ಬೆಂಗಳೂರು: ಪೆಟ್ರೋಲ್ (Petrol)ನಲ್ಲಿ ಎಥೆನಾಲ್ (Ethanol) ಮಿಶ್ರಣ ಮಾಡುವ ಕೇಂದ್ರ ಸರ್ಕಾರದ (Ethanol) ನೀತಿಯನ್ನು ಬಿಜೆಪಿ ನಾಯಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R. Ashoka) ಸಮರ್ಥಿಸಿಕೊಂಡಿದ್ದಾರೆ. ಅಮೆರಿಕ, ಇಟಲಿ ಮತ್ತು ಜರ್ಮನಿಯಂತಹ ದೇಶಗಳಲ್ಲಿ ಶೇ.80ರಷ್ಟು ಎಥೆನಾಲ್ ಬಳಸಲಾಗುತ್ತಿದೆ ಎಂದು ಹೇಳಿರುವ ಅವರು, ಭಾರತದಲ್ಲಿ ಎಥೆನಾಲ್ ಮಿಶ್ರಣದಿಂದ ರೈತರಿಗೆ ಆರ್ಥಿಕ ಲಾಭವಾಗುತ್ತಿದೆ ಎಂದು ಪ್ರತಿಪಾದಿಸಿದ್ದಾರೆ. ಆದರೆ, ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ವಾಹನಗಳ ಇಂಧನ ಸಾಮರ್ಥ್ಯ ಮತ್ತು ಎಥೆನಾಲ್ ಮಿಶ್ರಣದ ಪ್ರಮಾಣದ ಬಗ್ಗೆ ಹಲವರು ಪ್ರಶ್ನೆ ಎತ್ತಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅಶೋಕ್, ಪೆಟ್ರೋಲ್‌ಗಿಂತ ಎಥೆನಾಲ್ ಬೆಲೆ ಹೆಚ್ಚಿದ್ದರೂ ಅದನ್ನು ಪೆಟ್ರೋಲ್‌ಗೆ ಸೇರಿಸಲಾಗುತ್ತಿದೆ ಎಂದು ಹೇಳಿದ್ದಾರೆ. ತಮ್ಮ ಹೇಳಿಕೆಯಲ್ಲಿ ಪೆಟ್ರೋಲ್ ಲೀಟರ್‌ಗೆ 54 ರೂ. ಇದ್ದರೆ, ಎಥೆನಾಲ್ ಬೆಲೆ 56 ರೂ. ಇದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಕೆಲವು ಮುಂದುವರಿದ ದೇಶಗಳು ತಮ್ಮ ಆರ್ಥಿಕತೆಯನ್ನು ಬಲಪಡಿಸುವುದರ ಜೊತೆಗೆ ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಬಳಸುತ್ತಿವೆ ಎಂದು ಅಶೋಕ್ ಹೇಳಿದ್ದಾರೆ. ಭಾರತದಲ್ಲಿ ಪ್ರಸ್ತುತ ಪೆಟ್ರೋಲ್‌ಗೆ ಶೇ.20ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದ್ದು, ಇದರಿಂದ ದೊರೆಯುವ ಸಂಪೂರ್ಣ ಹಣ ರೈತರಿಗೆ ತಲುಪುತ್ತಿದೆ ಎಂಬುದು ಅವರ ವಾದ.
ರೈತರಿಗೆ ಆದಾಯ ತಂದುಕೊಡುವ ಇಂತಹ ನೀತಿಯನ್ನು ಕಾಂಗ್ರೆಸ್ ಸರ್ಕಾರ ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ. ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ವಿವಿಧ ಸಮಸ್ಯೆಗಳ ವಿರುದ್ಧ ಜನರು ನಡೆಸುತ್ತಿರುವ ಪ್ರತಿಭಟನೆಗಳಿಂದ ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ಎಥೆನಾಲ್ ಮಿಶ್ರಣದ ವಿಚಾರವನ್ನು ಮುಂದಿಟ್ಟುಕೊಂಡು ವಿರೋಧ ವ್ಯಕ್ತಪಡಿಸುತ್ತಿದೆ ಎಂದೂ ಆರೋಪಿಸಿದ್ದಾರೆ.

ಅಶೋಕ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ
ಎಥೆನಾಲ್ ಮಿಶ್ರಣದ ಪರವಾಗಿ ಅಶೋಕ್ ನೀಡಿರುವ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅನೇಕರು ಅವರ ವಾದವನ್ನು ಪ್ರಶ್ನಿಸಿದ್ದಾರೆ. ವಿಶೇಷವಾಗಿ ವಾಹನಗಳ ಇಂಧನ ಹೊಂದಾಣಿಕೆಯ ವಿಚಾರವನ್ನು ಮುಂದಿಟ್ಟುಕೊಂಡು ಟೀಕೆ ವ್ಯಕ್ತಪಡಿಸಿದ್ದಾರೆ.
