ಚೆನ್ನೈನಲ್ಲಿ 25 ವರ್ಷದ ಯುವಕನ ಕಸ್ಟಡಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಹಲವಾರು ಪೊಲೀಸ್ ಸಿಬ್ಬಂದಿಯನ್ನು ಕೊಲೆ ಆರೋಪದಲ್ಲಿ ಬಂಧಿಸಲು ನಿರ್ಧರಿಸಲಾಗಿದೆ.
ಈ ಹಿಂದೆ ಅನುಮಾನಾಸ್ಪದ ಸಾವೆಂದು ದಾಖಲಾಗಿದ್ದ ಈ ಪ್ರಕರಣವನ್ನು, ಮರಣೋತ್ತರ ಪರೀಕ್ಷೆಯಲ್ಲಿ ಮೃತ ದೇಹದ ಮೇಲೆ 13 ಗಾಯಗಳು ಪತ್ತೆಯಾದ ಬಳಿಕ ಕೊಲೆ ಪ್ರಕರಣವೆಂದು ಮಾರ್ಪಡಿಸಲಾಗಿದೆ.
ಮೃತ ಯುವಕ ಕಳೆದ ತಿಂಗಳು ಗಾಂಜಾ ಸಾಗಿಸುತ್ತಿದ್ದ ಮತ್ತು ಪೊಲೀಸರ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದ ಎಂದು ಆರೋಪಿಸಿ ಬಂಧನಕ್ಕೆ ಒಳಗಾಗಿದ್ದ. ಪೊಲೀಸರ ವಶದಲ್ಲಿರುವಾಗಲೇ ಆತ ಮೃತಪಟ್ಟಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಸಬ್ ಇನ್ಸ್ಪೆಕ್ಟರ್, ಕಾನ್ಸ್ಟೆಬಲ್ ಮತ್ತು ಗೃಹ ರಕ್ಷಕ ದಳದ ಒಬ್ಬ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಹಲವು ಪೊಲೀಸರನ್ನು ವಿಚಾರಣೆಗೆ ಕರೆಸಲಾಗಿದೆ.
“ನಾವು ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯಿದೆಯನ್ನು ಸಹ ಅನ್ವಯಿಸುತ್ತೇವೆ. ಪ್ರಕರಣಕ್ಕೆ ಸಂಬಂಧಿಸಿ ಎಷ್ಟು ಪೊಲೀಸ್ ರನ್ನು ಬಂಧಿಸಲಾಗುವುದು ಎಂಬ ಮಾಹಿತಿಯನ್ನು ನಾವು ಹಂಚಿಕೊಳ್ಳುತ್ತೇವೆ” ಎಂದು ಹಿರಿಯ ಅಧಿಕಾರಿಯೊಬ್ಬರು ಎನ್ಡಿಟಿವಿಗೆ ತಿಳಿಸಿದ್ದಾರೆ.
ಶುಕ್ರವಾರ, ವಿಧಾನಸಭೆಯಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕುರಿತು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, “ಪ್ರತಿಪಕ್ಷದ ನಾಯಕ ಹೇಳಿದಂತೆ, ಮರಣೋತ್ತರ ಪರೀಕ್ಷೆಯು ಹದಿಮೂರು ಗಾಯಗಳನ್ನು ಸೂಚಿಸುತ್ತದೆ. ಇದರ ಆಧಾರದ ಮೇಲೆ, ಪ್ರಕರಣವನ್ನು ಕೊಲೆ ಪ್ರಕರಣವನ್ನಾಗಿ ಬದಲಾಯಿಸಲಾಗಿದೆ ಎಂದು ನಾನು ಈ ಸದನಕ್ಕೆ ತಿಳಿಸಲು ಬಯಸುತ್ತೇನೆ, ಪೊಲೀಸರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ, ಅದರ ತನಿಖೆಯನ್ನು ಮುಂದುವರಿಸಲು ಸಿಬಿ-ಸಿಐಡಿಗೆ ಸೂಚಿಸಲಾಗಿದೆ.” ಎಂದು ತಿಳಿಸಿದ್ದಾರೆ.
ಆದರೆ ಪ್ರತಿಪಕ್ಷಗಳು ಸಿಬಿಐ ತನಿಖೆಗೆ ಒತ್ತಾಯಿಸಿ ಸಭಾತ್ಯಾಗ ನಡೆಸಿತು. “ಇದು ಕೊಲೆ ಪ್ರಕರಣ ಎಂದು ಮುಖ್ಯಮಂತ್ರಿಯೇ ಹೇಳಿರುವಾಗ ನಮ್ಮ ಪೊಲೀಸರು ಹೇಗೆ ತನಿಖೆ ನಡೆಸುತ್ತಾರೆ? ಸಿಬಿಐ ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ. ಮುಖ್ಯಮಂತ್ರಿ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದಾರೆ” ಎಂದು ಪಳನಿಸ್ವಾಮಿ ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ವಿಘ್ನೇಶ್ ಅವರ ತಲೆ, ಕಣ್ಣು ಮತ್ತು ಕೆನ್ನೆಯ ಮೇಲೆ ಗಾಯಗಳಾಗಿವೆ. ಆದಾಗ್ಯೂ, ಇತರ ಕೆಲವು ಪರೀಕ್ಷೆಗಳ ವರದಿಗಳು ಇನ್ನೂ ಬಂದಿಲ್ಲವಾದ್ದರಿಂದ ಸಾವಿನ ಕಾರಣವನ್ನು ಇನ್ನೂ ದೃಢೀಕರಿಸಲಾಗಿಲ್ಲ.
ಪೊಲೀಸರ ಪ್ರಕಾರ, ವಿಘ್ನೇಶ್ ಕಸ್ಟಡಿಯಲ್ಲಿ ರೋಗಗ್ರಸ್ತವಾಗಿದ್ದು, ನಂತರ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಉಳಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಹೊರಬಂದ ಪರಿಶೀಲಿಸದ ವೀಡಿಯೊವು, ವಿಘ್ನೇಶ್ ನನ್ನು ಪೊಲೀಸರು ಬೆನ್ನಟ್ಟುತ್ತಿರುವಾಗ ಆತ ಎಡವಿ ಬೀಳುವುದನ್ನು ತೋರಿಸುತ್ತದೆ. ಒಬ್ಬ ಪೋಲೀಸನು ಅವನನ್ನು ಒಮ್ಮೆ ಲಾಠಿಯಿಂದ ಹೊಡೆಯುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ವಿಘ್ನೇಶ್ಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಪ್ರತ್ಯಕ್ಷದರ್ಶಿ ಆರೋಪಿಸಿದ್ದಾರೆ. “ಅವರನ್ನು ರಾತ್ರಿ 11 ರಿಂದ ಬೆಳಗಿನ ಜಾವ 3: 30 ರ ವರೆಗೆ ಥಳಿಸಲಾಗಿದೆ” ಎಂದು ಈ ವಿಷಯವನ್ನು ಕೈಗೆತ್ತಿಕೊಂಡಿರುವ ಮಾನವ ಹಕ್ಕುಗಳ ಸಂಘಟನೆಯಾದ ಪೀಪಲ್ಸ್ ವಾಚ್ನ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿ ಟಿಫಾಗ್ನೆ ಆರೋಪಿಸಿದ್ದಾರೆ.