-ನಾ ದಿವಾಕರ
ಐದನೆ ಹಂತದ ಮತದಾನ ಮುಗಿದ ನಂತರ 2024ರ ಲೋಕಸಭೆಯ ಚಿತ್ರಣ ಭಿನ್ನವಾಗಿ ಕಾಣತೊಡಗಿದೆ.
2024ರ ಲೋಕಸಭಾ ಚುನಾವಣೆಗಳು ದಿನದಿಂದ ದಿನಕ್ಕೆ ಕುತೂಹಲವನ್ನು ಹೆಚ್ಚಿಸುತ್ತಿದ್ದು ರಾಜಕೀಯ ತಜ್ಞರು ಮತ್ತು ವಿಶ್ಲೇಷಕರ ನಡುವೆಯೂ ಸಹ ವಿಭಿನ್ನ ಅಭಿಪ್ರಾಯಗಳು ಕಂಡುಬರುತ್ತಿವೆ. “ಅವ್ ಕಿ ಬಾರ್ ಚಾರ್ ಸೌ ಪಾರ್ ” (ಈ ಬಾರಿ ನಾನ್ನೂರು ದಾಟುತ್ತೇವೆ) ಘೋಷಣೆಯನ್ನು ಕೈಬಿಟ್ಟಿರುವ ಬಿಜೆಪಿ ಈಗ ಖಚಿತವಾಗಿ 370 ಸ್ಥಾನಗಳನ್ನು ಗಳಿಸುವ ವಿಶ್ವಾಸ ವ್ಯಕ್ತಪಡಿಸುತ್ತಿದೆ. ಮತ್ತೊಂದು ಬದಿಯಲ್ಲಿ INDIA ಒಕ್ಕೂಟವೂ ಸಹ ಎನ್‌ಡಿಎ-ಬಿಜೆಪಿ ಬಹುಮತ ಗಳಿಸುವುದಿಲ್ಲ ಎಂಬ ಆತ್ಮವಿಶ್ವಾಸದೊಂದಿಗೆ ತನ್ನ ಪ್ರಚಾರದಲ್ಲಿ ತೊಡಗಿದೆ. ಐದು ಹಂತಗಳ ಮತದಾನದ ನಂತರ ದೇಶಾದ್ಯಂತ ಮತದಾರರ ಒಲವು ಯಾವ ಕಡೆಗಿದೆ ಎಂಬ ಚಿತ್ರಣ ಲಭ್ಯವಾಗುತ್ತಿದ್ದು, ಸಂಭಾವ್ಯ ಫಲಿತಾಂಶಗಳ ಬಗ್ಗೆ ವಿಭಿನ್ನ ದತ್ತಾಂಶಗಳನ್ನು ಒದಗಿಸಲಾಗುತ್ತಿದೆ. ಒಂದು ನೆಲೆಯಲ್ಲಿ ಬಿಜೆಪಿ ತನ್ನ ಮಹತ್ವಾಕಾಂಕ್ಷೆಯ 370 ಸ್ಥಾನಗಳನ್ನು ಗಳಿಸುವುದೂ ಸಹ ದುಸ್ತರ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

ಈ ಅಭಿಪ್ರಾಯದಲ್ಲಿ ಸತ್ಯಾಂಶ ಇರುವುದನ್ನು ಪ್ರಧಾನಿ ಮೋದಿಯವರನ್ನೂ ಸೇರಿದಂತೆ ಬಿಜೆಪಿ ನಾಯಕರ ಇತ್ತೀಚಿನ ಪ್ರಚಾರ ಭಾಷಣಗಳಲ್ಲಿ ಗಮನಿಸಬಹುದು. ಮೊದಲನೆ ಹಂತದ ಮತದಾನ ಮುಗಿದ ಮೇಲೆ ಚುನಾವಣಾ ಸಂಕಥನಗಳಲ್ಲಿ-ಪ್ರಚಾರಗಳಲ್ಲಿ ಜನಸಾಮಾನ್ಯರು ಕಾಣೆಯಾಗಿರುವುದು ಸ್ಪಷ್ಟವಾಗಿದೆ. ಅಮೃತ ಕಾಲ, ವಿಶ್ವಗುರು ಪರಿಕಲ್ಪನೆ, ಜಿಡಿಪಿ ವೃದ್ಧಿ, ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಇವೆಲ್ಲವೂ ಹಿಂಬದಿಗೆ ಸರಿದಿದ್ದು ಬಹುಪಾಲು ಚುನಾವಣಾ ಭಾಷಣಗಳಲ್ಲಿ ಗತಕಾಲದ ಪ್ರಮಾದಗಳೇ ಮುನ್ನೆಲೆಗೆ ಬರುತ್ತಿವೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್ ವಾಸನೆಯನ್ನು ಗುರುತಿಸಿದ ಪ್ರಧಾನಿ ಮೋದಿ ಕ್ರಮೇಣ ತಮ್ಮ ನಿಲುವು ಬದಲಿಸಿದ್ದು ಈಗ ಮಾವೋವಾದದ ವಾಸನೆಯನ್ನು ಕಾಣುತ್ತಿದ್ದಾರೆ. ವಿಪರ್ಯಾಸವೆಂದರೆ ಎಲ್ಲಿಯೂ ಸಹ ಬಿಜೆಪಿಯ ಮೂಲ ಪ್ರಣಾಳಿಕೆಯ ಅಂಶಗಳನ್ನು ಪ್ರಸ್ತಾಪಿಸಲಾಗುತ್ತಿಲ್ಲ. ಹತ್ತು ವರ್ಷದ ಸರ್ವ ಸ್ವತಂತ್ರ ಆಳ್ವಿಕೆಯ ನಂತರವೂ ಹಿಂದಿನ ಸರ್ಕಾರವನ್ನೇ ದೂಷಿಸುವ ಧೋರಣೆಯೇ ಬಿಜೆಪಿಯ ಹತಾಶೆಯ ದ್ಯೋತಕವಾಗಿ ಕಾಣುತ್ತದೆ.
