ಬೆಂಗಳೂರು: ನಗರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತಿದೆ, ಬಿಎಂಟಿಸಿ ಚಾಲಕರು ಹಾಗೂ ನಿರ್ವಾಹಕರು ಪ್ರಯಾಣಿಕರೊಂದಿಗೆ ಹೇಗೆ ನಡೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಉದ್ದೇಶದಿಂದ ಸಾರಿಗೆ ಸಚಿವ ಬೈರತಿ ಸುರೇಶ್ ಮಾಸ್ಕ್ ಧರಿಸಿ, ಸಾಮಾನ್ಯ ಪ್ರಯಾಣಿಕರಂತೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದರು. ಈ ವೇಳೆ ನಡೆದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಭೂಪಸಂದ್ರದಿಂದ ಹೆಬ್ಬಾಳ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್‌ಗೆ ಸಚಿವರು ಸಾಮಾನ್ಯ ಪ್ರಯಾಣಿಕರಂತೆ ಹತ್ತಿದರು. ಬಳಿಕ ಎರಡು ಟಿಕೆಟ್ ನೀಡುವಂತೆ ಕೇಳಿ ₹100 ನೋಟು ನೀಡಿದರು. ಟಿಕೆಟ್ ನೀಡಿದ ನಂತರ ಉಳಿದ ಹಣ ನೀಡುವ ವೇಳೆ ಕಂಡಕ್ಟರ್ ₹12 ಚಿಲ್ಲರೆ ಇದ್ದರೆ ನೀಡಿ ಎಂದು ಕೇಳಿದರು. ಆದರೆ ತಮ್ಮ ಬಳಿ ಚಿಲ್ಲರೆ ಇಲ್ಲ ಎಂದು ಸಚಿವರು ತಿಳಿಸಿದರು. ಇದಕ್ಕೆ ಕಂಡಕ್ಟರ್, ಚಿಲ್ಲರೆ ಇಲ್ಲದಿದ್ದರೆ ಬಸ್‌ನಿಂದ ಇಳಿಯಬೇಕಾಗುತ್ತದೆ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ.

ಈ ಸಂಪೂರ್ಣ ಘಟನೆ ಬಳಿಕ ಸಚಿವರು ಮಾಸ್ಕ್ ತೆಗೆದು ತಮ್ಮ ಪರಿಚಯವನ್ನು ತಿಳಿಸಿ, ನಂತರ ಬಸ್ ಸಿಬ್ಬಂದಿಯೊಂದಿಗೆ ಮಾತನಾಡಿ, ಟಿಕೆಟ್ ವಿತರಣೆ, ಚಿಲ್ಲರೆ ಸಮಸ್ಯೆ, ಪ್ರಯಾಣಿಕರಿಗೆ ಆಗುವ ತೊಂದರೆ ಹಾಗೂ ಸಿಬ್ಬಂದಿ ಎದುರಿಸುವ ಸವಾಲುಗಳ ಬಗ್ಗೆ ಮಾಹಿತಿ ಪಡೆದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಂಡಕ್ಟರ್ ಸಚಿವರೊಂದಿಗೆ ನಡೆದುಕೊಂಡ ರೀತಿ ಹಾಗೂ ಸಾರ್ವಜನಿಕ ಸಾರಿಗೆಯಲ್ಲಿನ ಚಿಲ್ಲರೆ ಸಮಸ್ಯೆ ಬಗ್ಗೆ ನೆಟ್ಟಿಗರು ಚರ್ಚಿಸಿದ್ದಾರೆ.






