ನವದೆಹಲಿ : ದೇಶಾದ್ಯಂತ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ (PDS) ಮಹತ್ವದ ಬದಲಾವಣೆಗಳು ಆರಂಭವಾಗುತ್ತಿದ್ದು, ನಕಲಿ, ಅನರ್ಹ ಮತ್ತು ನಿಷ್ಕ್ರಿಯ ರೇಷನ್ ಕಾರ್ಡ್ (Ration Card) ಪತ್ತೆಹಚ್ಚಿ ವ್ಯವಸ್ಥೆಯನ್ನು ಶುದ್ಧೀಕರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಕಳೆದ ಆರು ತಿಂಗಳಿಂದ ಪಡಿತರ ಪಡೆಯದ ಸುಮಾರು 1.58 ಕೋಟಿ ಫಲಾನುಭವಿಗಳ ಪಡಿತರ ಸೌಲಭ್ಯವನ್ನು ಅಕ್ಟೋಬರ್ ತಿಂಗಳಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ಆದರೆ ಈ ಕಾರ್ಡ್‌ಗಳನ್ನು ನೇರವಾಗಿ ದತ್ತಾಂಶದಿಂದ ಶಾಶ್ವತವಾಗಿ ರದ್ದುಪಡಿಸುವುದಿಲ್ಲ. ಬದಲಾಗಿ ಮೊದಲು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಲಾಗುವುದು. ಅರ್ಹ ಫಲಾನುಭವಿಗಳು ತಮ್ಮ ದಾಖಲೆಗಳನ್ನು ಮರುಪರಿಶೀಲಿಸಿಕೊಳ್ಳಲು ಮೂರು ತಿಂಗಳ ಕಾಲಾವಕಾಶವಿದ್ದು, ಈ ಅವಧಿಯಲ್ಲಿ ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಿದರೆ ಕಾರ್ಡ್‌ಗಳನ್ನು ಮರುಸಕ್ರಿಯಗೊಳಿಸಲು ಅವಕಾಶವಿದೆ.

ಆರು ತಿಂಗಳು ರೇಷನ್ ಪಡೆಯದಿದ್ದರೆ ಏನಾಗುತ್ತದೆ?
ಹೊಸ ನಿಯಮಾವಳಿಗಳ ಅನ್ವಯ, ಸತತ ಆರು ತಿಂಗಳ ಕಾಲ ಆಹಾರ ಧಾನ್ಯಗಳನ್ನು ಪಡೆಯದ ಕಾರ್ಡ್‌ಗಳನ್ನು ‘ಸೈಲೆಂಟ್ ರೇಷನ್ ಕಾರ್ಡ್’ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಪರಿಷ್ಕೃತ ನಿಯಮಗಳ ಪ್ರಕಾರ, ಇಂತಹ ಕಾರ್ಡ್‌ಗಳ ಪಡಿತರ ವಿತರಣೆಯನ್ನು ರಾಜ್ಯ ಸರ್ಕಾರಗಳು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಗುತ್ತದೆ. ನಂತರದ ಮೂರು ತಿಂಗಳಲ್ಲಿ ಇ-ಕೆವೈಸಿ ಮತ್ತು ಸ್ಥಳ ಪರಿಶೀಲನೆಯ (Field Verification) ಮೂಲಕ ಫಲಾನುಭವಿಯ ಅರ್ಹತೆಯನ್ನು ಮರುಪರಿಶೀಲಿಸಲಾಗುತ್ತದೆ. ಆದ್ದರಿಂದ ಆರು ತಿಂಗಳು ರೇಷನ್ ಪಡೆಯದ ಕಾರಣಕ್ಕೆ ಕಾರ್ಡ್ ಶಾಶ್ವತವಾಗಿ ರದ್ದಾಯಿತು ಎಂದು ಆತಂಕಪಡುವ ಅಗತ್ಯವಿಲ್ಲ, ಬದಲಿಗೆ ಅರ್ಹತೆಯನ್ನು ಸಾಬೀತುಪಡಿಸಲು ಫಲಾನುಭವಿಗಳಿಗೆ ನ್ಯಾಯಯುತ ಅವಕಾಶ ಕಲ್ಪಿಸಲಾಗುತ್ತದೆ.

ಅಕ್ಟೋಬರ್ 1 ರಿಂದ ಹೊಸ ವ್ಯವಸ್ಥೆ ಜಾರಿ
ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಇತ್ತೀಚೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಹಾರ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಿದೆ. ಇದಕ್ಕಾಗಿ ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (SOP) ಬಿಡುಗಡೆ ಮಾಡಲಾಗಿದ್ದು, ಪಡಿತರ ದತ್ತಾಂಶವನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸಿ ಕೇವಲ ಅರ್ಹರಿಗೆ ಮಾತ್ರ ಸರ್ಕಾರದ ಸಬ್ಸಿಡಿ ಆಹಾರ ಧಾನ್ಯಗಳು ತಲುಪುವಂತೆ ಮಾಡುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ.
UPI ಪಾವತಿಗೆ ಇನ್ನು ಶುಲ್ಕವೇ? ಗ್ರಾಹಕರಿಗೆ ಅನ್ವಯವಾಗುತ್ತಾ ಹೊಸ ನಿಯಮ?
BREAKING : ಏಷ್ಯನ್ ಗೇಮ್ಸ್ ಅರ್ಚರಿಯಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ






