ಮಹಿಳೆಯರ ಮೇಲಿನ ದೌರ್ಜನ್ಯ, ಶೋಷಣೆ (Violence against women) ದಿನಕಳೆದಂತೆ ಜಾಸ್ತಿಯಾಗುತ್ತಲೇ ಇದೆ. ಗಂಡಿನ ಅಹಂಗೆ ಮಹಿಳೆಯರ ಜೊತೆಗೆ ಮಕ್ಕಳು ಸಹ ಬಲಿಯಾಗುತ್ತಿದ್ದಾರೆ. ಹೀಗಾಗಿ ಮಹಿಳೆಯರಿಗೆ ಮಕ್ಕಳಿಗೆ ನೈತಿಕ (Women and Childrens) ಹಾಗೂ ಕಾನೂನಾತ್ಮಕ ನೆರವು ನೀಡಲು ಪೊಲೀಸ್ ಇಲಾಖೆ ಈಗ ಒಂದು ಹೆಜ್ಜೆ ಮುಂದಿಟ್ಟಿದೆ.
ಜಗತ್ತು ಆಧುನಿಕತೆಗೆ ಎಷ್ಟೇ ತೆರೆದುಕೊಂಡರೂ ಮಹಿಳೆಯರು ಇಂದಿಗೂ ಹಲವು ರೀತಿಯಲ್ಲಿ ತುಳಿತಕ್ಕೆ ಒಳಗಾಗುತ್ತಿದ್ದಾರೆ. ಹೆಣ್ಣಿನ ಮೇಲಿನ ಶೋಷಣೆ, ದೌರ್ಜನ್ಯ ಹಿಂದತೆ ಇಂದಿಗೂ ಮುಂದುವರಿದು ಕೊಂಡು ಬಂದಿದೆ. ಈ ಹಿನ್ನಲೆ ಸೇವ್ ಸಿಟಿ ಪ್ಲಾನ್ ಅಡಿಯಲ್ಲಿ ಬೆಂಗಳೂರಿನಲ್ಲಿ ಈಗ ಮೊಟ್ಟ ಮೊದಲ ಭಾರಿಗೆ ನಿರ್ಭಯ ಕೇಂದ್ರ – ಸಖಿ ಒನ್ ಸ್ಟಾಪ್ ಸೆಂಟರ್ ಆರಂಭಗೊಂಡಿದೆ. ಮಹಿಳೆಯರು ಮತ್ತು ಮಕ್ಕಳಿಗಾಗಿ ನಿರ್ಭಯ ಕೇಂದ್ರ-ಸಖಿ ಒನ್ ಸ್ಟಾಪ್ ಸೆಂಟರ್ ಬೆಂಗಳೂರಿನ ಮೆಜೆಸ್ಟಿಕ್ ನ ಬಿಎಂಟಿಸಿ ಏರ್ಪೋರ್ಟ್ ಬಸ್ ಕೌಂಟರ್ ಬಳಿ ಆರಂಭವಾಗಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಕಾನೂನು ಸಲಹೆ, ವೈದ್ಯಕೀಯ ಚಿಕಿತ್ಸೆ, ಪೊಲೀಸ್ ನೆರವು, ಆಪ್ತ ಸಮಾಲೋಚನೆ, ತಾತ್ಕಾಲಿಕ ಆಶ್ರಯ, ರಕ್ಷಣೆಯನ್ನು ಈ ಕೇಂದ್ರದ ಮೂಲಕವೇ ನೀಡಲಾಗುತ್ತದೆ.
ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯ ಪ್ರಕರಣ ನಡೆದ ಬಳಿಕ ನಮ್ಮ ರಾಜ್ಯ ಸರ್ಕಾರದ ವತಿಯಿಂದ ಮಹಿಳೆಯರ ರಕ್ಷಣೆಗೆ ಗೆಳತಿ ಕೇಂದ್ರ ಆರಂಭಿಸಲಾಗಿತ್ತು. ಬಳಿಕ ಕೇಂದ್ರ ಸರ್ಕಾರದ ವತಿಯಿಂದ ಮಹಿಳೆಯರ ರಕ್ಷಣೆಗೆ ಎಲ್ಲಾ ರಾಜ್ಯದಲ್ಲಿ ಸಖಿ ಯೋಜನೆ ಪರಿಚಯಿಸಿತು. ಅದಾದ ಮೇಲೆ ಸಖಿ ಒನ್ ಸ್ಟಾಪ್ ಸೆಂಟರ್ ಆರಂಭವಾಯಿತು. ಆದರೆ ಈಗ ಸೇವ್ ಸಿಟಿ ಪ್ಲಾನ್ ಅಡಿಯಲ್ಲಿ ಪೊಲೀಸ್ ಇಲಾಖೆ ಹಾಗೂ ಸಖಿ ಒನ್ ಸ್ಟಾಪ್ ಸೆಂಟರ್ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ನಿರ್ಭಯ ಕೇಂದ್ರ-ಸಖಿ ಒನ್ ಸ್ಟಾಪ್ ಸೆಂಟರ್ ಆರಂಭಗೊಂಡಿದೆ.
ಸಖಿ ಒನ್ ಸ್ಟಾಪ್ ಸೆಂಟರ್ ಉದ್ದೇಶವೇನು.!?
- ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಕಾನೂನು ಸಲಹೆ, ವೈದ್ಯಕೀಯ ಚಿಕಿತ್ಸೆ, ಪೊಲೀಸ್ ನೆರವು, ಆಪ್ತ ಸಮಾಲೋಚನೆ, ತಾತ್ಕಾಲಿಕ ಆಶ್ರಯ
- 24 ಗಂಟೆಗಳ ಕಾಲ ಉಚಿತ ಸೌಲಭ್ಯ
- FIR ದಾಖಲಿಸಿ ಪ್ರಕರಣ ಪೊಲೀಸ್ ಠಾಣೆಗೆ ವರ್ಗಾವಣೆ
- ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಆಶ್ರಯ
ಇಲ್ಲಿ ಮಹಿಳೆಯರು, ಮಕ್ಕಳು ತಮ್ಮ ಯಾವುದೇ ಸಮಸ್ಯೆಯನ್ನು ಮುಕ್ತವಾಗಿ ಹೇಳಿಕೊಳ್ಳಬಹುದು. ಒಂದು ವೇಳೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೆ ಈ ಕೇಂದ್ರದಿಂದ ನೇರವಾಗಿ ಕೋರ್ಟ್ ಗೆ ವೀಡಿಯೋ ಕಾಲ್ ಅಲ್ಲಿ ವಿಚಾರಣೆ ನಡೆಸುವ ಅವಕಾಶವಿದೆ. ಮಕ್ಕಳು ಕೆಲವೊಮ್ಮೆ ಸ್ಟೇಶನ್ನಲ್ಲಿ ಮಾತನಾಡೋದಕ್ಕೆ ಕೂಡ ಭಯ ಪಡುವಂತಹ ಸನ್ನಿವೇಶ ಇರುತ್ತೆ. ಅಂತಹ ಸಂದರ್ಭದಲ್ಲಿ ಈ ಸೆಂಟರ್ ಅಲ್ಲಿ ಆ ಮಕ್ಕಳು ಮನಸಿನ ಮಾತನ್ನು ಮುಕ್ತವಾಗಿ ಹೇಳುವ ಅವಕಾಶವಿದೆ. ಜೊತೆಗೆ ಕೆಲವೊಂದು ಸಂದರ್ಭದಲ್ಲಿ ಸಂತ್ರಸ್ತರು ಉಳಿದು ಕೊಳ್ಳಲು ಸ್ಥಳ ಇಲ್ಲದಿದ್ದಾಗ ಈ ನಿರ್ಭಯ ಕೇಂದ್ರದಲ್ಲಿ 5 ದಿನಗಳ ವರೆಗೆ ಉಳಿದುಕೊಳ್ಳುವ ಅವಕಾಶವಿದೆ. 5 ದಿನ ಆದ ಮೇಲೆ ಸ್ವಧಾರ್ ಗೃಹ್ ಯೋಜನೆಯ ಅಡಿಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕೂಡ ಮಾಡಲಾಗುತ್ತದೆ.
ರಾಜಧಾನಿಯಲ್ಲಿ ಪ್ರತಿ ನಿತ್ಯ 5 ರಿಂದ 6 ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿದೆ. ರಾಜ್ಯದಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ನಲ್ಲಿ ಈವರೆಗೆ ಇದೇ ರೀತಿ ಸಾವಿರಾರು ಸಂಖ್ಯೆಯಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ನಮೂದಾಗಿದೆ. 2021-22 ಫೆಬ್ರವರಿ ವರೆಗೆ ರಾಜ್ಯದ ಸಖಿ ಒನ್ ಸ್ಟಾಪ್ ನಲ್ಲಿ 5860 ಮಹಿಳಾ ದೌರ್ಜನ್ಯ ಕೇಸ್ ದಾಖಲಾಗಿದೆ. ಈ ಪೈಕಿ ರಾಜ್ಯದ ರಾಜಧಾನಿಯಲ್ಲಿ 800 ರಕ್ಕೂ ಅಧಿಕ ದೌರ್ಜನ್ಯ ಕೇಸ್ ಗಳು ದಾಖಲಾಗಿವೆ. ಈ 5860 ಪ್ರಕರಣಗಳಲ್ಲಿ ಸ್ವಯಂ ರಕ್ಷಣೆಗಾಗಿ ಮತ್ತು ದೌರ್ಜನ್ಯದ ಬಗ್ಗೆ ದಾಖಲಾದ ಕೇಸುಗಳೇ ಹೆಚ್ಚು. ಇದರ ಹೊರತಾಗಿ ಅತ್ಯಚಾರ, ಕೌಟುಂಬಿಕ ಹಿಂಸೆ, ಲೈಂಗಿಕ ಕಿರುಕುಳ, ಆಸಿಡ್ ದಾಳಿ, ಸಂತಾನೋತ್ಪತ್ತಿ ದಬ್ಬಾಳಿಕೆ, ಹೆಣ್ಣು ಶಿಶುಹತ್ಯೆ, ಪ್ರಸವಪೂರ್ವ ಲೈಂಗಿಕ ಆಯ್ಕೆ ಹಾಗೂ ಅಪಹರಣ ಮತ್ತು ಬಲವಂತದ ಮದುವೆ ಇತ್ಯಾದಿ ಪ್ರಕರಣಗಳೂ ಇವೆ. ಒಟ್ಟಾರೆಯಾಗಿ ಮಹಿಳೆಯರು ಮತ್ತು ಮಕ್ಕಳು ಮುಕ್ತವಾಗಿ ತಮ್ಮ ಸಮಸ್ಯೆ ಹೇಳಿಕೊಂಡು ಆ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಈ ನಿರ್ಭಯ ಕೇಂದ್ರ-ಸಖಿ ಒನ್ ಸ್ಟಾಪ್ ಸೆಂಟರ್ ಪೂರಕವಾಗಿದೆ ಎನ್ನವುದರಲ್ಲಿ ಯಾವುದೇ ಅನುಮಾನವಿಲ್ಲ.