ಶಿವಕುಮಾರ್ ಎ
ಈಗಾಗಲೇ ಭಾರತೀಯರು ಕರೋನಾ ಲಸಿಕೆಯ ಅಲಭ್ಯತೆಯಿಂದ ಬೀದಿಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಆದರೆ, ಇಲ್ಲಿಯೂ ಅಸಮನತೆ ತಾಂಡವವಾಡುತ್ತಿದೆ. ಕಾಸಿದ್ದವರಿಗೆ ಸುಲಭದಲ್ಲಿ ಕೋವಿಡ್ ಲಸಿಕೆ ಲಭಿಸುತ್ತಿದೆ. ಅದರಲ್ಲಿಯೂ, ಕಾರ್ಪೊರೇಟ್ ಆಸ್ಪತ್ರೆಗಳು ಹೆಚ್ಚಿನ ಪ್ರಮಾಣದ ಲಸಿಕೆಯನ್ನು ಪಡೆದುಕೊಂಡು, ಇತರರಿಗೆ ಲಸಿಕೆಗಳ ಲಭ್ಯತೆ ಕಡಿಮೆಯಾಗುವಂತೆ ಮಾಡುತ್ತಿವೆ.
ಕೇಂದ್ರ ಸರ್ಕಾರದ ಲಸಿಕೆ ನೀತಿಯ ಅಡಿಯಲ್ಲಿ, ಖಾಸಗಿ ಆಸ್ಪತ್ರೆಗಳಿಗೆ ಮೀಸಲಾದ ದಾಸ್ತಾನಿನ ಶೇ.೫೦ರಷ್ಟು ಕೋವಿಡ್ ಲಸಿಕೆಯನ್ನು ದೇಶದ ಕೇವಲ ೯ ಖಾಸಗಿ ಆಸ್ಪತ್ರೆಗಳು ಪಡೆದುಕೊಂಡಿವೆ. ಅದರಲ್ಲೂ ಈ ಆಸ್ಪತ್ರೆಗಳು ದೇಶದ ಪ್ರಮುಖ ನಗರಗಳಲ್ಲಿ ಮಾತ್ರ ಸ್ಥಾಪಿತವಾಗಿದೆ. ಉಳಿದ ೫೦% ಲಸಿಕೆಯನ್ನು ೩೦೦ ಇತರ ಆಸ್ಪತ್ರೆಗಳು ಖರೀದಿಸಿವೆ. ಇವು ದೇಶದ ಎರಡನೇ ಹಂತದ ನಗರಗಳಲ್ಲಿ ಸ್ಥಾಪಿತವಾಗಿದೆ.
ಕೇಂದ್ರ ಸರ್ಕಾರವು ಮೇ ತಿಂಗಳಲ್ಲಿ ೧.೨೦ ಕೋಟಿ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗಾಗಿ ಮೀಸಲಿಟ್ಟಿತ್ತು. ಇದರಲ್ಲಿ ೬೦.೫೭ ಲಕ್ಷ ಡೋಸ್ ಲಸಿಕೆಗಳನ್ನು ೯ ಆಸ್ಪತ್ರೆಗಳು ಖರೀದಿಸಿವೆ. ಕೇವಲ ನಗರ ಪ್ರದೇಶದಲ್ಲಿ ಮಾತ್ರ ಈ ಲಸಿಕೆಗಳು ಲಭ್ಯವಾದರೆ ಗ್ರಾಮೀಣ ಪ್ರದೇಶದ ಜನರ ಪರಿಸ್ಥಿತಿಯೇನು? ರಾಜ್ಯ ಸರ್ಕಾರಗಳು ಕೂಡಾ ಗ್ರಾಮೀಣ ಭಾಗದ ಜನರಿಗೆ ಲಸಿಕೆಯನ್ನು ವ್ಯವಸ್ಥಿತವಾಗಿ ಪೂರೈಸುವಲ್ಲಿ ವಿಫಲವಾಗುತ್ತಿರುವ ಸಂದರ್ಭದಲ್ಲಿ ಕೇವಲ, ಮೊದಲ ಮತ್ತು ಎರಡನೇ ಹಂತದ ನಗರ ಪ್ರದೇಶಗಳ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಾದರೆ, ಗ್ರಾಮೀಣ ಭಾಗದ ಜನರಿಗೆ ಲಸಿಕೆ ಮರೀಚಿಕೆಯಾಗಲಿದೆ.
ಅತೀ ಹೆಚ್ಚು ಲಸಿಕೆಗಳನ್ನು ಪಡೆದ ಖಾಸಗಿ ಆಸ್ಪತ್ರೆಗಳ ವಿವರ:
ಮೇ ತಿಂಗಳಲ್ಲಿ ಉತ್ಪಾದನೆಯಾದ ಒಟ್ಟು ಲಸಿಕೆಯ ಪ್ರಮಾಣ ೭.೯೪ ಕೋಟಿ ಡೋಸ್. ಇವುಗಳಲ್ಲಿ ೧೫.೬ ಶೇ. ಡೋಸ್ ಲಸಿಕೆಯನ್ನು ಈ ಒಂಬತ್ತು ಆಸ್ಪತ್ರೆಗಳೇ ಪಡೆದುಕೊಂಡಿವೆ. ಅಚ್ಚರಿಯ ವಿಚಾರವೇನೆಂದರೆ, ಖರೀದಿಸಿದ ೧.೨೦ ಕೋಟಿ ಡೋಸ್’ಗಳಲ್ಲಿ ಕೇವಲ ೨೨ ಲಕ್ಷ ಡೋಸ್’ಗಳಷ್ಟು ಲಸಿಕೆ ಮಾತ್ರ ಜನರಿಗೆ ನೀಡಲಾಗಿದೆ ಎಂದು ಇಂಡಿಯನ್ ಎಕ್ಸ್’ಪ್ರೆಸ್ ವರದಿ ಮಾಡಿದೆ.