ಭ್ರಮೆ-ಸಾಧನೆ ಮತ್ತು ವಾಸ್ತವ
ಹತ್ತು ವರ್ಷಗಳ ಆಳ್ವಿಕೆಯಲ್ಲಿ ತನ್ನ ಸಾಧನೆಯನ್ನು ಮತದಾರರ ಮುಂದಿಡುವಲ್ಲಿ ವಿಫಲವಾಗಿರುವ ಬಿಜೆಪಿ ನಾಯಕತ್ವಕ್ಕೆ ಹಲವು ತೊಡಕುಗಳೂ ಎದುರಾಗಿವೆ. 2019ರಲ್ಲಿ ಯಶಸ್ವಿಯಾಗಿ ಬಳಸಲಾದ ರಾಮಮಂದಿರ, ಅನುಚ್ಛೇದ 370, ಸಮಾನ ನಾಗರಿಕ ಸಂಹಿತೆ ಹಾಗೂ ಭಾವನಾತ್ಮಕವಾಗಿ ಜನರನ್ನು ಧೃವೀಕರಿಸಲು ನೆರವಾಗಬಹುದಿದ್ದ ಸಿಎಎ ಮುಂತಾದ ವಿಚಾರಗಳು ಈಗ ಮತದಾರರಿಗೆ ಆಕರ್ಷಕವಾಗಿ ಕಾಣುವುದಿಲ್ಲ. ಬಹುಮುಖ್ಯವಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಬಿಜೆಪಿ-ಸಂಘಪರಿವಾರದ ಕೋಮು ಧೃವೀಕರಣ ಹಾಗೂ ಅಧಿಕಾರ ರಾಜಕಾರಣಕ್ಕೆ ಪ್ರಧಾನ ಅಸ್ತ್ರವಾಗಿದ್ದ ರಾಮಮಂದಿರ, ಅಯೋಧ್ಯೆಯಲ್ಲಿ ದೇವಸ್ಥಾನದ ನಿರ್ಮಾಣದ ನಂತರ, ತನ್ನ ರಾಜಕೀಯ ಮೌಲ್ಯವನ್ನು ಕಳೆದುಕೊಂಡಿದೆ. ಕಾಶ್ಮೀರದಲ್ಲೂ ವಿಧಿ 370ರ ರದ್ದತಿಯ ನಂತರ ಬಿಜೆಪಿ ನಿರೀಕ್ಷಿಸಿದಷ್ಟು ಜನಬೆಂಬಲ ದೊರೆತಂತಿಲ್ಲ. ಈ ಚುನಾವಣೆಗಳಲ್ಲಿ ಬಿಜೆಪಿ ಕಾಶ್ಮೀರದಲ್ಲಿ ಸ್ಪರ್ಧೆಗೇ ಮುಂದಾಗದಿರುವುದು ವಿಶ್ವಾಸದ ಕೊರತೆಯನ್ನು ಸೂಚಿಸುತ್ತದೆ.

