ಬೆಂಗಳೂರು : ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹೀಗಾಗಿ ಸರ್ಕಾರ ನಡೆಸಲು ಭಾರಿ ಕಸರತ್ತು ಮುಂದುವರೆದಿದ್ದು, ಆದರೆ ನಟ ವಿಜಯ್‌ಗೆ ಸಂಖ್ಯಾಬಲದ ಕೊರತೆ ಹಿನ್ನೆಲೆ ಕಾಂಗ್ರೆಸ್ ಜೊತೆ ಮೈತ್ರಿ ಘೋಷಿಸಿದ್ದಾರೆ. ಆದರೆ ಆರಂಭದಲ್ಲೇ ವಿಜಯ್‌ಗೆ ಹಲವಾರು ಸಂಕಟಗಳು ಎದುರಾಗಿವೆ. ಸಂಖ್ಯಾಬಲದ ಕೊರತೆಯ ಜೊತೆಗೆ ತಮಿಳುನಾಡಿನ ರಾಜ್ಯಪಾಲರ ನಡೆಯು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇನ್ನೂ 108 ಸ್ಥಾನಗಳಿದ್ದರೂ ಸಹ ಟಿವಿಕೆ ಪಕ್ಷಕ್ಕೆ ಅಧಿಕಾರ ಮೂರು ದಿನಗಳು ಕಳೆದರೆ ಮರೀಚಿಕೆಯಂತಾಗಿದೆ. ಎರಡು ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಮಾಡಿದರೂ ಸಹ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಳೇಕರ್ ಸರ್ಕಾರ ರಚನೆಗೆ ಅವಕಾಶ ನೀಡದಿರುವುದು ಮತ್ತೊಂದು ರೀತಿಯ ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗುತ್ತಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಅಲ್ಲದೆ ರಾಜ್ಯಪಾಲರು ದೆಹಲಿಯಿಂದ ಬರುವ
ನಿನ್ನೇ ಮತ್ತು ಇಂದು ಲೋಕಭವನಕ್ಕೆ ತೆರಳಿ ವಿಜಯ್ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಅನುಮತಿ ಕೇಳಿದ್ದಾರೆ, ಮೊದಲು 118 ಶಾಸಕರ ಬೆಂಬಲವಿರುವ ಅಧಿಕೃತ ಪತ್ರ ತನ್ನಿ ಎಂದು ಅರ್ಳೇಕರ್ ಕಠಿಣ ಷರತ್ತು ವಿಧಿಸಿದ್ದಾರೆ.
ನಾನು ಸರ್ಕಾರ ರಚಿಸಲು ಬೇರೆ ಯಾವುದೇ ಪಕ್ಷವನ್ನು ಆಹ್ವಾನಿಸುವುದಿಲ್ಲ. ಟಿವಿಕೆ ಪಕ್ಷದ ಶಾಸಕರ ಸಹಿಗಳೊಂದಿಗೆ ಹಿಂತಿರುಗುವಂತೆ ರಾಜ್ಯಪಾಲರು ವಿಜಯ್‌ಗೆ ಸೂಚಿಸಿದ್ದಾರೆ. ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ (ಇಪಿಎಸ್) ರಾಜ್ಯಪಾಲರಿಗೆ ಯಾವುದೇ ಅಪಾಯಿಂಟ್ಮೆಂಟ್ ಕೋರಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ಚುನಾವಣೆ ಪ್ರಜಾಪ್ರಭುತ್ವ ಮತ್ತು ಜನ
ಕೇವಲ 113 ಶಾಸಕರನ್ನು (ಟಿವಿಕೆ 108 + ಕಾಂಗ್ರೆಸ್ 5) ಇಟ್ಟುಕೊಂಡು ಸರ್ಕಾರ ಹೇಗೆ ನಡೆಸುತ್ತೀರಿ? ಎಂಬ ಪ್ರಶ್ನೆಯನ್ನು ರಾಜ್ಯಪಾಲರು ಎತ್ತಿದ್ದಾರೆ . ಸಿಪಿಐ, ಸಿಪಿಐ(ಎಂ), ವಿಸಿಕೆ ಮತ್ತು ಪಿಎಂಕೆ ಪಕ್ಷಗಳ ಬೆಂಬಲದೊಂದಿಗೆ ನಮ್ಮ ಸಂಖ್ಯಾಬಲ 123 ಕ್ಕೆ ಅಧಿಕವಾಗಲಿದೆ. ಅಲ್ಲದೆ ನಾನು ಬಹುಮತ ಸಾಬೀತುಪಡಿಸಲು ಸಿದ್ಧ ಎಂದು ವಿಜಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆದರೆ ಇದಕ್ಕೆ ರಾಜ್ಯಪಾಲರು ಅಸ್ತು ಎನ್ನುತ್ತಿಲ್ಲ. ನನ್ನ ಟೇಬಲ್ ಮೇಲೆ ಇತರ ಪಕ್ಷಗಳ ಬೆಂಬಲ ಪತ್ರಗಳಿಲ್ಲದಿದ್ದರೆ, ನಾನು ಪ್ರಮಾಣವಚನಕ್ಕೆ ಅವಕಾಶ ನೀಡುವುದಿಲ್ಲ ಎಂದು ಅರ್ಳೇಕರ್ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ರಾಜ್ಯಪಾಲರ ವಿರುದ್ಧ ಟಿವಿಕೆ ಹಾಗೂ ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ವಿಜಯ್ ಅವರ ಮುಂದಿರುವ ಅತಿದೊಡ್ಡ ಸವಾಲೆಂದರೆ ತಮ್ಮ ಮೈತ್ರಿಕೂಟದ ಪಕ್ಷಗಳನ್ನು ಒಗ್ಗೂಡಿಸುವುದು. ಬಿಜೆಪಿ ಜೊತೆ ಟಿವಿಕೆ ಯಾವುದೇ ಸಂಬಂಧ ಇಟ್ಟುಕೊಳ್ಳಬಾರದು ಎಂಬ ಷರತ್ತಿನ ಮೇಲೆ ಕಾಂಗ್ರೆಸ್ ಬೆಂಬಲ ನೀಡಿದೆ. ಈ ಹಿನ್ನೆಲೆಯಲ್ಲಿ ವಿಜಯ್ ಈಗ ಇಕ್ಕಟ್ಟಿಗೆ ಸಿಲುಕಿದಂತಾಗಿದೆ, ಇತ್ತ ಎಐಎಡಿಂಕೆ ಜೊತೆ ಹೋಗಲು ಸಾಧ್ಯವಾಗದೆ, ಅತ್ತ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರವನ್ನೂ ರಚಿಸಲು ಸಮಯ ಕೂಡಿ ಬರುತ್ತಿಲ್ಲ.
