ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದ 2ನೇ ಲಾಕ್ಡೌನ್ ಅವಧಿ ಇನ್ನೂ ಕೂಡ ಮೇ 3ರ ತನಕ ಬಾಕಿ ಇದೆ. ಆದರೆ ಏಪ್ರಿಲ್ 20 ರಿಂದ ದೇಶಾದ್ಯಂತ ಸಣ್ಣ ಪ್ರಮಾಣದ ಸಡಿಲಿಕೆಗೆ ಅವಕಾಶ ಕೊಟ್ಟು ಕೇಂದ್ರ ಸರ್ಕಾರವೇ ಅವಕಾಶ ಮಾಡಿಕೊಟ್ಟಿತ್ತು. ಆ ಬಳಿಕ ಹಲವಾರು ರಾಜ್ಯಗಳು ಸಡಿಲಿಕೆ ಮಾಡಿದ್ದವು. ಆದರೆ ಕರ್ನಾಟಕದಲ್ಲಿ ಸಡಿಲಿಕೆ ಮಾಡುವ ಸರ್ಕಾರದ ನಿರ್ಧಾರಕ್ಕೆ ಜನಾಕ್ರೋಶ ಕಾರಣವಾದ ಹಿನ್ನೆಲೆಯಲ್ಲಿ ಮುಂದೂಡಿಕೆ ಮಾಡಲಾಗಿತ್ತು. ಇದನ್ನು ಸ್ವತಃ ಬಿ.ಎಸ್ ಯಡಿಯೂರಪ್ಪ ಅವರೇ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದರು. ಆದರೆ ಏಪ್ರಿಲ್ 23 ಅಂದರೆ ಏಪ್ರಿಲ್ 22ರ ಮಧ್ಯರಾತ್ರಿಯಿಂದಲೇ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ರಾಜ್ಯಾದಂತ ಜನರ ಸಂಚಾರ ಶುರುವಾಗಿದೆ. ಸರ್ಕಾರಿ ಪಾಸ್ ಇದ್ದವರು ಮಾತ್ರ ರಸ್ತೆಗೆ ಇಳಿಯಬಹುದು. ಸರ್ಕಾರ ಘೋಷಣೆ ಮಾಡಿರುವ ವಿನಾಯಿತಿ ಪಟ್ಟಿಯಲ್ಲಿರುವ ಕಾರ್ಮಿಕರು ಪಾಸ್ ಕೇಳಿದರೆ ಕೊಡುವುದಕ್ಕೆ ಸಿದ್ಧ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ವಿನಾಯಿತಿ ನಿರ್ಧಾರದ ಬಗ್ಗೆ ಸಾಕಷ್ಟು ಅನುಮಾನಗಳು ಶುರುವಾಗಿವೆ.
ಕರೋನಾ ಸೋಂಕು ನಿಯಂತ್ರಣ ಮಾಡುವ ಸಲುವಾಗಿ ದೇಶವನ್ನೇ ಲಾಕ್ಡೌನ್ ಮಾಡಲಾಗಿತ್ತು. ಕರೋನಾ ವೈರಸ್ ನಿಯಂತ್ರಣಕ್ಕೆ ಬಾರದೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಸಾಗಿದೆ. ಇಂದು ಕೂಡ 16 ಹೊಸ ಕರೋನಾ ಪಾಸಿಟಿವ್ ಕೇಸ್ ಗಳ ಜೊತೆ ರಾಜ್ಯದ ಕೊರೊನಾ ಸೋಂಕಿತರ ಸಂಖ್ಯೆ 443ಗೆ ಏರಿಕೆ ಆಗಿದೆ. ಹಾಟ್ಸ್ಪಾಟ್ಗಳು, ಸೀಲ್ಡೌನ್ ಏರಿಯಾಗಳಲ್ಲಿ ಯಾವುದೇ ವಿನಾಯಿತಿ ಇಲ್ಲ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಆದರೆ, ಕರೋನಾ ಸೋಂಕಿತನ ಸಂಪರ್ಕದಲ್ಲಿ ಅದೆಷ್ಟು ಮಂದಿ ಇರುತ್ತಾರೆ? ರಸ್ತೆಗಿಳಿದ ವಾಹನಗಳು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದಾಗ ಸೋಷಿಯಲ್ ಡಿಸ್ಟೆನ್ಸ್ ಫಾಲೋ ಮಾಡುವುದಕ್ಕೆ ಸಾಧ್ಯವಿದೆಯಾ? ಎನ್ನುವ ಪ್ರಶ್ನೆಗೆ ಅಧಿಕಾರಿಗಳೇ ಉತ್ತರ ಕೊಡಬೇಕಿದೆ.
