ಚೆನ್ನೈನಲ್ಲಿ 25 ವರ್ಷದ ವಿಘ್ನೇಶ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಆಘಾತಕಾರಿ ಪ್ರಕರಣ ಪ್ರಮುಖ ತಿರುವು ಪಡೆದುಕೊಂಡಿದ್ದು, ವಿಘ್ನೇಶ್ ಕುಟುಂಬವನ್ನು ಸಮಾಧಾನಪಡಿಸಲು ಮತ್ತು ಪ್ರಕರಣವನ್ನು ಇತ್ಯರ್ಥಪಡಿಸುವ ಪ್ರಯತ್ನವಾಗಿ ಅವರ ಕುಟುಂಬಕ್ಕೆ 1 ಲಕ್ಷ ರೂಪಾಯಿ ನೀಡಿರುವುದು ಬೆಳಕಿಗೆ ಬಂದಿದೆ.
ವಿಘ್ನೇಶ್ ಅವರ ಉದ್ಯೋಗದಾತರಿಂದ ಕುಟುಂಬಕ್ಕೆ 1 ಲಕ್ಷ ರೂ ಪಾವತಿಸಲಾಗಿದೆ, ಆ ಹಣವನ್ನು ಅವರು ಪೊಲೀಸರಿಂದ ಪಡೆದಿದ್ದಾರೆ ಎಂದು ವಿಘ್ನೇಶ್ ಅವರ ಹಿರಿಯ ಸಹೋದರ ವಿನೋದ್ ಅವರು ಹೇಳಿದ್ದಾರೆ.
ನಗರದ ಮರೀನಾ ಬೀಚ್‌ನಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ವಿಘ್ನೇಶ್‌ನನ್ನು ಅ.18ರ ಸೋಮವಾರ ರಾತ್ರಿ ಜಿ5 ಸೆಕ್ರೆಟರಿಯೇಟ್ ಕಾಲೋನಿ ಠಾಣೆ ಪೊಲೀಸರು ಬಂಧಿಸಿದ್ದರು. ಠಾಣೆಯಲ್ಲಿ ವಿಘ್ನೇಶ್ ಮೂರ್ಛೆ ತಪ್ಪಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ ಎಂದು ಮರುದಿನ ಪೊಲೀಸರು ತಿಳಿಸಿದ್ದಾರೆ.
”ಪೊಲೀಸರು ನೇರವಾಗಿ ಹಣ ನೀಡಿಲ್ಲ. ವಿಘ್ನೇಶ್ ರಂಜಿತ್ ಎಂಬ ವ್ಯಕ್ತಿಯೊಂದಿಗೆ ತನ್ನ ಕುದುರೆ ಅಂಗಡಿಯಲ್ಲಿ ವರ್ಷಗಳ ಕಾಲ ಕೆಲಸ ಮಾಡಿದ್ದಾನೆ. ಅವರು ಕರೆ ಮಾಡಿ ನಿಮ್ಮ ಸಹೋದರ ನನ್ನೊಂದಿಗೆ ತುಂಬಾ ಕಷ್ಟಪಟ್ಟಿದ್ದಾರೆ ಎಂದು ಹೇಳಿದರು. ಇನ್ಸ್‌ಪೆಕ್ಟರ್‌ನಿಂದ ನನ್ನ ಕೈಲಾದಷ್ಟು ಹಣ ಪಡೆದು ನಿಮಗೆ ಕೊಡುತ್ತೇನೆ ಮತ್ತು ಶವಸಂಸ್ಕಾರಕ್ಕೆ ಬಳಸಿ ಎಂದು ಹೇಳಿದರು. ಬಳಿಕ ಅವರು ನಮಗೆ 1 ಲಕ್ಷ ರೂಪಾಯಿ ನೀಡಿದರು, ”ಎಂದು ವಿನೋದ್ ದಿ ನ್ಯೂಸ್ ಮಿನಿಟ್ ಗೆ ತಿಳಿಸಿದ್ದಾರೆ.
