ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್. ಡಿ. ಕುಮಾರಸ್ವಾಮಿ ಅವರು ಸದ್ಯಕ್ಕೆ ನಾನು ಕ್ಲರ್ಕ್ ತರ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್ ನೀಡುತ್ತಿರುವ ಕಿರುಕುಳವನ್ನು ಸಹಿಸಿಕೊಂಡಿದ್ದೇನೆ ಎಂದು ಹೇಳಿದ್ದು ಸಾಕಷ್ಟು ಟೀಕೆ, ವ್ಯಂಗ್ಯಕ್ಕೆ ಕಾರಣವಾಗಿತ್ತು. ಇದೀಗ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ನನ್ನದು ಹಗ್ಗದ ಮೇಲಿನ ನಡಿಗೆ ಎಂದು ಹೇಳಿರುವುದು ಅದೇ ರೀತಿಯ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಪ್ರತಿಪಕ್ಷಗಳು ಮುಖ್ಯಮಂತ್ರಿಗಳ ರಾಜಿನಾಮೆಗೆ ಒತ್ತಾಯಿಸುತ್ತಿವೆ.
ದಾವಣಗೆರೆಯಲ್ಲಿ ಭಾನುವಾರ ಸಮಾರಂಭವೊಂದರಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ನಾನು ಒಂದು ರೀತಿಯಲ್ಲಿ ತಂತಿ ಮೇಲೆ ನಡೆಯುತ್ತಿದ್ದೇನೆ, ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕಾದರೂ ಹತ್ತಾರು ಸಲ ವಿಚಾರ ಮಾಡಬೇಕಾದ ಸ್ಥಿತಿ ಇದೆ. ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೂ ಅದು ಬೇರೆ ಸಮಾಜದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಚಿಂತನೆ ಮಾಡಬೇಕಾದ ಸ್ಥಿತಿ ನನ್ನದಾಗಿದೆ ಎಂದು ಹೇಳಿದ್ದರು. ಈ ಮಾತಿನ ಹಿಂದಿನ ಉದ್ದೇಶ ಏನೇ ಆಗಿರಲಿ, ಅದರ ಪರಿಣಾಮ ಮಾತ್ರ ಮೈತ್ರಿ ಸರ್ಕಾರ ಉರುಳಿಸಿ ಅಲ್ಪಮತದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಅವರ ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕನ್ನಡಿ ಎಂಬುದರಲ್ಲಿ ಎರಡು ಮಾತಿಲ್ಲ.
ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಜವಾಬ್ದಾರಿ ಸ್ಥಾನದಲ್ಲಿರುವ ಯಡಿಯೂರಪ್ಪ ಅವರ ಪರಿಸ್ಥಿತಿ ತಂತಿಯ ಮೇಲಿನ ನಡಿಗೆಯಂತಿದ್ದರೂ ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವುದು ಸರಿಯಲ್ಲ. ಮುಖ್ಯಮಂತ್ರಿಯಾಗಿ ಎಲ್ಲಾ ಅಧಿಕಾರಗಳೂ ಅವರ ಕೈಯ್ಯಲ್ಲೇ ಇದೆ. ಅದನ್ನು ಬಳಸಿಕೊಂಡು ಪರಿಸ್ಥಿತಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಧೈರ್ಯ ತೋರಿಸಬೇಕು. ಅಧಿಕಾರ ಬಂದಿರುವುದು ಸಾರ್ವಜನಿಕರ ಸೇವೆಗೆ, ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸಲು ಎಂದು ತಿಳಿದುಕೊಂಡು ಕೆಲಸ ಮಾಡಬೇಕು. ಅದು ಸಾಧ್ಯವಾಗದೇ ಇದ್ದಲ್ಲಿ ರಾಜಿನಾಮೆ ನೀಡಿ ಹೊರನಡೆಯಬೇಕು. ಅದನ್ನು ಬಿಟ್ಟು ತಂತಿಯ ಮೇಲೆ ನಡೆಯುತ್ತಿದ್ದೇನೆ ಎಂದು ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುವುದಲ್ಲ.
ತಂತಿಯ ಮೇಲಿನ ನಡಿಗೆಯಾಗಲು ಕಾರಣಗಳೇನು?
