ಬೆಂಗಳೂರು: ಹ್ಯಾಟ್ರಿಕ್ ಹೀರೋ..ಕನ್ನಡಿಗರ ಪಾಲಿನ ಪ್ರೀತಿಯ ಶಿವಣ್ಣ.. ನಟ ಶಿವರಾಜ್‌ಕುಮಾರ್ ಅವರು ಇಂದು ತಮ್ಮ 64ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ನಿವಾಸದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಶಿವಣ್ಣ, ಅಭಿಮಾನಿಗಳಿಗೆ ತಮ್ಮ ಹೊಸ ಸಿನಿಮಾಗಳ ಅಪ್ಡೇಟ್ ನೀಡಿದ್ದಾರೆ.

ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಹಲವು ಚಿತ್ರಗಳ ಕುರಿತು ಅಧಿಕೃತ ಘೋಷಣೆಗಳು ಹೊರಬಿದ್ದಿದ್ದು, ಈ ಪೈಕಿ ನಿರ್ದೇಶಕ ಆರ್. ಚಂದ್ರು ಹಾಗೂ ಶಿವರಾಜ್‌ಕುಮಾರ್ ಮತ್ತೊಮ್ಮೆ ಒಂದಾಗುತ್ತಿರುವ ಸುದ್ದಿ ಅಧೀಕೃತವಾಗಿದೆ. ‘ಮೈಲಾರಿ’ ಚಿತ್ರದ ಯಶಸ್ಸಿನ ಬಳಿಕ ಸುಮಾರು 16 ವರ್ಷಗಳ ನಂತರ ಈ ಜೋಡಿ ಮತ್ತೆ ಹೊಸ ಸಿನಿಮಾದಲ್ಲಿ ಕೈಜೋಡಿಸುತ್ತಿದ್ದು, ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ಆರ್. ಚಂದ್ರು ಅವರ ನಿರ್ಮಾಣ ಸಂಸ್ಥೆಯಾದ ಆರ್.ಸಿ. ಸ್ಟುಡಿಯೋಸ್ ಬ್ಯಾನರ್‌ನಡಿ ಈ ಬೃಹತ್ ಸಿನಿಮಾ ನಿರ್ಮಾಣವಾಗಲಿದೆ. ಚಿತ್ರದ ಕಥೆ ಮತ್ತು ಚಿತ್ರಕಥೆಯ ಕೆಲಸಗಳು ಈಗಾಗಲೇ ಅಂತಿಮ ಹಂತ ತಲುಪಿದ್ದು, ಈ ವರ್ಷವೇ ಚಿತ್ರೀಕರಣ ಆರಂಭಿಸುವ ಗುರಿಯನ್ನು ಚಿತ್ರತಂಡ ಹೊಂದಿದೆ. ಇದೊಂದು ಪಾನ್ ಇಂಡಿಯಾ ಸಿನಿಮಾವಾಗಿದ್ದು, ಸದ್ಯ ಚಿತ್ರಕ್ಕೆ RC#14 ಎಂದು ತಾತ್ಕಾಲಿಕ ಹೆಸರಿಡಲಾಗಿದೆ. ಸದ್ಯ ಈ ಚಿತ್ರದ ಬಿಗ್ ಅಪ್ಡೇಟ್ ಪೋಸ್ಟರ್ ಎಲ್ಲೆಡೆ ವೈರಲ್ ಆಗುತ್ತಿದ್ದು, ಶಿವಣ್ಣ-ಆರ್. ಚಂದ್ರು ಕಾಂಬಿನೇಷನ್‌ನ ಹೊಸ ಚಿತ್ರದ ಬಗ್ಗೆ ಸಿನಿ ಪ್ರಿಯರು ಉತ್ಸುಕರಾಗಿದ್ದಾರೆ.

ಇದೇ ವೇಳೆ ಶಿವರಾಜ್‌ಕುಮಾರ್ ನಟನೆಯ ಮತ್ತೊಂದು ಹೊಸ ಸಿನಿಮಾ ಕೂಡ ಘೋಷಣೆಯಾಗಿದೆ. ‘ಜೇಮ್ಸ್’ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ನಿರ್ಮಾಣದಲ್ಲಿ, ನಿರ್ದೇಶಕ ಬಹದ್ದೂರ್ ಚೇತನ್ ಆಕ್ಷನ್-ಕಟ್ ಹೇಳಲಿರುವ ಚಿತ್ರಕ್ಕೆ ‘ಜೆಜೆ ರಾಯ್’ ಎಂಬ ಶೀರ್ಷಿಕೆ ನಿಗದಿಯಾಗಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

ಇನ್ನು ಹುಟ್ಟುಹಬ್ಬದ ವಿಶೇಷವಾಗಿ ಶಿವರಾಜ್‌ಕುಮಾರ್ ಅವರ ಜೀವನ ಮತ್ತು ಕ್ಯಾನ್ಸರ್ ವಿರುದ್ಧದ ಹೋರಾಟವನ್ನು ಆಧರಿಸಿದ ‘ಸರ್ವೈವರ್’ ಡಾಕ್ಯುಮೆಂಟರಿಯ ಪ್ರೋಮೋ ಕೂಡ ಬಿಡುಗಡೆಯಾಗಿದೆ. ಜೊತೆಗೆ ‘ಎ ಫಾರ್ ಆನಂದ್’ ಚಿತ್ರದ ಟೀಸರ್ ಕೂಡ ಅನಾವರಣಗೊಂಡಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.






