ಮಂಗಳೂರು ವಿಶ್ವವಿದ್ಯಾಲಯದ ಕಾರ್ಯಕ್ರಮಕ್ಕೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಕರೆದಿದ್ದು ವಿವಾದವಾಗಿತ್ತು. ಈ ವಿವಾದಕ್ಕಿಂತಲೂ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟರಿಗೆ ಸ್ವಾಗತ ಕೋರಲು ಗೌರವಾರ್ಥ ನೀಡಲಾದ ಕೇಸರಿ ಶಾಲನ್ನು ಧರಿಸಿಕೊಳ್ಳಲು ಪ್ರಭಾಕರ ಭಟ್ಟರು ನಿರಾಕರಿಸಿದ್ದು ಚರ್ಚೆಗೆ ಒಳಗಾಗುತ್ತಿದೆ. ಪ್ರಭಾಕರ ಭಟ್ಟರು ಯಾಕೆ ಕೇಸರಿ ಶಾಲು ಧರಿಸಲು ನಿರಾಕರಿಸಿದರು ?
ಹಿಜಾಬ್ ವಿವಾದದ ಮುಂದುವರೆದ ಭಾಗವಾಗಿ ಕೇಸರಿಧ್ವಜ ವಿವಾದ ನಡೆಯಿತು. ಶಿವಮೊಗ್ಗದ ಕಾಲೇಜೊಂದರಲ್ಲಿ ವಿದ್ಯಾರ್ಥಿಯೊಬ್ಬ ಧ್ವಜಸ್ಥಂಬ ಹತ್ತಿ ಕೇಸರಿ ಧ್ವಜ ಹಾರಿಸಿದ್ದ. ಇದು ಕರ್ನಾಟಕದಲ್ಲಿ ಭಾರೀ ಚರ್ಚೆಗೆ ಒಳಗಾಗಿತ್ತು. ಪ್ರತೀ ವರ್ಷ ಸ್ವಾತಂತ್ರೋತ್ಸವ ನತ್ರು ಗಣರಾಜ್ಯೋತ್ಸವ ದಿನ ರಾಷ್ಟ್ರಧ್ವಜ ಹಾರಿಸಲೆಂದೇ ಮೀಸಲಾದ ಕಂಬದಲ್ಲಿ ಬೇರೆ ಧ್ವಜಗಳನ್ನು ಹಾರಿಸಬಹುದೇ ಎಂಬ ಚರ್ಚೆ ಎದ್ದಿತ್ತು. ವಿದ್ಯಾರ್ಥಿಯ ಕೃತ್ಯವನ್ನು ಸಮರ್ಥಿಸಿದ್ದ ಶಿವಮೊಗ್ಗ ಮೂಲದ ಸಚಿವ ಕೆ ಎಸ್ ಈಶ್ವರಪ್ಪ “ಶಾಲೆಗಳಲ್ಲಿ ಮಾತ್ರವಲ್ಲ, ಕೆಂಪುಕೋಟೆಯಲ್ಲೂ ಕೇಸರಿ ಧ್ವಜ ಹಾರಿಸುತ್ತೇವೆ” ಎಂದು ಹೇಳಿಕೆ ನೀಡಿದ್ದರು. ಆ ಬಳಿಕ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷ ಕಾಂಗ್ರೆಸ್ ರಾತ್ರಿ ಹಗಲು ಅಸೆಂಬ್ಲಿಯಲ್ಲಿ ಧರಣಿ ನಡೆಸಿತ್ತು. ಇದಾದ ಬಳಿಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಕೆ ಎಸ್ ಈಶ್ವರಪ್ಪರನ್ನು ಬೆಂಬಲಿಸುತ್ತಾ “ಕೆಂಪು ಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುವುದು ಬಿಜೆಪಿಯ ಸಂಕಲ್ಪ. ಅದನ್ನು ಮಾಡಿಯೇ ಮಾಡುತ್ತೇವೆ. ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜದ ಕೆಳಗೆ ಕೇಸರಿ ಧ್ವಜ ಹಾರಾಡಲಿದೆ” ಎಂದರು.