ಪೊಲೀಸರು ವಿಘ್ನೇಶ್ ಅವರ ಶವವನ್ನು ಕಿಲ್ಪಾಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರದಿಂದ ಕೃಷ್ಣಂಪೇಟೆ ಚಿತಾಗಾರಕ್ಕೆ ಕೊಂಡೊಯ್ದು ಶವವನ್ನು ಸುಡಬೇಕು ಎಂದು ಒತ್ತಾಯಿಸಿರುವುಅಗಿ ಕೂಡಾ ವಿನೋದ್ ಹೇಳಿದರು. ಆದರೆ, ಕುಟುಂಬದವರು ತಮ್ಮ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಶವವನ್ನು ಅಂತ್ಯಸಂಸ್ಕಾರ ಮಾಡುವ ನಿಲುವಿಗೆ ಅಂಟಿಕೊಂಡಿದ್ದಾರೆ. ಪೊಲೀಸರು ಪಟ್ಟುಬಿಡದ ಕಾರಣ, ಅವರು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಯಶವಂತರಾವ್ ಇಂಗರ್ಸೋಲ್ ಅವರನ್ನು ಸಂಪರ್ಕಿಸಿದರು ಮತ್ತು ಮ್ಯಾಜಿಸ್ಟ್ರೇಟ್ ಪೊಲೀಸರಿಗೆ ಮೃತರ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲು ಕುಟುಂಬಕ್ಕೆ ಅವಕಾಶ ನೀಡುವಂತೆ ಕೇಳಿದರು. ಬಳಿಕ ಕೃಷ್ಣಂಪೇಟೆಯ ರುದ್ರಭೂಮಿಯಲ್ಲಿ ವಿಘ್ನೇಶ್ ಶವವನ್ನು ಸಮಾಧಿ ಮಾಡಲಾಯಿತು.
“ಕೃಷ್ಣಂಪೇಟೆ ಚಿತಾಗಾರದಲ್ಲಿ ಭಾರೀ ಭದ್ರತೆ ಇತ್ತು, ಪೊಲೀಸ್ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದರು ಮತ್ತು ಹೆಚ್ಚಿನ ಜನರಿಗೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಲಿಲ್ಲ” ಎಂದು ಬಿಗಿ ಭದ್ರತೆಯ ನಡುವೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ವಿಘ್ನೇಶ್ ಅವರ ಸ್ನೇಹಿತ ಹೇಳಿದ್ದಾರೆ.
ವಿನೋದ್ ಮತ್ತು ವಿಘ್ನೇಶ್ ಅವರ ಇನ್ನೋರ್ವ ಸಹೋದರ ಸೂರ್ಯ ಇಬ್ಬರನ್ನೂ ಪೊಲೀಸ್ ವಾಹನದಲ್ಲಿ ಸ್ಮಶಾನಕ್ಕೆ ಕರೆತಂದರು ಮತ್ತು ಅಂತಿಮ ವಿಧಿವಿಧಾನಗಳನ್ನು ನಡೆಸಿದ ನಂತರ ಪೊಲೀಸ್ ಸಿಬ್ಬಂದಿ ಅವರನ್ನು ಸ್ಮಶಾನದಿಂದ ಹೊರಗೆ ಕಳುಹಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಘ್ನೇಶ್ ಅವರು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿರುವುದರಿಂದ, ಕಸ್ಟಡಿ ಸಾವಿನ ಪ್ರಕರಣವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆ, 1989 ರ ಅಡಿಯಲ್ಲಿ ತನಿಖೆ ನಡೆಸಬೇಕಾಗುತ್ತದೆ.
ಶವವನ್ನು ಹೂಳದೇ ಸುಡುವಂತೆ ಕುಟುಂಬವನ್ನು ಒತ್ತಡಪಡಿಸಲಾಗಿದೆ ಎಂದು ವಿಘ್ನೇಶ್ ಜೊತೆ ಬಂಧನಕ್ಕೊಳಗಾಗಿದ್ದ ಸುರೇಶ್ ಅವರ ತಂದೆ ಕರ್ಪಗಂ ದೃಢಪಡಿಸಿದ್ದಾರೆ.