ಅದೂ ಅಲ್ಲದೆ ರಸ್ತೆಯಲ್ಲಿ ಚಲಿಸುವ ಎಲ್ಲಾ ವಾಹನಗಳ ಪಾಸ್ ಪರಿಶೀಲಿಸಲು ಪೊಲೀಸ್ ಇಲಾಖೆಗೆ ಸಾಧ್ಯವೇ ಎನ್ನುವ ಪ್ರಶ್ನೆಯ ಜೊತೆಗೆ ಮತ್ತಷ್ಟು ಕಟ್ಟಡ ಕಾರ್ಮಿಕರು ಸೇರಿದಂತೆ ಬೇರೆ ಬೇರೆ ವಿನಾಯಿತಿ ಪಡೆದಿರುವ ಕಾರ್ಮಿಕರು ಪಾಸ್ ಪಡೆದು ರಸ್ತೆಗೆ ಇಳಿದರೆ ಕರೋನಾ ವೈರಸ್ ಹೆಮ್ಮಾರಿಯಾಗಿ ಹರಡುತ್ತೋ ಎನ್ನುವ ಆತಂಕವನ್ನೂ ಸೃಷ್ಠಿಸಿದೆ. ಲಾಕ್ಡೌನ್ ಸಡಿಲಿಕೆ ಮಾಡುವುದು ದೇಶದ ಆರ್ಥಿಕ ದೃಷ್ಠಿಯಿಂದ ಅನಿವಾರ್ಯ. ಆದರೆ ಕರೋನಾ ನಿಯಂತ್ರಣಕ್ಕೆ ಸಿಗದೆ ಇದ್ದಾಗಲೇ ಲಾಕ್ಡೌನ್ ಸಡಿಲಿಕೆ ಕೊಟ್ಟಿರುವುದು ಕರೋನಾ ಹರಡುವಿಕೆ ಹೆಚ್ಚಿಸಲು ಮಾಡಿದ್ದಾರೆಯೇ ಎಂದು ಶ್ರೀಸಾಮಾನ್ಯನೂ ಕೇಳುವಂತಾಗಿದೆ ರಾಜ್ಯ ಸರ್ಕಾರದ ಆತುರದ ನಿರ್ಧಾರ. ಆದರೆ, ಬಿ.ಎಸ್ ಯಡಿಯೂರಪ್ಪ ವಿರುದ್ಧದ ಶಕ್ತಿ ಹೀಗೆಲ್ಲಾ ಮಾಡುತ್ತಿದೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ದಟ್ಟವಾಗಿದೆ.