ಹಿಜಾಬ್ ಗೆ ಪ್ರತಿಯಾಗಿ ಕೇಸರಿ ಶಾಲು ಹಾಕಿಕೊಂಡ ವಿದ್ಯಾರ್ಥಿಗಳ ಘಟನೆಯಿಂದ ಕೇಸರಿ ಶಾಲು ಚರ್ಚೆ ಆರಂಭಗೊಂಡಿತ್ತು. ಇಸ್ಲಾಂನಲ್ಲಿ ಹಿಜಾಬ್/ ಸ್ಕಾರ್ಫ್/ ಬುರ್ಕಾಗೆ ತನ್ನದೇ ಆದ ಧಾರ್ಮಿಕ ಪ್ರಾತಿನಿಧ್ಯವಿದೆ. ಆದರೆ ಹಿಜಾಬ್ ಗೆ ಎದುರಾದ ಕೇಸರಿ ಶಾಲು ಮತ್ತು ಆ ನಂತರ ಬಂದ ಕೇಸರಿ ಧ್ವಜಕ್ಕೆ ಹಿಂದೂ ಧರ್ಮದಲ್ಲಿ ಧಾರ್ಮಿಕ ಪ್ರಾತಿನಿಧ್ಯವಿದೆಯೇ ? ಹಿಂದೂ ಧರ್ಮಕ್ಕೆ ಧಾರ್ಮಿಕ ಕಟ್ಟುಪಾಡುಗಳನ್ನು ರೂಪಿಸಿದ ಮಧ್ವಾಚಾರ್ಯರು ಮತ್ತು ಶಂಕರಾಚಾರ್ಯರ ಕರ್ಮಭೂಮಿ ಕರಾವಳಿಯಲ್ಲಂತೂ ಕೇಸರಿ ಶಾಲು ಮತ್ತು ಕೇಸರಿ ಧ್ಬಜಗಳು ಯಾವ ಧಾರ್ಮಿಕ ಕಾರ್ಯಕ್ಕೂ ಬಳಕೆಯಾಗುತ್ತಿಲ್ಲ. ವೈದಿಕೇತರ ಧಾರ್ಮಿಕ ಕಾರ್ಯಕ್ಕಂತೂ ಕೇಸರಿ ಬಟ್ಟೆಗಳ ಬಳಕೆಯೇ ಇಲ್ಲ.
ಕರಾವಳಿಯಲ್ಲಿ ಧರ್ಮಸ್ಥಳ, ಕುಕ್ಕೇಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ ಸೇರಿದಂತೆ ಹತ್ತುಹಲವು ದೇವಸ್ಥಾನಗಳಿವೆ. ಎಲ್ಲಾ ದೇವಸ್ಥಾನಗಳು ಪ್ರತ್ಯೇಕ ಧ್ವಜವನ್ನು ಹೊಂದಿವೆ. ಯಾವುದೇ ದೇಗುಲದಲ್ಲಿ ಜಾತ್ರೆ ಆಗಬೇಕೆಂದರೆ ಧ್ವಜಾರೋಹಣ ನಡೆಯಲೇಬೇಕು. ತಾಮ್ರದ ಧ್ವಜವನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿ ದೇವಸ್ಥಾನಕ್ಕಿಂತ ಎತ್ತರದ ಧ್ವಜಸ್ಥಂಬದಲ್ಲಿ ಆರೋಹಣ ಮಾಡಲಾಗುತ್ತೆ. ದೇವಸ್ಥಾನದ ಧ್ವಜಸ್ಥಂಭದ ಕೆಳಗೆ ಫೂಜೆಗಳನ್ನು ನಿರ್ವಹಿಸಿ ಬಾಳೆ ಹಣ್ಣಿನ ಗೊನೆ ಇರುವ ಬಾಳೆ ಗಿಡ, ಎಳನೀರು ಗೊಂಚಲು, ಅಡಕೆಯ ಹೂ ಗೊಂಚಲನ್ನು ಕಟ್ಟಿ ಆ ಬಳಿಕ ಊರವರ ಉಪಸ್ಥಿತಿಯಲ್ಲಿ ಆಯಾ ದೇವಸ್ಥಾನದ ಧ್ವಜವನ್ನು ಏರಿಸಲಾಗುತ್ತದೆ. ಆದರೆ ಹಿಂದೂ ಧರ್ಮದ ಯಾವುದೇ ದೇವಸ್ಥಾನದ ಧ್ವಜ ಕಂಬದಲ್ಲಿ ಕೇಸರಿ ಧ್ವಜವನ್ನು ಹಾರಿಲಾಗುವುದಿಲ್ಲ.