ಯಾವುದೇ ಭಾವನಾತ್ಮಕ ವಿಚಾರಗಳಿಲ್ಲದಿರುವುದರಿಂದಲೇ ಬಿಜೆಪಿಯ ಪ್ರಚಾರದಲ್ಲಿ ಮುಸ್ಲಿಂ ದ್ವೇಷದ ಭಾಷಣಗಳು, ಪಾಕಿಸ್ತಾನದ ಪ್ರಸ್ತಾಪ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಆರಂಭದಲ್ಲಿ ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಸಿ ಕಾಂಗ್ರೆಸ್ ಮತ್ತು INDIA ಒಕ್ಕೂಟದ ಬಗ್ಗೆ ಮುಸ್ಲಿಂ ಓಲೈಕೆಯ ಆರೋಪಗಳನ್ನು ಮಾಡುತ್ತಿದ್ದ ಬಿಜೆಪಿ ನಾಯಕರು ಮೂರನೆ ಹಂತದ ಚುನಾವಣೆಗಳ ನಂತರ ಎಸ್‌ಸಿ-ಎಸ್‌ಟಿ-ಹಿಂದುಳಿದ ವರ್ಗಗಳ ಮೀಸಲಾತಿಯ ಸುತ್ತ ಮಾತನಾಡುತ್ತಿರುವುದು ಹತಾಶೆಯ ಲಕ್ಷಣವಾಗಿಯೇ ಕಾಣುತ್ತದೆ. ನೆಹರೂ ಕಾಲದಿಂದ ರಾಜೀವ್ ಗಾಂಧಿಯವರೆಗೂ ಕಾಂಗ್ರೆಸ್ ಮೀಸಲಾತಿಯ ವಿರೋಧಿಯಾಗಿತ್ತು ಎಂಬ ಪ್ರಧಾನಮಂತ್ರಿ ಮೋದಿಯವರ ಕಪೋಲಕಲ್ಪಿತ-ನಿರಾಧಾರ ಆರೋಪಗಳು ಈ ಸಮುದಾಯಗಳ ಮತಗಳನ್ನು ಧೃವೀಕರಿಸುವ ಒಂದು ತಂತ್ರ ಎನ್ನುವುದು ಸ್ಪಷ್ಟ. ಈವರೆಗೂ ಸ್ಪಷ್ಟವಾಗಿ ನಿರ್ವಚಿಸಲಾಗದ ಅರ್ಬನ್ ನಕ್ಷಲ್, ತುಕಡೆತುಕಡೆ ಗ್ಯಾಂಗ್ ಮುಂತಾದ ಪದಬಳಕೆಯನ್ನೂ ತ್ಯಜಿಸಿರುವ ಬಿಜೆಪಿ ನಾಯಕರಿಗೆ ಬಹುಶಃ ಸೋಲಿನ ಅಥವಾ ಹಿನ್ನಡೆಯ ಸೂಚನೆ ಲಭಿಸಿರಲೇಬೇಕು.
ಬಿಜೆಪಿ ನಾಯಕರಿಗೆ 370 ಸ್ಥಾನಗಳನ್ನು ಖಚಿತವಾಗಿ ಗಳಿಸುವ ಆತ್ಮವಿಶ್ವಾಸವೇ ಇದ್ದುದಾದಲ್ಲಿ ಈ ಭಾವನಾತ್ಮಕ ವಿಚಾರಗಳನ್ನು ಬದಿಗಿಟ್ಟು, ತಮ್ಮ ಸರ್ಕಾರದ ಭವಿಷ್ಯದ ಆರ್ಥಿಕ ನೀತಿಗಳ ಬಗ್ಗೆ ಮಾತನಾಡಬಹುದಿತ್ತು. ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ, ಬುಲೆಟ್ ಟ್ರೈನ್, ಸ್ಮಾರ್ಟ್ ಸಿಟಿ, ಮೂಲ ಸೌಕರ್ಯ ಮುಂತಾದ ಭ್ರಮಾತ್ಮಕ ವಿಚಾರಗಳನ್ನು ಕಳೆದ ಐದು ವರ್ಷಗಳಿಂದಲೂ ಮಾಧ್ಯಮಗಳ ಮೂಲಕ ಪ್ರಚಾರ ಮಾಡುತ್ತಲೇ ಇರುವ ಬಿಜೆಪಿ ನಾಯಕರಿಗೆ ಈಗ ಆರ್ಥಿಕ ವಿಚಾರಗಳೇ ಅಪಥ್ಯವಾದಂತಿದೆ. ನವ ಉದಾರವಾದ-ಮಾರುಕಟ್ಟೆ ಬಂಡವಾಳಶಾಹಿ ಆರ್ಥಿಕತೆಯ ದುಷ್ಪರಿಣಾಮಗಳು ತಳಮಟ್ಟದ ಸಮಾಜದ ಮೇಲೆ ಬೀರಿರುವ ಋಣಾತ್ಮಕ ಪರಿಣಾಮಗಳು ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿರುವುದೂ ಈ ಚುನಾವಣಾ ಜಾಣ ನಡೆಗೆ ಕಾರಣವಿರಬಹುದು.