ಬೆಂಗಳೂರಿನಲ್ಲಿ ಜನಸಂಚಾರ ಒಂದು ತಿಂಗಳ ಹಿಂದೆ ಇದ್ದ ರೀತಿಯಲ್ಲೇ ಯಥಾಸ್ಥಿತಿ ಶುರುವಾಗಿದೆ. ಪ್ರಮುಖ ಜಂಕ್ಷನ್ಗಳಾದ ಕೆ.ಆರ್ ಮಾರ್ಕೆಟ್ ರಸ್ತೆ, ಮೈಸೂರು ರಸ್ತೆ, ರಾಷ್ಟ್ರೀಯ ಹೆದ್ದಾರಿ 04, ಎಲೆಕ್ಟ್ರಾನಿಕ್ ಸಿಟಿ, ಕೆ.ಆರ್ ಪುರಂ ಸೇರಿದಂತೆ ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ರಸ್ತೆಗಳು ಯಥಾ ಪ್ರಕಾರ ಟ್ರಾಫಿಕ್ ಜಾಮ್ ಉಂಟಾಗಿದೆ. ಇವತ್ತು ಪರಿಸ್ಥಿತಿ ನೋಡಿಕೊಂಡು ನಾಳೆಯಿಂದ ಹೋಗೋಣ ಎಂದುಕೊಂಡು ಅದೆಷ್ಟೋ ಜನರು ಇಂದು ರಸ್ತೆಗೆ ಇಳಿದಿಲ್ಲ. ನಾಳೆಯಿಂದ ಅವರೂ ಕೂಡ ರಸ್ತೆಗೆ ಬಂದರೆ, ಮತ್ತಷ್ಟು ರಸ್ತೆಗಳು ಜನಸಾಗರದಲ್ಲಿ ಮುಳುಗುವುದು ಖಂಡಿತ. ಇಂದು ಕೆಲವು ಕಡೆ ಆಂಬ್ಯುಲೆನ್ಸ್ಗೆ ಜಾಗವೇ ಸಿಗದೆ ವಾಹನಗಳು ಸಾಲುಗಟ್ಟಿ ನಿಂತಿದ್ದ ವರದಿಗಳಾಗಿವೆ. ನಾಳೆಯಿಂದ ಮತ್ತಷ್ಟು ಜನರು ರಸ್ತೆಗಿಳಿದರೆ ಪೊಲೀಸರು ಎಲ್ಲರ ಪಾಸ್ ಪರಿಶೀಲನೆ ಮಾಡುವುದು ಸಾಧ್ಯವೇ? ಎನ್ನುವ ಪ್ರಶ್ನೆಗೆ ಪೊಲೀಸ್ ಅಧಿಕಾರಿಗಳು ಉತ್ತರ ಕೊಡಲು ಅಸಾಧ್ಯ. ಈ ನಡುವೆ ಕೇಂದ್ರ ಸರ್ಕಾರದ ಮಾತನ್ನು ಮೀರಿ ಲಾಕ್ಡೌನ್ ಸಡಿಲಿಕೆ ಮಾಡದೆ ಇರಲು ನಿರ್ಧಾರ ಮಾಡಿದ್ದ ಸಿಎಂ ಯಡಿಯೂರಪ್ಪ ಮೇಲೆ ಒತ್ತಡ ಹಾಕಿಸಲಾಗಿದೆ ಎನ್ನುವ ಮಾತುಗಳಿಗವೆ. ಕೇಂದ್ರ ನಾಯಕರ ಮಾತನ್ನು ಮೀರಲಾಗದ ಯಡಿಯೂರಪ್ಪ ಲಾಕ್ಡೌನ್ ಸಡಿಲಿಕೆ ಮಾಡಿದ್ದಾರೆ. ಯಡಿಯೂರಪ್ಪ ಅವರ ವಿರೋಧಿ ಶಕ್ತಿ ಬಲವಾಗುತ್ತಿದ್ದು, ಕರೋನಾ ಕಂಟಕ ಯಡಿಯೂರಪ್ಪ ಮೇಲೆ ಹೊರಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಏಪ್ರಿಲ್ 20ರಂದು ಕೇಂದ್ರ ಸರ್ಕಾರ ಲಾಕ್ಡೌನ್ ಸಡಿಲಿಕೆ ಮಾಡುವ ನಿರ್ಧಾರ ಮಾಡಿತ್ತು. ಆದರೆ, ಕೇಂದ್ರ ಸರ್ಕಾರದ ಆದೇಶ ಬಂದರೂ ರಾಜ್ಯ ಸರ್ಕಾರ ಸದ್ಯಕ್ಕೆ ಲಾಕ್ಡೌನ್ ಸಡಿಲಿಕೆ ಬೇಡ ಎನ್ನುವ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಕೇಂದ್ರ ಸರ್ಕಾರದ ನಾಯಕರು ಬಿ.