ದೇವಸ್ಥಾನದ ಧ್ವಜ ಸ್ಥಂಬದ ಬಳಿಕ ಧಾರ್ಮಿಕ ಪ್ರಕ್ರೀಯೆಯಲ್ಲಿ ದ್ವಜಗಳು ಹಾರುವುದು ದೇವರನ್ನು ಮೆರವಣಿಗೆ ಮಾಡುವ ರಥದಲ್ಲಿ. ಧರ್ಮಸ್ಥಳ ಮಂಜುನಾಥೇಶ್ವರ ದೇಗುಲದ ರಥದಲ್ಲಿ ಕಡುಕೆಂಪು ಮತ್ತು ಹಸಿರು ಪಟ್ಟಿಯ ಧ್ವಜವನ್ನು ಹಾರಿಸಲಾಗುತ್ತದೆ. ಕುಕ್ಕೇಸುಬ್ರಹ್ಮಣ್ಯದ ರಥದಲ್ಲಿ ಮೇಲ್ಗಡೆಯಲ್ಲಿ ಬಿಳಿ ಧ್ವಜದ ಮಧ್ಯೆ ಕೆಂಪುಸೂರ್ಯ ಇರುವ ಧ್ವಜವಿದ್ದರೆ, ಅದರ ಕೆಳಗಡೆ ಕಡುಗೆಂಪು ಧ್ವಜದ ಮಧ್ಯೆ ಸೂರ್ಯ ಚಂದ್ರರ ಚಿತ್ರವಿರುತ್ತದೆ. ಕಟೀಲು ದುರ್ಗಾಪರಮೇಶ್ವರಿ ದೇಗುಲದ ರಥದಲ್ಲೂ ಮೂರು ಧ್ವಜಗಳನ್ನು ಬಳಸಲಾಗುತ್ತದೆ. ರಥದ ಮೇಲ್ಗಡೆಗೆ ಬಿಳಿ ಧ್ವಜ, ಅದರ ಕೆಳಗಡೆ ಕಡುಗೆಂಪು ಧ್ವಜದಲ್ಲಿ ಸೂರ್ಯಚಂದ್ರ, ಅದರ ಕೆಳಗೆ ಹಳದಿ ಬಣ್ಣದ ಧ್ವಜ ಬಳಸಲಾಗುತ್ತದೆ. ಬಪ್ಪಬ್ಯಾರಿ ಎಂಬ ಮುಸ್ಲಿಂ ವ್ಯಕ್ತಿ ಕಟ್ಟಿದ್ದಾನೆ ಎನ್ನಲಾಗುವುದು ಪುರಾಣ ಪ್ರಸಿದ್ದ ಬಪ್ಪನಾಡು ದುರ್ಗಾಪರಮೇಶ್ವರಿ ದೇಗುಲದ ರಥದಲ್ಲಿ ಬಿಳಿಪಟ್ಟಿ ಇರುವ ಕೆಂಪು ಧ್ವಜವನ್ನು ಬಳಸಲಾಗುತ್ತದೆ. ಯಾವ ದೇವಸ್ಥಾನದ ಧ್ವಜಸ್ಥಂಬ ಮತ್ತು ರಥದಲ್ಲಿ ಕೇಸರಿ ಧ್ವಜವನ್ನು ಬಳಸಲಾಗುತ್ತಿಲ್ಲ.
