ಭಾರತೀಯ ರಾಜಕೀಯ ಕ್ಷೇತ್ರದಲ್ಲಿ ಹೊಸ ಪರ್ವ ಶುರುವಾಗಿದೆ. ಮಾರ್ಚ್ನಿಂದ ಈ ವರೆಗೆ ಭಾರತದ 5 ರಾಜ್ಯಗಳಲ್ಲಿ 6 ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಲಾಗಿದೆ. ಐವರು ಮುಖ್ಯಮಂತ್ರಿಗಳು ತಮ್ಮ ಅಧಿಕಾರವಧಿ ಮುಗಿಯುವ ಮುನ್ನವೇ ಕುರ್ಚಿ ಬಿಟ್ಟು ಕೊಟ್ಟಿರುವುದು ಅಸಾಮಾನ್ಯ ಬೆಳವಣಿಗೆಯಾಗಿದೆ. ಇದು ರಾಜಕೀಯ ಕ್ಷೇತ್ರದಲ್ಲಿ ಹೆಚ್ಚು ಚರ್ಚೆಗೆ ಬರುತ್ತಿದ್ದು, ಇದೊಂದು ಹೊಸ ಸಹಜತೆಯೇ ಎನ್ನುವ ಕುತೂಹಲವನ್ನು ಹುಟ್ಟು ಹಾಕುತ್ತಿದೆ. ದೇಶದ ರಾಜಕೀಯದಲ್ಲಿ, ಮುಖ್ಯಮಂತ್ರಿಯನ್ನು ಬದಲಾಯಿಸುವುದು ತುಲನಾತ್ಮಕವಾಗಿ ಹೊಸ ಅಭ್ಯಾಸವಾಗಿದೆ. ಏಕೆಂದರೆ ಸಿಎಂಗಳು ಈ ಹಿಂದೆ ಐದು ವರ್ಷ ಅವಧಿಯವರೆಗೆ ಅಡೆತಡೆಯಿಲ್ಲದೆ ಸೇವೆ ಸಲ್ಲಿಸಿದ್ದಾರೆ. ವಿಶೇಷವಾಗಿ ಅವರ ಪಕ್ಷಕ್ಕೆ ಬಹುಮತವಿದ್ದರೆ ಒಂದು ವಿಶೇಷ ಸನ್ನಿವೇಶ ಸಂಭವಿಸದ ಹೊರತು, ಮುಖ್ಯಮಂತ್ರಿಯು ತನ್ನ ಅವಧಿ ಮುಗಿಯುವ ಮೊದಲು ಬದಲಾಗುವ ಸಾಧ್ಯತೆಯಿಲ್ಲ .
ಸ್ವಾತಂತ್ರ್ಯದ ನಂತರ, ಪವನ್ ಕುಮಾರ್ ಚಾಮ್ಲಿಂಗ್ ಅವರು ಭಾರತೀಯ ರಾಜ್ಯದ ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿದ್ದರು. ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಸ್ಥಾಪಕ ಅಧ್ಯಕ್ಷ ಚಾಮ್ಲಿಂಗ್ ಅವರು 1994 ಮತ್ತು 2019 ರ ನಡುವೆ ಸಿಕ್ಕಿಂನಲ್ಲಿ ತಮ್ಮ ಆಡಳಿತ ನಡೆಸಿದ್ದರು. 1977 ರಿಂದ 2000 ರವರೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಅವರ ಉತ್ತರಾಧಿಕಾರಿಯಾಗಿದ್ದು ಈಗ ಇತಿಹಾಸ. ಒಡಿಶಾದ ನವೀನ್ ಪಟ್ನಾಯಕ್ ಎರಡು ದಶಕಗಳಿಗೂ ಹೆಚ್ಚು ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇವರ ಅಧಿಕಾರಾವಧಿ 2000 ರಲ್ಲಿ ಆರಂಭವಾಯಿತು. 1998 ರಿಂದ 2018 ರವರೆಗೆ ಮಾಣಿಕ್ ಸರ್ಕಾರ್ ತ್ರಿಪುರಾದಲ್ಲಿ ಆಡಳಿತ ನಡೆಸಿದ್ದರು. ರಾಜಸ್ಥಾನದ ಮೋಹನ್ ಲಾಲ್ ಸುಖಾಡಿಯಾ (1954 – 1971), ಛತ್ತೀಸ್ಘಡ್ನ ರಮಣ್ ಸಿಂಗ್ (2003 – 2018), ದೆಹಲಿಯಲ್ಲಿ ಶೀಲಾ ದೀಕ್ಷಿತ್ (1998 – 2013), ಅಸ್ಸಾಂನ ತರುಣ್ ಗೊಗೊಯ್ (2001 – 2016), ಮಣಿಪುರದ ಒಕ್ರಮ್ ಇಬೋಬಿ ಸಿಂಗ್ (2002 – 2017), ಮತ್ತು ಗುಜರಾತಿನ ನರೇಂದ್ರ ಮೋದಿ (2001 – 2014) ಕೂಡ ಸುದೀರ್ಘವಾಗಿ ಮುಖ್ಯಮಂತ್ರಿಯಾಗಿದ್ದರು.
