ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ತಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸಿದ ಮಾಹಿತಿಯ ಪ್ರಕಾರ 2012ರ ನಂತರ ಭಾರತದಲ್ಲಿ 1059 ಹುಲಿಗಳು ಸಾವನ್ನಪ್ಪಿವೆ. ಇವುಗಳಲ್ಲಿ ಅತಿ ಹೆಚ್ಚಿನ ಸಾವುಗಳು ಮಧ್ಯಪ್ರದೇಶದಲ್ಲಿ ಸಂಭವಿಸಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಪ್ರಕಾರ, ಈ ವರ್ಷ ದೇಶಾದ್ಯಂತ ಒಟ್ಟು 75 ಹುಲಿಗಳು ಸಾವನ್ನಪ್ಪಿದರೆ ಕಳೆದ ವರ್ಷ 127 ಹುಲಿಗಳು ಸತ್ತಿದ್ದವು. ಇದು ಕಳೆದ ಒಂದು ದಶಕದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯ ಸಾವಾಗಿದೆ.
ಆರು ಹುಲಿ ಮೀಸಲು ಅರಣ್ಯಗಳನ್ನು ಹೊಂದಿರುವ ಮಧ್ಯಪ್ರದೇಶವು ಅತಿ ಹೆಚ್ಚು ಹುಲಿಗಳನ್ನು ಹೊಂದಿದೆ. ಮತ್ತು ಹುಲಿಗಳ ಸಾವಿನ ಪ್ರಮಾಣವೂ ಅಲ್ಲೇ ಹೆಚ್ಚು. ಮಧ್ಯಪ್ರದೇಶವು 2012 ಮತ್ತು 2020 ರ ನಡುವೆ 202 ಸಾವುಗಳು ದಾಖಲಿಸಿದರೆ, ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ (141), ಕರ್ನಾಟಕ (123), ಉತ್ತರಾಖಂಡ್ (93), ಅಸ್ಸಾಂ (60), ತಮಿಳುನಾಡು (62), ಉತ್ತರ ಪ್ರದೇಶ (44) ಮತ್ತು ಕೇರಳ (45) ರಾಜ್ಯಗಳಿವೆ.
ಕಳೆದ ಒಂದೂವರೆ ವರ್ಷಗಳಲ್ಲಿ ಮಧ್ಯಪ್ರದೇಶವು 68 ಹುಲಿಗಳನ್ನು ಕಳೆದುಕೊಂಡಿದ್ದರೆ, ಮಹಾರಾಷ್ಟ್ರದಲ್ಲಿ ಈ ಅವಧಿಯಲ್ಲಿ 42 ಹುಲಿಗಳು ಸಾವನ್ನಪ್ಪಿವೆ. “ಈ ಸಂಖ್ಯೆಗಳು ಗಾಬರಿಗೊಳಿಸುವಂತೆ ತೋರುತ್ತದೆಯಾದರೂ, ಕಳೆದ ಹತ್ತು ವರ್ಷಗಳಲ್ಲಿ ಮಧ್ಯಪ್ರದೇಶದ ಹುಲಿಯ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಮಧ್ಯಪ್ರದೇಶವು ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿದೆ. ಆದ್ದರಿಂದ ಅಲ್ಲಿ ಸಂಭವಿಸಿರುವ ಸಾವುಗಳಿಗೆ ಹೆಚ್ಚಿನ ಸಂದರ್ಭಗಳಲ್ಲಿ ನೈಸರ್ಗಿಕ ಸಾವೇ ಕಾರಣವಾಗುವ ಸಾಧ್ಯತೆ ಇದೆ. ಆದರೆ ಹುಲಿಮೀಸಲು ಅರಣ್ಯಗಳ ಒಳಗೆ ಮತ್ತು ಹೊರಗೆ ಕಳ್ಳ ಬೇಟೆಗಾರರು ಇರುವುದರಿಂದ ಹುಲಿಗಳ ಸಾವಿನಮೇಲೆ ಗಮನವಿಡುವ ಅಗತ್ಯ ಇದ್ದೇ ಇದೆ” ಎನ್ನುತ್ತಾರೆ ವನ್ಯಜೀವಿ ಸಂರಕ್ಷಣಾ ಟ್ರಸ್ಟ್‌ನ ಅಧ್ಯಕ್ಷ ಅನ್ಯಾಶ್ ಅಂಧೇರಿಯಾ.
