ಉತ್ತರಾಖಂಡ ರಾಜ್ಯದಲ್ಲಿ ಮುಸ್ಲಿಂ ಪ್ರಾಬಲ್ಯವಿರುವ ಗಫೂರ್ ಬಸ್ತಿಯ ಹಲ್ದ್ವಾನಿ ರೈಲ್ವೆ ನಿಲ್ದಾಣದ ಪಕ್ಕದ ರೈಲ್ವೆ ಜಮೀನಿನಲ್ಲಿರುವ ಅನಧಿಕೃತ ವಸತಿಗಳನ್ನು ತೆರವುಗೊಳಿಸಲು ಹೈಕೋರ್ಟ್ ಆದೇಶ ನೀಡಿದೆ. ತೆರವು ಪ್ರಕ್ರಿಯೆಯಿಂದ ನಿರಾಶ್ರಿತಗೊಳ್ಳಲಿರುವ ಆತಂಕದಲ್ಲಿರುವ ನೂರಾರು ಮುಸ್ಲಿಂ ಕುಟುಂಬಗಳು ಉತ್ತರಾಖಂಡ್ ಹೈಕೋರ್ಟ್ನ ಆದೇಶದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ.
ಕಳೆದ ವಾರ ಹಲ್ದ್ವಾನಿಯ ಬನ್ಭೂಲ್ಪುರದಲ್ಲಿ ಅತಿಕ್ರಮಣಗೊಂಡಿರುವ ರೈಲ್ವೇ ಭೂಮಿ ಮೇಲಿನ ನಿರ್ಮಾಣಗಳನ್ನು ಕೆಡವಲು ಉತ್ತರಾಖಂಡ ಹೈಕೋರ್ಟ್ ಆದೇಶ ನೀಡಿತ್ತು. ನ್ಯಾಯಾಧೀಶರಾದ ಶರದ್ ಶರ್ಮಾ ಮತ್ತು ಆರ್ಸಿ ಖುಲ್ಬೆ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಅಲ್ಲಿನ ನಿವಾಸಿಗಳಿಗೆ ಒಂದು ವಾರದ ನೋಟಿಸ್ ನೀಡಿ ನಂತರ ನಿರ್ಮಾಣಗಳನ್ನು ನೆಲಸಮಗೊಳಿಸಬೇಕು ಎಂದು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಿದೆ.
ಬಂಭೂಲ್ಪುರದಲ್ಲಿ 29 ಎಕರೆ ರೈಲ್ವೆ ಭೂಮಿಯಲ್ಲಿ ಹರಡಿರುವ ಈ ಪ್ರದೇಶದಲ್ಲಿ ಮಸೀದಿಗಳು, ಶಾಲೆಗಳು, ವ್ಯಾಪಾರ ಸಂಸ್ಥೆಗಳು ಮತ್ತು ನಿವಾಸಗಳಿವೆ. ಹೈಕೋರ್ಟ್ನ ಈ ಆದೇಶವು ಬಹುತೇಕ 4,300 ಕ್ಕೂ ಅಧಿಕ ಮುಸ್ಲಿಂ ಕುಟುಂಬಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.

ಈ ನಡುವೆ, ಏಳು ದಶಕಗಳಿಗಿಂತಲೂ ನೆಲೆಸಿರುವ ಇಷ್ಟು ಕುಟುಂಬಗಳನ್ನು ಒಕ್ಕಲೆಬ್ಬಿಸುವ ಕುರಿತು ಮುಸ್ಲಿಂ ಸಂಘಟನೆಗಳು ತೀವ್ರ ಕಳವಳ ವ್ಯಕ್ತಪಡಿಸಿದೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಮೀಯತ್ ಉಲಮಾ-ಎ-ಹಿಂದ್ ಮುಖಂಡರು ಕುಟುಂಬಗಳ ಬೆಂಬಲಕ್ಕೆ ನಿಂತಿದ್ದಾರೆ.
ಆಲ್ ಇಂಡಿಯಾ ಮಜ್ಲಿಸ್-ಎ-ಇತಿಹಾದ್ ಉಲ್ ಮುಸ್ಲಿಮೀನ್ (ಎಐಎಂಐಎಂ) ನ ಉತ್ತರಾಖಂಡದ ರಾಜ್ಯಾಧ್ಯಕ್ಷ ಡಾ.ನಯ್ಯರ್ ಕಜ್ಮಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಬರೆದ ಪತ್ರದಲ್ಲಿ, ಏಳು ದಶಕಗಳಿಗೂ ಹೆಚ್ಚು ಕಾಲ 4,500 ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಮನೆ ತೆರಿಗೆಗಳನ್ನು ಕಟ್ಟಿಕೊಂಡು ಬಂದಿರುವ ಆ ಕುಟುಂಬಗಳಿಗೆ ವಿದ್ಯುತ್ ಸಂಪರ್ಕಗಳು, ಜಲ ಸಂಪರ್ಕಗಳು ಮತ್ತು ಇತರ ವಸತಿ ಸೌಕರ್ಯವನ್ನು ಹೊಂದಿವೆ. ಅವರನ್ನು ಅಲ್ಲಿಂದ ಬೇರೆ ವ್ಯವಸ್ಥೆ ಮಾಡಿಕೊಡದೆ ಒಕ್ಕಲೆಬ್ಬಿಸಬಾರದು ಎಂದು ಹೇಳಿದ್ದಾರೆ.
ವರದಿಗಳ ಪ್ರಕಾರ, 2016 ರಲ್ಲಿ ಆರ್ಎಸ್ಎಸ್ ಬೆಂಬಲಿಗ ರವಿಶಂಕರ್ ಜೋಶಿ ಅವರು ಈ ಮುಸ್ಲಿಂ ಕುಟುಂಬಗಳ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸಲ್ಲಿಸಿದ್ದರು.