ಮಾರ್ಚ್ ನಿಂದ ಸೆಪ್ಟೆಂಬರ್.. ಸತತ ಆರು ಸಿಎಂ ಬದಲಾವಣೆಗೆ ಸಾಕ್ಷಿಯಾದ ರಾಷ್ಟ್ರ ರಾಜಕಾರಣ !
ಮಾರ್ಚ್ ನಲ್ಲಿ, ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ತಿರತ್ ಸಿಂಗ್ ರಾವತ್ ಅಧಿಕಾರದಿಂದ ಕೆಳಗಿಳಿಸಿದರು. 2017 ಇಂದ ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದ ತ್ರಿವೇಂದ್ರ ಸಿಂಗ್ ರಾವತ್ ಅವರ ನಾಲ್ಕನೇ ವಾರ್ಷಿಕೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ದೊಡ್ಡ ಬದಲಾವಣೆ ಮಾಡಲಾಯಿತು. ಮಾರ್ಚ್ನಲ್ಲಿ ಲೋಕಸಭಾ ಸಂಸದ ತಿರತ್ ಸಿಂಗ್ ಅವರಿಗೆ ಅಧಿಕಾರ ನೀಡಲಾಗಿತ್ತು. ರಾಜ್ಯದಲ್ಲಿ ಮುಂದಿನ ವರ್ಷ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ರಾವತ್ ಅವರ ನಿರ್ಗಮನಕ್ಕೆ ಹಲವಾರು ಅಂಶಗಳ ಕಾರಣವೆಂದು ಹೇಳಲಾಗಿತ್ತು. ಇದರಲ್ಲಿ ಅವರ ನಿರ್ವಹಣಾ ಶೈಲಿಯ ಮೇಲೆ ಬಿಜೆಪಿಯ ರಾಜ್ಯ ಘಟಕದಲ್ಲಿ ಹೆಚ್ಚುತ್ತಿರುವ ಅಸಮಾಧಾನವೂ ಸೇರಿದೆ ಎನ್ನುವ ಅಂಶವನ್ನು ಸ್ವಪಕ್ಷೀಯರೇ ಆರೋಪಿಸಿದ್ದರು.
ಮೇ ತಿಂಗಳಲ್ಲಿ, ಸರ್ಬಾನಂದ ಸೋನೊವಾಲ್ ಅಧಿಕಾರವಧಿ ಮುಗಿದ ಬಳಿಕ ಅಸ್ಸಾಂನ ಮುಖ್ಯಮಂತ್ರಿಯಾಗಿ ಹಿಮಾಂತ ಬಿಸ್ವಾ ಶರ್ಮಾ ಉತ್ತರಾಧಿಕಾರಿಯಾದರು. ಸೋನೊವಾಲ್ ಅವರ ಅಧಿಕಾರವಧಿ ಕೊನೆಗೊಂಡ ನಂತರ ಮೇ ತಿಂಗಳಲ್ಲಿ ರಾಜ್ಯವು ಚುನಾವಣೆಗೆ ಹೋದಾಗ, ಶರ್ಮಾ ಅಧಿಕಾರ ವಹಿಸಿಕೊಂಡರು. ಬಿಜೆಪಿ ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯಿತು. ಈಶಾನ್ಯದಲ್ಲಿ ಕೇಸರಿ ಪಕ್ಷದ ಸಾರಥಿಯಾದ ಶರ್ಮಾ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಆಯ್ಕೆ ಮಾಡಲಾಯಿತು.