2019 ರ ಹುಲಿಗಣತಿಯ ಪ್ರಕಾರ, ಭಾರತವು 2967 ಹುಲಿಗಳನ್ನು ಹೊಂದಿದೆ, ಅದರಲ್ಲಿ 526 ಹುಲಿಗಳು ಮಧ್ಯಪ್ರದೇಶದಲ್ಲಿವೆ. ಮಧ್ಯಪ್ರದೇಶದ ಪ್ರಧಾನ ಅರಣ್ಯ ಸಂರಕ್ಷಕ (ವನ್ಯಜೀವಿ) ಜೆಎಸ್ ಚೌಹಾನ್ ಪ್ರಕಾರ “ಹುಲಿಗಳ ಸಂಖ್ಯೆಯು ಕಳೆದ ಕೆಲವು ವರ್ಷಗಳಿಂದ ಮಧ್ಯಪ್ರದೇಶದಲ್ಲಿ ಹೆಚ್ಚಿದೆ. ವಯಸ್ಸು ಅಥವಾ ಪರಸ್ಪರ ಹೋರಾಟದಂತಹ ನೈಸರ್ಗಿಕ ಕಾರಣಗಳಿಂದಾಗಿ ಅನೇಕ ಹುಲಿಗಳು ಸಾಯುತ್ತವೆ. ವಿದ್ಯುತ್ ಆಘಾತದ ಕಾರಣದಿಂದಾಗಿ ಕೆಲವು ಅಸ್ವಾಭಾವಿಕ ಸಾವುಗಳೂ ಸಂಭವಿಸಿವೆ. ತಜ್ಞರ ತಂಡವು ಸಾಕ್ಷ್ಯಗಳ ಆಧಾರದ ಮೇಲೆ ಮಾತ್ರ ಪ್ರಕರಣಗಳನ್ನು ಮುಚ್ಚುತ್ತದೆ. ಇವತ್ತಿಗೆ ಸಂಬಂಧಿಸಿದಂತೆ ಹೇಳುವುದಾದರೆ ಹುಲಿಗಳ ಸಂರಕ್ಷಣೆಗಾಗಿ ಮಧ್ಯಪ್ರದೇಶ ಉತ್ತಮ ಕೆಲಸ ಮಾಡುತ್ತಿದೆ”. NTCA ಯ ಡೇಟಾ ಪ್ರಕಾರ, 2020ರಲ್ಲಿ 106 ಹುಲಿಗಳ ಸಾವು ಸಂಭವಿಸಿವೆ, 2019ರಲ್ಲಿ 96 2018 ರಲ್ಲಿ 101, 2017 ರಲ್ಲಿ 117, 2016 ರಲ್ಲಿ 121; 2015 ರಲ್ಲಿ 82, 2014 ರಲ್ಲಿ 78 2013ರಲ್ಲಿ 68 ಮತ್ತು 2012 ರಲ್ಲಿ 88 ಹುಲಿಗಳು ಸಾವನ್ನಪ್ಪಿವೆ.

NTCA ಪ್ರಕಾರ, 2012-2020 ಅವಧಿಯಲ್ಲಿ 193 ಹುಲಿಗಳು ಬೇಟೆಯಾಡುವುದರಿಂದ ಮರಣಹೊಂದಿವೆ. ಜನವರಿ 2021 ರಿಂದ ಬೇಟೆಯ ಕಾರಣದಿಂದ ಸಂಭವಿಸಿದ ಸಾವುಗಳ ಡೇಟಾ ಇನ್ನೂ ಲಭ್ಯವಿಲ್ಲ. NTCAಯ ಪ್ರಕಾರ 108 ಹುಲಿಗಳ ಸಾವಿಗೆ ‘seizure’ ಕಾರಣವಾಗಿದ್ದರೆ 44 ಹುಲಿಗಳು ಅಸ್ವಾಭಾವಿಕ ಕಾರಣಗಳಿಂದ ಸತ್ತಿವೆ.
“ಭಾರತದಲ್ಲಿ ಸುಮಾರು 3000 ಹುಲಿಗಳಿವೆ. ಅವುಗಳಲ್ಲಿ 200 ಹುಲಿಗಳು ಪ್ರತಿ ವರ್ಷ ಸಾಯಲೇಬೇಕು. ಪ್ರತಿ ವರ್ಷ ಹುಲಿಗಳ ಸಂಖ್ಯೆಯಲ್ಲಿ 6% ಬೆಳವಣಿಗೆಯಾಗುತ್ತದೆ ಮತ್ತು ಅವುಗಳಿಗೆ 12 ವರ್ಷಗಳ ಜೀವಿತಾವಧಿ ಇರುತ್ತದೆ. ಆದ್ದರಿಂದ, 10 ವರ್ಷಗಳಲ್ಲಿ 1000 ಸಾವುಗಳನ್ನು ಕಾಣುವುದು ನೈಸರ್ಗಿಕವೇ ಆಗಿದೆ”ಎನ್ನುತ್ತಾರೆ NTCA ನ ಹಿರಿಯ ಅಧಿಕಾರಿಯೊಬ್ಬರು.