ಕರಾವಳಿಯ ಎಲ್ಲಾ ದೇವಸ್ಥಾನಗಳಲ್ಲಿ ದೇವರ ಮೆರವಣಿಗೆ ನಡೆಯುತ್ತದೆ. ಅದಕ್ಕೆ ತುಳುವಿನಲ್ಲಿ “ಬಲಿ” ಎನ್ನುತ್ತಾರೆ. ದೇವಸ್ಥಾನದ ಆವರಣದೊಳಗಿನ ದೇವರ ಮೆರವಣಿಗೆ ಮತ್ತು ಊರ ರಥಬೀದಿಯಲ್ಲಿ ದೇವರ ಮೆರವಣಿಗೆ ಎಂಬುದು ಜಾತ್ರೆಯ ಸಮಯದಲ್ಲಿ ನಡೆಯುವ ಅತೀ ಮುಖ್ಯವಾದ ಹಿಂದೂ ಧಾರ್ಮಿಕ ಆಚರಣೆ. ದೇವರನ್ನು ತಲೆ ಮೇಲೆ ಹೊತ್ತುಕೊಂಡು, ಪಲ್ಲಕ್ಕಿಯಲ್ಲಿರಿಸಿ, ರಥದಲ್ಲಿಸಿ ಬ್ರಾಹ್ಮಣರು ದೇವರ ಮೆರವಣಿಗೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಇಡೀ ಊರಿಗೂರೇ ನೆರೆದಿರುತ್ತದೆ. ದೇವರ ಮೆರವಣಿಗೆಯ ಮುಂಬಾಗದಲ್ಲಿ ದೇಗುಲದ ಧ್ವಜಗಳಿರಬೇಕು. ಆ ಧ್ವಜ ಕೂಡಾ ಕಡುಗೆಂಪು ಬಣ್ಣವನ್ನು ಹೊಂದಿರುತ್ತದೆ. ದೇವಸ್ಥಾನದ ಆವರಣದಲ್ಲಿ ದೇವರ ಬಲಿ ಪೂಜೆಗೆ (ಮೆರವಣಿಗೆಗೆ) ಎಲ್ಲೂ ಕೂಡಾ ಕೇಸರಿ ಧ್ವಜ ಬಳಸುವ ಸಂಪ್ರದಾಯವಿಲ್ಲ.