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ 17 ಶಾಸಕರ ರಾಜಿನಾಮೆಯಿಂದಾಗಿ ಮೈತ್ರಿ ಸರ್ಕಾರ ಉರುಳಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಸರ್ಕಾರ ಉರುಳಿಸಿದ್ದಕ್ಕಾಗಿ 17 ಶಾಸಕರು ಅನರ್ಹಗೊಂಡಿದ್ದರು. ಈ ಅನರ್ಹತೆ ವಿವಾದ ಸುಪ್ರೀಂ ಕೋರ್ಟ್ ನಲ್ಲಿ ಬಗೆಹರಿಯುವುದು ವಿಳಂಬವಾಗುತ್ತಿದೆ. ಮತ್ತೊಂದೆಡೆ ಶಾಸಕರ ಅನರ್ಹತೆ ರದ್ದಾದರೆ ಅಥವಾ ಮುಂಬರುವ ವಿಧಾನಸಭೆ ಚುನಾವಣೆಗೆ ಅವರಿಗೆ ಸ್ಪರ್ಧಿಸಲು ಅವಕಾಶ ಸಿಕ್ಕಿದರೆ ಬಿಜೆಪಿಯಿಂದ ಟಿಕೆಟ್ ನೀಡುವುದಕ್ಕೆ ಪಕ್ಷದಲ್ಲೇ ಅಪಸ್ವರ ಕೇಳಿಬರುತ್ತಿದೆ. ಉಪಮುಖ್ಯಮಂತ್ರಿ ಸ್ಥಾನ, ಸಚಿವ ಸ್ಥಾನ ಹಂಚಿಕೆ, ಖಾತೆಗಳ ಹಂಚಿಕೆ ವಿಚಾರದಲ್ಲಿ ಪಕ್ಷದಲ್ಲಿ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದೆ. ಬಳ್ಳಾರಿ ಜಿಲ್ಲೆ ವಿಭಜನೆ ವಿವಾದ ಸರ್ಕಾರಕ್ಕೇ ಅಪಾಯ ಉಂಟುಮಾಡುವ ಆತಂಕ ಉಂಟುಮಾಡಿದೆ.
ಇವಿಷ್ಟು ಸರ್ಕಾರದ ಮಟ್ಟದಲ್ಲಾದರೆ, ಪಕ್ಷದ ವಿಚಾರದಲ್ಲೂ ಸಾಕಷ್ಟು ಗೊಂದಲಗಳಿವೆ. ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ನಡುವಿನ ಭಿನ್ನಮತ ಎಲ್ಲರಿಗೂ ಗೊತ್ತಿರುವ ಸಂಗತಿ. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಅವರಿದ್ದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ. ಎಲ್. ಸಂತೋಷ್ ಅವರ ಆಪ್ತ ನಳಿನ್ ಕುಮಾರ್ ಕಟೀಲ್ ಅವರನ್ನು ಕೂರಿಸಲಾಗಿದೆ. ನಳಿನ್ ಕುಮಾರ್ ಕಟೀಲ್ ಅವರು ಪಕ್ಷಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ.
ಈ ಹಿಂದೆ ಯಡಿಯೂರಪ್ಪ ಅವರು ಹೊಸ ಪಕ್ಷ ಸ್ಥಾಪಿಸಿ ಮತ್ತೆ ಬಿಜೆಪಿಗೆ ಬಂದಾಗ ಅವರನ್ನು ಖುಲ್ಲಂ ಖುಲ್ಲ ವಿರೋಧಿಸಿದವರಿಗೆ ಪಕ್ಷದಲ್ಲಿ ಮಣೆ ಹಾಕಲಾಗುತ್ತಿದೆ. ಯಡಿಯೂರಪ್ಪ ಅವರನ್ನು ವಿರೋಧಿಸಲೆಂದೇ ಹುಟ್ಟಿಕೊಂಡಿದ್ದ ರಾಯಣ್ಣ ಬ್ರಿಗೇಡ್ ನಲ್ಲಿ ಗುರುತಿಸಿಕೊಂಡಿದ್ದ ಭಾನುಪ್ರಕಾಶ್ ಮತ್ತು ನಿರ್ಮಲ್ ಕುಮಾರ್ ಸುರಾನಾ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಬಿಬಿಎಂಪಿ ಮೇಯರ್ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ಸಮಿತಿಯೊಂದನ್ನು ರಚಿಸಿದ್ದರೆ, ನಳಿನ್ ಕುಮಾರ್ ಕಟೀಲ್ ಅವರು ಈ ಸಮಿತಿಯೇ ಇಲ್ಲ ಎಂದು ಹೇಳುವ ಮೂಲಕ ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ. ಪಕ್ಷದೊಳಗಿನ ಗೊಂದಲದಿಂದಾಗಿ ಮೇಯರ್ ಅಭ್ಯರ್ಥಿ ಆಯ್ಕೆ ಸಾಧ್ಯವಾಗದೆ ಚುನಾವಣೆಯನ್ನೇ ಮುಂದೂಡುವ ಪರಿಸ್ಥಿತಿ ಬಂದಿದೆ.
