ ಸಮತೋಲನವನ್ನು ಕಂಡುಕೊಳ್ಳುವ ಅಗತ್ಯವಿದೆ” ಎನ್ನುತ್ತಾರೆ.
ಹೆಚ್ಚಿನ MNC ಗಳನ್ನು ಆಕರ್ಷಿಸಲು ಭಾರತವು ಖಂಡಿತವಾಗಿಯೂ ಹೆಚ್ಚಿನದನ್ನು ಮಾಡಬೇಕಾಗುತ್ತದೆ.
“ಇದು ಒಂದು ದಿನದ ಪ್ರಕ್ರಿಯೆಯಲ್ಲ. ನಿಯಂತ್ರಣವನ್ನು ಕಡಿಮೆ ಮಾಡಿ. ಆಗಾಗ್ಗೆ ನಿಯಮಗಳನ್ನು ಬದಲಾಯಿಸುವುದು ಸರಿಯಲ್ಲ, retrospective ತೆರಿಗೆಗಳನ್ನು ತಪ್ಪಿಸಿ. ಅದೇ ರೀತಿ, ಅನೇಕ ಕಾನೂನುಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಅವುಗಳನ್ನು MNC ಗಳನ್ನು ಆಕರ್ಷಿಸುವಂತೆ ರೂಪಿಸುವ ಅಗತ್ಯವಿದೆ ” ಎನ್ನುತ್ತಾರೆ ಇಂಎಇಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ಪ್ರೊಫೆಸರ್ ತೋಮರ್.
ಕಳೆದ ತಿಂಗಳು ಆಮದು ತೆರಿಗೆಗಳನ್ನು ಕಡಿತಗೊಳಿಸಲು ಸರ್ಕಾರವನ್ನು ಮನವೊಲಿಸುವಲ್ಲಿ ವಿಫಲವಾದ ನಂತರ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುವ ಯೋಜನೆಯನ್ನು ತಡೆಹಿಡಿಯಲಾಗಿದೆ ಎಂದು ಟೆಸ್ಲಾ ಹೇಳಿದೆ. U.S. ವಾಹನ ತಯಾರಕರು ವಿದೇಶದಲ್ಲಿ ತಯಾರಿಸಿದ EV ಗಳನ್ನು ಮಾರಾಟ ಮಾಡುವ ಮೂಲಕ ಭಾರತದಲ್ಲಿ ತಮ್ಮ ಉತ್ಪನ್ನಕ್ಕಿರುವ ಬೇಡಿಕೆಯನ್ನು ಪರೀಕ್ಷಿಸಲು ಬಯಸಿದ್ದರು ಮತ್ತು ಕಡಿಮೆ ತೆರಿಗೆಯ ಸಹಕಾರ ಕೋರಿದರು. ಆದರೆ ಸರ್ಕಾರವು ಟೆಸ್ಲಾ ಮೊದಲು ಭಾರತದಲ್ಲಿ ತನ್ನ ವಾಹನಗಳನ್ನು ತಯಾರಿಸಬೇಕೆಂದು ಬಯಸಿತು.
“ಇವಿಗಳ ಮೇಲಿನ ಸುಂಕವನ್ನು ಪ್ರಸ್ತುತ ಇರುವ 100% ಅನ್ನು 25% ಗೆ ಕಡಿತಗೊಳಿಸುವುದರಿಂದ ದೇಶೀಯ ಉದ್ದಿಮೆದಾರರಿಗೆ ಅಪಾಯವುಂಟಾಗುವುದಿಲ್ಲ, ಆದರೆ ಹೂಡಿಕೆಯನ್ನು ಹೆಚ್ಚಿಸಲು ಮತ್ತು ಪರಿಸರ ವ್ಯವಸ್ಥೆಯ ಸೃಷ್ಟಿಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ” ಎನ್ನುತ್ತಾರೆ ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾದ ಎಮ್‌ಡಿ ಗುರುಪ್ರತಾಪ್ ಬೋಪರಾಯ್ .