ಈ ನಡುವೆಯೇ ರಾಜ್ಯಪಾಲರ ಏಕಮುಖವಾಗಿರುವ ನಡೆಯ ವಿರುದ್ಧ ನಾಳೆ ತಮಿಳುನಾಡಿನಾದ್ಯಂತ ಕಾಂಗ್ರೆಸ್ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಸರ್ಕಾರ ರಚನೆಗೆ ಅನುಮತಿ ನೀಡದೆ ಸತಾಯಿಸುತ್ತಿರುವ ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ರಾಜ್ಯಪಾಲರ ಮುಂದಿನ ನಡೆ ಏನಿರಬಹುದು..?
ರಾಜ್ಯಪಾಲರ ನಡೆಯನ್ನು ಖಂಡಿಸಿ ಟಿವಿಕೆ ಹಾಗೂ ಕಾಂಗ್ರೆಸ್ ಮೈತ್ರಿ ನ್ಯಾಯಾಲಯದ ಮೊರೆ ಹೋಗುವ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಹೆಜ್ಜೆಯನ್ನು ಇಡುವ ಮೊದಲು ರಾಜಕೀಯವಾಗಿ ಸಂಖ್ಯಾಬಲ ಸಾಬೀತುಪಡಿಸಲು ವಿಜಯ್ ಯತ್ನಿಸುತ್ತಿದ್ದಾರೆ. ಒಂದು ವೇಳೆ ವಿಜಯ್ ಅವರಿಗೆ ಮೈತ್ರಿಕೂಟವನ್ನು ಭದ್ರಪಡಿಸಲು ಸಾಧ್ಯವಾಗದಿದ್ದರೆ, ರಾಜ್ಯಪಾಲರು ಅನಿವಾರ್ಯವಾಗಿ ವಿಧಾನಸಭೆಯನ್ನು ಅಮಾನತುಗೊಳಿಸಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬಹುದು. ಇದು ರಾಜ್ಯವನ್ನು ಮತ್ತೆ ಚುನಾವಣೆಯತ್ತ ತಳ್ಳುವ ಸಾಧ್ಯತೆಯಿದೆ, ರಾಜ್ಯಪಾಲರು ಹಾಗೂ ಟಿವಿಕೆ ನಡುವಿನ ಸಂಘರ್ಷ ಹೀಗೆ ಮುಂದುವರೆದರೆ ಸರ್ಕಾರ ರಚನೆ ಇನ್ನಷ್ಟು ವಿಳಂಬವಾಗಲಿದೆ.
ಬಹುಮತ ಬಂದಿರುವ ಪಕ್ಷದ ಶಾಸಕಾಂಗ ನಾಯಕನನ್ನು ಸರ್ಕಾರ ರಚಿಸುವಂತೆ ರಾಜ್ಯಪಾಲರು ಆಹ್ವಾನಿಸುವುದು ದೇಶದಲ್ಲಿ ನಡೆದು ಬಂದಿರುವ ಸಂಪ್ರದಾಯವಾಗಿದೆ. ಈ ಹಿಂದೆ ಯಾವುದೇ ರಾಜ್ಯದಲ್ಲಿ ಒಂದು ಪಕ್ಷ ಬಹುಮತ ಪಡೆದರೆ ಆ ಪಕ್ಷಕ್ಕೆ ಸರ್ಕಾರ ರಚನೆಗೆ ಆಹ್ವಾನಿಸಿ ಬಳಿಕ ವಿಶ್ವಾಸಮತ ಸಾಬೀತು ಪಡಿಸುವಂತೆ ಸೂಚಿಸಲಾಗುತ್ತಿತ್ತು. ಆದರೆ ಇಲ್ಲಿನ ರಾಜ್ಯಪಾಲರು ಒಂದು ಪಕ್ಷದ ವಕ್ತಾರರಂತೆ ವರ್ತಿಸುತ್ತಿರುವುದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.