ಜುಲೈನಲ್ಲಿ, ತಿರತ್ ಸಿಂಗ್ ರಾವತ್ ಅಧಿಕಾರ ಬಿಟ್ಟುಕೊಟ್ಟರು. ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಆಯ್ಕೆಯಾದರು. ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದ ತಿರತ್ ಸಿಂಗ್ ರಾವತ್ ಅವರು ಅಧಿಕಾರ ವಹಿಸಿಕೊಂಡ ನಾಲ್ಕು ತಿಂಗಳೊಳಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ಪ್ರಮಾಣವಚನ ಸ್ವೀಕರಿಸಿದ ಆರು ತಿಂಗಳಲ್ಲಿ ಪಕ್ಷವು ಅವರನ್ನು ವಿಧಾನಸಭೆಗೆ ಆಯ್ಕೆ ಮಾಡದಿರುವುದು ಅವರ ನಿರ್ಗಮನಕ್ಕೆ ಒಂದು ಕಾರಣವಾಗಿದೆ. ವಿಧಾನಸಭೆಯ ಅವಧಿ ಮಾರ್ಚ್ 2022 ರಲ್ಲಿ ಕೊನೆಗೊಳ್ಳಲಿದ್ದು ಒಂದು ವರ್ಷಕ್ಕಿಂತ ಕಡಿಮೆ ಇರುವ ಕಾರಣ, ಖಾಲಿ ಇರುವ ಸದಸ್ಯರನ್ನು ಭರ್ತಿ ಮಾಡಲು ಇಲ್ಲಿ ಉಪಚುನಾವಣೆಗೆ ಆದೇಶಿಸಲು ಸಾಧ್ಯವಿರಲಿಲ್ಲ. ಪ್ರಜಾಪ್ರತಿನಿಧಿ ಕಾಯಿದೆಯ ಪ್ರಕಾರ ಒಂದು ಸದನದ ಅವಧಿ ಒಂದು ವರ್ಷಕ್ಕಿಂತ ಕಡಿಮೆ ಇದ್ದರೆ ಒಂದು ಸ್ಥಾನಕ್ಕೆ ಉಪ ಚುನಾವಣೆ ಕರೆಯಬಾರದು. ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷವು ಉತ್ತರಾಖಂಡದ ಹೊಸ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿಯವರನ್ನು ನಾಮ ನಿರ್ದೇಶನ ಮಾಡಿತು.
ಜುಲೈನಲ್ಲಿ, ಬಿಎಸ್ ಯಡಿಯೂರಪ್ಪನವರ ರಾಜೀನಾಮೆ ಬಳಿಕ ಬಸವರಾಜ ಬೊಮ್ಮಾಯಿವರು ನೂತನ ಮುಖ್ಯಮಂತ್ರಿಯಾದರು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಿಎಸ್. ಯಡಿಯೂರಪ್ಪನವರು ಎರಡು ವರ್ಷಗಳ ಅಧಿಕಾರಾವಧಿಯ ನಂತರ ರಾಜೀನಾಮೆ ನೀಡಿದರು. 2023 ರಲ್ಲಿ ರಾಜ್ಯವು ಚುನಾವಣೆ ಎದುರಿಸಲಿದೆ. 78 ವರ್ಷದ ಯಡಿಯೂರಪ್ಪನವರು 75 ನೇ ವಯಸ್ಸಿನಲ್ಲಿ ನಿವೃತ್ತಿಯಾಗುವ ಪಕ್ಷದ ಅಲಿಖಿತ ಸಂಪ್ರದಾಯವನ್ನು ಮುರಿದಿದ್ದರಿಂದ ಈ ಬದಲಾವಣೆಗೆ ಸಾಕ್ಷಿಯಾಯಿತು.
