ನಮ್ಮ ಪ್ರಜಾಪ್ರಭುತ್ವವನ್ನು ಹ್ಯಾಕ್ ಮಾಡಲು ಸಾಮಾಜಿಕ ಮಾಧ್ಯಮವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಲೋಕಸಭೆಯಲ್ಲಿ ಬುಧವಾರ ಮಾತನಾಡಿದ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಸಲ್ಲಿಕೆ ಮಾಡಿ ಮಾತನಾಡಿದ ಸೋನಿಯಾ ಗಾಂಧಿ, ಅಲ್ ಜಜೀರಾ ಮತ್ತು ದಿ ರಿಪೋರ್ಟರ್ಸ್ ಕಲೆಕ್ಟಿವ್ನಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿ, ಇತರ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಫೇಸ್ಬುಕ್ ಚುನಾವಣಾ ಜಾಹೀರಾತುಗಳಿಗಾಗಿ ಬಿಜೆಪಿಗೆ ಅಗ್ಗದ ಡೀಲ್ಗಳನ್ನು ನೀಡಿದೆ ಎಂದು ಆರೋಪಿಸಿದ್ದಾರೆ.
“ನಾಯಕರು, ಪಕ್ಷಗಳು ಮತ್ತು ಅವರ ಪ್ರಾಕ್ಸಿಗಳಿಂದ ರಾಜಕೀಯ ನಿರೂಪಣೆಗಳನ್ನು ರೂಪಿಸಲು ಫೇಸ್ಬುಕ್ ಮತ್ತು ಟ್ವಿಟರ್ನಂತಹ ಜಾಗತಿಕ ಕಂಪನಿಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ” ಎಂದು ಸೋನಿಯಾ ಗಾಂಧಿ ಲೋಕಸಭೆಯಲ್ಲಿ ಹೇಳಿದರು.
“ಜಾಗತಿಕ ಸಾಮಾಜಿಕ ಮಾಧ್ಯಮ ಕಂಪನಿಗಳು ಎಲ್ಲಾ ಪಕ್ಷಗಳಿಗೆ ಸರಿಯಾದ ವೇದಿಕೆ ಒದಗಿಸುತ್ತಿಲ್ಲ ಎಂಬುದು ಸಾರ್ವಜನಿಕರ ಗಮನಕ್ಕೆ ಪದೇ ಪದೇ ಬಂದಿದೆ. ಆಡಳಿತ ಸರ್ಕಾರದೊಂದಿಗೆ ಸಹಕಾರದೊಂದಿಗೆ ಫೇಸ್ಬುಕ್ನಿಂದ ಸಾಮಾಜಿಕ ಸಾಮರಸ್ಯವನ್ನು ಕದಡುತ್ತಿದ್ದು ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮ ದೈತ್ಯರು, ವಿಶೇಷವಾಗಿ ಫೇಸ್ಬುಕ್, ಭಾವನಾತ್ಮಕ ಹೇಳಿಕೆಗಳಿಂದ ಯುವ ಮತ್ತು ಹಿರಿಯ ಮನಸ್ಸುಗಳಲ್ಲಿ ದ್ವೇಷ ತುಂಬಲಾಗುತ್ತಿದೆ. ಎಂದು ಅವರು ಆರೋಪಿಸಿದ್ದಾರೆ. Facebook ನಂತಹ ಪ್ರಾಕ್ಸಿ ಜಾಹೀರಾತು ಕಂಪನಿಗಳು ಅದರ ಬಗ್ಗೆ ತಿಳಿದಿವೆ ಮತ್ತು ಅದರಿಂದ ಲಾಭ ಪಡೆಯುತ್ತಿವೆ ಎಂದು ಕಾಂಗ್ರೆಸ್ ಮುಖ್ಯಸ್ಥರು ಆರೋಪಿಸಿದ್ದಾರೆ.