12-14 ವರ್ಷದ ಮಕ್ಕಳ ಲಸಿಕಾ ಅಭಿಯಾನಕ್ಕೆ ಚಾಲನೆ ಸಿಕ್ಕಿ 10 ದಿನ ಕಳೆದರೂ ಶೇಕಡಾ 5 ರಷ್ಟು ವ್ಯಾಕ್ಸಿನೇಷನ್ ಮಾತ್ರ ಪೂರ್ಣಗೊಂಡಿದೆ. ಆರೋಗ್ಯ ಇಲಾಖೆ ಅಂದುಕೊಂಡ ಮಟ್ಟಕ್ಕೆ ಸಕ್ಸಸ್ ಆಗದೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಮಕ್ಕಳಿಗೆ ಲಸಿಕೆ ಹಾಕ್ಸಲು ಪೋಷಕರೇ ಹಿಂದೇಟು ಹಾಕ್ತಿದ್ದಾರೆ. ಹಾಗಾದ್ರೆ ಕೊರ್ಬಿವ್ಯಾಕ್ಸ್ ಅಭಿಯಾನ ಪ್ಲಾಪ್ ಹಾಗಲು ಕಾರಣವೇನು..?
10 ದಿನ ಕಳೆದ್ರೂ ಶೇ. 5% ರಷ್ಟು ಮಾತ್ರ ವ್ಯಾಕ್ಸಿನೇಷನ್ !
ಮಾರ್ಚ್ 16 ರಂದು ಆರಂಭವಾದ 12-14 ವರ್ಷದ ಮಕ್ಕಳ ಲಸಿಕಾ ಅಭಿಯಾನ ಇಂದಿಗೆ 10 ದಿನ ಪೂರ್ಣಗೊಂಡಿದೆ. ರಾಜಧಾನಿಯ ವ್ಯಾಪ್ತಿಯಲ್ಲಿ ಒಟ್ಟು 2,81,542 ಮಕ್ಕಳನ್ನು ಗುರುತಿಸಿದ್ದ ಪಾಲಿಕೆ 15 ದಿನಗಳ ಒಳಗಾಗಿ ಮೊದಲ ಡೋಸ್ ಅನ್ನ ಪೂರ್ಣಗೊಳಿಸುವ ಗುರಿಯನ್ನ ಹೊಂದಿತ್ತು. ಆದರೆ ಈವರೆಗೆ 11 ಸಾವಿರ ಮಕ್ಕಳಿಗೆ ಮಾತ್ರ ಲಸಿಕೆ ಹಾಕಲಾಗಿದೆ. 10 ದಿನದಲ್ಲಿ ಶೇ. 5 ರಷ್ಟು ಮಾತ್ರ ವ್ಯಾಕ್ಸಿನೇಷನ್ ಆಗಿದ್ದು, 2 ಲಕ್ಷದ 70 ಸಾವಿರಕ್ಕೂ ಹೆಚ್ಚಿನ ಮಕ್ಕಳಿಗೆ ಇನ್ನೂ ಲಸಿಕೆ ಹಾಕಿಲ್ಲ. 12-14 ವರ್ಷದೊಳಗಿನ ಮಕ್ಕಳ ಕೊರ್ಬಿವ್ಯಾಕ್ಸ್ ಅಭಿಯಾನಕ್ಕೆ ಸೂಕ್ತ ರೆಸ್ಪಾನ್ಸ್ ಸಿಗದೆ ಇದು ಅಟ್ಟರ್ ಪ್ಲಾಪ್ ಆಗುವಂತಿದೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ವ್ಯಾಕ್ಸಿನ್ ಕೊಡಲಾಗ್ತಿದೆ. ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಲಸಿಕೆ ಹಾಕಿಸುವಂತೆ ಎಷ್ಟೇ ಜಾಗೃತಿ ಮೂಡಿಸುತ್ತಿದರೂ ಲಸಿಕೆ ಹಾಕಿಸಲು ಪೋಷಕರೇ ಹಿಂದೇಟು ಹಾಕ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಅಂದುಕೊಂಡ ಸಮಯದಲ್ಲಿ ಮೊದಲ ಡೋಸ್ ಲಸಿಕಾ ಅಭಿಯಾನ ಗುರಿ ಮುಟ್ಟುವ ಯಾವ ಲಕ್ಷಣವೂ ಕಾಣುತ್ತಿಲ್ಲ.
ಮಕ್ಕಳ ಲಸಿಕಾ ಅಭಿಯಾನದ ಹಿನ್ನಡೆಗೆ ಕಾರಣವೇನು.!?
