ಕರ್ನಾಟಕ ರಾಜ್ಯ ಹಾಗೂ ಭಾರತ ದೇಶ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಕರೋನಾ ರಣಕೇಕೆ ಮುಂದುವರಿದಿದೆ. ವಿಶ್ವದ ಬಹುತೇಕ ರಾಷ್ಟ್ರಗಳು ಕರೋನಾ ಸೋಂಕು ನಿಯಂತ್ರಣದಲ್ಲಿದೆ ಎನ್ನುವ ಸಮಯದಲ್ಲಿ ಭಾರತ ಅಸಹಾಯಕ ಪರಿಸ್ಥಿತಿಯಲ್ಲಿದೆ. ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಉತ್ತುಂಗದತ್ತ ಅತಿ ವೇಗವಾಗಿ ಸಾಗುತ್ತಲಿದೆ. ಭಾರತದ ಪರಿಸ್ಥಿತಿ ಅಪಾಯದ ಮಟ್ಟ ಮೀರಿ ಹೋಗುತ್ತಿದ್ದರೂ ಲಾಕ್ಡೌನ್ ಮಾಡುವ ಮೂಲಕ ನಿಯಂತ್ರಣ ಮಾಡುವ ಪರಿಸ್ಥಿತಿಯಲ್ಲೂ ಭಾರತ ಸರ್ಕಾರವಿಲ್ಲ. ವಯಸ್ಸಾದವರು, 10 ವರ್ಷ ಒಳಪಟ್ಟ ಮಕ್ಕಳು ಹಾಗೂ ಗರ್ಭಿಣಿಯರು ಮನೆಯಿಂದ ಹೊರಕ್ಕೆ ಬಂದು ಅಡ್ಡಾಡುವುದನ್ನು ಸರ್ಕಾರ ನಿರ್ಬಂಧ ವಿಧಿಸಿದೆ. ಆದರೂ ಅಷ್ಟೊಂದು ಕಠಿಣವಾಗಿ ಇದು ಪಾಲನೆಯಾಗುತ್ತಿಲ್ಲ. ಕರೋನಾ ಸೋಂಕು ವ್ಯಾಪಿಸುವುದೂ ಸಹ ನಿಯಂತ್ರಣಕ್ಕೆ ಬರುತ್ತಿಲ್ಲ.
ಭಾರತದ ಪರಿಸ್ಥಿತಿ ಈಗ ಯಾವ ಹಂತದಲ್ಲಿದೆ..?
ದೇಶದಲ್ಲಿ ಕರೋನಾ ಹಾವಳಿ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಾ ಸಾಗುತ್ತಿದೆ. ಶುಕ್ರವಾರ ಒಂದೇ ದಿನ 13,586 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಕರೋನಾ ಪೀಡಿತರ ಸಂಖ್ಯೆ 3,80,532 ಕ್ಕೆ ಏರಿಕೆಯಾಗಿದೆ. ಇನ್ನೂ ಶುಕ್ರವಾರ ದೇಶದಲ್ಲಿ ಕರೋನಾ ಸೋಂಕಿನಿಂದ 336 ಜನರು ಸಾವನ್ನಪ್ಪಿದ್ದಾರೆ. ಕರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 12,573 ಕ್ಕೆ ಏರಿಕೆಯಾದಂತಾಗಿದೆ. ಸಕ್ರಿಯ ಪ್ರಕರಣಗಳು 1,63,248 ಇದ್ದು, 2,04,711 ಜನ ಕರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದೆ.
ರಾಜ್ಯಗಳ ಪರಿಸ್ಥಿತಿ ಹೇಗಿದೆ ಗೊತ್ತಾ..?