“ವಿಘ್ನೇಶನ ಸಹೋದರರನ್ನು ಒಳಗೆ ಹಿಡಿದಿದ್ದರು. ಅವರ ಚಿಕ್ಕಮ್ಮನ ಮಗಳು ಮೃತದೇಹವನ್ನು ಕೇಳಿದರು, ಆದರೆ ಪೊಲೀಸರು ಅದನ್ನು ನೀಡಲಿಲ್ಲ. ಮೃತದೇಹವನ್ನು ನೇರವಾಗಿ ಚಿತಾಗಾರಕ್ಕೆ ತರುವುದಾಗಿ ತಿಳಿಸಿದ್ದಾರೆ. ಅವರು ದೇಹವನ್ನು ವಾಹನದಲ್ಲಿ ಹತ್ತಿಸಿದರು ಮತ್ತು ಸಹೋದರರನ್ನು ದೇಹದ ಬಳಿ ಕುಳಿತುಕೊಳ್ಳಲು ಹೇಳಲಾಯಿತು. ಹಾಗೂ ಶವವನ್ನು ಹೂಳದೆ, ಸುಡಬೇಕೆಂದು ಪೊಲೀಸರು ಹೇಳಿದರು ಎಂದು ಅವರು ಹೇಳಿದ್ದಾರೆ.
ಕರ್ಪಗಂ ಅವರ ಪ್ರಕಾರ, ಬುಧವಾರ ಸಂಜೆ ವಿಘ್ನೇಶ್ ಅವರ ಅಂತ್ಯಕ್ರಿಯೆಯ ನಂತರ, ನ್ಯಾಯಾಧೀಶರು 1 ಲಕ್ಷ ರೂ ಕುಟುಂಬಕ್ಕೆ ನೀಡುವಂತೆ ಕೇಳಿದ್ದಾರೆ ಮತ್ತು ಸಮಸ್ಯೆಯನ್ನು ಮುಂದುವರಿಸದಂತೆ ವಿನಂತಿಸಿದ್ದಾರೆ ಎಂದು ಪೊಲೀಸ್ ಸಿಬ್ಬಂದಿ ವಿನೋದ್ ಅವರ ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ. “ವಿಘ್ನೇಶ್ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ ಎಂಬ ಹೇಳಿಕೆಗೆ ಕುಟುಂಬ ಸದಸ್ಯರು ಒಪ್ಪಿಕೊಳ್ಳಬೇಕು ಎಂದು ಪೊಲೀಸರು ಬಯಸಿದ್ದರು. ಅವರು ಕುಟುಂಬಕ್ಕೆ 1 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದರು, ಅದನ್ನು ನಾಳೆ ಅಥವಾ ನಂತರದ ದಿನದೊಳಗೆ ಅವರಿಗೆ ತಲುಪಿಸಲಾಗುವುದು ತಿಳಿಸಲಾಗಿತ್ತು” ಎಂದು ಕರ್ಪಗಂ ಹೇಳಿದ್ದಾರೆ.
ಕಸ್ಟಡಿ ಸಾವಿನ ಪ್ರಕರಣವನ್ನು ಚೆನ್ನೈ ಪೊಲೀಸರು ನಿಭಾಯಿಸಿದ ರೀತಿಗೆ ಹಲವಾರು ಪ್ರಶ್ನೆಗಳು ಎದ್ದಿವೆ. ವಿಘ್ನೇಶ್ ಅವರ ಹಿರಿಯ ಸಹೋದರ ಮತ್ತು ಕಿರಿಯ ಸಹೋದರನನ್ನು ಹೊರತುಪಡಿಸಿ ಚೆನ್ನೈ ಪೊಲೀಸರು ಶವಾಗಾರದಲ್ಲಿ ಶವವನ್ನು ನೋಡಲು ಯಾರಿಗೂ ಅವಕಾಶ ನೀಡಲಿಲ್ಲ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ. ಮೃತದೇಹವನ್ನು ನೋಡಲು ಅವರ ಸಂಬಂಧಿಕರು ಅಥವಾ ಸ್ನೇಹಿತರಿಗೆ ಅವರು ಅವಕಾಶ ನೀಡಲಿಲ್ಲ ಎಂದು ವಿಘ್ನೇಶ್ ಸಹೋದರಿ ಹೇಳಿದರು. ಪೊಲೀಸರು ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲು ನಿರಾಕರಿಸಿದರು ಮತ್ತು ಮರಣೋತ್ತರ ಪರೀಕ್ಷೆಯ ನಂತರ ಶವಾಗಾರದಿಂದ ನೇರವಾಗಿ ಸ್ಮಶಾನಕ್ಕೆ ಕೊಂಡೊಯ್ದರು ಎಂದು ವರದಿಯಾಗಿದೆ. .
