ರಾಜ್ಯದಲ್ಲಿ ಇಂದಿನಿಂದ ವಿಧಾನಸಭೆ ಅಧಿವೇಶನ ನಡೆಯಲಿದೆ. ಈ ಬಾರಿಯ ಅಧಿವೇಶನದಲ್ಲಿ ಸರ್ಕಾರದ ಹಲವು ವೈಫಲ್ಯಗಳನ್ನು ಸಭೆಯಲ್ಲಿ ಎತ್ತಿ ಹಿಡಿಯಲು ವಿಪಕ್ಷಗಳು ತಯಾರಾಗಿವೆ.
ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಬೇಕಾದ ವಿಚಾರಗಳ ಕುರಿತು ನಿರ್ಧಾರ ತಾಳಲು ಕಾಂಗ್ರೆಸ್ ದೀರ್ಘಕಾಲ ಸಮಾಲೋಚನಾ ಸಭೆಯನ್ನು ನಡೆಸಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಪಕ್ಷ ನಾಯ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆಯನ್ನು ಕರೆಯಲಾಗಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರತಿಧ್ವನಿಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಈ ಬಾರಿಯ ಅಧಿವೇಶನದಲ್ಲಿ ಚರ್ಚಿಸಲು ಸಾಖಷ್ಟು ವಿಚಾರಗಳಿವೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಂತಹ ವಿಚಾರಗಳನ್ನು ಈ ಬಾರಿ ಪ್ರಸ್ತಾಪಿಸಲಿದ್ದೇವೆ ಎಂದು ಹೇಳಿದ್ದಾರೆ.
“ಪ್ರವಾಹ ಪೀಡಿತ ಜನರಿಗೆ ಸರ್ಕಾರ ಸ್ಪಂದಿಸಿಲ್ಲ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಿಲ್ಲ. ಇಂತಹ ವಿಚಾರಗಳಿವೆ. ರಾಜ್ಯದಲ್ಲಿ ಅನೇಕ ವರ್ಗದ ಜನರಿಗೆ, ವೃದ್ದಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ ಸಿಕ್ಕಿಲ್ಲ. ಬಹಳ ಜನರ ವೈದ್ಯಕೀಯ ಖರ್ಚುಗಳಿಗೆ ಕಷ್ಟ ಆಗುತ್ತಿದೆ. ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೊಟ್ಟಿಲ್ಲ. ಅನೇಕರಿಗೆ ಸಂಬಳ ಕೊಟ್ಟಿಲ್ಲ,” ಈ ಎಲ್ಲಾ ಅಂಶಗಳನ್ನು ಅಧಿವೇಶನದಲ್ಲಿ ಪ್ರಶ್ನಿಸಲಾಗುವುದು ಎಂದು ಸಿದ್ದರಾಮಯ್ಯನವರು ತಿಳಿಸಿದ್ದಾರೆ.
ಒಟ್ಟಿನಲ್ಲಿ, ಕಳೆದ ಬಾರಿ ಕರೋನಾ ಮತ್ತು ಅದರ ಸುತ್ತಲು ನಡೆದಂತಹ ಹಗರಣ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಂತಹ ವಿಚಾರಗಳು ಸಾಕಷ್ಟು ಸದ್ದು ಮಾಡಿದ್ದವು. ಈ ಬಾರಿಯೂ, ಸರ್ಕಾರದ ನಿರ್ಣಯಗಳ ವಿರುದ್ದ ಹೋರಾಟ ಮಾಡಲು ಕಾಂಗ್ರೆಸ್ ಸಜ್ಜಾಗಿದೆ.