ವಾಸ್ತವವಾಗಿ ಹಿಂದೂ ಧರ್ಮದಲ್ಲಿ ಬಿಳಿ ಬಟ್ಟೆಗಷ್ಟೇ ಅತ್ಯುನ್ನತ ಸ್ಥಾನವಿದೆ. ಈಗಲೂ ಕರಾವಳಿಯ ಎಲ್ಲಾ ಅರ್ಚಕರು, ತಂತ್ರಿಗಳು, ಧಾರ್ಮಿಕ ಮುಖಂಡರು ಬಿಳಿ ಬಟ್ಟೆಯನ್ನೇ ತೊಡುತ್ತಾರೆ. ದೇವಸ್ಥಾನದ ಅರ್ಚಕರು ಪೂಜೆ ಮಾಡುವ ಮುನ್ನ ನಡೆಸುವ ಮಡಿಸ್ನಾನದಲ್ಲಿ ಬಿಳಿ ಕಚ್ಚೆಯುಟ್ಟೇ ಸ್ನಾನ ಮಾಡುತ್ತಾರೆ. ಅರ್ಚನೆಯ ಸಂದರ್ಭದಲ್ಲೂ ಬಿಳಿ ಪಂಚೆ ಮತ್ತು ಬಿಳಿ ಶಾಲನ್ನು ಅರ್ಚಕರು ಧರಿಸುತ್ತಾರೆ. ಕರಾವಳಿಯಲ್ಲಿ ನಡೆಯುವ ಪೂಜೆ, ಗಣಹೋಮ, ಸತ್ಯನಾರಾಯಣ ಪೂಜೆಯಲ್ಲೂ ಅರ್ಚಕರಿಗೆ ಬಿಳಿ ಪಂಚೆಯನ್ನೇ ದಾನವನ್ನಾಗಿ ನೀಡಲಾಗುತ್ತದೆ. ಆರ್ ಎಸ್ ಎಸ್ ನಾಯಕರಾದ ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ ಎಲ್ಲಾ ಬ್ರಾಹ್ಮಣ ಮುಖಂಡರು ಬಿಳಿ ಪಂಚೆ, ಬಿಳಿ ವಸ್ತ್ರ ಮತ್ತು ಬಿಳಿ ಶಾಲನ್ನೇ ಬಳಸುತ್ತಾರೆ. ಆದರೆ ಭಜರಂಗದಳ, ಎಬಿವಿಪಿ ಕಾರ್ಯಕರ್ತರು ಮಾತ್ರ ಕೇಸರಿ ಶಾಲನ್ನು ಕೊರಳಿಗೆ ಸುತ್ತಿಕೊಂಡಿರುತ್ತಾರೆ.
ಉಡುಪಿ ಸೇರಿದಂತೆ ಕರಾವಳಿಯಲ್ಲಿ ಕೇಸರಿ ಶಾಲು, ಕೇಸರಿ ಪಂಚೆ ಹಾಕಿಕೊಳ್ಳುವ ಸಂಪ್ರದಾಯ ಪ್ರಾರಂಭವಾಗಿದ್ದು ಬ್ರಹ್ಮಕಲಶೋತ್ಸವ, ನಾಗಮಂಡಲ ಸೇವೆಗಳಲ್ಲಿ. ದೇವಸ್ಥಾನದ ಜಾತ್ರೆಗಳಲ್ಲಿ, ಬ್ರಹ್ಮಕಲಶೋತ್ಸವಗಳಲ್ಲಿ, ನಾಗಮಂಡಲಗಳಲ್ಲಿ ಶ್ವೇತ ವಸ್ತ್ರಧಾರಿ ಬ್ರಾಹ್ಮಣರು ವೇತನ ಸಹಿತ ಪೂಜೆ, ಹೋಮಾಧಿಗಳನ್ನು ಮಾಡುತ್ತಿದ್ದರು, ಕೆಳ ವರ್ಗಗಳ ಹುಡುಗರು ಕೇಸರಿ ಶಾಲು, ಕೇಸರಿ ಪಂಚೆ ಹಾಕಿಕೊಂಡು ಪಾರ್ಕಿಂಗ್ ನಿರ್ವಹಣೆ, ಶ್ರಮದಾನ, ಸ್ವಚ್ಚತೆ, ಊಟ ಬಡಿಸುವಿಕೆಯ ಉಚಿತ ಸೇವೆಯನ್ನು ದೇವರ ಹೆಸರಿನಲ್ಲಿ ಮಾಡುತ್ತಾರೆ. ಈ ರೀತಿ ಕೇಸರಿ ಶಾಲು, ಕೇಸರಿ ಪಂಚೆ ಹಾಕುತ್ತಿದ್ದ ಅದೇ ಗುಂಪುಗಳು ಕರಾವಳಿಯಲ್ಲಿ ಹಿಂದುತ್ವ ಸಂಘಟನೆಗಳಾಗಿ ರೂಪುಗೊಂಡವು.
