ವಿಯೆಟ್ನಾಂನ ಫೂ ಕ್ವೋಕ್ ದ್ವೀಪದ ಸಮೀಪ ನಡೆದ ಬೋಟ್ ದುರಂತದಲ್ಲಿ 15 ಭಾರತೀಯ ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

32 ಭಾರತೀಯ ಪ್ರವಾಸಿಗರು ಮತ್ತು ನಾಲ್ವರು ಸಿಬ್ಬಂದಿ ಸೇರಿ ಒಟ್ಟು 36 ಮಂದಿ ಇದ್ದ ಸ್ಪೀಡ್ ಬೋಟ್ ಹಾನ್ ಮೇ ರುತ್ ದ್ವೀಪದಿಂದ ಅನ್ ಥೋಯ್ ಬಂದರಿಗೆ ತೆರಳುತ್ತಿದ್ದ ವೇಳೆ ಸಮುದ್ರ ದಡದಿಂದ ಸುಮಾರು 400 ಮೀಟರ್ ದೂರದಲ್ಲಿ ಪಲ್ಟಿಯಾಗಿದೆ.

ಅಪಘಾತದ ಬಳಿಕ ಸ್ಥಳೀಯ ರಕ್ಷಣಾ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ 21 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆದರೆ ಇಬ್ಬರು ಮಹಿಳೆಯರು ಹಾಗೂ 13 ಪುರುಷರು ಸೇರಿದಂತೆ 15 ಭಾರತೀಯರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮೃತರು ತಮಿಳುನಾಡು ಮತ್ತು ಆಂಧ್ರಪ್ರದೇಶ ಮೂಲದ ಪ್ರವಾಸಿಗರಾಗಿದ್ದು, ಒಂದೇ ತಂಡದವರಾಗಿದ್ದರು ಎಂದು ವರದಿಯಾಗಿದೆ. ಈ ಘಟನೆ ಬಗ್ಗೆ ವಿಯೆಟ್ನಾಂನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದ್ದು, ಸಂತ್ರಸ್ತರ ಕುಟುಂಬಗಳಿಗೆ ನೆರವಾಗಲು ಹೋ ಚಿ ಮಿನ್ ಸಿಟಿ ಮತ್ತು ಹನೋಯಿಯಲ್ಲಿ ತುರ್ತು ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ. ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ ಸೂಚಿಸಿದ್ದಾರೆ.







