ಮೇ 31 ರಂದು ಮುಕ್ತಾಯಗೊಳ್ಳುವ ಲಾಕ್ಡೌನ್ 4.0 ಬಳಿಕ ಭಾರತದ ಕೋವಿಡ್-19 ಸೋಂಕಿತರಲ್ಲಿ ಗಣನೀಯವಾಗಿ ಏರಿಕೆಯಾಗಲಿದೆ ಎಂದು ಕರ್ನಾಟಕ ಕೋವಿಡ್-೧೯ ಆರೋಗ್ಯ ಪಡೆಯ ಅಧಿಕಾರಿಯೂ ಆಗಿರುವ ಬೆಂಗಳೂರು ನಿಮ್ಹಾನ್ಸ್ ನ್ಯೂರಾಲಜಿ ಮುಖ್ಯಸ್ಥ ಡಾ. ವಿ. ರವಿ ಎಚ್ಚರಿಸಿದ್ದಾರೆ.
ದೇಶದಲ್ಲಿ ಇದುವರೆಗೂ ಸರಿಯಾದ ಸಾಮುದಾಯಿಕ ಹರಡುವಿಕೆ ಸಂಭವಿಸಿಲ್ಲ. ಜೂನ್ ಪ್ರಾರಂಭದೊಂದಿಗೆ ಕರೋನಾ ಸೋಂಕು ಸಾಮುದಾಯಿಕ ಪ್ರಸರಣಗೊಳ್ಳುತ್ತದೆ, ಮೇ ಅಂತ್ಯಕ್ಕೆ ನಾಲ್ಕನೇ ಹಂತದ ಲಾಕ್ಡೌನ್ ಮುಕ್ತಾಯವಾಗುವುದರಿಂದ ಹರಡುವಿಕೆಯ ವೇಗ ಇನ್ನಷ್ಟು ಹೆಚ್ಚುತ್ತದೆ. ಹೀಗೆಯೇ ಹೋದರೆ ಡಿಸೆಂಬರ್ ಅಂತ್ಯಕ್ಕಾಗುವಾಗ ಭಾರತದ ಅರ್ಧದಷ್ಟು ಜನಸಂಖ್ಯೆಗೆ ಕರೋನಾ ಸೋಂಕು ತಗುಲಲಿದೆ ಎಂದು ಡಾ. ರವಿ ಹೇಳಿದ್ದಾರೆ.
ಮುಂದಿನ ಕೆಲವು ದಿನಗಳಲ್ಲಿ ಸೋಂಕು ಹೆಚ್ಚಳಗೊಳ್ಳುವುದನ್ನು ನಿಭಾಯಿಸಲು ವೈದ್ಯಕೀಯ ಮೂಲಸೌಕರ್ಯಗಳೊಂದಿಗೆ ಸಂಪೂರ್ಣ ಸಜ್ಜಾಗುವುದು ಮುಖ್ಯ ಎಂದು ರವಿ ಹೇಳಿದ್ದಾರೆ. ಹರಡುವಿಕೆಯ ಹೆಚ್ಚುವಿಕೆಯನ್ನು ನಿಭಾಯಿಸಲು ಪ್ರತೀ ಜಿಲ್ಲೆಯು ಕನಿಷ್ಟ ಎರಡು ಪರೀಕ್ಷಾ ಕೇಂದ್ರಗಳನ್ನು ಹೊಂದಬೇಕೆಂದು ICMR ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಅದರಂತೆ ಕರ್ನಾಟಕವು ಕ್ಷಿಪ್ರವಾಗಿ 60 ಪ್ರಯೋಗಾಲಯಗಳ ಗುರಿಯನ್ನು ತಲುಪಿದ ಮೊದಲ ರಾಜ್ಯವೆಂಬ ಹೆಗ್ಗಳಿಕಗೆ ಪಾತ್ರವಾಗಿದೆ.
ಕರೋನಾ ಸೋಂಕು ತಗುಲಿದ 90 ಶೇಕಡ ಮಂದಿಗೆ ತಮಗೆ ಸೋಂಕು ತಗುಲಿರುವುದು ಅನುಭವಕ್ಕೇ ಬರುವುದಿಲ್ಲ, ಅದಾಗ್ಯೂ 5 ರಿಂದ 10 ಶೇಕಡಾ ಸೋಂಕಿತರಿಗೆ ವೆಂಟಿಲೇಟರ್ ಅವಶ್ಯಕತೆ ಬರಬಹುದೆಂದು ಡಾ. ರವಿ ಹೇಳಿದ್ದಾರೆ.