ಮಹಾರಾಷ್ಟ್ರದಲ್ಲಿ ಕರೋನಾ ಹಾವಳಿ ಮುಂದುವರಿದಿದ್ದು, ಶುಕ್ರವಾರದ ಲೆಕ್ಕಾಚಾರದಂತೆ 3,752 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1,20,504ಕ್ಕೆ ಏರಿಕೆ ಆಗಿದೆ. ಶುಕ್ರವಾರ ಒಂದೇ ದಿನ ಮಹಾರಾಷ್ಟ್ರದಲ್ಲಿ 114 ಮಂದಿ ಸಾವನ್ನಪ್ಪಿದ್ದು 5,751 ಜನ ಇಲ್ಲಿವರೆಗೂ ಸಾವನ್ನಪ್ಪಿದಂತಾಗಿದೆ. ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ಕರೋನಾ ಶುಕ್ರವಾರ ಒಂದೇ ದಿನ 2,141 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಕರೋನಾ ಪೀಡಿತರ ಸಂಖ್ಯೆ 52,334 ಕ್ಕೆ ಏರಿಕೆಯಾಗಿದೆ. ಇಲ್ಲೀವರೆಗೂ ದ್ರಾವಿಡ ನಾಡಿನಲ್ಲಿ ಕೋವಿಡ್ 19ಗೆ ಬಲಿಯಾದವರ ಸಂಖ್ಯೆ 625ಕ್ಕೆ ಏರಿದ್ದಾಗಿ ತಮಿಳುನಾಡು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಅತ್ತ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ 2,877 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಇಲ್ಲೀವರೆಗೂ 49,979 ಕರೋನಾ ಸೋಂಕು ಹರಡಿದೆ. ಇನ್ನೂ ಕೋವಿಡ್ 19 ಗೆ ಗುರುವಾರದ 65 ಜನರು ಸೇರಿ 1,969 ಜನರು ಸಾವನ್ನಪ್ಪಿದ್ದಾರೆ.
ಕರ್ನಾಟಕದಲ್ಲಿ ಸೋಂಕು ಸಮುದಾಯಕ್ಕೆ ಹರಡಿದ್ಯಾ..?
ಕರೋನಾ ಸೋಂಕು ಸಮುದಾಯಕ್ಕೆ ಹರಡುವುದಕ್ಕೆ ಶುರುವಾಗಿದ್ದು ಶ್ರಮಿಕ್ ರೈಲು ಆರಂಭ ಕಾಲದಲ್ಲಿ. ಆದರೆ, ಭಾರತ ಸರ್ಕಾರ ಸೇರಿದಂತೆ ಎಲ್ಲಾ ರಾಜ್ಯಗಳು ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ದಿನಕ್ಕೆ ನೂರಾರು ಜನ ಸಾಯುತ್ತಿರುವ ಮಹಾರಾಷ್ಟ್ರ ಸರ್ಕಾವರವನ್ನು ಕೇಳಿದರೂ ಸೋಂಕು ನಿಯಂತ್ರಣದಲ್ಲಿದೆ, ಜನ ಭಯಪಡುವ ಅಗತ್ಯವಿಲ್ಲ, ಎಚ್ಚರಿಕೆ ವಹಿಸಿದರೆ ಸಾಕು ಸೋಂಕನ್ನು ನಿರ್ಮೂಲನೆ ಮಾಡಬಹುದು ಎನ್ನುವ ಮಾತುಗಳೇ ಕೇಳಿ ಬರುತ್ತಿವೆ. ಆದರೆ ಸಾಯುತ್ತಿರುವ ಜನ ಸಾಯುತ್ತಲೇ ಇದ್ದಾರೆ. ಮಹಾರಾಷ್ಟ್ರದಲ್ಲಿ ವೆಂಟಿಲೇಟರ್ ಸಿಗದ ಕಾರಣಕ್ಕೆ ರೋಗಿಗಳು ಸಾಯುತ್ತಿರುವ ಪ್ರಕರಣಗಳು ವಬರದಿಯಾಗುತ್ತಿವೆ. ದೆಹಲಿಯಲ್ಲಿ ರಾಧಾ ಸತ್ಸಂಗ್ ಹಾಲ್ನಲ್ಲಿ ಹಾಸ್ಪಿಟಲ್ ಆಗಿ ಪರಿವರ್ತನೆ ಮಾಡಲಾಗಿದೆ. ದೊಡ್ಡ ದೊಡ್ಡ ಪಾರ್ಟಿ ಹಾಲ್ಗಳನ್ನೂ ಆಸ್ಪತ್ರೆ ಬೆಡ್ ಹಾಕಿ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ, ಕರೋನಾ ಸೋಂಕಿನಿಂದ ಸಾವು ನೋವಿನ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದ್ದು, ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿವೆ.
