ರೈತರ ನಿರಂತರ ಹೋರಾಟಕ್ಕೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ತಾರೆಯರು, ಹೋರಾಟಗಾರರು ಭಾರತ ಸರ್ಕಾರದ ನಡೆಯನ್ನು ಖಂಡಿಸಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದರೆ, ಅದನ್ನು ವಿರೋಧಿಸಿ ಕೇಂದ್ರ ಸರ್ಕಾರದ ಪರವಾಗಿ ಭಾರತದ ಕ್ರಿಕೆಟ್ ಆಟಗಾರರು, ಬಾಲಿವುಡ್ ನಟ ನಟಿಯರು ಟ್ವೀಟ್ ಮಾಡಿದರೆ, ಅವರಿಗೆಲ್ಲಾ ತದ್ವಿರುದ್ಧವಾಗಿ ಬಾಲಿವುಡ್ ನಟಿಯರಾದ ಸೋನಾಕ್ಷಿ ಸಿನ್ಹಾ ಹಾಗೂ ತಾಪ್ಸಿ ಪೊನ್ನು ರೈತರ ಪರವಾಗಿ ಮಾತನಾಡಿದ್ದಾರೆ.
ಈ ಕುರಿತು ತನ್ನ ಇನ್ಸ್ಟಗ್ರಾಮ್ ಖಾತೆ ಮೂಲಕ ಪ್ರತಿಕ್ರಿಯಿಸಿರುವ ಸೋನಾಕ್ಷಿ ಸಿನ್ಹಾ, ಪತ್ರಕರ್ತರು ಕಿರುಕುಳಕ್ಕೊಳಗಾಗುತ್ತಿದ್ದಾರೆ. ಇಂಟರ್ನೆಟ್ ಸ್ಥಗಿತಗೊಳಿಸಲಾಗುತ್ತಿದೆ. ಸರ್ಕಾರ ಮತ್ತು ಮಾಧ್ಯಮಗಳು ಪ್ರತಿಭಟನಾಕಾರರ ವಿರುದ್ಧ ವ್ಯವಸ್ಥಿತ ಸಂಚು ರೂಪಿಸುತ್ತಿದೆ. ಧ್ವೇಷದ ಮಾತುಗಳು (ದೇಶ್ ಕೆ ಗದ್ದಾರೊಂ ಕೊ, ಗೋಲಿ ಮಾರೊ ಸರ್ದಾರೊ ಕೊ ಈಗ ಚಾಲ್ತಿಗೆ ಬಂದಿದೆ) ಪ್ರವರ್ಧಮಾನಕ್ಕೆ ಬರುತ್ತಿದೆ. ಇದು ಜಾಗತಿಕ ಚರ್ಚಾಕೇಂದ್ರ ವಿಷಯವಾಗಿ ಮಾರ್ಪಟ್ಟಿದೆ ಎಂದು ಸಿನ್ಹಾ ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ವಿದೇಶಿ ತಾರೆಯರು ಭಾರತದ ಸನ್ನಿವೇಶಗಳಿಗೆ ಪ್ರತಿಕ್ರಿಯಿಸುವುದನ್ನು ಹಸ್ತಕ್ಷೇಪ ಎಂದು ಏಕೆ ಕರೆಯುತ್ತೀರಿ ಎಂದು ಪ್ರಶ್ನಿಸಿರುವ ಸೋನಾಕ್ಷಿ, ಮನುಷ್ಯರಿಗಾಗಿ ಮನುಷ್ಯ ನಿಲ್ಲುವ ಮಾನವೀಯತೆ ರಿಹಾನ್ನ, ಗ್ರೇಟಾ ಅವರ ನಿಲುವನ್ನು ಸಮರ್ಥಿಸಿದ್ದಾರೆ.
“ಮಾನವ ಹಕ್ಕುಗಳ ಉಲ್ಲಂಘನೆ, ಇಂಟರ್ನೆಟ್ ಸ್ಥಗಿತ ಮತ್ತು ಅಭಿವ್ಯಕ್ತಿಯ ನಿಗ್ರಹಗಳು, ಪ್ರಭುತ್ವದ ಪ್ರೊಪಗಂಡಾ, ದ್ವೇಷದ ಮಾತು ಮತ್ತು ಅಧಿಕಾರ ದುರುಪಯೋಗದ ವಿರುದ್ಧ ಈ ಧ್ವನಿಗಳು ವ್ಯಕ್ತವಾಗಿವೆ” ಎಂದು ಸೋನಾಕ್ಷಿ ಸಿನ್ಹಾ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ.
