ಶಿಕಾರಿಪುರಕ್ಕೆ ತುಂಗಭದ್ರಾ ನದಿ ನೀರು ಹರಿಸುವ ಸಲುವಾಗಿ ಸ್ವಾಧೀನ ಪಡಿಸಿಕೊಂಡಿರುವ ರೈತರ ಜಮೀನನ್ನು ರೈತರಿಗೆ ವಾಪಾಸ್ ನೀಡಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
“ಹಾವೇರಿಯ ರಟ್ಟಿಹಳ್ಳಿಯಿಂದ ಶಿಕಾರಿಪುರಕ್ಕೆ ತುಂಗಭದ್ರಾ ನದಿ ನೀರು ಹರಿಸುವ ಯೋಜನೆಯಿಂದಾಗಿ 1200 ರೈತರು ಭೂಮಿ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಸ್ಥಗಿತಗೊಳಿಸಿ ಸ್ವಾಧೀನ ಪಡಿಸಲಾದ ಭೂಮಿಯನ್ನು ರೈತರಿಗೆ ಹಿಂದಿರುಗಿಸಬೇಕೆಂದು ಸಿಎಂ ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತಿದ್ದೇನೆ,” ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಇದರೊಂದಿಗೆ, ಈ ಯೋಜನೆಯನ್ನು ವಿರೋಧಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ವಕೀಲ ಬಿ ಡಿ ಹಿರೇಮಠ್ ಅವರ ಆರೋಗ್ಯ ಬಿಗಾಡಿಯಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೊಂದಿಗೆ ಯೋಜನೆಯನ್ನು ವಿರೋಧಿಸಿ ಹಿರೇಮಠ್ ಅವರನ್ನು ಬೆಂಬಲಿಸಿದ್ದವರಲ್ಲಿ ಕೆಲವು ಅಸ್ವಸ್ಥರಾಗಿದ್ದಾರೆ.
ಯೋಜನೆಯನ್ನು ವಿರೋಧಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದವರಲ್ಲಿ ಯಾರಿಗಾದರೂ ಏನಾದರೂ ತೊಂದರೆಯಾದರೆ ಅದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರೇ ಜವಾಬ್ದಾರರಾಗಿರುತ್ತಾರೆಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.