ಈಗಲೂ ವೇತನ ಸಹಿತ ದೇವರ ಸೇವೆ ಮಾಡುವ ಬ್ರಾಹ್ಮಣರು ಬಿಳಿ ವಸ್ತ್ರಧಾರಿಗಳಾಗಿಯೂ, ಗರ್ಭಗುಡಿಯ ಹೊರಗಡೆ ಉಚಿತವಾಗಿ ಸ್ವಯಂಸೇವಕರಾಗಿರುವ ಹಿಂದುಳಿದ ವರ್ಗಗಳ ಯುವಕರು ಕೇಸರಿ ವಸ್ತ್ರಧಾರಿಗಳಾಗಿಯೂ ಜಾತ್ರೆಗಳಲ್ಲಿ ಕಾಣಸಿಗುತ್ತಾರೆ. ಅದೇ ಪರಂಪರೆಯನ್ನು ಎಬಿವಿಪಿ ವಿದ್ಯಾರ್ಥಿಗಳ ಮೂಲಕ ಪುರೋಹಿತಶಾಹಿ ವ್ಯವಸ್ಥೆ ಮುಂದುವರೆಸುತ್ತಿದೆ.
ಭಾರತದ ಹಿಂದೂ ದ್ವೈತ, ಅದ್ವೈತ ಸಿದ್ದಾಂತಗಳು ಜಾರಿಯಲ್ಲಿದೆ. ಧ್ವೈತ ಸಿದ್ದಾಂತ ಕರ್ಮಠವಾಗಿದ್ದರೆ, ಅಧ್ವೈತ ಸಿದ್ದಾಂತವೂ ಭಾರತದ ಜನಸಾಮಾನ್ಯರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಧ್ವೈತದಲ್ಲಿ ದೇವರೇ ಪ್ರತ್ಯೇಕ, ಮನುಷ್ಯನೇ ಪ್ರತ್ಯೇಕ ಎಂದು ಹೇಳಿದರೆ, ಶಂಕರಾಚಾರ್ಯಕರು ಪ್ರತಿಪಾದಿಸಿದ ಅಧ್ವೈತವು ದೇವರು ಬೇರೆಯಲ್ಲ, ಆತ್ಮ ಬೇರೆಯಲ್ಲ ಎಂದು ಹೇಳುತ್ತದೆ. ಅಧ್ವೈತದಲ್ಲಿ ದೇವರೆಂದರೆ ಶಿವ ವಿಷ್ಣು, ಪಾರ್ವತಿ ಆಂಜನೇಯ, ಮಾರಮ್ಮ, ಚೌಡಿ, ಭೂತಗಳು ಈ ರೀತಿ ಯಾವುದು ಬೇಕಾದರೂ ಆಗಬಹುದು. ಜೀವಾತ್ಮ ಮತ್ತು ಪರಮಾತ್ಮದಲ್ಲಿ ಭೇದ ಮಾಡಬಾರದು ಎಂಬುದೇ ಅಧ್ವೈತ ಸಿದ್ದಾಂತ ಪ್ರತಿಪಾದಿಸುತ್ತದೆ. ಶೃಂಗೇರಿ, ಕಂಚಿ, ಪುರಿ, ಬದರಿ, ಧ್ವರಕಾದಲ್ಲಿ ಪೀಠವನ್ನು ಹೊಂದಿರುವ ಅಧ್ವೈತ ಸಿದ್ದಾಂತವು ಚಿನ್ಮಯ ಮಿಷನ್, ರಮಣ ಮಹರ್ಷಿಗಳು, ರಾಮಕೃಷ್ಣ ಪರಮಹಂಸರು, ವಿವೇಕಾನಂದರನ್ನು ಅನುಯಾಯಿಯಾಗಿಸಿದೆ. ಈ ರೀತಿ ಇಡೀ ಹಿಂದೂ ಧರ್ಮವನ್ನು ಸಿದ್ದಾಂತದ ಆಧಾರದಲ್ಲಿ ರೂಪಿಸಿದ ಶಂಕರಾಚಾಚಾರ್ಯ ವಿರಚಿತ ಅಧ್ವೈತ ಮತದ ಧ್ವಜವು ಶ್ವೇತ ವರ್ಣದ ಎರಡು ಹಂಸವನ್ನು ಒಳಗೊಂಡಿದೆ.
