2020ರ ಮೊದಲ ದಿನದಿಂದಲೇ ಶುರುವಾರ ಮಹಾಮಾರಿ ಕರೋನಾ ವೈಸರ್ (ಕೋವಿಡ್ – 19) ದಾಳಿ, ನಿಯಂತ್ರಣಕ್ಕೆ ಸಿಗದ ಕುದುರೆಯಂತೆ ಸಾಗುತ್ತಿದೆ. ಇಲ್ಲೀವರೆಗೂ ಚೀನಾದಲ್ಲಿ ಲೆಕ್ಕಕ್ಕೆ ಸಿಕ್ಕಿರುವ ಸಾವು ನೋವು 3 ಸಾವಿರ ಗಡಿಯಲ್ಲಿ ನಿಂತಿದೆ. ಇಡೀ ವಿಶ್ವಾದ್ಯಂತ ಲೆಕ್ಕ ಹಾಕಲು ಹೊರಟರೆ, 3150ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಚೀನಾ ದೇಶದಲ್ಲಿ ಮಾತ್ರವಲ್ಲದೆ ಸೌತ್ ಕೊರಿಯಾ, ಇಟಲಿ, ಇರಾನ್‌ನಲ್ಲೂ ತನ್ನ ಕರಾಳ ಆರ್ಭಟವನ್ನು ಶುರು ಮಾಡಿದೆ. ಇದುವರೆಗೂ ಇರಾನ್‌ನಲ್ಲಿ 43, ಇಟಲಿಯಲ್ಲಿ 29, ಸೌತ್ ಕೊರಿಯಾದಲ್ಲಿ 16, ಜಪಾನ್‌ನಲ್ಲಿ 5, ಹಾಂಗ್‌ಕಾಂಗ್‌ನಲ್ಲಿ 2, ಫ್ರಾನ್ಸ್‌ನಲ್ಲಿ 2 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇಲ್ಲೀವರೆಗೂ ಬರೋಬ್ಬರಿ 90 ಸಾವಿರ ಜನರಲ್ಲಿ ಈ ಕರೋನಾ ಸೋಂಕು ಕಾಣಿಸಿಕೊಂಡಿದೆ. ಈ ಕರೋನಾ ವೈರಸ್ ನಿಯಂತ್ರಣಕ್ಕೆ ಯಾವ ವಿಜ್ಞಾನವೂ ಮದ್ದು ಹುಡುಕಲು ಸಾಧ್ಯವಾಗಿಲ್ಲ ಎನ್ನುವುದು ಇದರ ಗಂಭೀರತೆಯನ್ನು ತೋರಿಸುತ್ತದೆ.
ಚೀನಾ ದೇಶ ಯುದ್ದೋಪಾದಿಯಲ್ಲಿ ಕರೋನಾ ದಾಳಿ ವಿರುದ್ಧ ಹೋರಾಟ ಮಾಡುತ್ತಿದೆ. ಜಪಾನ್, ಇರಾನ್, ಇಟಲಿ, ಕೊರಿಯಾ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಕರೋನಾ ದಾಳಿಯಿಂದ ತಪ್ಪಿಸಿಕೊಳ್ಳಲು ಸಮರವನ್ನೇ ಸಾರಿಬಿಟ್ಟಿದೆ. ಆರ್ಥಿಕ ಸಂಕಷ್ಟ ಒಳಗಾಗುವ ಭೀತಿಯಲ್ಲಿ ಬಳಲುತ್ತಿವೆ. ಚೀನಾ ದೇಶ ಬರೋಬ್ಬರಿ 1 ಸಾವಿರ ಹಾಸಿಗೆ ಆಸ್ಪತ್ರೆಯನ್ನು ಕೇವಲ ನಾಲ್ಕೈದು ದಿನಗಳಲ್ಲಿ ನಿರ್ಮಾಣ ಮಾಡುವ ಮೂಲಕ ತನ್ನ ದೇಶದ ಪ್ರಜೆಗಳ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದೆ. ಆದರೆ ಚೀನಾ ದೇಶದಿಂದ ಕೂಗಳತೆ ದೂರದಲ್ಲಿ ನಮ್ಮ ಭಾರತ ಮಾತ್ರ ತೀವ್ರ ಕಟ್ಟೆಚ್ಚರ ವಹಿಸುವಲ್ಲಿ ವಿಫಲವಾಗುತ್ತಿದೆಯಾ ಎನ್ನುವ ಅನುಮಾನ ಮೂಡುವಂತೆ ಮಾಡಿದೆ.