ವೆಂಟಿಲೇಟರ್ ನಲ್ಲಿ ಯಾರೂ ಇಲ್ಲ..! ಆದರೂ ಸಾಯ್ತಿದ್ದಾರೆ..!?
ಕರ್ನಾಟಕದಲ್ಲಿ ಮೂವರು ಸಚಿವರು ಕರೋನಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಯಾರು ಏನು ಮಾಡುತ್ತಿದ್ದಾರೆ..? ಯಾವ ರೀತಿ ಕರೋನಾ ಕೆಲಸವನ್ನು ಹಂಚಿಕೊಂಡಿದ್ದಾರೆ ಎನ್ನುವುದು ಮಾತ್ರ ಯಾರಿಗೂ ಗೊತ್ತಾಗುತ್ತಿಲ್ಲ. ವೈದ್ಯಕೀಯ ಸಚಿವರ ಮುಖವನ್ನು ಆರೋಗ್ಯ ಸಚಿವರು ನೋಡಲು ಇಷ್ಟಪಡದ ಪರಿಸ್ಥಿತಿ ಇದೆ. ಜಿಂದಾಲ್ನಲ್ಲಿ ಕರೋನಾ ಸೋಂಕು ವ್ಯಾಪಕವಾಗುತ್ತಿರುವ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಸಭೆ ನಡೆಸಿದ್ದರು. ಆದರೆ ಬಳ್ಳಾರಿಯಲ್ಲೇ ಇದ್ದ ಆರೋಗ್ಯ ಸಚಿವ ಶ್ರೀರಾಮುಲು ಆ ಸಭೆಗೆ ಗೈರು ಹಾಜರಾಗಿದ್ದರು. ಇದು ಕರ್ನಾಟಕದ ಸದ್ಯದ ಪರಿಸ್ಥಿತಿ. ನಮ್ಮ ಕರೋನಾ ಉಸ್ತುವಾರಿ ನೋಡಿಕೊಳ್ಳುತ್ತಿರೋ ಸಚಿವ ಸುರೇಶ್ ಕುಮಾರ್ ಅವರನ್ನು ಕೇಳಿದ್ರೆ ನಮ್ಮ ರಾಜ್ಯದಲ್ಲಿ ಕರೋನಾ ಕಂಟ್ರೋಲ್ ಆಗಿದ್ದು, ಯಾರೊಬ್ಬರೂ ವೆಂಟಿಲೇಟರ್ನಲ್ಲಿ ಇಲ್ಲ ಎನ್ನುತ್ತಾರೆ. ಆದರೆ ಪ್ರತಿದಿನ ಆರೇಳು ಜನ ಸಾಯುತ್ತಿದ್ದಾರೆ.