ಎಸ್ ಯಡಿಯೂರಪ್ಪ ವಿರುದ್ಧ ಕೇಂದ್ರ ನಾಯಕರ ಗಮನ ಸೆಳೆದು ಕೇಂದ್ರ ಮಾತನ್ನು ಪಾಲಿಸುವಂತೆ ಮಾಡಲು ಯಶಸ್ವಿಯಾಗಿದ್ದಾರಂತೆ. ಇದೀಗ ರಾಜ್ಯದಲ್ಲಿ ಕರೋನಾ ವೈರಸ್ ನಿಯಂತ್ರಣಕ್ಕೆ ಸಿಗದಂತೆ ನಾಗಾಲೋಟದಲ್ಲಿ ಹೆಚ್ಚಳವಾಗಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕೆಟ್ಟ ಹೆಸರು ಕಟ್ಟಿಟ್ಟ ಬುತ್ತಿ. ಈ ಮೂಲಕ ಯಡಿಯೂರಪ್ಪ ಹಿಡಿತದಲ್ಲಿರುವ ಕರ್ನಾಟಕದ ಭಾರತೀಯ ಜನತಾ ಪಾರ್ಟಿಯನ್ನು ಮುಕ್ತಗೊಳಿಸುವ ಉದ್ದೇಶವಿದೆ ಎನ್ನಲಾಗ್ತಿದೆ.
ಒಟ್ಟಾರೆಯಾಗಿ, ಭಾರತೀಯ ಜನತಾ ಪಾರ್ಟಿಯಲ್ಲಿ ಹುಟ್ಟಿಕೊಂಡಿರುವ ಗುಂಪು ರಾಜಕಾರಣ ರಾಜ್ಯದ ಜನರಿಗೆ ಮಾರಕವಾದರೂ ಅಚ್ಚರಿಯೇನಿಲ್ಲ. ಇವತ್ತು 16 ಜನರಿಗೆ ಸೋಂಕು ಕಾಣಿಸಿಕೊಂಡಿರುವುದು ಪತ್ತೆಯಾಗಿದೆ. ನಿನ್ನೆಯಷ್ಟೇ ಕೊಳಗೇರಿಯಲ್ಲಿ ವಾಸ ಮಾಡುತ್ತಿದ್ದ ಕಾರ್ಮಿಕನಿಗೆ ಸೋಂಕು ಕಾಣಿಸಿಕೊಂಡಿತ್ತು. ಇವತ್ತು ಅದೇ ವ್ಯಕ್ತಿಯ ಸಂಪರ್ಕದಲ್ಲಿದ್ದ 9 ಮಂದಿಗೆ ಕರೋನಾ ಸೋಂಕು ದೃಢಪಟ್ಟಿದೆ. ಇನ್ನೂ ಆ 9 ಮಂದಿ ಸೋಂಕಿತರು ಯಾರನ್ನೆಲ್ಲಾ ಭೇಟಿಯಾಗಿದ್ದಾರೋ ಇವತ್ತು ಅವರೆಲ್ಲಾ ಎಲ್ಲೆಲ್ಲಿ ಓಡಾಡಿದ್ದಾರೋ ಆ ದೇವರೇ ಬಲ್ಲರು. ಒಟ್ಟಾರೆ, ಲಾಕ್ಡೌನ್ ಸಡಿಲಿಕೆ ಎನ್ನುವುದು ಯಡಿಯೂರಪ್ಪ ಮೇಲೆ ತೂಗುಗತ್ತಿ ಹಾಕಿದಂತೆ ಭಾಸವಾಗುತ್ತಿದೆ. ವಿರೋಧಿಗಳ ತಂತ್ರಗಾರಿಕೆಯಲ್ಲಿ ಸಿಲುಕಿರುವ ಯಡಿಯೂರಪ್ಪ ಹೇಗೆ ನಿಬಾಯಿಸುತ್ತಾರೆ ಎನ್ನುವುದೇ ಈಗಿರುವ ಪ್ರಶ್ನೆ.