ಕರೋನಾ ಸೋಂಕಿತ ದೇಶದ ಒಳಕ್ಕೆ ಬಂದಿದ್ದು ಹೇಗೆ?
ನಿಮಗೆ ನೆನಪಿರಬಹುದು, ಕಾರವಾದ ಓರ್ವ ಯುವಕ ಹಡಗಿನಲ್ಲಿ ಕೆಲಸ ಮಾಡುತ್ತಿದ್ದ. ಆತ ಕೆಲಸ ಮಾಡುತ್ತಿದ್ದ ಹಡಗು ಸಮುದ್ರದಲ್ಲಿ ಹೋಗುವಾಗಲೇ ತಡೆದು ನಿಲ್ಲಿಸಿದ್ದ ಜಪಾನ್ ಸೇನೆ ಸಮುದ್ರ ಮಾರ್ಗದಲ್ಲೇ ತಪಾಸಣೆ ಮಾಡಿತ್ತು. ದೇಶವನ್ನು ಪ್ರವೇಶ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಅಂದರೆ ಅಷ್ಟೊಂದು ಸೂಕ್ಷ್ಮವಾಗಿ ಕರೋನಾ ಬಗ್ಗೆ ಎಚ್ಚೆತ್ತುಕೊಂಡಿತ್ತು. ಆದರೆ ನಮ್ಮ ದೇಶದಲ್ಲಿ ಕರೋನಾ ಸೋಂಕಿತನೇ ರಾಜಾರೋಷವಾಗಿ ಬರಬಹುದು. ಬೇರೆಯವರ ಜೊತೆ ಸುತ್ತಾಡಲೂ ಬಹುದು. ಆಮೇಲೆ ತುಂಬಾ ವಿಷಮ ಸ್ಥಿತಿ ತಲುಪಿದಾಗ ಸೋಂಕಿತ ತಾನಾಗಿಯೇ ಆಸ್ಪತ್ರೆಗೆ ಬಂದರೆ, ಉಳಿದವರಿಗಾಗಿ ಹುಡುಕಾಟ ನಡೆಸುತ್ತಾ ಓಡಾಡುವುದು ನಮ್ಮ ದೇಶದ ಪರಿಸ್ಥಿತಿ. ಸ್ವಲ್ಪ ಮುಂಜಾಗ್ರತಾ ಕ್ರಮ ತೆಗೆದುಕೊಂಡು ವಿಮಾನ ನಿಲ್ದಾಣದಲ್ಲೇ ಸೂಕ್ತವಾಗಿ ಪರಿಶೀಲನೆ ನಡೆಸಿ ತಪಾಸಣೆ ಮಾಡಿದ್ರೆ, ಆತನಿಗೂ ಆದಷ್ಟು ಬೇಗ ಚಿಕಿತ್ಸೆ ಸಿಗುತ್ತಿತ್ತು. ಬೇರೆಯವರಿಗೇ ಸೋಂಕು ಅಂಟುವುದೂ ತಪ್ಪುತ್ತಿತ್ತು.