ಕೇವಲ ಬೆಂಗಳೂರಿನಲ್ಲಿ 36 ಜನ ಪೊಲೀಸರಿಗೆ ಸೋಂಕು ಬಂದಿದೆ. ಆರೋಗ್ಯ ಸಿಬ್ಬಂದಿಗಳಿಗೆ ಸೋಂಕು ಬಂದಿದೆ. ಇವರಿಗೆಲ್ಲಾ ಸೋಂಕು ಹೇಗೆ ಬರುತ್ತಿದೆ ಎನ್ನುವುದೇ ಆರೋಗ್ಯ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ. ಕರೋನಾ ವಾರಿಯರ್ಸ್ಗೆ ಕೊಟ್ಟಿರುವ ರಕ್ಷಣಾ ಕವಚ (PPಇ) ಕಳಪೆ ದರ್ಜೆಯದು ಎಂದು ಸಾಬೀತಾಗಿದೆ. ಎಲ್ಲೂ ಹೊರಗಡೆ ಹೋಗದೆ ಮನೆಯಲ್ಲೇ ಇದ್ದವರಲ್ಲೂ ಅದೆಷ್ಟೋ ಜನರಲ್ಲಿ ಸೋಂಕು ಉಲ್ಬಣವಾಗಿದೆ. ಆದರೂ ನಮ್ಮ ರಾಜ್ಯ ಸರ್ಕಾರ ಹೇಳುವ ಮಾತು, ಸೋಂಕು ನಿಯಂತ್ರಣದಲ್ಲಿದೆ. ಜನ ಭಯಪಡುವ ಅಗತ್ಯವಿಲ್ಲ ಎಂದು. ಇದೀಗ ಸಿಎಂ ಗೃಹ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಪೇದೆಗೂ ಸೋಂಕು ಬಂದಿದೆ. ವಿಧಾನಸೌಧವನ್ನು ಸ್ವಚ್ಛ ಮಾಡುವ ಕೆಲಸ ನಡೀತಿದೆ. ಜನರನ್ನು ರಕ್ಷಣೆ ಮಾಡುವ ಜವಾಬ್ದಾರಿ ಕಳಚಿಕೊಂಡ ಬಳಿಕ ತಮ್ಮ ರಕ್ಷಣೆಗೆ ತಾವೇ ಮುಂದಾಗುವ ಪರಿಸ್ಥಿತಿ ಎದುರಾಗಿದೆ.
ವಿಕಾಸಸೌಧ, ಸಿಎಂ ಗೃಹ ಕಚೇರಿ, ಹತ್ತಾರು ಪೊಲೀಸ್ ಠಾಣೆಗಳಿಗೂ ಸೋಂಕು ಬಂದಿದ್ದರೂ ರಾಜ್ಯ ಸರ್ಕಾರ ಮಾತ್ರ ಕರೋನಾ ನಿಯಂತ್ರಣ ಮಾಡುತ್ತಿದ್ದೇವೆ ಎನ್ನುವ ಮಾತನ್ನು ಬಿಟ್ಟು ಬೇರೆ ಏನನ್ನೂ ಹೇಳುತ್ತಿಲ್ಲ. ಸರ್ಕಾರಕ್ಕೂ ಗೊತ್ತಿದೆ ಸೋಂಕು ಹೆಚ್ಚಾಗುತ್ತಿದೆ ಎಂದು, ಆದರೆ ಅಗತ್ಯ ಸಲಕರಣೆಗಳಾದ ವೆಂಟಿಲೇಟರ್, ಹಾಸ್ಪಿಟಲ್ ಬೆಡ್ ವ್ಯವಸ್ಥೆ ಮಾಡುವ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿಲ್ಲ. ಆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ಸಭೆಗಳೂ ನಡೆಯುತ್ತಿಲ್ಲ. ಈಗಲಾದ್ರೂ ಸರ್ಕಾರ ಎಚ್ಚೆತ್ತುಕೊಂಡು ಕರೋನಾ ನಿಯಂತ್ರಣಕ್ಕೆ ಬೇರೆ ರಾಜ್ಯಗಳಲ್ಲಿ ಕೈಗೊಳ್ಳುತ್ತಿರುವ ಕ್ರಮಗಳನ್ನಾದರೂ ನೋಡಿಕೊಂಡು ನಮ್ಮ ರಾಜ್ಯದಲ್ಲೂ ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗಬೇಕಿದೆ. ಖಾಸಗಿ ಹಾಸ್ಪಿಟಲ್ಗಳಲ್ಲಿ ಬೆಡ್ ಕಾಯ್ದಿರಿಸುವುದು, ವೆಂಟಿಲೇಟರ್ ಖರೀದಿ ಅಥವಾ ಬಾಡಿಗೆಗೆ ತಂದಿಟ್ಟುಕೊಳ್ಳುವುದನ್ನ ಮಾಡಬೇಕಿದೆ. ಎಲ್ಲಾ ವ್ಯವಸ್ಥೆ ಇದೆ ಇದೆ ಎನ್ನುತ್ತಲೇ ಜನರು ಸಾಯುತ್ತಿದ್ದರೆ, ಸಾರ್ವಜನಿಕರೇ ತಿರುಗಿ ಬೀಳುವ ಸಮಯ ಬಂದರೂ ಬರಬಹುದು.