ನವ ಉದಾರವಾದ-ಮಾರುಕಟ್ಟೆ ಆರ್ಥಿಕತೆ
ಒಂದು ವೇಳೆ ಎನ್‌ಡಿಎ-ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೂ ಸಹ ಕಳೆದ ಹತ್ತು ವರ್ಷಗಳ ಆಳ್ವಿಕೆಯಲ್ಲಿ ಅನುಸರಿಸಿದ ನವ ಉದಾರವಾದಿ ಮಾರುಕಟ್ಟೆ ನೀತಿಗಳನ್ನು ಮತ್ತಷ್ಟು ತೀವ್ರತೆಯಿಂದ ಜಾರಿಗೊಳಿಸಲು ಬಿಜೆಪಿ ಸಿದ್ಧವಾಗಿದೆ. ಬ್ಯಾಂಕ್, ವಿಮೆ, ರಸ್ತೆ-ರೈಲು ಸಾರಿಗೆ, ಬಂದರು, ವಿಮಾನಯಾನ, ಶಿಕ್ಷಣ, ಆರೋಗ್ಯ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕ್ಕೆ ನೀಲನಕ್ಷೆಯನ್ನು ಸಿದ್ಧಪಡಿಸಿಕೊಂಡೇ ಚುನಾವಣೆಯನ್ನು ಎದುರಿಸುತ್ತಿರುವ ಪಕ್ಷವೊಂದು, ಸಂವಿಧಾನಾತ್ಮಕ ಮೀಸಲಾತಿ ಸೌಲಭ್ಯಗಳ ಬಗ್ಗೆ ಮಾತನಾಡಲು ಹೇಗೆ ಸಾಧ್ಯ ? ಆದರೂ ಇತ್ತೀಚಿನ ಪ್ರಚಾರಗಳಲ್ಲಿ ಪ್ರಧಾನಿ ಮೋದಿ ಎಸ್‌ಸಿ-ಎಸ್‌ಟಿ-ಒಬಿಸಿಗಳ ಮೀಸಲಾತಿಯ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಮತ್ತೊಂದೆಡೆ ಯಾವುದೇ ಕಾರಣಕ್ಕೂ ಮುಸ್ಲಿಮರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸುವುದಾಗಿಯೂ ಪಕ್ಷ ಅಧಿಕೃತವಾಗಿಯೇ ಹೇಳುತ್ತಿದೆ. ಬಿಜೆಪಿಯ ಈ ನಿಲುವು ಬಿಹಾರ ಮತ್ತು ಉತ್ತರಪ್ರದೇಶದ ಪಾಸ್ಮಂಡ ಮುಸ್ಲಿಂ ಸಮುದಾಯವನ್ನೂ ಹತಾಶೆಗೆ ದೂಡಿದೆ. ಈ ಸಮುದಾಯವು ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಪರ ವಹಿಸಿದ್ದೇ ಅಲ್ಲದೆ ರಾಮಮಂದಿರ ನಿರ್ಮಾಣದಲ್ಲೂ ಸಕ್ರಿಯವಾಗಿತ್ತು. ಆದರೆ ಬಿಜೆಪಿಯ ಮುಸ್ಲಿಂ ದ್ವೇಷದ ಭಾಷಣಗಳು, ಮೀಸಲಾತಿಗೆ ವಿರೋಧ ಇವೆಲ್ಲವೂ ಈ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಹತಾಶೆ ಮೂಡಿಸಿದೆ.

ಮುಂಬರುವ ವರ್ಷಗಳಲ್ಲಿ ಮಾರುಕಟ್ಟೆ ಆರ್ಥಿಕತೆ ಬಲಗೊಂಡರೆ ಬಹುಶಃ ಶೋಷಿತ ವರ್ಗಗಳಿಗೆ ಮೀಸಲಾತಿ ಎನ್ನುವುದು ಮರೀಚಿಕೆಯಾಗದಿದ್ದರೂ ಗಗನಕುಸುಮವಂತೂ ಆಗಲಿದೆ. ಸರ್ಕಾರಿ ವಲಯದಲ್ಲಿ ಉದ್ಯೋಗ ಸೃಷ್ಟಿಯೇ ಇಲ್ಲದಿರುವಾಗ, ಈಗಿರುವ ಸಾರ್ವಜನಿಕ ವಲಯದ ಉದ್ದಿಮೆ-ಸಂಸ್ಥೆಗಳನ್ನೂ ಕಾರ್ಪೋರೇಟ್ ವಶಕ್ಕೆ ಒಪ್ಪಿಸಿದ ನಂತರ, ಪ್ರಾಥಮಿಕ ಶಿಕ್ಷಣದಿಂದ ಅತ್ಯುನ್ನತ ಹಂತದವರೆಗೂ ಶೈಕ್ಷಣಿಕ ವಲಯವನ್ನು, ವಿಶ್ವವಿದ್ಯಾಲಯಗಳನ್ನು ಕಾರ್ಪೋರೇಟೀಕರಣಗೊಳಿಸಿದ ನಂತರ, ಸಂವಿಧಾನಬದ್ಧ ಮೀಸಲಾತಿ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತದೆ. ಖಾಸಗಿ/ಕಾರ್ಪೋರೇಟ್ ವಲಯದಲ್ಲಿ ಮೀಸಲಾತಿ ನೀಡುವ ಯಾವುದೇ ಪ್ರಯತ್ನಗಳನ್ನು ಮಾರುಕಟ್ಟೆ ಶಕ್ತಿಗಳು ಈಗಾಗಲೇ ಆರಂಭದಲ್ಲೇ ಚಿವುಟಿಹಾಕಿವೆ. ಹತ್ತು ವರ್ಷಗಳ ಮಾರುಕಟ್ಟೆ ಆರ್ಥಿಕತೆಯು ಸೃಷ್ಟಿಸಿರುವ ಅಸಮಾನತೆ ಮತ್ತು ನಿರುದ್ಯೋಗವನ್ನು ಎದುರಿಸುವ ಯಾವುದೇ ಸಕಾರಾತ್ಮಕ ಕ್ರಮಗಳನ್ನು , ನವ ಉದಾರವಾದಿ ಆಳ್ವಿಕೆಯಲ್ಲಿ ಕಾಣಲು ಸಾಧ್ಯವಿಲ್ಲ.