ಆದರೆ ತೆರಿಗೆ ವಿನಾಯಿತಿ ನೀಡುವ ಪ್ರಸ್ತಾಪವನ್ನು ಕೆಲವರು ಒಪ್ಪುವುದಿಲ್ಲ. “ಯಾವುದೇ ಒಂದು ಕಂಪನಿಗೆ ವಿಶೇಷ ಪ್ರೋತ್ಸಾಹ ಅವಶ್ಯಕತೆಯಿದೆ ಎಂದು ನಾನು ನಂಬುವುದಿಲ್ಲ” ಎಂದು ವೈಟ್‌ಓಕ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್‌ನ ಹೂಡಿಕೆ ನಿರ್ದೇಶಕ ಮನೋಜ್ ಗಾರ್ಗ್ ‘ಡೆಕ್ಕನ್ ಹೆರಾಲ್ಡ್’ ಜೊತೆ ಮಾತಾಡುತ್ತಾ ಹೇಳಿದ್ದಾರೆ.

ಭಾರತದಲ್ಲಿ ಕಾರ್ಖಾನೆಯನ್ನು ಸ್ಥಾಪಿಸುತ್ತೀರಾ ಎಂದು ಕೇಳಿದಾಗ, ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಕಳೆದ ತಿಂಗಳು ಟ್ವೀಟ್ ಮಾಡಿದ್ದು ‘ಕಾರುಗಳನ್ನು ಮಾರಾಟ ಮಾಡಲು ಮತ್ತು ಸೇವೆ ಮಾಡಲು ನಮಗೆ ಅನುಮತಿಸದ ಯಾವುದೇ ಸ್ಥಳದಲ್ಲಿ’ ವಾಹನ ತಯಾರಕರು ಉತ್ಪಾದನಾ ಘಟಕವನ್ನು ಸ್ಥಾಪಿಸುವುದಿಲ್ಲ ಎಂದು ಹೇಳಿದ್ದಾರೆ. ಮಸ್ಕ್ ಅವರು ವ್ಯಾಪಾರ-ಸ್ನೇಹಿ ನೀತಿ ಮತ್ತು ನಿಕಲ್ ಉತ್ಪಾದನೆಗೆ ಹೆಸರುವಾಸಿಯಾಗಿರುವ ಇಂಡೋನೇಷ್ಯಾದಲ್ಲಿ ಸಂಭಾವ್ಯ ಅವಕಾಶಗಳನ್ನು ಹುಡುಕುತ್ತಿದ್ದಾರೆ. ಆದರೆ ವಿಪರ್ಯಾಸವೆಂದರೆ ಭಾರತದ ಹೊರಗೆ ಅವಕಾಶ ಹುಡುಕುತ್ತಿರುವವರು ಮಸ್ಕ್ ಮಾತ್ರವಲ್ಲ.
ಆಡಳಿತಾತ್ಮಕ ಮತ್ತು ನಿಯಂತ್ರಕ ಅಡಚಣೆಗಳು, ಅಸಮರ್ಪಕ ಮತ್ತು ದುಬಾರಿ ಸಾಲ, ದೀರ್ಘಕಾಲಿಕ ಭೂಸ್ವಾಧೀನ ಪ್ರಕ್ರಿಯೆ ಮತ್ತು ಅಸಮರ್ಪಕ ಮೂಲಸೌಕರ್ಯ ಸೌಲಭ್ಯಗಳು, ಹೆಚ್ಚಿನ ಲಾಜಿಸ್ಟಿಕ್ಸ್ ವೆಚ್ಚ ಮತ್ತು ದೊಡ್ಡ ಅಸಂಘಟಿತ ಉತ್ಪಾದನಾ ವಲಯಗಳು ಹೂಡಿಕೆಯನ್ನು ಆಕರ್ಷಿಸುವಲ್ಲಿನ ಪ್ರಮುಖ ಸವಾಲುಗಳಾಗಿವೆ ಎಂದು ಸ್ವತಃ 2021ರ ಸಂಸದೀಯ ಸ್ಥಾಯಿ ಸಮಿತಿಯ ವರದಿಯೇ ಹೇಳಿದೆ. “ಈ ಸವಾಲುಗಳನ್ನು ಜಯಿಸಲು ಸರ್ಕಾರವು ತಂದಿರುವ ನೀತಿ ಬದಲಾವಣೆಗಳು ಮತ್ತು ಪ್ರೋತ್ಸಾಹಕ ಯೋಜನೆಗಳು ಸ್ವಾಗತಾರ್ಹ ಕ್ರಮಗಳು ಮತ್ತು ಸರಿಯಾದ ದಿಕ್ಕಿನಲ್ಲಿವೆ. ಆದರೆ, ಯಶಸ್ಸು ಸುಧಾರಣೆಗಳ ಅನುಷ್ಠಾನದ ಮೇಲೆ ಅವಲಂಬಿತವಾಗಿದೆ” ಎಂದೂ ಸಮಿತಿಯು ಹೇಳಿದೆ.
