ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆ ಆಗುತ್ತಿಲ್ಲವೆಂಬ ದೂರು ಕೇಳಿಬರುತ್ತಿದೆ. ಕಾಳಸಂತೆಕೋರರು ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಇರಿಸಿರುವುದು ಸಮಸ್ಯೆಗಳಿಗೆ ಮೂಲವೆಂದು ಅಂದಾಜಿಸಲಾಗಿತ್ತು. ಈ ಕುರಿತು ʼಪ್ರತಿಧ್ವನಿ.ಕಾಂʼ ಸವಿಸ್ತಾರವಾದ ವರದಿ ಪ್ರಕಟಿಸಿತ್ತು.
Also Read: ರೈತರಿಗೆ ಇನ್ನೂ ದೊರಕುತ್ತಿಲ್ಲ ರಸಗೊಬ್ಬರ: ಕಾಳದಂಧೆಯ ಕರಾಳ ನೆರಳು!
ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡಾ ಈ ಕುರಿತು ಮಾತನಾಡಿದ್ದು ರೈತರಿಗೆ ಅಗತ್ಯ ಪ್ರಮಾಣದ ರಸಗೊಬ್ಬರ ವಿತರಿಸಿ ರೈತರ ಸಂಕಷ್ಟವನ್ನು ಪರಿಹರಿಸುವಂತೆ ಕೋರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರವನ್ನು ಉಲ್ಲೇಖಿಸಿ ಸಿದ್ದರಾಮಯ್ಯ ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದ್ದು, “ರಾಜ್ಯದ ಹಲವು ಜಿಲ್ಲೆಗಳಲ್ಲಿ ಯೂರಿಯಾ ಕೊರತೆ ಉಂಟಾಗಿದ್ದು, ರೈತರು ಮುಂದೇನು ಗತಿ ಎಂದು ಆತಂಕಕ್ಕೀಡಾಗಿದ್ದಾರೆ. ತಕ್ಷಣ ಸರ್ಕಾರ ಆದ್ಯತೆ ಮೇರೆಗೆ ಯೂರಿಯಾ ಆಮದು ಮಾಡಿಕೊಂಡು, ರೈತರಿಗೆ ಅಗತ್ಯ ಪ್ರಮಾಣದಲ್ಲಿ ವಿತರಿಸುವ ಕೆಲಸ ಮಾಡಬೇಕೆಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸುತ್ತೇನೆ.” ಎಂದಿದ್ದಾರೆ.
ಇದಕ್ಕೂ ಮುಂಚಿತವಾಗಿ ಮಾಡಿದ್ದ ಟ್ವೀಟ್ನಲ್ಲಿ “ಹೆಸರುಬೇಳೆ ಖರೀದಿಗೆ ರಾಜ್ಯ ಸರ್ಕಾರ ಖರೀದಿ ಕೇಂದ್ರಗಳನ್ನು ಈ ವರೆಗೂ ಆರಂಭಿಸದ ಕಾರಣ ನಾಡಿನ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ತಕ್ಷಣ ಬಿಜೆಪಿ ತನ್ನ ನಿರ್ಲಕ್ಷ ಧೋರಣೆಯನ್ನು ಬಿಟ್ಟು ಖರೀದಿ ಕೇಂದ್ರಗಳನ್ನು ತೆರೆಯುವ ಜೊತೆಗೆ ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿಸಬೇಕೆಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸುತ್ತೇನೆ.” ಎಂದು ಆಗ್ರಹಿಸಿದ್ದರು.