ಇಂತಹ ಸನ್ನಿವೇಶದಲ್ಲೇ ದೇಶವು ಐದು ಹಂತಗಳ ಮತದಾನವನ್ನು ಪೂರೈಸಿದೆ. ಮೋದಿ ಸರ್ಕಾರದ ಅತಿ ಜನಪ್ರಿಯ 80 ಕೋಟಿ ಜನತೆಗೆ ಉಚಿತ ಪಡಿತರ ನೀಡುವ ಕಾರ್ಯಕ್ರಮ ಉತ್ತರ ಭಾರತದಲ್ಲಿ ಮತದಾರರನ್ನು ಆಕರ್ಷಿಸುವ ಪ್ರಧಾನ ಅಸ್ತ್ರವಾಗಿದೆ. ಇದರೊಂದಿಗೆ ಅಡುಗೆ ಅನಿಲ ಒದಗಿಸುವ ಉಜ್ವಲ ಯೋಜನೆ, ಶೌಚಾಲಯ ಸೌಲಭ್ಯ ಹಾಗೂ ಆಯುಷ್ಮಾನ್ ಭಾರತ್ ಯೋಜನೆಗಳು ಜನಸಾಮಾನ್ಯರಲ್ಲಿ ಬಿಜೆಪಿ ಪರ ಒಲವು ಸೃಷ್ಟಿಸಿದೆ. ಆದರೆ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಸಾಮಾನ್ಯವಾಗಿ ಅನುಸರಿಸಲಾಗುವ ಇಂತಹ ಜನಕಲ್ಯಾಣ ಯೋಜನೆಗಳು (ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನೂ ಒಳಗೊಂಡಂತೆ) ತಳಮಟ್ಟದ ಸಮಾಜದಲ್ಲಿ ಸಾಮಾನ್ಯ ದುಡಿಯುವ ವರ್ಗಗಳ ನಿತ್ಯ ಜೀವನವನ್ನು ಸರಾಗವಾಗಿ ಸಾಗಿಸಲು ನೆರವಾಗುತ್ತದೆಯೇ ಹೊರತು, ಅವರ ಭವಿಷ್ಯದ ಬದುಕಿಗೆ ಸುಸ್ಥಿರ ನೆಲೆಯನ್ನು ಒದಗಿಸುವುದಿಲ್ಲ.

ಏಕೆಂದರೆ ಮಾರುಕಟ್ಟೆ ಆರ್ಥಿಕತೆ ಸುಸ್ಥಿರ-ಶಾಶ್ವತ ಉದ್ಯೋಗಗಳನ್ನು ಸೃಷ್ಟಿಸುವುದಿಲ್ಲ. ಶೇ 40ರಷ್ಟು ಯುವ ಸಮೂಹವನ್ನು ಹೊಂದಿರುವ ನವ ಭಾರತದ ಮುಂದಿರುವ ಅತಿ ಪ್ರಧಾನ ಸವಾಲು ಇದೇ ಆಗಿದೆ. ಹಾಗಾಗಿಯೇ ಉತ್ತರಪ್ರದೇಶ, ಬಿಹಾರ , ಹಿಂದಿ ಬೆಲ್ಟ್ ಮುಂತಾದ ಬಿಜೆಪಿಯ ಭದ್ರಕೋಟೆಗಳಲ್ಲೂ ಜನರು ತಮ್ಮ ಭವಿಷ್ಯದ ಬಗ್ಗೆ ಚಿಂತಿಸಲಾರಂಭಿಸಿದ್ದಾರೆ. ಐದು ಕಿಲೋ ಪಡಿತರ-ಉಜ್ವಲ ಯೋಜನೆಗಾಗಿ ಮೋದಿ ನಾಯಕತ್ವವನ್ನು ಬೆಂಬಲಿಸಿದರೂ, ತಮ್ಮ ಭವಿಷ್ಯದ ಬದುಕಿನ ಅನಿಶ್ಚಿತತೆಗೆ ಬಿಜೆಪಿಯ ಬಳಿ ಉತ್ತರವೇ ಇಲ್ಲದಿರುವುದು ಮತದಾರರನ್ನು ಹತಾಶೆಗೆ ದೂಡಿದೆ. ಬೆಲೆ ಏರಿಕೆ ಮತ್ತು ನಿರುದ್ಯೋಗದ ಬವಣೆಯನ್ನು ನೀಗಿಸಲಾಗದ ಸರ್ಕಾರಗಳು ನೊಂದ ಜನತೆಯನ್ನು ಭ್ರಮಾಧೀನಗೊಳಿಸುವ ರಾಮಮಂದಿರದಂತಹ ವಿಷಯಗಳು ಅಪ್ರಸ್ತುತವಾಗಿರುವುದರಿಂದಲೇ ಬಿಜೆಪಿ ಸೋಲಿನ ಹತಾಶೆಯನ್ನು ಎದುರಿಸುತ್ತಿದೆ.