ಇವು ಸರ್ಕಾರ ಮತ್ತು ಪಕ್ಷದ ಮಟ್ಟದಲ್ಲಾದರೆ, ಕೇಂದ್ರ ಸರ್ಕಾರವೂ ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರಾಜ್ಯದಲ್ಲಿ ಭೀಕರ ಮಳೆ ಮತ್ತು ಪ್ರವಾಹ ಬಂದು ಸಾವಿರಾರು ಕೋಟಿ ರೂ. ನಷ್ಟವಾದರೂ ಕೇಂದ್ರ ಸರ್ಕಾರ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇದ್ದಾಗ್ಯೂ ಹಣ ತರಲು ವಿಫಲರಾಗಿರುವುದಕ್ಕೆ ಪ್ರತಿಪಕ್ಷಗಳು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮನಬಂದಂತೆ ಟೀಕೆ ಮಾಡುತ್ತಿವೆ. ಅವರ ರಾಜಿನಾಮೆಗೂ ಒತ್ತಾಯಿಸುತ್ತಿವೆ. ಪರಿಹಾರ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಎಷ್ಟೇ ಹಣ ಬಿಡುಗಡೆ ಮಾಡಿದರೂ ಅದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಇನ್ನೊಂದೆಡೆ ಬೊಕ್ಕಸದಲ್ಲಿರುವ ಹಣವೆಲ್ಲಾ ಪರಿಹಾರ ಕಾಮಗಾರಿಗಳಿಗೆ ವೆಚ್ಚವಾಗಿ ಇತರೆ ಕಾರ್ಯಕ್ರಮಗಳಿಗೆ ಹಣವಿಲ್ಲದೆ ಸ್ವಪಕ್ಷೀಯರೇ ಸರ್ಕಾರದ ಬಗ್ಗೆ ಬೇಸರಪಟ್ಟುಕೊಳ್ಳುವಂತಾಗಿದೆ.
ನೆರೆ ಮತ್ತು ಬರ ವಿಚಾರದಲ್ಲಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವುದು ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಆದರೆ, ಉಪಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ, ಬೆಂಗಳೂರು ನಗರಾಭಿವೃದ್ಧಿಯೂ ದಕ್ಕಿಲ್ಲ ಎಂಬ ಅಸಮಾಧಾನದಲ್ಲಿರುವ ಕಂದಾಯ ಸಚಿವ ಆರ್. ಅಶೋಕ್ ನೆರೆ, ಬರ ಪರಿಹಾರ ಕುರಿತು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿಲ್ಲ. ಜಿಲ್ಲೆ, ತಾಲೂಕು ಕೇಂದ್ರಗಳಿಗೆ ಹೋಗಿ ಪರಿಹಾರ ಕಾಮಗಾರಿಗಳ ಉಸ್ತುವಾರಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಇದರ ಪರಿಣಾಮ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಇವೆಲ್ಲದರ ಕಾರಣದಿಂದಾಗಿ ಸರ್ಕಾರ ನಡೆಸುವ ಯಡಿಯೂರಪ್ಪ ಅವರ ಸ್ಥಿತಿ ತಂತಿಯ ಮೇಲಿನ ನಡಿಗೆಯಂತಾಗಿರುವುದು ಸುಳ್ಳಲ್ಲ.
ಆದರೆ, ಇವೆಲ್ಲವನ್ನು ಮೀರಿ ಜನಪರ ಕೆಲಸ ಮಾಡಿದಾಗಲೇ ಆತ ಸಮರ್ಥ ಮುಖ್ಯಮಂತ್ರಿಯಾಗುವುದು. ಕೊಟ್ಟ ಕುದುರೆಯನ್ನೇರಲಾರದವನು ವೀರನೂ ಅಲ್ಲ, ಧೀರನೂ ಅಲ್ಲ ಎಂದು ಯಡಿಯೂರಪ್ಪ ಅವರೇ ಈ ಹಿಂದೆ ಅನೇಕ ಬಾರಿ ಹೇಳಿದ್ದರು. ಹೇಳಿದಂತೆ ನಡೆದುಕೊಂಡು ಗುರಿ ಸಾಧಿಸದಿದ್ದರೆ ತಮ್ಮನ್ನು ತಾವೇ ಧೀರ, ಶೂರ ಅಲ್ಲ ಎಂದು ಅವರು ಹೇಳಿಕೊಂಡಂತಾಗುತ್ತದೆ. ಆ ರೀತಿ ಆಗದೇ ಇರಬೇಕಾದರೆ ತಂತಿಯ ಮೇಲಿನ ನಡಿಗೆಯಿಂದ ಇಳಿದು ಸಮರ್ಥ ಆಡಳಿತ ನೀಡುವತ್ತ ಗಮನಹರಿಸಬೇಕು.