ಆದರೆ ಹುಲಿಗಳ ಸಂಖ್ಯೆಯಲ್ಲಿ ಇನ್ನೂ ಕೆಲವು ವಿವರಿಸಲಾಗದ ಅಸ್ಥಿರತೆಗಳಿವೆ. “ಕನಿಷ್ಠ 1500 ಹುಲಿಮರಿಗಳು ಭಾರತದಲ್ಲಿ ಪ್ರತಿ ವರ್ಷವೂ ಜನಿಸುತ್ತವೆ. ಆದರೆ ಅದೇ ಪ್ರಮಾಣದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುವುದಿಲ್ಲ. ಇದು ದೇಶದಲ್ಲಾಗುತ್ತಿರುವ ನೈಸರ್ಗಿಕ ಹುಲಿ ಸಾವುಗಳ ಕಾರಣದಿಂದಾಗಿರಬಹುದು. ಈ ಅಂಕಿ ಅಂಶಗಳ ಪ್ರಕಾರ ಕಳೆದ 10 ವರ್ಷಗಳಲ್ಲಿ 15000 ಮರಿಗಳನ್ನು ಹುಲಿಮರಿಗಳು ಹುಟ್ಟಿವೆ. ಆದರೆ ಈ ಒಂದು ದಶಕದಲ್ಲಿ ಸಾವಿನ ಪ್ರಮಾಣ ಲೆಕ್ಕ ಹಾಕಿದಾಗ ಕೇವಲ ಸಾವಿರ ಸಾವುಗಳು ಮಾತ್ರ ಲೆಕ್ಕಕ್ಕೆ ಸಿಗುತ್ತಿವೆ” ಎನ್ನುತ್ತಾರೆ ಅಂಧೇರಿಯಾ.
ಭಾರತದ 2019 ಹಲಿಗಳ ಸಂಖ್ಯೆಯು 2014ಕ್ಕಿಂತ 33% ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ. ಆಗ ದೇಶದಲ್ಲಿ 2,226 ಹುಲಿಗಳು ಮಾತ್ರ ಇದ್ದವು. 2019ರಲ್ಲಿ ಆ ಸಂಖ್ಯೆ 3000ಕ್ಕೆ ಏರಿದೆ. ಕರ್ನಾಟಕದಲ್ಲಿ ಈಗ 524 ಮತ್ತು ಉತ್ತರಾಖಂಡ್ನಲ್ಲಿ 442 ಹುಲಿಗಳಿವೆ. ಆದರೆ ಛತ್ತೀಸ್ಗಢದಲ್ಲಿ ಅವುಗಳ ಸಂಖ್ಯೆ ಅರ್ಧಕ್ಕಿಂತಲೂ ಕಡಿಮೆ ಆಗಿದೆ. 2014 ರಲ್ಲಿ ಅಲ್ಲಿ 46 ಹುಲಿಗಳಿದ್ದರೆ 2018ರಲ್ಲಿ ಈ ಸಂಖ್ಯೆ 19ಕ್ಕೆ ಇಳಿದಿದೆ. ಮಿಜೋರಾಮ್ ಮತ್ತು ಉತ್ತರ ಪಶ್ಚಿಮ ಬಂಗಾಳವು 2014 ರಲ್ಲಿ ಟೈಗರ್ ಚಿಹ್ನೆಗಳನ್ನು ಹೊಂದಿತ್ತು ಆದರೆ 2019ರ ಹುಲಿಗಣತಿಯಲ್ಲಿ ಅವು ಇರುವ ಯಾವುದೇ ಕುರುಹು ಕಂಡು ಬಂದಿಲ್ಲ. 2014 ರ ಹುಲಿಗಣತಿಯಲ್ಲಿ ಹುಲಿಗಳಿರುವ ಕುರುಹು ದಾಖಲಿಸಿದ್ದ ಪಶ್ಚಿಮ ಬಂಗಾಳದ ಬುಕ್ಸಾ, ಮಿಜೋರಾಂನ ಡಂಪಾ ಮತ್ತು ಜಾರ್ಖಂಡ್ ನ ಪಲಮಾವು ಮೀಸಲು ಅರಣ್ಯದಲ್ಲಿ 2019ರಲ್ಲಿ ಯಾವುದೇ ಹುಲಿ ಕಂಡುಬಂದಿಲ್ಲ. ಮತ್ತು ಒಡಿಶಾದ ಹುಲಿಗಳ ಸಂಖ್ಯೆಯಲ್ಲೂ ಯಾವುದೇ ಸುಧಾರಣೆ ಕಂಡುಬಂದಿಲ್ಲ.