ಯಾರಿಗೂ ಹೀಗಾಗಬಾರದು ಎಂದು ಮುಖ್ಯಮಂತ್ರಿಗಳಿಗೆ ಹೇಳಲು ಬಯಸುತ್ತೇನೆ. ಮಾನವೀಯತೆ ಇಲ್ಲವೇ? ನಮ್ಮಂತಹ ಬಡವರಿಗೆ ಹೇಗೆ ಹೊಡೆಯುತ್ತಾರೆ ನೋಡಿ. ತಪ್ಪು ಮಾಡಿದರೆ ಸಾವಿರ ಶಿಕ್ಷೆ ಕೊಡಿ, ಹೊಡೆದು ಸಾಯಿಸುವುದು ಹೇಗೆ? ನೀವು ಡೆಪ್ಯೂಟಿ ಕಮಿಷನರ್ ಅಥವಾ ಕಮಿಷನರ್ ಗೆ ಹೀಗೆ ಹೊಡೆಯುತ್ತೀರಾ? ನಾವು ಬಲಿಷ್ಟ ಜನರಾಗಿದ್ದರೆ, ನಾವು ದೊಡ್ಡ ದೊಂಬಿಯನ್ನು ಸೃಷ್ಟಿಸಬಹುದಿತ್ತು. ನಮ್ಮಲ್ಲಿ ನಾಲ್ವರನ್ನು ವಿವಿಧ ಮೂಲೆಗಳಲ್ಲಿ ಇರಿಸಲಾಗಿತ್ತು. ನಾಲ್ವರು ಸಬ್ ಇನ್ಸ್‌ಪೆಕ್ಟರ್‌ಗಳು ನಮ್ಮ ಜೊತೆಯಲ್ಲಿದ್ದರು. ನಮಗೆ ಯಾರೊಂದಿಗೂ ಮಾತನಾಡಲು ಅವಕಾಶವಿರಲಿಲ್ಲ, ಒಬ್ಬರಿಗೊಬ್ಬರು ಕರೆಗಳನ್ನು ಮಾಡಲು ನಮಗೆ ಅವಕಾಶವಿರಲಿಲ್ಲ. ನಿಮ್ಮೊಂದಿಗೆ ಮಾತನಾಡಲು ನಮಗೂ ಅವಕಾಶವಿರಲಿಲ್ಲ. ನಮ್ಮ ಪರವಾಗಿ ಮಾತನಾಡಲು ಯಾರೂ ಇಲ್ಲ ಎಂದು ವಿನೋದ್ ಹೇಳಿದ್ದಾರೆ.
ವಿಘ್ನೇಶ್ ಅವರ ಕುಟುಂಬ ಸದಸ್ಯರನ್ನು ಪತ್ತೆಹಚ್ಚಲು ದಿ ನ್ಯೂಸ್ ಮಿನಿಟ್ ತಂಡ ಪಟ್ಟಣಪಕ್ಕಂ, ನಡುಕುಪ್ಪಂ, ಮಟ್ಟನ್ ಕುಪ್ಪಂಗೆ ಭೇಟಿ ನೀಡಿತು. ಅಚ್ಚರಿಯ ಸಂಗತಿಯೆಂದರೆ, ಪಟ್ಟಣಪಕ್ಕಂನ ಶ್ರೀನಿವಾಸನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ವಿಘ್ನೇಶ್ ಸಹೋದರ ವೀರ ಗುರುವಾರ ಮಧ್ಯಾಹ್ನ ಏಕಾಏಕಿ ಮನೆ ಖಾಲಿ ಮಾಡಿದ್ದರು.
ಏತನ್ಮಧ್ಯೆ, ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಕೋರಿ ಚೆನ್ನೈ ಮೂಲದ ಕಾರ್ಯಕರ್ತ ಎ ಶಂಕರ್ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.