ಆದರೆ, ವಿಮಾನ ನಿಲ್ದಾಣಕ್ಕೆ ಬಂದಾಗ ಬಿಟ್ಟು ಬಿಟ್ಟು ಈಗ ಓಡಾಡುವ ಪರಿಸ್ಥಿತಿ ಎದುರಾಗಿದೆ. ಕೇಂದ್ರ ಸರಕಾರದ ಒಡೆತನದಲ್ಲಿರುವ ವಿಮಾನ ನಿಲ್ದಾಣದಲ್ಲಿ ಕರೋನಾ ತಪಾಸಣಾ ಕೇಂದ್ರ ಸ್ಥಾಪಿಸಲಾಗಿದೆ. ಆದರೆ ಇಲ್ಲೀವರೆಗೂ ವಿಮಾನ ನಿಲ್ದಾಣದಲ್ಲಿ ಕಟ್ಟು ನಿಟ್ಟಾಗಿ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸುವ ಕೆಲಸ ಆಗುತ್ತಿಲ್ಲ. ಬದಲಿಗೆ ಶೀತ, ಕೆಮ್ಮು, ನೆಗಡಿಯಿಂದ ಯಾರಾದರೂ ಬಳಲುತ್ತಿದ್ದರೆ, ತಪಾಸಣಾ ಕೇಂದ್ರಕ್ಕೆ ಬಂದು ತಪಾಸಣೆಗೆ ಒಳಗಾಗುವಂತೆ ಘೋಷಣೆ (announcement) ಕೂಗುತ್ತಿದ್ದಾರೆ. ಆ announcement ಕೇಳಿಸಿಕೊಂಡು, ತಾನಾಗೆ ಬಂದು ಪರೀಕ್ಷೆಗೆ ಒಳಪಟ್ಟರೆ, ಪರೀಕ್ಷೆ ಮಾಡ್ತಾರೆ. ಅವರ ಘೋಷ ವಾಕ್ಯ ಲೆಕ್ಕಿಸದೆ ಮನೆ ಕಡೆ ಹೆಜ್ಜೆ ಹಾಕಿದರೆ ಯಾರೂ ಪರೀಕ್ಷೆ ಮಾಡುವುದಿಲ್ಲ ಎನ್ನುತ್ತಾರೆ ಪ್ರಯಾಣಿಕರು. ನಿನ್ನೆ ಅಂದರೆ ಮಾರ್ಚ್ 3 ರಂದು ಎಲ್ಲಾ ಮಾಧ್ಯಮಗಳಲ್ಲೂ ಕರೋನಾ ಅಟ್ಟಹಾಸದ ಬಗ್ಗೆ ವರದಿ ಆಗುತ್ತಿದ್ದರೂ ಕೆಲವೊಂದಿಷ್ಟು ಪ್ರಯಾಣಿಕರ ಪರೀಕ್ಷೆ ಮಾಡದಿರುವ ಬಗ್ಗೆ ಜನರೇ ಮಾಧ್ಯಮಗಳ ಎದುರು ಹೇಳಿಕೊಂಡಿದ್ದಾರೆ.
ಕರೋನಾ ರೋಗದ ಲಕ್ಷಣಗಳು ಏನು ಗೊತ್ತಾ?
* ಕೆಮ್ಮು, ಜ್ವರ, ಅತಿಯಾಗಿ ಸೀನುವುದು
* ಉಸಿರಾಟ ಸಮಸ್ಯೆ, ಕೆಲವರಲ್ಲಿ ವಾಂತಿ, ಬೇಧಿ
* ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ ನ್ಯುಮೋನಿಯಾ
* ಕಿಡ್ನಿ ವೈಫಲ್ಯಕ್ಕೆ ದಾರಿ, ಸಾವಿನತ್ತ ಸಾಗಲಿದೆ ಜೀವ
ಒಬ್ಬರಿಂದ ಒಬ್ಬರಿಗೆ ಕರೋನಾ ಹರಡುವುದು ಹೇಗೆ?
* ಸೋಂಕಿತ ವ್ಯಕ್ತಿ ಜೊತೆಗಿನ ನೇರ ಸಂಪರ್ಕದಲ್ಲಿ ಇರುವುದು
* ಸೋಂಕಿತರು ಕೆಮ್ಮಿದಾಗ ಅಥವಾ ಸೀನಿದಾಗ ನಾವು ಪಕ್ಕದಲ್ಲೇ ಇರುವುದು
* ಸೋಂಕಿತರು ಬಳಸಿದ ವಸ್ತುಗಳನ್ನು ನಾವು ಬಳಕೆ ಮಾಡುವುದು
* ಕರವಸ್ತ್ರ, ಟವೆಲ್, ವಸ್ತ್ರಗಳನ್ನು ಗುಂಪು ಗುಂಪಾಗಿ ಬಳಕೆ ಮಾಡುವುದು
* ಮೂಗು, ಬಾಯಿ, ಕಣ್ಣನ್ನು ಪದೇ ಪದೆ ಮುಟ್ಟಿಕೊಳ್ಳುವುದು
ಕರೋನಾ ತಡೆಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಏನು?