ಎಲ್ಲವೂ ಸರ್ಕಾರದ ತಪ್ಪುಗಳಲ್ಲ
ಅನೇಕ MNCಗಳು, ವಿಶೇಷವಾಗಿ ಕಾರು ತಯಾರಕರು, ವಿಶ್ವದ ನಾಲ್ಕನೇ-ಅತಿದೊಡ್ಡ ವಾಹನ ಮಾರುಕಟ್ಟೆಯನ್ನು ಭೇದಿಸಲು ತಮ್ಮದೇ ಆದ ಅಸಮರ್ಥತೆಯಿಂದಾಗಿ ಭಾರತವನ್ನು ತೊರೆಯಬೇಕಾಗಿ ಬಂತು. ಭಾರತದ ಬಹುಪಾಲು ಜನರು ಕಡಿಮೆ ತಲಾ ಆದಾಯವನ್ನು ಹೊಂದಿರುವುದರಿಂದ ಭಾರತೀಯ ಮಾರುಕಟ್ಟೆಯು ಸಾಮಾನ್ಯವಾಗಿ ಬೆಲೆ ಸಂವೇದನಾಶೀಲವಾಗಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಸುಸ್ಥಿರ ಬೆಳವಣಿಗೆಗೆ ಬೆಲೆ, ಉತ್ಪನ್ನ ಮತ್ತು ಸ್ಥಾನೀಕರಣವು ಬಹಳ ಮುಖ್ಯವಾಗಿರುತ್ತದೆ. ಈ ಬಗ್ಗೆ ಮಾತನಾಡಿರುವ ಅಗರ್ವಾಲ್ “ವಿಫಲವಾಗಿರುವ MNC ಗಳಲ್ಲಿ ಖಂಡಿತವಾಗಿಯೂ ಯೋಜನೆ ಅಥವಾ ಭಾರತೀಯ ಮಾರುಕಟ್ಟೆಗಳ ತಿಳುವಳಿಕೆಯ ಕೊರತೆಯಿದೆ. ಸ್ಪರ್ಧೆಯು ತುಂಬಾ ಹೆಚ್ಚಾಗಿದೆ ಮತ್ತು ಹೆಚ್ಚಿನ ವಿದೇಶಿ ಕಂಪನಿಗಳು ಗ್ರಾಹಕರ ನಿರೀಕ್ಷೆಗಳನ್ನು ಪೂರೈಸಲು ಹೆಣಗಾಡುತ್ತವೆ. ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ನಿಷ್ಠೆಯನ್ನು ಬೆಳೆಸುವುದು ತುಂಬಾ ಕಷ್ಟಕರವಾಗಿದೆ, ವಿಶೇಷವಾಗಿ ಕಂಪನಿಗಳು ಉತ್ಪನ್ನ ಮಾರ್ಪಾಡುಗಳಿಗೆ ಬಲಿಯಾದಾಗ ಅಂದರೆ ಅಗ್ಗದ ಬದಲಿಗಳನ್ನು ತಯಾರಿಸುವಾಗ ” ಎನ್ನುತ್ತಾರೆ.