ಇನ್ನು ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್’ಗೆ ೧೫೦ ರೂ.ನಂತೆ ಲಸಿಕೆ ನೀಡುವ ಸೀರಮ್ ಇನ್ಸ್ಟಿಟ್ಯೂಟ್ ಹಾಗೂ ಭಾರತ್ ಬಯೋಟೆಕ್, ಖಾಸಗಿ ಆಸ್ಪತ್ರೆಗಳಿಗೆ, ರೂ. ೬೦೦ (ಕೋವಿಶೀಲ್ಡ್) ಹಾಗೂ ರೂ. ೧೨೦೦ (ಕೊವ್ಯಾಕ್ಸಿನ್) ದರದಲ್ಲಿ ಮಾರಾಟ ಮಾಡುತ್ತಿದೆ.
ಈ ಕುರಿತಾಗಿ ಪ್ರತಿಕ್ರಿಯಿಸಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನ ಸಹ ಪ್ರಧ್ಯಾಪಕರಾಗಿರುವ ತೇಜಲ್ ಕಾಂತಿಕಾರ್ ಅವರು, ಖಾಸಗಿ ವಲಯದ ಆಸ್ಪತ್ರೆಗಳಲ್ಲಿ ಲಸಿಕಾ ತಯಾರಕರು ಇಷ್ಟಪಡುತ್ತಾರೆ. ಏಕೆಂದರೆ, ಇಲ್ಲಿ ಅವರಿಗೆ ಚೌಕಾಸಿ ಮಾಡಲು ಸಾಧ್ಯವಿದೆ. ಆದರೆ, ಸರ್ಕಾರದೊಂದಿಗೆ ಅದು ಸಾಧ್ಯವಿಲ್ಲ, ಎಂದಿದ್ದಾರೆ.
ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ದರದಲ್ಲಿ ಲಸಿಕೆ ಸಿಗುತ್ತಿರುವಾಗ, ಅದನ್ನು ಜನರಿಗೆ ನೀಡುವ ಸಮದರ್ಭದಲ್ಲಿ ಲಸಿಕೆಗಳು ಮತ್ತಷ್ಟು ದುಬಾರಿಯಾಗಿರುತ್ತದೆ. ಆಸ್ಪತ್ರೆಗಳ ಜನರಿಂದ ಪ್ರತಿ ಕೋವಿಶೀಲ್ಡ್ ಲಸಿಕೆಗೆ ೮೫೦-೧೦೦೦ ರೂ. ಹಾಗೂ ಕೊವ್ಯಾಕ್ಸಿನ್’ಗೆ ೧೨೫೦ ರೂ. ಪಡೆದುಕೊಳ್ಳುತ್ತಿವೆ. ಇದು ಸಮಾಜದ ಮೇಲ್ವರ್ಗದ ಜನರಿಗೆ ‘ಸಹ್ಯ’ವೆನಿಸಿದರೂ, ಕೆಳ ಮಧ್ಯಮ ವರ್ಗದ ಜನರಿಗೆ ಇಷ್ಟು ಬೆಲೆ ತೆರಲು ಸಾಧ್ಯವಾಗದು.
ಹಿಂದಿನಿಂದಲೂ ಕರೋನಾ ಸೋಂಕು, ಭಾರತದಲ್ಲಿನ ಅಸಮಾನತೆಯನ್ನು ಜಗಜ್ಜಾಹಿರು ಮಾಡುತ್ತಿದೆ. ಲಾಕ್ಡೌನ್ ನಿಂದ ಹಿಡಿದು, ಲಸಿಕೆಗಳ ಲಭ್ಯತೆಯ ವರೆಗೆ ಉಳ್ಳವರ ಪಾಲಿಗೆ ಎಲ್ಲವೂ ದಕ್ಕುತ್ತಿದೆ. ಬೆವರು ಹಿಂದಿನಂತೆಯೇ ಸರತಿ ಸಾಲಿಗೆ ಸೀಮಿತರಾಗುತ್ತಿದ್ದಾರೆ. ಮುಖ್ಯವಾಗಿ ಗ್ರಾಮೀಣ ಭಾಗಗಳಲ್ಲಿ ಕರೋನಾ ಸೋಂಕಿನ ನಾಗಾಲೋಟ ಮುಂದುವರೆದಿದ್ದರೂ, ಇನ್ನೂ ಪೂರ್ಣ ಪ್ರಮಾಣದಲ್ಲಿ ಲಸಿಕೆಗಳು ಲಭ್ಯವಾಗಿಲ್ಲ. ಈಗ ಕೇವಲ ನಗರ ಪ್ರದೇಶದ ಆಸ್ಪತ್ರೆಗಳಲ್ಲಿ ಮಾತ್ರ ಖಾಸಗಿಯಾಗಿ ಲಸಿಕೆ ಲಭ್ಯವಾದರೆ, ಗ್ರಾಮೀಣ ಭಾಗದ ಜನರು ಮತ್ತೆ ಸರ್ಕಾರದ ಎದುರು ಕೈಚಾಚಿ ನಿಲ್ಲುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.