ದೇಶದ ರೈತರೊಂದಿಗೆ ನಿಲ್ಲಿ, ದೇಶದಲ್ಲಿ ರೈತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಎದ್ದೇಳಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಸೋನಾಕ್ಷಿ ಕರೆ ನೀಡಿದ್ದಾರೆ.
ಇದಕ್ಕೂ ಮೊದಲು ಬಹುಬಾಷಾ ನಟಿ ತಾಪ್ಸಿ ಪನ್ನು, “ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಅಲ್ಲಾಡಿಸುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಅಲ್ಲಾಡಿಸುವುದಾದರೆ, ಒಂದು ಕಾರ್ಯಕ್ರಮ ನಿಮ್ಮ ಧಾರ್ಮಿಕ ನಂಬಿಕೆಯನ್ನು ಅಲ್ಲಾಡಿಸುವುದಾದರೆ… ಮೊದಲು ನೀವು ನಂಬಿರುವ ಮೌಲ್ಯಗಳನ್ನು ಗಟ್ಟಿಗೊಳಿಸಲು ಕೆಲಸ ಮಾಡಿ. ಬದಲಿಗೆ ಉಳಿದವರಿಗೆ ಪ್ರೊಪಗಂಡಾ ಪಾಠ ಮಾಡಲು ಬರಬೇಡಿ..” ಎಂದು ಟ್ವೀಟ್ ಮಾಡಿದ್ದರು.
ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಕೂಡಾ ತಾಪ್ಸಿ, ಮಿಯಾ ಖಲೀಫಾ ಹಾಗೂ ಗ್ರೆಟಾ ಥನ್ಬರ್ಗ್ ಅವರ ಟ್ವೀಟನ್ನು ಹಂಚಿ ಬೆಂಬಲ ನೀಡಿದ್ದಾರೆ.
ತಮಿಳು, ತೆಲುಗು ಹಾಗೂ ಬಾಲಿವುಡ್ ನಟರಾದ ಸಿದ್ದಾರ್ಥ್ ಕೂಡಾ ಸರ್ಕಾರವನ್ನು ಟೀಕಿಸಲು ಹಿಂಜರಿದವರಲ್ಲ. ರೈತ ಹೋರಾಟಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿರುವ ಅವರು ಚುನಾಯಿತ ಸರ್ಕಾರದಿಂದ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಆಂತರಿಕ ವಿಚಾರವಲ್ಲವೆಂದು ಅವರು ಟ್ವೀಟ್ ಮಾಡಿದ್ದಾರೆ.
ತಮಿಳು ಗಾಯಕ, ಸಂಗೀತ ನಿರ್ದೇಶಕ ಹಾಗೂ ನಟರೂ ಆಗಿರುವ ಜಿವಿ ಪ್ರಕಾಶ್ ಕೂಡಾ ರೈತ ಹೋರಾಟವನ್ನು ಬೆಂಬಲಿಸಿದ್ದಾರೆ.
ಸರ್ಕಾರದ ಪರವಾಗಿ ಟ್ವೀಟ್ ಮಾಡಿದ ತಾರೆಯರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ರೈತ ಹೋರಾಟದ ಪರ ಬೆಂಬಲ ಸೂಚಿಸಿರುವ ತಾರೆಯರಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆಗೆ ಒಳಗಾಗಿದ್ದಾರೆ. ರೈತ ಹೋರಾಟಗಳಿಗೆ ದನಿಯಾಗಿದ್ದಕ್ಕೆ ಧನ್ಯವಾದಗಳು ಎಂದು ರೈತ ಪ್ರತಿಭಟನೆಯ ಬೆಂಬಲಿಗರು ಧನ್ಯವಾದ ಸಮರ್ಪಿಸಿದ್ದಾರೆ.
ಒಟ್ಟಾರೆ, ಸರ್ಕಾರದ ಪರ ಅಕ್ಷಯ್ ಕುಮಾರ್, ಅಜಯ್ ದೇವಗನ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮೊದಲಾದ ತಾರೆಯರು ನಿಂತರೆ, ಸೋನಾಕ್ಷಿ ಸಿನ್ಹಾ, ತಾಪ್ಸಿ ಪನ್ನು, ಸಂದೀಪ್ ಶರ್ಮ, ಮನ್ದೀಪ್ ಸಿಂಗ್, ಸ್ವರಾ ಭಾಸ್ಕರ್, ಸಿದ್ದಾರ್ಥ್ ಮೊದಲಾದ ಸಿನಿ-ಕ್ರಿಕೆಟ್ ತಾರೆಯರು ರೈತ ಹೋರಾಟದ ಪರ ನಿಂತಿದ್ದಾರೆ.