ಕೆಲ ದಿನಗಳ ಹಿಂದೆ ತಮಿಳುನಾಡಿನಲ್ಲಿ ಬಿಜೆಪಿ ಸದಸ್ಯರೊಬ್ಬರ ಕಾರೊಂದು ನಿಗೂಢವಾಗಿ ಹೊತ್ತಿ ಉರಿದಿತ್ತು. ತಿರುವಳ್ಳೂರು ಪಶ್ಚಿಮದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಮಾರ್ ಅವರು ಚೆನ್ನೈನ ಮಧುರವಾಯಲ್ ಪ್ರದೇಶದಲ್ಲಿ ತಮ್ಮ ಮನೆಯಲ್ಲಿ ನಿಲ್ಲಿಸಿದ್ದ ಕಾರಿಗೆ ಗುರುವಾರ ತಡರಾತ್ರಿ ಏಪ್ರಿಲ್ 14 ರಂದು ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿದ್ದು, ಅಂದು ನಿಜವಾಗಿ ಏನಾಯಿತು ಎಂಬುದನ್ನು ಪರಿಶೀಲಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಬಿಜೆಪಿ ನಾಯಕನ ನಾಟಕ ಬಯಲುಗೊಂಡಿದೆ.
ಸಿಸಿಟಿವಿ ದೃಶ್ಯಗಳಲ್ಲಿ ಬಿಳಿ ಶರ್ಟ್ ಧರಿಸಿದ ವ್ಯಕ್ತಿಯೊಬ್ಬರು ರಸ್ತೆಯ ಬದಿಯಲ್ಲಿ ನಿಲ್ಲಿಸಿದ ಕಾರನ್ನು ಸಮೀಪಿಸುತ್ತಿರುವುದನ್ನು ಕಂಡುಬಂದಿದೆ. ನಂತರ ಎಲ್ಲಾ ಕಡೆಯಿಂದ ಕಿಟಕಿಗಳ ಮೂಲಕ ಒಳಗೆ ನೋಡುತ್ತಿದ್ದಾರೆ. ನಂತರ, ಅವರು ಸ್ಥಳದಿಂದ ದೂರ ಸೈಕಲ್‌ನಲ್ಲಿ ಹೋಗುತ್ತಾರೆ. ಸ್ವಲ್ಪ ಸಮಯದ ನಂತರ, ಗಾಢವಾದ ಬಟ್ಟೆಗಳನ್ನು ಧರಿಸಿದ ಇನ್ನೊಬ್ಬ ವ್ಯಕ್ತಿ ಕಾರಿನ ಮೇಲೆ ಏನನ್ನೋ ಸುರಿದು ಬೆಂಕಿ ಹಚ್ಚುವುದು ಕಂಡುಬಂದಿದೆ. ಸಿಸಿಟಿವಿಯಲ್ಲಿ ಕಾರು ಬೆಂಕಿಗೆ ಆಹುತಿಯಾಗಿದ್ದು, ನಂತರ ವ್ಯಕ್ತಿ ಸ್ಥಳದಿಂದ ಓಡಿಹೋಗಿರುವ ದೃಶ್ಯ ದಾಖಲಾಗಿದೆ.
ಕಾರು ಹೊತ್ತಿ ಉರಿಯುತ್ತಿರುವುದನ್ನು ಕಂಡ ಜನರು ಬಿಜೆಪಿ ನಾಯಕನ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಕಾರಿನ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ ಎಂಬ ವದಂತಿ ಹರಡಿದ್ದರಿಂದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ.

ಆದರೆ, ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ ಪೊಲೀಸರಿಗೆ ಕಾರಿಗೆ ಬೆಂಕಿ ಹಚ್ಚಿದ ವ್ಯಕ್ತಿ ಸತೀಶ್ ಕುಮಾರ್ ಅವರನ್ನೇ ಹೋಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಅನುಮಾನಗೊಂಡ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಸತೀಶ್ ತನ್ನ ಸ್ವಂತ ಕಾರಿಗೆ ಬೆಂಕಿ ಹಚ್ಚಿರುವುದಾಗಿ ಒಪ್ಪಿಕೊಂಡಿದ್ದಾರೆ.
ತನಗೆ ಚಿನ್ನಾಭರಣ ಕೊಡಿಸುವಂತೆ ಪತ್ನಿ ಒತ್ತಾಯಿಸುತ್ತಿದ್ದರೂ ಅದನ್ನು ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ಸತೀಶ್ ಹೇಳಿದ್ದಾರೆ. ನಂತರ ಅವರು ತಮ್ಮ ಕಾರನ್ನು ಮಾರಿ ಆಭರಣಗಳನ್ನು ಖರೀದಿಸುವಂತೆ ಪತ್ನಿ ಒತ್ತಾಯಿಸಿದರು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಹಾಗಾಗಿ, ಸತೀಶ್ ತನ್ನ ಕಾರಿಗೆ ಬೆಂಕಿ ಹಚ್ಚಲು ನಿರ್ಧರಿಸಿ ವಿಮೆ ಹಣವನ್ನು ಪಡೆದು ತನ್ನ ಹೆಂಡತಿಗೆ ಉಡುಗೊರೆ ನೀಡಲು ಹೊರಟಿದ್ದಾರೆ. ಆದರೆ, ಸಿಸಿಟಿವಿ ದೃಶ್ಯಾವಳಿಗಳು ಅವರ ಯೋಜನೆಯನ್ನು ಬುಡಮೇಲುಗೊಳಿಸಿದೆ. ಬಿಜೆಪಿ ನಾಯಕನನ್ನು ಸದ್ಯ ವಶಕ್ಕೆ ಪಡೆದ ಪೊಲೀಸರು ಬಿಡುಗಡೆ ಮಾಡಿದ್ದಾರೆ.