- ಪರೀಕ್ಷೆ ನಡೆಯುವ ಸಮಯದಲ್ಲೇ ಮಕ್ಕಳ ಲಸಿಕಾ ಅಭಿಯಾನಕ್ಕೆ ಚಾಲನೆ
- ಈ ಸಮಯದಲ್ಲಿ ಲಸಿಕೆ ಪಡೆದು ಜ್ವರ, ಸುಸ್ತು ಉಂಟಾದರೆ ಶೈಕ್ಷಣಿಕ ವರ್ಷಕ್ಕೆ ಪೆಟ್ಟು
- ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆ ಪೋಷಕರಲ್ಲಿ ನಿರ್ಲಕ್ಷ್ಯ
- 12 ರಿಂದ 14 ವರ್ಷದ ಮಕ್ಕಳಿಗೆ ನೀಡುತ್ತಿರುವ ಕೊರ್ಬಿವ್ಯಾಕ್ಸ್ ಲಸಿಕೆ ಮೇಲೆ ನಂಬಿಕೆ ಬಾರದೆ ಇರುವುದು
- ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ ತಾವೂ ಪಡೆದು ಅನುಭವ ಇರುವುದರಿಂದ , ಮಕ್ಕಳಿಗೆ ಹೊಸ ಲಸಿಕೆ ಹಾಕ್ತಿರುವುದರಿಂದ ಧೈರ್ಯದ ಕೊರತೆ
- ಶಾಲೆ, ಮನೆ, ವಿಶೇಷ ಶಿಬಿರಗಳ ಹೊರತಾಗಿ ಪ್ರಾಥಮಿಕ ಕೇಂದ್ರಗಳಿಗೆ ಮಕ್ಕಳು ಬಂದು ಲಸಿಕೆ ಪಡೆಯಬೇಕು
- ಸದ್ಯ ಬೇಸಿಗೆ ಆರಂಭವಾಗಿರೋದ್ರಿಂದ ಸಾಂಕ್ರಾಮಿಕ ರೋಗಗಳ ಭೀತಿ
- ಪರೀಕ್ಷೆಗಳು ಮುಗಿಯುತ್ತಿದ್ದಂತೆ ಬೇಸಿಗೆ ರಜೆ ಇರೋದ್ರಿಂದ ನಿರ್ಲಕ್ಷ್ಯ
ಹಳ್ಳ ಹಿಡಿದ 12-14 ವರ್ಷದ ಮಕ್ಕಳ ಲಸಿಕಾ ಅಭಿಯಾನ !
12-14 ವರ್ಷದೊಳಗಿನ ಮಕ್ಕಳ ವ್ಯಾಕ್ಸಿನೇಷನ್ ಅಭಿಯಾನ ಆರಂಭವಾದಾಗಲೇ ಕೆಲವೊಂದಷ್ಟು ಅಪಸ್ವರಗಳು ಕೇಳಿ ಬಂದಿದ್ದವು. ಪರೀಕ್ಷೆ, ಬೇಸಿಗೆ ಸಮಯದಲ್ಲಿ ಲಸಿಕೆ ಕೊಡೋದು ಸೂಕ್ತವಲ್ಲ ಎಂದು ತಜ್ಞರು ಎಚ್ಚರಿಕೆಯನ್ನೂ ನೀಡಿದ್ದರು. ಇವೆಲ್ಲವನ್ನು ಮೀರಿ ಪರೀಕ್ಷೆ, ಬೇಸಿಗೆ ರಜೆ ಸಂದರ್ಭದಲ್ಲಿ ವ್ಯಾಕ್ಸಿನೇಷನ್ ಕೊಡ್ತಿರುವುದರಿಂದ ಅಭಿಯಾನಕ್ಕೆ ಪೋಷಕರಿಂದ ಹಾಗೂ ಮಕ್ಕಳಿಂದ ಸೂಕ್ತ ರೆಸ್ಪಾನ್ಸ್ದೊರಕುತ್ತಿಲ್ಲ. ಆದರೆ ಪಾಲಿಕೆ ಮಾತ್ರ ನಾವು ನಮ್ಮ ಗುರಿಯನ್ನ ಮುಟ್ಟಿ ಎಲ್ಲಾ ಮಕ್ಕಳಿಗೂ ವ್ಯಾಕ್ಸೀನ್ ಕೊಡುವ ಆತ್ಮವಿಶ್ವಾಸದಲ್ಲಿದೆ. ಹೀಗೆ ಸದ್ಯ 12-14 ರ ವ್ಯಾಕ್ಸಿನೇಷನ್ ಅಭಿಯಾನ ಹಳ್ಳ ಹಿಡಿದಿದೆ. ಪರೀಕ್ಷೆ ಮುಗಿದು ಬೇಸಿಗೆ ರಜೆ ಕಳೆಯುವವರೆಗೆ ಪೋಷಕರು ಮಕ್ಕಳಿಗೆ ಲಸಿಕೆ ಕೊಡಿಸುವುದು ಅನುಮಾನ. ಇನ್ನು ಬೇಸಿಗೆ ಮುಗಿದು ಶಾಲೆಗಳು ಆರಂಭವಾದ್ಮೇಲೆ ಕೊರ್ಬಿವ್ಯಾಕ್ಸ್ ಅಭಿಯಾನಕ್ಕೆ ವೇಗ ಸಿಗಬಹುದು ಎಂಬ ನಿರೀಕ್ಷೆಯಲ್ಲಿದೆ ಬಿಬಿಎಂಪಿ.