ಆರ್ ಎಸ್ ಎಸ್ ನ ದೊಡ್ಡ ದೊಡ್ಡ ನಾಯಕರು ಕೇಸರಿ ಶಾಲನ್ನು ದಿನನಿತ್ಯ ಧರಿಸುವುದಿಲ್ಲ. ಆರ್ ಎಸ್ ಎಸ್ ನಾಯಕರಾದ ಹೊಸಬಾಳೆ ದತ್ತಾತ್ರೆಯ, ಕಲ್ಲಡ್ಕ ಪ್ರಭಾಕರ್ ಭಟ್, ಬಿ ಎಲ್ ಸಂತೋಷ್ ಸೇರಿದಂತೆ ಹಿರಿಯ ನಾಯಕರು ದಿನನಿತ್ಯದ ಕಾರ್ಯಕ್ರಮಗಳಲ್ಲಿ ಬಿಳಿ ವಸ್ತ್ರಧಾರಿಗಳಾಗಿ ಬಿಳಿ ಶಾಲು ಧರಿಸುತ್ತಾರೆ. 2022 ಫೆಬ್ರವರಿ 13 ರಂದು ಬಂಟ್ವಾಳ ತಾಲೂಕಿ ಸಜಿಪದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪ್ರಭಾಕರ ಭಟ್ಟರು ಮಾತನಾಡುತ್ತಾ ” ಎಲ್ಲಿಯವರೆಗೆ ಮುಸ್ಲಿಂ ಹುಡುಗಿಯರು ಹಿಜಾಬ್ ಹಾಕಿಕೊಂಡು ಬರುತ್ತಾರೋ ಅಲ್ಲಿಯವರೆಗೆ ನಮ್ಮ ಹಿಂದೂ ಹುಡುಗರು ಕೇಸರಿ ಶಾಲು ಹಾಕಿಕೊಂಡು ಬರುತ್ತಾರೆ” ಎಂದು ತನ್ನ ಹೆಗಲ ಮೇಲಿರುವ ಶಾಲನ್ನು ಎತ್ತಿ ತೋರಿಸುತ್ತಾ ಘೋಷಿಸಿದರು. ಆದರೆ ಕಲ್ಲಡ್ಕ ಪ್ರಭಾಕರ ಭಟ್ಟರು ತನ್ನ ಹೆಗಲ ಮೇಲಿಂದ ಎತ್ತಿ ತೋರಿಸಿದ್ದು ಬಿಳಿ ಶಾಲನ್ನು !