ಇತ್ತೀಚೆಗೆ ಸೆಪ್ಟೆಂಬರ್ ನಲ್ಲಿ, ವಿಜಯ್ ರೂಪಾನಿ ಅವರ ನಂತರ ಭೂಪೇಂದ್ರಭಾಯ್ ಪಟೇಲ್ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. 2016 ರಿಂದ 2021 ರ ನಡುವೆ ರೂಪಾನಿ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲು 14 ತಿಂಗಳು ಇರುವಾಗಲೇ ರಾಜೀನಾಮೆ ಸಲ್ಲಿಸಿದರು. ಇತ್ತೀಚೆಗಿನ ಅಸೆಂಬ್ಲಿಯಲ್ಲಿ 1.5 ವರ್ಷಗಳನ್ನು ಒಳಗೊಂಡಂತೆ ಐದು ವರ್ಷಗಳ ಅಧಿಕಾರಾವಧಿಯನ್ನು ಸ್ಮರಿಸಲು ಅವರಿಗೆ ಅವಕಾಶವಿದ್ದರೂ ಅವರು ಈ ಬಾರಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲಿಲ್ಲ. ಆಗಸ್ಟ್ 2016 ರಲ್ಲಿ, ಅವರು ಇದೇ ಪರಿಸ್ಥಿತಿಯಲ್ಲಿ ಆನಂದಿಬೆನ್ ಪಟೇಲ್ ಅವರನ್ನು ಕೆಳಗಿಳಿಸಿದ್ದರು. ಡಿಸೆಂಬರ್ 2017 ರಲ್ಲಿ, ರಾಜ್ಯದಲ್ಲಿ ಚುನಾವಣೆ ನಡೆಯಿತು.
ಸೆಪ್ಟೆಂಬರ್ನಲ್ಲಿ ಕಾಂಗ್ರೆಸ್ ಆಡಳಿತ ಇರುವ ಅಮರೀಂದರ್ ಸಿಂಗ್ ಸಿಎಂ ಸ್ಥಾನದಿಂದ ಕೆಳಗಿಳಿದರು. ಪಂಜಾಬ್ ಮುಖ್ಯಮಂತ್ರಿಯಾಗಿ ಚರಣಜಿತ್ ಸಿಂಗ್ ಚನ್ನಿ ಅಧಿಕಾರ ವಹಿಸಿಕೊಂಡರು. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿನ ಮುಖ್ಯಮಂತ್ರಿಗಳನ್ನು ತೆಗೆದುಹಾಕಲಾಗಿದ್ದರೇ, ಕಾಂಗ್ರೆಸ್ ಮಧ್ಯಂತರ ಅವಧಿಯಲ್ಲಿ ತಮ್ಮ ಸಿಎಂ ಅನ್ನು ಬದಲಿಸಿ ಅಚ್ಚರಿ ನಡೆ ಪ್ರದರ್ಶಿಸಿದೆ. ಮುಂದಿನ ವರ್ಷದ ಆರಂಭದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ, ಆದರೆ ಅಮರೀಂದರ್ ಸಿಂಗ್ ಅವರು ತಮ್ಮ ಎರಡನೇ ಅವಧಿಯನ್ನು ಮುಗಿಸುವ ಮುನ್ನ ದಲಿತ ನಾಯಕನಿಂದ ಬದಲಾವಣೆಗೆ ಒಳಪಟ್ಟಿದ್ದಾರೆ. 1942 ರಲ್ಲಿ ಜನಿಸಿದ ಸಿಂಗ್ ಅವರನ್ನು ‘ಜನರ ಮಹಾರಾಜ’ ಎಂದು ಕರೆಯಲಾಗುತ್ತದೆ. 2002 ರಿಂದ 2007 ರ ನಡುವೆ, ಅಮರೀಂದರ್ ಸಿಂಗ್ ಪಂಜಾಬ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. 1997 ರ ನಂತರ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸದ ಮೊದಲ ಪಂಜಾಬ್ ಮುಖ್ಯಮಂತ್ರಿಯಾಗಿದ್ದಾರೆ. ಹೀಗೆ ದೇಶದಲ್ಲಿ ಹೊಸ ಮಾದರಿಯ ರಾಜಕಾರಣವೊಂದು ಈ ಮೂಲಕ ಶುರುವಾಗಿದೆ. ಅಧಿಕಾರಾವಧಿ ಮುಗಿಯುವ ಮುನ್ನವೇ ಸಿಎಂ ಬದಲಾವಣೆ ಚುನಾವಣೆಯ ದೃಷ್ಟಿಯಲ್ಲಿಯೇ ನಡೆಯುತ್ತಿದೆಯಾದರೂ, ಬಿಜೆಪಿ ಹಾಗೂ ಕಾಂಗ್ರೆಸ್ ಇದರಿಂದ ಪಡೆಯಲು ಬಯಸುವ ಲಾಭವೇನು ಎಂಬುವುದೇ ಸದ್ಯದ ಚರ್ಚಾವಸ್ತು.