ಭಾರತದಲ್ಲಿ ಫೋರ್ಡ್ ಮತ್ತು ಹ್ಯುಂಡೈನಂತಹ ವಿದೇಶಿ ವಾಹನ ತಯಾರಕರು ಇಲ್ಲಿ ಯಶಸ್ಸನ್ನು ಕಾಣಲು ಅವರಲ್ಲಿದ್ದ ದೂರಗಾಮಿ ಯೋಜನೆಗಳೇ ಕಾರಣ ಎನ್ನುವ ಮನೋಜ್ ಗಾರ್ಗ್ ” ಹ್ಯುಂಡೈ ಒಂದು ಅಂತರಾಷ್ಟ್ರೀಯ ಕಂಪನಿಯಾಗಿದೆ. ಆದರೆ ಉತ್ಪನ್ನಗಳ ಶ್ರೇಣಿ ಮತ್ತು ಉತ್ಪನ್ನಗಳ ಸುತ್ತಲಿನ ಪರಿಸರ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸುವ ಕಾರಣದಿಂದಾಗಿ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ” ಎನ್ನುತ್ತಾರೆ.
ಈ ನಡುವೆ ಕೆಲವು MNCಗಳು ತಮ್ಮ ಸ್ವಂತ ಆದ್ಯತೆಗಳ ಬದಲಾವಣೆಯಿಂದಾಗಿ ಭಾರತವನ್ನು ತೊರೆದವು ಎಂಬುವುದನ್ನೂ ನಾವಿಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ.
ಉದಾಹರಣೆಗೆ, ಸಾಂಪ್ರದಾಯಿಕ ಸಿಮೆಂಟ್‌ನಿಂದ ದೂರ ಸರಿದು ಎನರ್ಜಿ ಇಫಿಷಿಯಂಟ್ ಕಟ್ಟಡಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹೋಲ್ಸಿಮ್ ತನ್ನ ಭಾರತೀಯ ಸಂಸ್ಥೆಯನ್ನು ಬಿಲಿಯನೇರ್ ಗೌತಮ್ ಅದಾನಿಗೆ ಮಾರಾಟ ಮಾಡಲು ನಿರ್ಧರಿಸಿತು. ಸಿಟಿಬ್ಯಾಂಕ್ ಜಾಗತಿಕವಾಗಿ ಚಿಲ್ಲರೆ ಬ್ಯಾಂಕಿಂಗ್‌ನಿಂದ ಹೊರಬರಲು ನಿರ್ಧರಿಸಿದ ಕಾರಣ ಭಾರತವನ್ನು ತೊರೆದಿದೆ ಎನ್ನುತ್ತಾರೆ ORFನ ಶ್ರೀನಾಥ್ ಶ್ರೀಧರನ್.
ಆದರೆ ಅವರೂ ಸಹ ಹೆಚ್ಚಿನ MNC ಗಳನ್ನು ಆಕರ್ಷಿಸಲು ದೇಶವು ಕೆಲಸ ಮಾಡಬಹುದಾದ ಎರಡು ಕ್ಷೇತ್ರಗಳೆಂದರೆ ನಿಯಮಗಳನ್ನು ಇನ್ನಷ್ಟು ಸರಳಗೊಳಿಸುವುದು ಮತ್ತು ಸಿಂಗಲ್-ವಿಂಡೋ ಕ್ಲಿಯರೆನ್ಸ್ ಅನ್ನು ಉದ್ಯಮಿಗಳಿಗೆ ನೀಡುವುದು ಎಂದೇ ಹೇಳುತ್ತಾರೆ. “ನಾವು ಪ್ರಸ್ತುತ ಅಂತಹ ನೀತಿಗಳನ್ನು ಹೊಂದಿದ್ದೇವೆಯೇ? ಇಲ್ಲ. ಇದ್ದರೆ ಅದು ಸಹಾಯವಾಗುತ್ತದೆಯೇ? ಹೌದು, ಯಾಕೆಂದರೆ ಅದು ಉದ್ಯಮಗಳ ಪರವಾಗಿರುತ್ತದೆ. ಆದರೆ ಒಬ್ಬ ಬುದ್ಧಿವಂತ ಉದ್ಯಮಿ ಸರ್ಕಾರದ ಇಂತಹ ಸಹಕಾರಕ್ಕಾಗಿ ಕಾಯುವುದಿಲ್ಲ, ಅವನು ಕಾನೂನಾತ್ಮಕ ನೆರವು ಪಡೆದುಕೊಳ್ಳುತ್ತಾನೆ” ಎಂದು ಶ್ರೀಧರನ್ ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.