ಹಿಂದೂಗಳಿಗೂ ಭಗವಾಧ್ವಜಕ್ಕೂ ಯಾವ ಸಂಬಂಧವೂ ಇಲ್ಲ. ಹಿಂದೂಸ್ಥಾನಕ್ಕೂ ಭಗವಾದ್ವಜಕ್ಕೂ ಯಾವ ಸಂಬಂಧವೂ ಇಲ್ಲ. ಭಗವಾದ್ವಜ ಅಥವಾ ಕೇಸರಿ ಧ್ವಜ ಶಿವಾಜಿ ಮತ್ತು ಮರಾಠ ಸೇನೆಯ ಧ್ವಜವಾಗಿತ್ತು. ಈಗಲೂ ಕರ್ನಾಟಕದ ಬೆಳಗಾವಿ ಗಡಿ ಭಾಗದಲ್ಲಿ ಕೇಸರಿ ಧ್ವಜವನ್ನು ಕನ್ನಡಪ್ರೇಮಿಗಳು ಶತ್ರುವಿನಂತೆ ನೋಡುತ್ತಾರೆ. ಬೆಳಗಾವಿಯ ಖಾನಾಪುರಲದ ಹಲಸಿ ಗ್ರಾಮದಲ್ಲಿ ಕೇಸರಿ ಧ್ವಜ ಹಿಡಿದುಕೊಂಡ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಕನ್ನಡ ಬಾವುಟವನ್ನು ಸುಟ್ಟುಹಾಕಿದ್ದರು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 153 ಎ, 295, 427, 120ಬಿ ಅಡಿಯಲ್ಲಿ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದಕ್ಕೆ ಪ್ರತಿಯಾಗಿ ಕನ್ನಡ ಕಾರ್ಯಕರ್ತರು ಶಿವಾಜಿ ಪ್ರತಿಯನ್ನು ಬೆಂಗಳೂರು ಸೇರಿದಂತೆ ಹಲವೆಡೆ ಧ್ವಂಸ ಮಾಡಿದರು. ಆದ್ದರಿಂದ ಬೆಳಗಾವಿ ಭಾಗದಲ್ಲಿ ಕೇಸರಿ ಧ್ವಜ ಮರಾಠವನ್ನು ಮತ್ತು ಮಹಾರಾಷ್ಟ್ರವನ್ನು ಸಂಕೇತಿಸುತ್ತದೆ ಎಂಬುದು ಸ್ಪಷ್ಟ. ಶಿವಾಜಿ ಮಹಾರಾಜ್ ಸಾಮ್ರಾಜ್ಯದ ಕೇಸರಿ ಧ್ವಜದ ಮಧ್ಯೆ ಓಂ ಅಥವಾ ಸ್ವಸ್ಥಿಕ್ ಚೆನ್ಹೆಯನ್ನು ಹಾಕಿ ಕೇಸರಿ ಧ್ವಜವನ್ನು ಭಗವಾದ್ವಜವನ್ನಾಗಿಸಿರುವುದು ಆರ್ ಎಸ್ ಎಸ್.
ಕೇಸರಿ ಧ್ವಜ ಮತ್ತು ಕೇಸರಿ ಶಾಲಿಗೆ ಹಿಂದೂ ಧರ್ಮದಲ್ಲಿ ಯಾವುದೇ ಸ್ಥಾನಮಾನವಿಲ್ಲ. ಧಾರ್ಮಿಕ ಕೆಲಸಗಳಲ್ಲಿ ಉಚಿತವಾಗಿ ಸೇವಾಕಾರ್ಯ ಮಾಡಲು ಶೂದ್ರರನ್ನು ಒಗ್ಗೂಡಿಸುವುದಕ್ಕೆ ಕೇಸರಿ ಶಾಲು, ಕೇಸರಿ ಪಂಚೆಯನ್ನು ಬಳಸಲಾಗುತ್ತದೆ. ಅದೇ ರೀತಿ ಸಂಘಟನೆಯ ರಾಜಕೀಯದ ಮೂಲಕ ಕೋಮುಗಲಭೆಯಲ್ಲಿ ಪಾಲ್ಗೊಳ್ಳಲು, ಜೈಲಿಗೆ ಹೋಗಲು ಕೆಳ ವರ್ಗಗಳ ಒಗ್ಗೂಡುವಿಕೆಗೆ ಕೇಸರಿ ಶಾಲನ್ನು ಬಳಸಲಾಗುತ್ತದೆ. ಈ ರಾಜಕೀಯದ ಹೊರತಾಗಿ ಹಿಂದೂ ಧರ್ಮದಲ್ಲಿ ಕೇಸರಿ ಶಾಲು ಮತ್ತು ಕೇಸರಿ ಧ್ವಜಕ್ಕೆ ಧಾರ್ಮಿಕ ಮಹತ್ವವಿಲ್ಲ !