ಕಾರ್ಪೋರೇಟ್ ಹಿಡಿತದ ಪರಿಣಾಮ
ಗುಜರಾತ್ ಮಾದರಿಯಂತೆಯೇ ಉತ್ತರಪ್ರದೇಶದ ಯೋಗಿ ಮಾದರಿಯನ್ನು ಮತದಾರರ ಮುಂದಿಡುತ್ತಿರುವ ಬಿಜೆಪಿ ನಾಯಕರು ಸಾಮಾನ್ಯ ಜನರ ಹತಾಶೆಗಳಿಗೆ ಉತ್ತರಿಸಲು ತಡಬಡಾಯಿಸುತ್ತಿರುವುದು ಸ್ಪಷ್ಟವಾಗುತ್ತಿದೆ. 2014ರ ನಂತರದಲ್ಲಿ ಉತ್ತರಪ್ರದೇಶದ ರಾಜಕಾರಣದಲ್ಲಿ ಬಿಜೆಪಿಯ ಒಲವು ಬೆಳೆಸಿಕೊಂಡಿರುವ ಅಪಾರ ಜನಸ್ತೋಮದ ನಡುವೆ ಈ ಪ್ರಶ್ನೆ ಢಾಳಾಗಿ ಕಾಣುತ್ತಿದೆ. ಒಬಿಸಿ ಸಮುದಾಯದ ಮತದಾರರೊಬ್ಬರು” ಮೋದಿ ನಮ್ಮನ್ನು ಕೂಳಿಲ್ಲದೆ ಸಾಯಲು ಬಿಡುವುದಿಲ್ಲ ಆದರೆ ನಮ್ಮನ್ನು ಮುನ್ನಡೆಯಲೂ ಬಿಡುವುದಿಲ್ಲ ” (ದ ಹಿಂದೂ – 20 ಮೇ 2024) ಎಂದು ಮಾರ್ಮಿಕವಾಗಿ ಹೇಳಿರುವುದು ನೆಲದ ವಾಸ್ತವದ ಸೂಚನೆಯೇ ಆಗಿದೆ. ಚಿನ್ನದ ಬೆಲೆ 2014ರಲ್ಲಿ ಹತ್ತು ಗ್ರಾಂಗಳಿಗೆ 26 ಸಾವಿರ ಇದ್ದುದು ಈಗ 70 ಸಾವಿರ ಆಗಿದೆ, ವಜ್ರದ ಮೇಲೆ ಶೇ 3ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ ಆದರೆ ಪುಸ್ತಕಗಳ ಮೇಲೆ ಶೇ 26 ಜಿಎಸ್‌ಟಿ ಇದೆ ಎಂಬ ಸೂಕ್ಷ್ಮ ವಿಚಾರಗಳನ್ನು ಮುಂದಿಡುತ್ತಿರುವ ಮತದಾರರು ಮೋದಿ ಸರ್ಕಾರದ ಆರ್ಥಿಕ ನೀತಿಯ ಔಚಿತ್ಯವನ್ನೇ ಪ್ರಶ್ನಿಸುತ್ತಿದ್ದಾರೆ.
ಮೇಲೆ ಉಲ್ಲೇಖಿಸಿರುವ ಮತದಾರನ ಪ್ರಶ್ನೆಗೆ ಬಂಡವಾಳಶಾಹಿ ಆರ್ಥಿಕತೆಯೇ ಉತ್ತರಿಸಬೇಕಿದೆ. ಏಕೆಂದರೆ ಬಂಡವಾಳಶಾಹಿ ವ್ಯವಸ್ಥೆಯ ಮೂಲಮಂತ್ರವೇ ಇದು. ಜನಸಾಮಾನ್ಯರಿಗೆ ನಿತ್ಯ ಬದುಕು ಪಲ್ಲಟವಾಗದಂತೆ ಜನಕಲ್ಯಾಣ ನೀತಿಗಳನ್ನು ರೂಪಿಸಿ, ಜೀವನಾವಶ್ಯ ವಸ್ತುಗಳನ್ನು ಒದಗಿಸುವ ಮೂಲಕ ಜೀವನ ಸಾಗಿಸಲು ನೆರವಾಗುತ್ತವೆ. ಆದರೆ ಈ ಕೋಟ್ಯಂತರ ದುಡಿಮೆಯ ಜೀವಗಳಿಗೆ ಸುಭದ್ರ, ಸುರಕ್ಷಿತ, ಸುಸ್ಥಿರ ಭವಿಷ್ಯವನ್ನು ಕಲ್ಪಿಸುವಂತಹ ಯಾವುದೇ ಆರ್ಥಿಕ ನೀತಿಗಳಿಗೆ ಕಾರ್ಪೋರೇಟ್ ಮಾರುಕಟ್ಟೆಯ ಆರ್ಥಿಕ ನೀತಿಗಳು ಬೆಂಬಲಿಸವುದಿಲ್ಲ. ಜೀವನಾವಶ್ಯ ವಸ್ತುಗಳನ್ನೂ ಸೇರಿದಂತೆ, ಶಿಕ್ಷಣ ಆರೋಗ್ಯ ಯೋಗಕ್ಷೇಮ ಹಾಗೂ ಇತರ ಸಾರ್ವಜನಿಕ ಸೌಲಭ್ಯಗಳಂತೆಯೇ ಮನುಷ್ಯರೂ ಸಹ ಮಾರುಕಟ್ಟೆಯ ದೃಷ್ಟಿಯಲ್ಲಿ ವಿನಿಮಯ ಯೋಗ್ಯ ಸರಕುಗಳಾಗಿಯೇ ಕಾಣುವುದು ನವ ಉದಾರವಾದದ ಲಕ್ಷಣ. ಈ Commodification ( ಸರಕೀಕರಣ) ಪ್ರಕ್ರಿಯೆ ಸಾಂಸ್ಕೃತಿಕ ವಲಯದ. ಕಲೆ, ಸಂಗೀತ, ಸಾಹಿತ್ಯವನ್ನೂ ಆವರಿಸುತ್ತದೆ.