* ಪದೇ ಪದೇ ಸಾಬೂನು ಬಳಸಿ ಕೈಗಳನ್ನು ಸ್ವಚ್ಛ ಮಾಡುವುದು
* ಕೈ ತೊಳೆಯದೇ ಕಣ್ಣು, ಬಾಯಿ, ಮೂಗು ಮುಟ್ಟಲೇಬಾರದು
* ಕರೋನಾ ಸೋಂಕಿತರಿಂದ ಸಾಧ್ಯವಾದಷ್ಟು ದೂರ ಇರುವುದು ಒಳಿತು
* ಹೊರಗಡೆ ಹೋದಾಗ ಮುಖಕ್ಕೆ ಮಾಸ್ಕ್ ಬಳಕೆ ಮಾಡುವುದು ಸೂಕ್ತ
* ಶೀತ, ನೆಗಡಿ, ಜ್ವರ ಕಾಣಿಸಿಕೊಂಡರೆ ಚಿಕಿತ್ಸೆ ಜೊತೆಗೆ ವಿಶ್ರಾಂತಿ ಅತ್ಯವಶ್ಯಕ
* ಪ್ರಾಣಿಗಳನ್ನು ಮುಟ್ಟುವಾಗ ಸುರಕ್ಷತಾ ಕವಚ ಬಳಕೆ ಮಾಡಬೇಕು
ಒಬ್ಬರಿಂದ ಒಬ್ಬರಿಗೆ ಹರಡುವ ಅತಿ ಕೆಟ್ಟ ಕಾಯಿಲೆ ಕರೋನಾ ವೈರಸ್ ಆಗಿದ್ದು, ಹೈದ್ರಾಬಾದ್ ಮೂಲದ ಟೆಕ್ಕಿ ಬೆಂಗಳೂರಿಗೆ ಬಂದು ಒಂದು ದಿನ ಇಲ್ಲೇ ಉಳಿದಿದ್ದು, ಬೆಂಗಳೂರಿನಲ್ಲಿ ಸುತ್ತಾಡಿ, ಆ ಬಳಿಕ ಹೈದ್ರಾಬಾದ್‌ಗೆ ಹೋಗಿದ್ದಾರೆ. ಆ 24 ಗಂಟೆಗಳ ಅವಧಿಯಲ್ಲಿ ಯಾರನ್ನೆಲ್ಲಾ ಭೇಟಿ ಮಾಡಿದ್ದಾನೋ..? ಎಷ್ಟು ಜನಕ್ಕೆ ಕರೋನಾ ವೈರಸ್ ಸೋಂಕು ಹಬ್ಬಿದೆಯೋ? ಎನ್ನುವುದು ಮುಂದಿನ 14 ದಿನಗಳ ಒಳಗಾಗಿ ಗೊತ್ತಾಗಲಿದೆ. ಆದರೆ ಕರೋನಾ ಎಂಬ ಮಹಾಮಾರಿಯನ್ನು ಸರ್ಕಾರ ಮತ್ತಷ್ಟು ಎಚ್ಚರಿಕೆ ವಹಿಸಿದ್ದರೆ, ಭಾರತಕ್ಕೆ ಪ್ರವೇಶ ಆಗುವುದನ್ನೇ ತಡೆಯಬಹುದಿತ್ತು ಎನಿಸುತ್ತದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ನರಳಾಡುತ್ತಿರುವ ನಮ್ಮ ಭಾರತದಲ್ಲಿ ಕೋವಿಡ್ – 19 ಅಟ್ಟಹಾಸ ಶುರುವಾದರೆ, ಭಾರತ ಚೇತರಿಸಿಕೊಳ್ಳಲಾರದಷ್ಟು ಹೊಡೆತ ಅನುಭವಿಸಬೇಕಾಗುತ್ತದೆ ಎನ್ನುವುದು ಮಾತ್ರ ಸತ್ಯ.