‘ಈಗಾಗಲೇ E20 ಇಂಧನಕ್ಕೆ ನಮ್ಮ ವಾಹನಗಳು ಹೊಂದಿಕೊಳ್ಳುತ್ತಿಲ್ಲ ಎಂಬ ದೂರುಗಳಿವೆ. ಹೀಗಿರುವಾಗ E80 ಬಳಸಲು ವಾಹನಗಳು ಹೇಗೆ ಸಾಧ್ಯ?’ ಎಂಬ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ.
ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಹೆಚ್ಚಿಸುವುದರಿಂದ ವಾಹನಗಳ ಎಂಜಿನ್ ಕಾರ್ಯಕ್ಷಮತೆ, ಇಂಧನ ಬಳಕೆ ಮತ್ತು ವಾಹನಗಳ ಹೊಂದಾಣಿಕೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನು ಪರಿಗಣಿಸಬೇಕೆಂದು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಎಥೆನಾಲ್ ಮಿಶ್ರಣದಿಂದ ದೊರೆಯುವ ಸಂಪೂರ್ಣ ಆದಾಯ ರೈತರಿಗೆ ಸೇರುತ್ತಿದೆ ಎಂಬ ಅಶೋಕ್ ಅವರ ಹೇಳಿಕೆಯ ವಿಶ್ವಾಸಾರ್ಹತೆಯನ್ನೂ ಕೆಲವರು ಪ್ರಶ್ನಿಸಿದ್ದಾರೆ.
@ParamaTapasvii ಎಂಬ ಎಕ್ಸ್ ಬಳಕೆದಾರರು, ರೈತರಿಗೆ ಲಾಭವಾಗುತ್ತಿದೆ ಎಂಬ ವಾದವನ್ನು ತಳ್ಳಿಹಾಕಿ, ಎಥೆನಾಲ್ ಉದ್ಯಮದ ವಿಚಾರವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಪುತ್ರನ ಉದ್ಯಮದೊಂದಿಗೆ ತಳುಕು ಹಾಕಿ ಟೀಕಿಸಿದ್ದಾರೆ.
ಇನ್ನೊಂದೆಡೆ, ಅಶೋಕ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಕೆಲವು ಬಳಕೆದಾರರು, ಸೂಕ್ತ ಮಾಹಿತಿ ಪರಿಶೀಲಿಸದೆ ಅವರು ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ‘ವಾಟ್ಸ್ಆ್ಯಪ್ ಯೂನಿವರ್ಸಿಟಿ’ಯಲ್ಲಿ ಸಿಕ್ಕ ಮಾಹಿತಿಯನ್ನೇ ವಾಸ್ತವಾಂಶವೆಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
@RealMrIG ಎಂಬ ಬಳಕೆದಾರರು, ‘ಎಲ್ಲಾ ಹಣ ರೈತರಿಗೇ ಹೋಗುತ್ತಿದೆ’ ಎಂಬ ಅಶೋಕ್ ಅವರ ಹೇಳಿಕೆಯನ್ನು ಗುರಿಯಾಗಿಸಿಕೊಂಡು ವ್ಯಂಗ್ಯಭರಿತ ವಿಡಿಯೋ ಮೀಮ್ ಹಂಚಿಕೊಂಡಿದ್ದಾರೆ. ಮತ್ತೊಬ್ಬರು E20 ಬದಲಿಗೆ ನೇರವಾಗಿ E50 ಜಾರಿಗೆ ತರಲಿ ಎಂದು ಟೀಕಿಸಿದ್ದಾರೆ.
ಒಟ್ಟಿನಲ್ಲಿ, ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ನೀತಿಯ ಸುತ್ತ ರಾಜಕೀಯ ಆರೋಪ-ಪ್ರತ್ಯಾರೋಪಗಳು ಮುಂದುವರಿದಿದ್ದು, ರೈತರಿಗೆ ಆಗುವ ಲಾಭದ ಜೊತೆಗೆ ವಾಹನಗಳ ಹೊಂದಾಣಿಕೆ ಮತ್ತು ಗ್ರಾಹಕರಿಗೆ ಉಂಟಾಗುವ ಪರಿಣಾಮಗಳ ಬಗ್ಗೆಯೂ ಚರ್ಚೆ ತೀವ್ರಗೊಂಡಿದೆ.