ಕಾರ್ಪೋರೇಟ್ ಶೈಕ್ಷಣಿಕ ವಲಯದಿಂದ ಕಾರ್ಪೋರೇಟ್ ಮಾರುಕಟ್ಟೆ ಅಂಗಳಕ್ಕೆ ಬಂದು ಬೀಳುವ ಕೋಟ್ಯಂತರ ಮಾನವ ಸರಕುಗಳು (ಅಂದರೆ ವಿದ್ಯಾವಂತ ಯುವ ಸಮೂಹ) ತಮ್ಮ ಜೀವನ ರೂಪಿಸಿಕೊಳ್ಳಲು ಅದೇ ಮಾರುಕಟ್ಟೆಯನ್ನೇ ಅವಲಂಬಿಸಬೇಕಾಗುತ್ತದೆ. ಕೇವಲ ನಾಲ್ಕು ವರ್ಷದ ನೌಕರಿ ಒದಗಿಸುವ ಅಗ್ನಿಪಥ್ ಯೋಜನೆಗೆ ಯುವ ಸಮೂಹ ಸಾಲುಗಟ್ಟಿ ನಿಂತಿರುವುದನ್ನು ಇದರ ಒಂದು ಆಯಾಮವಾಗಿ ಕಾಣಬಹುದು. ಹೀಗೆ ಸರಕೀಕರಣಗೊಂಡ ಯುವ ಸಮೂಹವೇ ಕೋಮುವಾದ, ಮತಾಂಧತೆ, ಮತೀಯವಾದದ ಕಾವಲುಪಡೆಗಳಲ್ಲಿ ದಾಖಲಾಗುತ್ತದೆ. ಈ ಯುವ ಸಮೂಹ ಹಾಗೂ ಇದನ್ನು ಪೋಷಿಸುವ ಜವಾಬ್ದಾರಿ ಇರುವ ಹಿರಿಯ ತಲೆಮಾರಿನ ದುಡಿಯುವ ವರ್ಗಗಳಿಗೆ ಕಳೆದ ಹತ್ತು ವರ್ಷಗಳ ಆಳ್ವಿಕೆ ಯಾವುದೇ ಆತ್ಮವಿಶ್ವಾಸವನ್ನು ಮೂಡಿಸಿಲ್ಲ ಎನ್ನುವುದು ಸ್ಪಷ್ಟ. ತಳಮಟ್ಟದ ಸಮಾಜದಲ್ಲಿ ಅಂತರ್ ವಾಹಿನಿಯಾಗಿ ಹರಿಯುವ ಈ ಹತಾಶೆ ಮತ್ತು ಆಕ್ರೋಶಗಳೇ ಮತದಾನದಲ್ಲಿ ಪ್ರಧಾನ ಅಂಶಗಳಾಗಿ ಪರಿಣಮಿಸುತ್ತವೆ.
ಈ ಹಿನ್ನೆಲೆಯಲ್ಲೇ ಐದನೆ ಹಂತದ ಮತದಾನದ ನಂತರ ಬರುತ್ತಿರುವ ಚುನಾವಣಾ ವಿಶ್ಲೇಷಣೆಗಳು ಎನ್‌ಡಿಎ ಮೈತ್ರಿಕೂಟಕ್ಕೆ-ಬಿಜೆಪಿಗೆ ಹಿನ್ನಡೆಯಾಗುವ ಸಂಭವಗಳನ್ನು ಸೂಚಿಸುತ್ತಿವೆ. ಒಂದು ತಿಂಗಳ ಹಿಂದೆ ಆರೆಸ್ಸೆಸ್ ಸಹ ಇದೇ ಆತಂಕವನ್ನು ವ್ಯಕ್ತಪಡಿಸಿದ್ದು ಶೇಕಡಾ 5ರಷ್ಟು ಮತ ಏರಿಳಿಕೆಯು (Vote Swing) ಬಿಜೆಪಿಯ ವಿರುದ್ಧವಾಗಿದ್ದರೂ ಸಹ ಪಕ್ಷಕ್ಕೆ 230 ಸ್ಥಾನಗಳು ಲಭಿಸಬಹುದು ಎಂದು ಹೇಳಿತ್ತು. ಆದರೆ ಕಳೆದ ಒಂದು ತಿಂಗಳಲ್ಲಿ ಮೌನ ಮತದಾರರ ನಡುವೆ ಬಿಜೆಪಿಯ ಬೆಂಬಲ ಕ್ಷೀಣಿಸುತ್ತಿರುವುದು ಸ್ಪಷ್ಟವಗುತ್ತಿದೆ. ಚುನಾವಣಾ ರಾಜಕಾರಣದಲ್ಲಿ ಶೇ 5ರ ಮತ ಏರಿಳಿಕೆಯೇ ನಿರ್ಣಾಯಕ ಎಂದು ಪರಿಗಣಿಸಲಾಗುತ್ತದೆ. ಐದನೆ ಹಂತದ ನಂತರದ ಪರಿಸ್ಥಿತಿಯನ್ನು ಗಮನಿಸಿದರೆ, ಮತ ಏರಿಳಿಕೆಯ ಪ್ರಮಾಣ ಶೇ 10ರಷ್ಟಾಗಬಹುದು ಎಂದು ಹೇಳಲಾಗುತ್ತಿದೆ. ಮತ ಏರಿಳಿಕೆ ಎಲ್ಲ ಕ್ಷೇತ್ರಗಳಲ್ಲೂ ಸಮನಾಗಿ ಇರುವುದಿಲ್ಲವಾದ್ದರಿಂದ, ಆಗಲೂ ಬಿಜೆಪಿ 250ರಷ್ಟು ಸ್ಥಾನಗಳನ್ನು ಗಳಿಸುವ ಸಾಧ್ಯತೆಗಳಿರುತ್ತವೆ. ಒಂದು ವೇಳೆ ಬಿಜೆಪಿಯ ಮತಗಳು ಶೇ 15ರಷ್ಟು ಕ್ಷೀಣಿಸಿದಲ್ಲಿ ಅಂತಿಮವಾಗಿ ಪಕ್ಷವು 200 ರಿಂದ 220 ಸ್ಥಾನಗಳಿಗೆ ತೃಪ್ತಿಪಡಬೇಕಾಗುತ್ತದೆ. ( ಕೋಷ್ಠಕ ನೋಡಿ- ಕೃಪೆ ಜವಹರ್, ಬಿಹಾರ್)

ಚುನಾವಣಾ ತಜ್ಞರ ಈ ಅಂದಾಜುಗಳ ನಡುವೆಯೇ ಆರೆಸ್ಸೆಸ್ ಮತ್ತು ಬಿಜೆಪಿಯ ನಡುವೆ ವಿರಸ ಹೆಚ್ಚಾಗಿರುವ ವರದಿಗಳೂ ಬರುತ್ತಿವೆ. ಆರೆಸ್ಸೆಸ್ ಪರೋಕ್ಷವಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ವಿರೋಧಿಸುತ್ತಿದೆ ಎಂಬ ಸುದ್ದಿಯೂ ಚರ್ಚೆಗೊಳಗಾಗುತ್ತಿದೆ. ಈ ಚರ್ಚೆಗಳ ಸತ್ಯಾಸತ್ಯತೆಗಳ ಹೊರತಾಗಿಯೂ 2024ರ ಚುನಾವಣೆಗಳು ಅಚ್ಚರಿಯ ಫಲಿತಾಂಶವನ್ನು ಹೊರಗೆಡಹುವ ಸಾಧ್ಯತೆಗಳು ನಿಚ್ಚಳವಾಗಿ ಕಾಣುತ್ತಿದೆ. ಎಂತಹುದೇ ಆಡಳಿತ ವ್ಯವಸ್ಥೆಯಾದರೂ ತಳಮಟ್ಟದ ಸಮಾಜವನ್ನು ಪ್ರಧಾನವಾಗಿ ಪ್ರತಿನಿಧಿಸುವ ಶ್ರೀಸಾಮಾನ್ಯರ, ದುಡಿಯುವ ವರ್ಗಗಳ, ತಳಸಮುದಾಯಗಳ, ಅವಕಾಶವಂಚಿತ ಜನತೆಯ ಹತಾಶೆ ಮತ್ತು ಆಕ್ರೋಶವೇ ಅಲ್ಲಿನ ರಾಜಕೀಯ ಬೆಳವಣಿಗೆಗಳನ್ನೂ ನಿರ್ದೇಶಿಸುವುದು ಸಾರ್ವತ್ರಿಕ ಸತ್ಯ. ಈ ಕಾರಣಕ್ಕಾಗಿಯೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶ್ರೀಸಾಮಾನ್ಯರ ಬದುಕಿನ ಪ್ರತಿನಿಧಿಗಳಾಗಿ ಸರ್ಕಾರಗಳನ್ನು ಆಯ್ಕೆ ಮಾಡುವ ತಳಮಟ್ಟದ ಮತದಾರರ ಅಂತಿಮ ತೀರ್ಪು ನಿರ್ಣಾಯಕವಾಗುತ್ತದೆ.
ಪ್ರಜಾಪ್ರಭುತ್ವದ ಉಳಿವು, ಸಂವಿಧಾನದ ರಕ್ಷಣೆ ಹಾಗೂ ಶ್ರಮಿಕ ಜಗತ್ತಿನ ಸುಸ್ಥಿರ ಭವಿಷ್ಯತ್ತಿನ ದೃಷ್ಟಿಯಿಂದ 2024ರ ಚುನಾವಣೆಗಳು ಎಲ್ಲರ ನಿರೀಕ್ಷೆಗಳನ್ನೂ ಹುಸಿಗೊಳಿಸಿ ಪರ್ಯಾಯ ಸರ್ಕಾರವನ್ನು ಸ್ಥಾಪಿಸಬೇಕಿದೆ. ಸಾಮಾನ್ಯ ಮತದಾರ ಪ್ರಭುಗಳ ಚಿತ್ತ ಎತ್ತ ಸಾಗಿದೆ/ಸಾಗುತ್ತಿದೆ ? ಜೂನ್ 4ರಂದು ಸ್ಪಷ್ಟವಾಗಲಿದೆ.





